ಕೋಲಾರ (ವಿಶ್ವಕನ್ನಡಿಗ ನ್ಯೂಸ್ ): ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೈತರ ಬೆಳೆಗಳಾದ ರಾಗಿ , ಹೂಕೋಸು ಹಾಗೂ ಟೊಮೊಟೋ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು , ಪರಿಹಾರ ಒದಗಿಸಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು.
ಇಂದು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಜಿಲ್ಲಾದ್ಯಂತ ಅವಿರತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ 250 ಹೆಕ್ಟೇರ್ ತೋಟಗಾರಿಕೆ ಬೆಳೆ ಮತ್ತು ಕೃಷಿ ಬೆಳೆ ನಷ್ಟವಾಗಿದ್ದು , ಮುಖ್ಯವಾಗಿ ರಾಗಿ ಮತ್ತು ಟೊಮೊಟೋ ಬೆಳೆ ಹೆಚ್ಚಾಗಿ ಹಾನಿಗೊಳಗಾಗಿದೆ . ಇದಕ್ಕೆ ಪರಿಹಾರ ನೀಡುವುದಾಗಿ ಸೂಚಿಸಿದ್ದೇನೆ. ಜೊತೆಯಲ್ಲಿ ಮಳೆಗೆ ಮನೆಗಳು ಸಹ ಬಿದ್ದು ಹಾನಿಯಾಗಿದ್ದು , ಅಂತಹ ಕುಟುಂಬಗಳಿಗೆ ಸಹಾಯ ಮಾಡಿ ಅವರ ಮನೆಗಳನ್ನು ಮೊದಲಿನ ರೀತಿಯಲ್ಲಿ ಸರಿಪಡಿಸುವುದಕ್ಕೆ ಸಹ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ . ಅಧಿಕಾರಿಗಳು ಮಳೆ ಹಾನಿ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದಾರೆ.
ಯರಗೋಳ ಜಲಾಶಯ ತುಂಬಿರುವುದರಿಂದ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಲು ಈಗಾಗಲೇ ಅದಕ್ಕೆ ಸಂಬಂಧಪಟ್ಟ ಸಚಿವರಿಗೂ ಒತ್ತಾಯಿಸಿದ್ದೇನೆ. ಕಳೆದ ಬಾರಿ ಮಳೆಯಿಂದ ರೈತರಿಗೆ ಯಾವುದೇ ತೊಂದರೆಯಾಗಿಲ್ಲ ಈ ಬಾರಿ ಮಳೆಯಿಂದ ಆದ ನಷ್ಟಕ್ಕೆ ಕೂಡಲೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮಳೆಯಿಂದ ರಾಜಕಾಲುವೆ ಮತ್ತು ಒಟ್ಟಾರೆ 120 ಕಿ.ಮೀ ರಸ್ತೆಗಳು ಹಾನಿಯಾಗಿದೆ . ಇದನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಮಳೆ ಪ್ರಮಾಣ ಕಡಿಮೆಯಾದಲ್ಲಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಕೋಲಾರ ತಾಲ್ಲೂಕಿನ ಹೂಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಷ್ಟವಾದ ಬೆಳೆಗಳ ವೀಕ್ಷಣೆ ಮಾಡಿದರು. ನಂತರ ಇರಗಸಂದ್ರ ಗ್ರಾಮದ ರಾಮಕೃಷ್ಣಪ್ಪ ಎಂಬ ರೈತನ 2 ಎಕರೆ ರಾಗಿ ಬೆಳೆ ಮಳೆಯಿಂದ ಸಂಪೂರ್ಣ ಜಲಾವೃತವಾಗಿದ್ದು , ಅದಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ವಿಟ್ಟಪ್ಪನ ಹಳ್ಳಿಯಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿದ್ದು ಇದರಿಂದ ರಸ್ತೆಯಲ್ಲಿ ಜನರು ಓಡಾಡಲು ಹರಸಾಹಸ ಪಡುತ್ತಿದ್ದಾರೆ . ಅದಕ್ಕಾಗಿ ಹೊಸ ರಸ್ತೆಯನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ . ಯಾನಾದಹಳ್ಳಿಯ ಅಲ್ಲಿನ ರೈತರ 3 ಎಕರೆ ಟೊಮೊಟೋ ಬೆಳೆಯ ನಾಶವಾಗಿದೆ . ರೈತರಿಗೆ ಬೆಳೆ ಹಾನಿ ಪರಿಹಾರಕ್ಕಾಗಿ ಸೂಕ್ತ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ 29 ಮನೆಗಳು ನೆಲಸಮಗೊಂಡಿದ್ದು , ಮನೆ ಹಾನಿಯಾದವರಿಗೆ ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ , ಉಪವಿಭಾಗಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ , ಜಂಟಿ ಕೃಷಿ ನಿರ್ದೇಶಕರಾದ ರೂಪಾದೇವಿ , ಕೋಲಾರ ತಹಶೀಲ್ದಾರರಾದ ನಾಗರಾಜ್ , ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.