ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್) ನಗರದ ತಾಲೂಕು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್ ಅವರು ಭೇಟಿ ನೀಡಿ ತಾಲೂಕು ಆಡಳಿತ ಹಾಗೂ ಉಪವಿಭಾಗಾಧಿಕಾರಿ ಕಚೇರಿಯ ಸಮಸ್ಯೆಗಳು, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದನ್ವಯ ಪ್ರತಿ ಜಿಲ್ಲೆಯ ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಹಾಗೂ ವ್ಯವಸ್ಥೆಯನ್ನು ಪರಿಶೀಲಿಸಿ ಅದರ ಸುಧಾರಣೆಗೆ ಸಲಹೆ ನೀಡುವುದಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಹೃದಯಭಾಗವಾದ ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನಸ್ನೇಹಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಕಾಲದಲ್ಲಿ ಜಿಲ್ಲೆಯು ಉತ್ತಮ ಸಾಧನೆ ಮಾಡಿರುವುದರಿಂದ ಆಡಳಿತ ವ್ಯವಸ್ಥೆಯಲ್ಲಿ ಜನರಿಗೆ ಸಿಗುವಂತಹ ಸೇವೆಗಳನ್ನು ಸಕಾಲದಲ್ಲಿ ಅತ್ಯುತ್ತಮವಾಗಿ ತಲುಪಿಸುವ ಕಾರ್ಯನಡೆಯುತ್ತಿದೆ. ಜೊತೆಗೆ ಸಾರ್ವಜನಿಕರಿಂದ ಬಂದಂತಹ ಅಹವಾಲುಗಳು, ಅರ್ಜಿಗಳನ್ನು ಕಾಲಮಿತಿಯೊಳಗೆ ಆ ಸೇವೆಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲಾಗುತ್ತಿದೆ ಇದರಿಂದ ಜನರಿಂದ ಯಾವುದೇ ಒತ್ತಡವಿಲ್ಲ ಜೊತೆಗೆ ಕಚೇರಿಯ ಮುಂದೆ ಜನಸಂಖ್ಯೆ ಅತಿ ವಿರಳವಾಗಿರುವುದು ಸಂತೋಷಕರವಾಗಿದೆ ಎಂದು ಹೇಳಿದರು.
ಕಚೇರಿಯಲ್ಲಿ ದಾಖಲೆ ಕೊಠಡಿಗಳನ್ನು ಮತ್ತಷ್ಟು ಸುಧಾರಿಸಲು ಹಲವು ವರದಿಗಳನ್ನು ಸಿದ್ದಪಡಿಸಲಾಗುತ್ತಿದ್ದು, ಅದರ ಆಧಾರದ ಮೇಲೆ ಮತ್ತಷ್ಟು ಸಲಹೆ ಸೂಚನೆಗಳನ್ನು ನೀಡಲಾಗುವುದು. ಕಚೇರಿಯ ಭೂಮಿಶಾಖೆ, ಸಿಬ್ಬಂದಿ ಕೊಠಡಿ, ಅಭಿಲೇಖಾಲಯ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಚುನಾವಣೆ ಶಾಖೆ, ನ್ಯಾಯಾಲಯ ಸಭಾಂಗಣ, ತಹಸೀಲ್ದಾರ್ ಗ್ರೇಡ್ ಚೇಂಬರ್, ಉಪವಿಭಾಗಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ಶಾಖೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿ ಗಮನಹರಿಸಲಾಗಿದೆ. ಎಲ್ಲಾ ಶಾಖೆಗಳು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ತಹಶೀಲ್ದಾರ್ ಗಣಪತಿಶಾಸ್ತ್ರಿ ಸೇರಿದಂತೆ ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.