(www.vknews.in) : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ದಿನಾಂಕ 02/08/2022ರಂದು ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ನಿರ್ಣಯಗಳು: ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಯಾಗಲಿ ಕರಾವಳಿ ಕರ್ನಾಟಕದಲ್ಲಿ ಕೆಲ ದಿನಗಳ ಹಿಂದೆ 10 ದಿನಗಳ ಅಂತರದಲ್ಲಿ ಮೂವರು ಯುವಕರ ಹತ್ಯೆ ನಡೆದಿದೆ. ಈ ಎಲ್ಲಾ ಕೊಲೆ ಪ್ರಕರಣಗಳನ್ನು ಸಮಾನವಾಗಿ ಹಾಗೂ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಬಿಜೆಪಿ ಸರಕಾರ ತನ್ನ ಪಕ್ಷದ ಕಾರ್ಯಕರ್ತನ ಕೊಲೆಗೆ ಮಾತ್ರ ಅತಿಯಾದ ಪ್ರಾಮುಖ್ಯತೆ ನೀಡುತ್ತಿದೆ ಮತ್ತು ಸಂಘಪರಿವಾರ ನಡೆಸಿದ ಅಮಾಯಕ ಮುಸ್ಲಿಮ್ ಯುವಕರ ಹತ್ಯೆ ಘಟನೆಗಳನ್ನು ಕ್ಷುಲ್ಲಕವಾಗಿ ಕಾಣುತ್ತಿದೆ. ರಾಜ್ಯದಲ್ಲಿ ನಡೆಯುವ ಕೊಲೆ ಪ್ರಕರಣಗಳನ್ನು ಪೊಲೀಸ್ ಇಲಾಖೆಯೇ ತನಿಖೆ ನಡೆಸುವುದು ವಾಡಿಕೆ.
ಆದರೆ ಮೂರು ಕೊಲೆ ಪ್ರಕರಣಗಳ ಪೈಕಿ ಬಿಜೆಪಿ ಕಾರ್ಯಕರ್ತ ಅನ್ನುವ ಏಕೈಕ ಕಾರಣಕ್ಕಾಗಿ ಪ್ರವೀಣ್ ಕೊಲೆ ಪ್ರಕರಣದ ತನಿಖೆಯನ್ನು ಎನ್.ಐ.ಎಗೆ ವಹಿಸುವುದಾಗಿ ಘೋಷಿಸಲಾಗಿದೆ. ಈ ಮೂಲಕ ಕಠಿಣ ಕಾನೂನಿನ ಅಡಿಯಲ್ಲಿ ಮುಸ್ಲಿಮ್ ಸಮುದಾಯದ ಅಮಾಯಕ ಯುವಕರನ್ನು ಬೇಟೆಯಾಡುವ ರಾಜ್ಯ ಸರಕಾರದ ದುರುದ್ದೇಶವು ಇಲ್ಲಿ ಸ್ಪಷ್ಟವಾಗುತ್ತದೆ. ಆದ್ದರಿಂದ ರಾಜ್ಯ ಸರಕಾರವು ತಾರತಮ್ಯ ಧೋರಣೆಯನ್ನು ಕೈಬಿಟ್ಟು ಈ ಮೂರೂ ಪ್ರಕರಣಗಳ ಸಮಾನ ಹಾಗೂ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಆಗ್ರಹಿಸುತ್ತದೆ.
ಮಾಧ್ಯಮಗಳು ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುವುದನ್ನು ನಿಲ್ಲಿಸಲಿ ಕರಾವಳಿ ಕರ್ನಾಟಕದಲ್ಲಿ ನಡೆದ ಸರಣಿ ಹತ್ಯೆ ಘಟನೆಗಳು ಜಿಲ್ಲೆಯ ಶಾಂತಿ, ನೆಮ್ಮದಿಗೆ ಭಂಗ ಉಂಟು ಮಾಡಿವೆ. ಈ ನಡುವೆ ಹತ್ಯೆ ಘಟನೆಯ ಬಗ್ಗೆ ಮಾಧ್ಯಮದ ಒಂದು ವರ್ಗವು ಪ್ರಸಾರ ಮಾಡುತ್ತಿರುವ ಅತಿರಂಜನೀಯ ಸುದ್ದಿಗಳು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುತ್ತಿವೆ. ಮಾತ್ರವಲ್ಲ, ಯುವ ಜನರ ನಡುವೆ ಪ್ರತೀಕಾರದ ಮನೋಸ್ಥಿತಿಯನ್ನು ಸೃಷ್ಟಿಸುತ್ತಿದೆ.
