(www.vknews.in) ಸರಕಾರಿ ಶಾಲೆಗಳು ಅಂದಾಕ್ಷಣ ನೆನಪಿಗೆ ಬರೋದು ವಿಜೃಂಭಣೆಯಿಂದ ಆಚರಿಸುವ ಶಿಕ್ಷಕರ ದಿನಾಚರಣೆ. ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದಕ್ಕಾಗಿ ಹಲವು ದಿನಗಳು ರಾತ್ರಿ ಹಗಲೆನ್ನದೆ ಇದರ ಯಶಸ್ವಿಗಾಗಿ ಶ್ರಮ ವಹಿಸುತ್ತಾರೆ . ಆ ಕಾರ್ಯಕ್ರಮಕ್ಕೆ ರಾಜ್ಯದ ಮಂತ್ರಿಗಳಿಂದ ಹಿಡಿದು ಜಿಲ್ಲೆಯ ಜನ ಪ್ರತಿನಿಧಿಗಳು ,ಅಲ್ಲದೆ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಕೂಡ ಕರೆದು ಕಾರ್ಯಕ್ರಮಕ್ಕೆ ಮೆರುಗನ್ನು ತರುವಲ್ಲಿ ಶಿಕ್ಷಕರ ಪಾತ್ರ ಕೂಡ ಹಿರಿದಾಗಿದೆ.
ಇದಲ್ಲದೆ ತಾಲೂಕು ,ಜಿಲ್ಲೆಯಲ್ಲಿ ಉನ್ನತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ರನ್ನು ಗುರುತಿಸುವ ಪ್ರಕ್ರಿಯೆ ಹಾಗೂ ಅವರಿಗೆ ಪ್ರಶಸ್ತಿ ನೀಡುವಂತಹ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗನ್ನು ತರುತ್ತಿರುವುದು ಸುಳ್ಳಲ್ಲ, ಇದರಿಂದ ಉಳಿದ ಶಿಕ್ಷಕರಿಗೂ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡಲು ಸ್ಫೂರ್ತಿ ಆಗುವ ಸಾದ್ಯತೆ ಇದೆ. ಅದಲ್ಲದೆ ಶಿಕ್ಷಕ ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುವ ಕಾರಣದಿಂದ ಹೆಚ್ಚಿನ ಎಲ್ಲಾ ಶಿಕ್ಷಕರ ಭಾಗವಹಿಸುವಿಕೆ ಇಂತಹ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತದೆ.
ಇದೆಲ್ಲವೂ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ರವರನ್ನು ಸ್ಮರಿಸುತ್ತಾ ನಡೆಸುತ್ತಿರುವ ಶಿಕ್ಷಕರ ದಿನಾಚರಣೆಯ ಸಂತೋಷದ ಕ್ಷಣಗಳು…..
ಆದರೆ…ಆದರೆ 2012 ಡಿಸೆಂಬರ್ 15 ರಿಂದ ಸತತವಾಗಿ ಸರಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ನೀಗಿಸಿ ಅಲ್ಲಿರುವ ಮಕ್ಕಳಿಗೆ, ಇದೇ ಸರಕಾರಿ ಶಿಕ್ಷಕರ ಹಾಗೆಯೇ ಗುಣಮಟ್ಟದ ಶಿಕ್ಷಣ ಆಟೋಟ ಸ್ಪರ್ದೆ,ಪ್ರತಿಭಾ ಕಾರಂಜಿ ಮೊದಲಾದ ಚಟುವಟಿಕೆಗಳನ್ನು ನಡೆಸಿ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಅವಿರತ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರು ಎನ್ನುವ ನಾಮಧೇಯ ದಲ್ಲಿ ಗುರುತಿಸಿ ಕೊಂಡಿರುವ ಶಿಕ್ಷಕರು ಇದ್ದಾರೆ.
