ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಖ್ಯಾತ ಇತಿಹಾಸ ತಜ್ಞ ಪ್ರೊ.ಬಿ.ಶೇಕ್ ಅಲಿಯವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ನಾಡು ಕಂಡ ಅತ್ಯಂತ ಶ್ರೇಷ್ಠ ಇತಿಹಾಸ ತಜ್ಞರಾಗಿದ್ದ ಪ್ರೊ.ಬಿ.ಶೇಕ್ ಅಲಿಯವರು, ಅಸಂಖ್ಯಾತ ಇತಿಹಾಸ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರೂ ಆಗಿದ್ದರು. ಮೈಸೂರು ವಿವಿ ವಿದ್ಯಾರ್ಥಿಯಾಗಿದ್ದ ಅವರು, ಅಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಹಾಗೆಯೇ ಅವರು ಮಂಗಳೂರು ವಿವಿ ಮತ್ತು ಗೋವಾ ವಿವಿಯಲ್ಲಿ ಉಪ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಉರ್ದು, ಇಂಗ್ಲೀಷ್, ಫ್ರೆಂಚ್ ಭಾಷೆಯಲ್ಲಿ ಅವರು ಅಪಾರ ಪಾಂಡಿತ್ಯ ಹೊಂದಿದ್ದರು. ಇವರ ಬಹುತೇಕ ಇತಿಹಾಸ ಸಂಶೋಧನೆಯು ಹೈದರಾಲಿ-ಟ್ಟಿಪ್ಪು ಸುಲ್ತಾನ್ ಆಡಳಿತಾವಧಿಗೆ ಸಂಬಂಧಿಸಿದ್ದಾಗಿತ್ತು. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ, ಕರ್ನಾಟಕದ ಪ್ರಾಚೀನ ಇತಿಹಾಸದ ಅಧ್ಯಯನ, ಸರ್.ಮಿರ್ಝಾ ಎಂ.ಇಸ್ಮಾಯೀಲ್ : ಎ ಗ್ರೇಟ್ ಅಡ್ಮಿನಿಸ್ಟ್ರೇಟರ್ ಸೇರಿದಂತೆ 50ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ರಚಿಸಿದ್ದು, ಇದು ಇತಿಹಾಸದ ಓದುಗರಿಗೆ ದೊಡ್ಡಮಟ್ಟದ ವರದಾನವಾಗಿದೆ. ಇವರು ಉರ್ದು ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ಇವರು ಇಸ್ಲಾಮೀ ಸಾಹಿತ್ಯ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇವರು ರಚಿಸಿದ ತರ್ಜುಮಾನುಲ್ ಖುರ್ ಆನ್ ಬೈ ಮೌಲಾನಾ ಅಬುಲ್ ಕಲಾಂ ಆಝಾದ್, ಆಲಮೇ ಇಸ್ಲಾಮ್ ಕೆ ಜವಾಹರ್ ಪಾರೇ ಮೊದಲಾದ ಕೃತಿಗಳು ಜನಪ್ರಿಯವಾಗಿವೆ. ಮಾನವೀಯ ಸೇವೆಗಾಗಿ ಪ್ರಪ್ರಥಮ ಬಾರಿಗೆ ನೀಡಲಾದ ಡಾ.ಎಂ.ಎಂ.ಕಲಬುರ್ಗಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅವರು ಭಾಜರಾಗಿದ್ದರು.
ಇಂತಹ ಮೇರು ಇತಿಹಾಸ ತಜ್ಞರನ್ನು ಕಳೆದುಕೊಂಡಿರುವುದು ನಿಜಕ್ಕೂ ತುಂಬಲಾರದ ನಷ್ಟವಾಗಿದೆ. ಜೀವನದ ಸಂಧ್ಯಾ ಕಾಲದ ವರೆಗೂ ಇತಿಹಾಸ ಅಧ್ಯಯನದಲ್ಲಿ ತಲ್ಲೀನರಾಗಿದ್ದ ಇವರ ಬದುಕು-ಬರಹ ಎಂದಿಗೂ ಆದರ್ಶಪ್ರಾಯವಾಗಿದೆ. ಬಿ.ಶೇಕ್ ಅಲಿಯವರು ಇತಿಹಾಸಕ್ಕೆ ನೀಡಿದ ಉತ್ಕೃಷ್ಟ ಕೊಡುಗೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯವನ್ನು ಅಗತ್ಯವಾಗಿ ನಡೆಸಬೇಕಾಗಿದೆ ಎಂದು ನಾಸಿರ್ ಪಾಶ ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.