ಧಾರವಾಡ(ವಿಶ್ವಕನ್ನಡಿಗ ನ್ಯೂಸ್): ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರ ೮೯ನೆಯ ವರ್ಧಂತಿ ಮಹೋತ್ಸವ ಆಗಷ್ಟ ೧೩ರಂದು (ಶನಿವಾರ) ರಾತ್ರಿ ೮ ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ.
ಗದಗ ಜಿಲ್ಲೆ ನರೇಗಲ್ಲ ಹಿರೇಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಮಾರಂಭ ಉದ್ಘಾಟಿಸಲಿದ್ದು, ನವಲಗುಂದ ತಾಲೂಕು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆವಹಿಸುವರು.
ಸನ್ಯಾಸ ದೀಕ್ಷೆ :೧೯೩೪ರ ಆಗಷ್ಟ ೧೩ ರಂದು ಜನಿಸಿರುವ ಶಾಂತಲಿಂಗ ಶ್ರೀಗಳು, ನಿಕಟಪೂರ್ವ ಶ್ರೀಗಳಾದ ಗುರುಶಾಂತಲಿಂಗ ಸ್ವಾಮೀಜಿಯವರು ಲಿಂಗೈಕ್ಯರಾದ ಸಂದರ್ಭದಲ್ಲಿ ತಮ್ಮ ೫ನೇ ವರ್ಷದಲ್ಲಿಯೇ (೧೯೩೯) ಸನ್ಯಾಸ ದೀಕ್ಷೆಗೆ ಒಳಗಾದವರು. ನಿರಂತರ ಶಿವತಪೋನುಷ್ಠಾನ ಮಾಡಿರುವ ಇವರು, ತಮ್ಮ ಸುದೀರ್ಘ ೮೮ ವರ್ಷಗಳ ಸನ್ಯಾಸದ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತ ಸಂಕುಲದ ಸಹಕಾರದೊಂದಿಗೆ ೧೯೬೫ರಲ್ಲಿ ಶ್ರೀಶಾಂತೇಶ್ವರ ಪೌಢ ಶಾಲೆಯನ್ನು ಆರಂಭಿಸಿರುವ ಶ್ರೀಗಳು, ಮತ್ತೆ ೧೯೯೧ರಲ್ಲಿ ತಮ್ಮ ಶ್ರೀಮಠದ ಆವರಣದಲ್ಲಿಯೇ ಕನ್ನಡ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸುವ ಮೂಲಕ ವಿದ್ಯಾವಿಕಾಸಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.
ತುಲಾಭಾರ ಸೇವೆ : ಶಾಂತಲಿಂಗ ಶ್ರೀಗಳ ೮೯ನೆಯ ವರ್ಧಂತಿ ಮಹೋತ್ಸವದ ಅಂಗವಾಗಿ ಆದರ್ಶ ಶಿಕ್ಷಕರಾಗಿದ್ದ ದಿ.ವೀರಯ್ಯ ಹಾಗೂ ದಿ.ಈರಮ್ಮ ಯರಗಂಬಳಿಮಠ ಅವರ ಸ್ಮರಣೆಯಲ್ಲಿ ಶೋಭಾ ಯರಗಂಬಳಿಮಠ, ಗ್ರಾ.ಪಂ. ಮಾಜಿ ಸದಸ್ಯ ಶಿವಪ್ಪ ರುದ್ರಾಪೂರ, ಖಾದಿ ಕಾರ್ಯಕರ್ತ ಬಸವರಾಜ ಕೊಳ್ಳಿ, ನ್ಯಾಯವಾದಿ ಅಶೋಕ ಗುಡಿ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಬಸವರಾಜ ಉಗರಗೋಳ ಹಾಗೂ ವಿಜಯನಗರ ಜಿಲ್ಲೆ ಹೊಳಗುಂದಿ ಮತ್ತೂರುಮಠದ ಗುರುಬಸವರಾಜ ಅವರಿಂದ ಸಕ್ಕರೆ, ಬೆಲ್ಲ, ಅಕ್ಕಿ, ಗೋಧಿರವೆ ಹಾಗೂ ತೆಂಗಿನಕಾಯಿಗಳ ತುಲಾಭಾರ ಸೇವೆಗಳು ನಡೆಯಲಿವೆ.
ಉಡಿತುಂಬುವ ಕಾರ್ಯಕ್ರಮ : ಶ್ರೀಮಾತೆ ಆದಿಶಕ್ತಿಯ ಸ್ವರೂಪಿಗಳಾದ ೧೦೮ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಸಹ ಇದೇ ಸಂದರ್ಭದಲ್ಲಿ ಗ್ರಾಮದ ಶೋಭಾ ಯರಗಂಬಳಿಮಠ ಅವರಿಂದ ಜರುಗಲಿದೆ. ಸಮಾರಂಭದ ಅಂಗವಾಗಿ ಅಮ್ಮಿನಬಾವಿ ಗ್ರಾ.ಪಂ. ಮಾಜಿ ಅಧ್ಯಕ್ಷ ದಿ.ಬಸಯ್ಯ ಗುಡಿ ಅವರ ಸ್ಮರಣೆಯಲ್ಲಿ ಅಬಕಾರಿ ಇಲಾಖೆ ಸಿಪಿಐ ಅಮೃತ ಗುಡಿ ಅವರಿಂದ ಪಾಲ್ಗೊಂಡ ಸಮಸ್ತ ಭಕ್ತ ಸಮೂಹಕ್ಕೆ ದಾಸೋಹ ಸೇವೆ ಜರುಗಲಿದೆ. ನಗರದ ಖ್ಯಾತ ಕಾಮಣಿ ತಜ್ಞ ಡಾ. ನಿತಿನಚಂದ್ರ ಹತ್ತಿಕಾಳ ಹಾಗೂ ಹೃದಯ ತಜ್ಞ ಡಾ.ಸುಧೀರ ಜಂಬಗಿ ಅವರಿಗೆ ಪಂಚಗೃಹ ಹಿರೇಮಠದ ವತಿಯಿಂದ ಗೌರವ ಸನ್ಮಾನ ಜರುಗಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.