ಹತ್ಯೆ ಘಟನೆಗೆ ಸಂಬಂಧಿಸಿ ಪೊಲೀಸರ ತನಿಖೆ ಪ್ರಗತಿಯಲ್ಲಿರುವಾಗಲೇ ಮಾಧ್ಯಮಗಳು ಮುಸ್ಲಿಮ್ ಸಮುದಾಯವನ್ನು ಮತ್ತು ಪಿ.ಎಫ್.ಐಯಂತಹ ಜನಪರ ಸಂಘಟನೆಗಳನ್ನು ಕಳಂಕಿತಗೊಳಿಸುವ ಅಭಿಯಾನದಲ್ಲಿ ತೊಡಗಿವೆ. ಮಾಧ್ಯಮಗಳ ಇಂತಹ ನಡವಳಿಕೆಗಳು ಆರೋಗ್ಯಕರ ಸಮಾಜಕ್ಕೆ ಮಾರಕವಾಗಿವೆ ಮತ್ತು ಪತ್ರಿಕೋದ್ಯಮದ ನೀತಿಶಾಸ್ತ್ರಕ್ಕೆ ವಿರುದ್ಧವಾಗಿದೆ. ಮಾಧ್ಯಮಗಳು ಇಂತಹ ಅಪಪ್ರಚಾರದ ಅಭಿಯಾನವನ್ನು ಕೈಬಿಟ್ಟು ಜಿಲ್ಲೆಯ ಶಾಂತಿ, ಸಾಮರಸ್ಯ ಕಾಪಾಡಲು ಮುಂದಾಗಬೇಕೆಂದು ಸಭೆ ಒತ್ತಾಯಿಸುತ್ತದೆ.
ಸಂತ್ರಸ್ತ ಕುಟುಂಬಗಳಿಗೆ ಸಮಾನ ಪರಿಹಾರ ಕಲ್ಪಿಸಲಿ ಹತ್ಯೆಗೊಳಗಾದ ಮೂರು ಮಂದಿಯೂ ಬಡ ಕುಟುಂಬದ ಹಿನ್ನೆಲೆ ಹೊಂದಿದವರು. ಈ ನಿಟ್ಟಿನಲ್ಲಿ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಸಮಾನ ಪರಿಹಾರ ಕಲ್ಪಿಸಿಕೊಡಬೇಕಾದುದು ರಾಜ್ಯ ಸರಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ಪ್ರವೀಣ್ ಮನೆಗೆ ಭೇಟಿ ನೀಡಿ ಸರಕಾರದ ವತಿಯಿಂದ 25 ಲಕ್ಷ ಪರಿಹಾರ ವಿತರಿಸಿದ್ದ ಸಿ.ಎಂ.ಬೊಮ್ಮಾಯಿಯವರು, ಅದೇ ಗ್ರಾಮದಲ್ಲಿ ನೆಲೆಸಿದ್ದ ಮಸೂದ್ ಮನೆಗೆ ಭೇಟಿಯೂ ನೀಡಲಿಲ್ಲ ಅಥವಾ ಪರಿಹಾರವನ್ನೂ ಘೋಷಿಸಲಿಲ್ಲ.
ಅಂತೆಯೇ ಪಾಝಿಲ್ ಕುಟುಂಬಕ್ಕೂ ಸರಕಾರದ ಪ್ರತಿನಿಧಿಗಳಾಗಲೀ, ಜನಪ್ರತಿನಿಧಿಗಳಾಗಲೀ ಭೇಟಿ ನೀಡಲಿಲ್ಲ, ಪರಿಹಾರವನ್ನೂ ಕಲ್ಪಿಸಿಲ್ಲ. ಇದು ಸಹಜ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾಗಿದ್ದು, ಆಡಳಿತ ಪಕ್ಷದ ರಾಜಕೀಯ ಹಿತಾಸಕ್ತಿ ಹೊಂದಿರುವ ಇಂತಹ ತಾರತಮ್ಯ ಧೋರಣೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಆದ್ದರಿಂದ ರಾಜ್ಯ ಸರಕಾರವು ಕೂಡಲೇ ಸಂತ್ರಸ್ತ ಕುಟುಂಬಗಳಿಗೆ ಸಮಾನ ಪರಿಹಾರವನ್ನು ಕಲ್ಪಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಆಗ್ರಹಿಸುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.