ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಏಷ್ಯಾಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸುಮಾರು ಮೂರು ವರ್ಷಗಳ ಬಳಿಕ ಶತಕ ಸಿಡಿಸಿದ್ದಾರೆ. ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಗಳಿಸಿದರು. 2019ರ ಬಳಿಕ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದಾರೆ. ಇದು ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಅವರ ಮೊದಲ ಶತಕವಾಗಿದೆ.
ಇದಕ್ಕೂ ಮೊದಲು, ವಿರಾಟ್ ಕೊಹ್ಲಿ ನವೆಂಬರ್ 23, 2019 ರಂದು ಬಾಂಗ್ಲಾದೇಶ ವಿರುದ್ಧ ಕೋಲ್ಕತಾ ಟೆಸ್ಟ್ನಲ್ಲಿ ಶತಕ ಬಾರಿಸಿದ್ದರು. ಇದು ಅವರ ವೃತ್ತಿಜೀವನದ 70ನೇ ಶತಕವಾಗಿತ್ತು. ಇಂದಿನ ಶತಕದೊಂದಿಗೆ, ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಪಟ್ಟಿಗೆ ಸೇರಿದರು. ಅವರಿಬ್ಬರೂ ತಮ್ಮ ಹೆಸರಿಗೆ 71 ಶತಕಗಳನ್ನು ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ 100 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಕೆಎಲ್ ರಾಹುಲ್ 62 ರನ್ ಗಳಿಸಿದರು. ರಿಷಭ್ ಪಂತ್ 20 ರನ್ ಗಳಿಸಿ ಔಟಾಗದೆ ಉಳಿದರು. ಅಫ್ಘಾನಿಸ್ತಾನ ಪರ ಫರೀದ್ ಅಹ್ಮದ್ 2 ವಿಕೆಟ್ ಕಬಳಿಸಿದರು.
213 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ನಿಗದಿತ 20 ಓವರ್ ಗಳಲ್ಲಿ 111 ರನ್ ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 101 ರನ್ ಗಳಿಂದ ಸೋಲೊಪ್ಪಿಕೊಂಡಿತು. ಅಫ್ಘಾನ್ ಪರ ಬ್ಯಾಟಿಂಗ್ ನಲ್ಲಿ ಇಬ್ರಾಹಿಂ ಜರ್ದಾನ್ ಅತ್ಯಧಿಕ 64 ರನ್ ಗಳಿಸಿದರು, ಉಳಿದಂತೆ ಮುಜೀಬುರಹ್ಮಾನ್ ಹಾಗು ರಶೀದ್ ಖಾನ್ ಮಾತ್ರ ಎರಡಂಕೆಯ ಮೊತ್ತ ತುಲುಪಿದರು. ಭಾರತದ ಪರ ಭುವನೇಶ್ವರ್ ಕುಮಾರ್ ಐದು ವಿಕೆಟ್ ಕಬಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.