ಮೊದಲ ಮೂರು ವರ್ಷ 5500, ಮತ್ತೆ 7500 ಈ ಶೈಕ್ಷಣಿಕ ವರ್ಷದಿಂದ 10000 ಹೀಗೆ ಕೇವಲ ಗೌರವ ಧನದಿಂದಲೇ ತಮ್ಮ ಜೀವನವನ್ನು ಸರಿದೂಗಿಸಿ ಕೊಂಡು ಹೋಗಬೇಕಾದ ಅನಿವಾರ್ಯತೆಯಲ್ಲಿ ಈ ಒಂದು ಶಿಕ್ಷಕರು ಇದ್ದಾರೆ .
ಹೀಗಿರುವಾಗ ಈ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸರಕಾರವು ಸರಕಾರಿ ಶಾಲೆಗಳಲ್ಲಿ ಕೊರತೆ ಇರುವ 58000 ದಷ್ಟು ಶಿಕ್ಷಕರ ಬದಲಿಗೆ 27000 ಅತಿಥಿ ಶಿಕ್ಷಕರನ್ನು ಮೆ ತಿಂಗಳ 15 ರಿಂದಲೇ ನೇಮಕ ಮಾಡಿ ಕೊಳ್ಳಲು ಆದೇಶವನ್ನು ಹೊರಡಿಸಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಗೆ ತಾತ್ಕಾಲಿಕ ವಾದ ಪರಿಹಾರ ಎನ್ನುವ ರೀತಿಯಲ್ಲಿ ವ್ಯವಸ್ತೆಯನ್ನು ಮಾಡಿತು.ಇದರ ಮುಂದು ವರಿದ ಭಾಗವಾಗಿ ಆಗಸ್ಟ್ ತಿಂಗಳಲ್ಲಿ ಇನ್ನೂ 3000 ಶಿಕ್ಷಕರ ಆಯ್ಕೆ ಮಾಡಲು ಆದೇಶದ ಮೂಲಕ ಭರ್ತಿ ಮಾಡಿದೆ.
ಆದರೆ ಒಂದು ರೀತಿಯಲ್ಲಿ ಸರಕಾರಿ ಶಾಲೆಗಳ ಉಳಿಯುವಿಕೆಗೆ ಕಾರಣ ರಾಗುವ ರೀತಿಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಾ ಇರುವಂತಹ ಈ ಶಿಕ್ಷಕರಿಗೆ ಈ ದಿನದ ವರೆಗೆ ಗೌರವ ಧನವನ್ನು ಸರಕಾರವು ಬಿಡುಗಡೆ ಮಾಡಿರುವುದಿಲ್ಲ.
ಹಲವು ಹಬ್ಬಗಳು ಈ ಸಮಯದಲ್ಲಿ ಬಂದು ಹೋಗಿದ್ದು ಎಲ್ಲಾ ಇಲಾಖೆಗಳು ಹಬ್ಬ ಆಚರಣೆಗೆ ಬೋನಸ್ ಕೊಡುವ ಪ್ರಕ್ರಿಯೆ ಕೂಡ ನಡೆಸುತ್ತಿದೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಇವರನ್ನು ಶಾಲೆಗಳಲ್ಲಿ ಆಯ್ಕೆ ಮಾಡಿ ನಮಗೆ ಇನ್ನು ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಮೌನ ವಾಗಿರುವುದು ತುಂಬಾ ಖೆದಕರವಾದ ವಿಷಯ.
ಅದಲ್ಲದೆ ಈ ಶೈಕ್ಷಣಿಕ ವರ್ಷ ಹೊಸ 15000 ಶಿಕ್ಷಕರನ್ನು ಆಯ್ಕೆ ಮಾಡುವ ಬಗ್ಗೆ ಸರಕಾರವು ಮುತುವರ್ಜಿ ವಹಿಸಿದ್ದು, ಈ ಶಿಕ್ಷಕರು ಶಾಲೆಗಳಿಗೆ ನೇಮಕ ಆದರೆ ಈಗಿರುವ ಈ ಅತಿಥಿ ಶಿಕ್ಷಕರ ಪಾಡು ಏನು ಎನ್ನುವುದು ಉತ್ತರ ಇಲ್ಲದ ಪ್ರಶ್ನೆಯಾಗಿದೆ.
