ಬಹರೇನ್ (ವಿಶ್ವ ಕನ್ನಡಿಗ ನ್ಯೂಸ್) : ನಗರದ ಗುದೈಬಿಯಾ ಎಂಬಲ್ಲಿರುವ ವಸತಿ ಸಮುಚ್ಛಯವೊಂದರಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ತೆರಳಿದ ಬಹರೈನ್ ಸಿವಿಲ್ ಡಿಫೆನ್ಸ್ ತಂಡವು ಎಲ್ಲರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಈ ವೇಳೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಬಹರೈನ್ ಸಿವಿಲ್ ಡಿಫೆನ್ಸ್ ತಂಡದಲ್ಲಿದ್ದ ದಕ್ಷಿಣ ಕನ್ನಡದ ಮಾಡೂರು ನಿವಾಸಿ ಕೆ.ಪಿ ಅಯ್ಯೂಬ್ ರವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಯ್ಯೂಬ್ ಅವರು ಕಳೆದ ಎಂಟು ವರ್ಷಗಳಿಂದ ಬಹರೈನ್ ಸಿವಿಲ್ ಡಿಫೆನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶನಿವಾರ ಬೆಳಗ್ಗಿನ ವೇಳೆ ನಮಗೆ ಭಾರತ, ಪಾಕಿಸ್ತಾನ ಸಹಿತ ವಿದೇಶದ ಜನರು ವಾಸಿಸುತ್ತಿರುವ ವಸತಿ ಸಮುಚ್ಚಯದಲ್ಲಿ ಅಗ್ನಿ ಅನಾಹುತ ಆದ ಕುರಿತು ಮಾಹಿತಿ ಬಂತು. ಕೇವಲ ಐದು ನಿಮಿಷದಲ್ಲೇ ನಾವು ಸ್ಥಳಕ್ಕೆ ತಲುಪಿದೆವು. ಒಟ್ಟು 20 ಮಂದಿ ಅಪಾಯದ ಅಂಚಿನಲ್ಲಿದ್ದರು. ಅವರೆಲ್ಲರನ್ನೂ ರಕ್ಷಿಸುವಲ್ಲಿ ನಾವು ಯಶಸ್ವಿಯಾದೆವು ಎಂದು ಅಯ್ಯೂಬ್ ಹೇಳಿದ್ದಾರೆ.
ಆ ಸಂದರ್ಭದಲ್ಲಿ ಭಾರವಿರುವ ಸಿಲಿಂಡರ್ ಅನ್ನು ಹೆಗಲಿಗೇರಿಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಬೇಕಿತ್ತು. ಅದೂ ಅಲ್ಲದೇ ಅತೀ ತಾಪದ ಅನುಭವವೂ ಆಗುತ್ತಿತ್ತು. ಈ ನಡುವೆಯೇ ನನ್ನ ಕೈಯಾರೆ ಮೂರು ಮಂದಿಯ ರಕ್ಷಿಸಿದ ತೃಪ್ತಿ ನನ್ನದು. ಬೆಳಗ್ಗೆ ಆರು ಗಂಟೆಗೆ ನಾವು ಸ್ಥಳಕ್ಕೆ ತಲುಪಿದ್ದೆವು. ಏಳೂವರೆಯ ವೇಳೆಗೆ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ನಮಗೆ ಸಾಧ್ಯವಾಯಿತು. 20 ಮಂದಿಯಲ್ಲಿ ಏಳು ಮಂದಿ ಮಾತ್ರ ಗಾಯಗೊಂಡಿದ್ದು, ಅವರನ್ನು ಸಮೀಪದ ಸಲ್ಮಾನಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಯ್ಯೂಬ್ ಹೇಳಿದರು.
ಇದೊಂದು ಅನಿರ್ವಚನೀಯ ಅನುಭವ. ಭೀತಿಯ, ಪ್ರಾಣಾಪಾಯದ ನಡುವೆಯೂ ಇಷ್ಟು ಮಂದಿಯನ್ನು ರಕ್ಷಿಸಲು ಸಾಧ್ಯವಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಅತಿಯಾದ ತಾಪಮಾನದ ಕಾರಣದಿಂದ ವಿದ್ಯುತ್ ನ ಬಾಕ್ಸ್ ಗೆ ಬೆಂಕಿ ಹೊತ್ತಿಕೊಂಡಿತ್ತು. ನನ್ನ ತಂಡದಲ್ಲಿ ನಾನು ಸೇರಿದಂತೆ ಒಟ್ಟು 18 ಮಂದಿಯಿದ್ದರು. ಅವರೆಲ್ಲರೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹಲವಾರು ಮಿತ್ರರು ಈ ಕುರಿತು ಕರೆಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅಯ್ಯೂಬ್ ಹೇಳಿದ್ದಾರೆ.
ಅಯ್ಯೂಬ್ ರವರು ಉಳ್ಳಾಲದ ಟಿಪ್ಪು ಸುಲ್ತಾನ್ ಕಾಲೇಜ್ ಹಾಗೂ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದು, ಮಾಡೂರಿನ ಅರಬಿ ಕುಂಞಿ ಹಾಗೂ ರುಕಿಯಾ ದಂಪತಿಗಳ ಪುತ್ರರಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.