ಗುರಿಯಿಲ್ಲದೆ ಮನೆ ಬಿಡುವಾಗ ಬಾವುನಿಗೆ ಆಗಿತ್ತು ವಯಸ್ಸು ಹದಿನೈದು ಊರೂರು ಅಲೆದಾಡಿ ದುಡಿದು ಬೆಳೆಯಲು ಬೇಕಾಯಿತು ವರ್ಷ ಐದು ವಿದೇಶದ ಕನಸು ಪೂರ್ತಿಯಾದಾಗ ಅವನ ವಯಸ್ಸು ಇಪ್ಪತ್ತು ಸಹೋದರಿ ವಿವಾಹ ಸಂಕಷ್ಟ ಪರಿಹಾರ ಅವನಿಗಾಗ ವಯಸ್ಸು ಮೂವತ್ತು
ವಿವಾಹದ ಸಾಲ ಮಡದಿ ಮಕ್ಕಳಿಗಾಗಿ ಕಳೆದಾಗ ವಯಸ್ಸು ನಲವತ್ತು ನೂತನ ಮನೆಯ ಕನಸು ನನಸಾಗಲು ಹಿಡಿಯಿತು ಆಯಸ್ಸು ಐವತ್ತು ಮಕ್ಕಳ ವಿದ್ಯಾಭ್ಯಾಸ ಆಸ್ಪತ್ರೆಯ ಓಡಾಟದಲ್ಲಿ ಮುಗಿಯಿತು ಅರುವತ್ತು ಕೆಲಸದಿಂದ ನಿವೃತನಾಗಿ ಹಿಂತಿರುವಾಗ ಅವನ ಕೈ ಪೂರಾ ಬರಿದಾಗಿತ್ತು
ಮಸೀದಿ, ವಿವಾಹ , ಮನೆ ಕಟ್ಟಲು ಸಹಾಯ ಯಾಚನೆಯ ಸರದಿ ಇತ್ತು ಕೊಡಲಾಗದೆ ಅಡಗಿ ಕೂರುವ ಆಯ್ಕೆ ಮಾತ್ರಾ ಅವನ ಮುಂದಿತ್ತು ಎಲ್ಲಾ ಸುಖವ ಉಂಡ ಬಳಿಕ ಪತ್ನಿ ಮಕ್ಕಳ ಗುಣುಗಾಟ ಆರಂಭವಾಗಿತ್ತು ವಿದೇಶಿಯಲ್ಲದ ಬೀದಿ ಕಾರ್ಮಿಕನಾದ ಪತಿಯಾದರೂ ಅವಳಿಗೆ ಸಾಕಿತ್ತು
ಇಷ್ಟು ವರ್ಷ ಅಪ್ಪ ಮಾಡಿದ್ದಾದರೂ ಏನು ಮಗನ ಪ್ರಶ್ನೆಯಾಗಿತ್ತು ಐವತ್ತಕ್ಕಿಂತ ಕಮ್ಮಿ ನಾನೊಪ್ಪಲಾರೆ ಮಗಳ ತಗಾದೆ ಆರಂಭವಾಗಿತ್ತು ಸ್ವಂತ ಮನೆಯಲ್ಲೇ ಅವನ ಪರಿಸ್ಥಿತಿ ಪರಕೀಯನಿಗಿಂತ ಕಡೆಯಾಗಿತ್ತು ಕಾಯಿಲೆಗಳ ಗುಲಾಮನಿಗೆ ಸರಕಾರಿ ಆಸ್ಪತ್ರೆಯೇ ಆಸರೆಯಾಯಿತು
ಹುಟ್ಟಿದ ಮನೆಯಲ್ಲಿ ಹದಿನೈದು ಸ್ವಂತ ಮನೆಯಲ್ಲಿ ನಾಲ್ಕರ ಆಸುಪಾಸು ದೀರ್ಘ ಅರವತ್ತೆರಡು ವರ್ಷಗಳಲ್ಲಿ ಇಷ್ಟು ಮಾತ್ರಾ ಅವನ ವಾಸವಾಗಿತ್ತು ಕುಬ್ಬೂಸು ಬೇಳೆ ಸಾರು ಸಾಮಾನ್ಯವಾಗಿ ಅವನ ಪಾಲಿನ ಆಹಾರವಾಗಿತ್ತು ಹಬ್ಬ ಸಭೆ ಸಮಾರಂಭಗಳಲ್ಲಿ ಉಡಲಾರದಷ್ಟು ಅವನ ಬಟ್ಟೆ ಹಳೆಯದಾಗಿತ್ತು
ಕೆಲಸ ಬಿಟ್ಟರೆ ರೂಮು ಇಷ್ಟೇ – ಸುತ್ತಾಡುವ ನೆನಪೇ ಅವನಿಗೆ ಇಲ್ಲದಾಗಿತ್ತು ಅವನಾವಶ್ಯಕ ಖರ್ಚಾದರೆ ಆ ನೋವು ಮಾಸಲು ದಿನಗಳೇ ಹಿಡಿಯುತ್ತಿತ್ತು ಹಣ ಕೂಡಿಡುವ ಜಿಪುಣತನ ದಾನ ಧರ್ಮಗಳಿಂದಲೂ ಅವನ ದೂರ ಮಾಡಿತ್ತು ಕುಟುಂಬ ಬಂಧು ಮಿತ್ರಾದಿಗಳ ಪರಿಚಯ ಅವನಿಗೆ ತುಂಬಾ ಕಡಿಮೆ ಇತ್ತು
ಕೊನೆಗೂ ಹೊರಟೇ ಬಿಟ್ಟ ಮರುಗಲು ಅವನ ನೆರಳು ಮಾತ್ರಾ ಜೊತೆಗಿತ್ತು ನೆರೆಕರೆ ಊರವರಿಂದ ಅವನ ಮಣ್ಣಿನ ಕೋಣೆಯೊಳಗೆ ಮಲಗಿಸಲಾಯಿತು ದುಡಿಯುವಾಗ ಸಣ್ಣ ಮಂಚದ ಒಂದು ಭಾಗದಲ್ಲಿ ಮಾತ್ರಾ ನಿದ್ದೆ ಮಾಡಬೇಕಾಗಿತ್ತು ಮರುಭಾಗದಲ್ಲಿ ಅವನ ಪೆಟ್ಟಿಗೆ ಸಾಮಾನು ಬಟ್ಟೆ ಬರೆ ಇಡಲಾಗುತ್ತಿತ್ತು
ಕತ್ತಲಲ್ಲಿ ಬಟ್ಟೆ ಬದಲಾಯಿಸಿ ತಿಗಣೆ ಕಚ್ಚಿಸಿ ಕೊಂಡ ಅನುಭವವೂ ಇತ್ತು ಇದಷ್ಟು ಮಾತ್ರಾ ಬದುಕಿದ್ದಾಗ ಅವನ ಅನುಭವ ಸಂಪತ್ತಾಗಿತ್ತು ಐಹಿಕ ವ್ಯಾಮೋಹದ ಬಲಿ ಅವನ ಇಹ ಪರ ನಷ್ಟವ ಮಾಡಿಯಾಗಿತ್ತು ತಿರಸ್ಕರಣೆ ಮಾತ್ರಾ ಪರದೇಶಿಗೆ ಕೊನೆಯ ವೇಳೆ ಇರದಿದ್ದರೆ ಹಣದ ತಾಕತ್ತು
ಹತಭಾಗ್ಯ ಇವನೋರ್ವ ಕನಸುಗಳು ಅಕಾಲದಲ್ಲೇ ಉರಿದು ಬೂದಿಯಾಗಿತ್ತು.
– ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.