ಇಷ್ಟು ವರ್ಷದ ಅನುಭವ ಇರುವಂತಹ ಶಿಕ್ಷಕರನ್ನು ಆದ್ಯತೆಯ ಮೇರೆಗೆ ಶಾಲೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ನಿಯಮಗಳಲ್ಲಿ ಮಾರ್ಪಾಡು ಮಾಡುವ ಅಗತ್ಯತೆ ಇದ್ದು ,ಇದರ ಬಗ್ಗೆ ಸರಕಾರ ಮತ್ತು ಶಿಕ್ಷಣ ಇಲಾಖೆಯು ಕಾರ್ಯ ಪ್ರವರ್ಥರಾಗಬೇಕಿದೆ.
ಶಿಕ್ಷಕರ ದಿನಾಚರಣೆ ಸಂತೋಷದಾಯಕ ಆಗಿರಬೇಕು ಎಂದಾದರೆ ಆ ವ್ಯವಸ್ತೆಯ ಒಳಗೆ ಇದ್ದು ಕೊಂಡು ಕಣ್ಣೀರು ಸುರಿಸುತ್ತಾ ಇರುವಂತಹವರ ನೋವನ್ನು ಕೂಡಾ ಅರ್ಥೈಸುವ ಮನಸ್ಸು ನಮ್ಮಲ್ಲಿರಬೇಕು.
ಸರಕಾರ ಕೂಡಲೇ ಇದರ ಬಗ್ಗೆ ಕಾರ್ಯ ಪ್ರವರ್ತರಾಗಿ ಅತಿಥಿ ಶಿಕ್ಷಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರಕಾರಿ ಶಾಲೆಗಳ ಉಳಿಯುವಿಕೆಯ ಪಾಲುದಾರಿಗಳಾದ ಅತಿಥಿ ಶಿಕ್ಷಕರ ಮುಖದಲ್ಲಿ ಕೂಡ ಸಂತೋಷವನ್ನು ತಂದರೆ ಮಾತ್ರ ಇಂತಹ ಆಚರಣೆಗಳು ಅರ್ಥ ಪೂರ್ಣ ಆಗಿರಲು ಸಾಧ್ಯ.
ಆದರಿಂದ ಸತತ ನಾಲ್ಕು ತಿಂಗಳಿನಿಂದ ನಮ್ಮಮಕ್ಕಳಿಗೆ ಶಿಕ್ಷಣವನ್ನು ಕೊಟ್ಟಂತಹ ಅಥಿತಿ ಶಿಕ್ಷಕರಿಗೆ ಯಾವುದೇ ರೀತಿಯ ಆರ್ಥಿಕ ಸಹಕಾರ ಇಲ್ಲದೆ ತಮ್ಮ ದಿನಚರಿ ನಿರ್ವಹಿಸಲು ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ ಅವರನ್ನು ಕೂಡ ಸ್ಮರಿಸುತ್ತಾ, ಅದರೊಂದಿಗೆ ಈ ದಿನವನ್ನು ನೆನಪಿಸಲು ಕಾರಣರಾದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಸ್ಮರಣೆಯೊಂದಿಗೆ,ಮಹಿಳಾ ಶಿಕ್ಷಣ ಕ್ರಾಂತಿಯ ಮಾತೆ ಸಾವಿತ್ರಿಬಾಯಿ ಫುಲೆಯವರನ್ನು ಕೂಡ ನೆನಪಿಸುತ್ತಾ..
ಗುರುಮಕ್ಕಳ ಬತ್ತಿಯನ್ನು ಹೆಸೆದುತನ್ನೊಳಗಿನ ಅನುಭವದ ತೈಲವನ್ನು ಎರೆದು ಶಿಷ್ಯನೆಂಬ ಹಣತೆಯಲ್ಲಿಜ್ಞಾನ ಜ್ಯೋತಿಯನ್ನು ಬೆಳಗಿಸಿ ಜಗಕೆ ಬೆಳಕು ಚೆಲ್ಲುವ
ತ್ಯಾಗಮಯಿ ಗುರುಗಳಿಗೆಲ್ಲ …
ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಮೊಯಿದಿನ್ ಕುಟ್ಟಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.