ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್): ಜೂನ್ 21 ರಂದು 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸೋಮವಾರ ಸಂಜೆ ಜಿಲ್ಲೆಯ ನಂದಿಯ ಇತಿಹಾಸ ಪ್ರಸಿದ್ಧ ಭೋಗನಂದೀಶ್ವರ ದೇವಸ್ಥಾನದ ಆವರಣದಲ್ಲಿ ಮುದ್ದೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ನಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಸಿದ್ಧಾರ್ಥ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೇರಿ ಒಟ್ಟಾರೆ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾ ಪೂರ್ವಭ್ಯಾಸ ನಡೆಸಿದರು ಎಂದು ಜಿಲ್ಲಾ ಆಯುಷ್ ಅಧಿಕಾರಿ ತಬಿಬಾ ಬಾನು ಮಾಹಿತಿ ನೀಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರಸ್ತುತ ವರ್ಷದಲ್ಲಿ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಇರುವುದರಿಂದ, ರಾಜ್ಯಾದ್ಯಂತ 75 ಪ್ರಮುಖ ಪಾರಂಪರಿಕ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಸ್ಥಳಗಳಾದ ಶ್ರೀ ಭೋಗನಂದೀಶ್ವರ ದೇವಸ್ಥಾನದ ಆವರಣ ವಿಧುರಾಶ್ವತ್ಥ ಕ್ಷೇತ್ರದ ಆವರಣ ಹಾಗೂ ಕೈವಾರದ ಶ್ರೀ ಯೋಗಿ ನಾರೇಯಣ ಕ್ಷೇತ್ರದ ಆವರಣದಲ್ಲಿ ಏಕಕಾಲಕ್ಕೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ ಎಂದರು.
ಈಗಾಗಲೇ ಶಾಲೆಗಳಲ್ಲಿ ಯೋಗಾಭ್ಯಾಸ ನಡೆಸಲಾಗುತ್ತಿದ್ದು, ಅಂತರರಾಷ್ಟ್ರೀಯ ಯೋಗಾದಿನದ ಪ್ರಯುಕ್ತ ಮುಖ್ಯವಾಗಿ ಪ್ರಾರ್ಥನೆ, ವೃಕ್ಷಾಸನ, ಮಕರಾಸನ, ವಕ್ರಾಸನ ಸೇರಿದಂತೆ ವಿವಿಧ ರೀತಿಯ ಆಸನಗಳ ಕುರಿತು ಮಕ್ಕಳಿಗೆ ಪೂರ್ವಭ್ಯಾಸ ನಡೆಸಲಾಗಿದೆ ಇದರಿಂದ ಮಕ್ಕಳ ಆರೋಗ್ಯಕ್ಕೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ ಎಂದು ಹೇಳಿದರು.
ಜೂನ್ 21 ರಂದು ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ವಿಧುರಾಶ್ವತ್ಥ ಕ್ಷೇತ್ರದ ಆವರಣ ಹಾಗೂ ಕೈವಾರದ ಶ್ರೀ ಯೋಗಿ ನಾರೇಯಣ ಕ್ಷೇತ್ರದ ಆವರಣದಲ್ಲಿಯೂ ಸಹ ಏಕಕಾಲಕ್ಕೆ ಸಾಮೂಹಿಕ ಯೋಗ ಪ್ರದರ್ಶನ ಜರುಗಲಿದೆ. ಯೋಗಾ ಮಾಡಲು ನೆಲದಲ್ಲಿ ಗ್ರೀನ್ ಮ್ಯಾಟ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿಯೊಬ್ಬರು ಬಿಳಿ ಬಟ್ಟೆಯನ್ನು ಧರಿಸಲು ಸೂಚನೆಗಳನ್ನು ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ವರದಿ:ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.