ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ತಾಲ್ಲೂಕಿನ ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್ ೨ ನೇ ಹಂತ ತಲುಪಿದೆ , ಮೂರನೇ ಹಂತ ಮುಟ್ಟಿ ಸರ್ವನಾಶವಾಗುವ ಮುನ್ನಾ ಆಗಿರುವ ತಪ್ಪುಗಳನ್ನು ಸರಿಪಡಿಸಿ ಸಂಘಕ್ಕೆ ಜೀವ ತುಂಬಿ ಸರಿದಾರಿಗೆ ತನ್ನಿ ಎಂದು ಆಡಳಿತ ಮಂಡಳಿ ನಿರ್ದೇಶಕರಿಗೆ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ತಾಲೂಕಿನ ವಡಗೂರು ಗ್ರಾಮದಲ್ಲಿ ನಡೆದ ಹುತ್ತೂರು ಹೋಬಳಿ ರೇಷ್ಮೆ ಬೆಳಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು , ಹಿಂದೆ ಮಾಡಿರುವ ತಪ್ಪುಗಳಿಂದಾಗಿ ಈ ಭಾಗದ ರೈತರು , ಮಹಿಳೆಯರಿಗೆ ಅನ್ಯಾಯವಾಗಿದೆ ಎಂದರು.
ಹಿಂದೆ ಕಾರ್ಯನಿರ್ವಹಿಸಿದ್ದ ಕಾರ್ಯದರ್ಶಿ ವಿಜಯಕುಮಾರ್ರ ಭ್ರಷ್ಟಾಚಾರದ ಕುರಿತು ಆಡಳಿತ ಮಂಡಳಿ ಗಮನಹರಿಸಬೇಕಿತ್ತು , ಆದರೆ ಆಡಳಿತ ಮಂಡಳಿ ನಿದ್ರೆಯಲ್ಲಿತ್ತು , ತಪ್ಪು ಗಳು ಆಗಿವೆ ಅವುಗಳನ್ನು ಹೇಳಿಕೊಂಡು ಹೋದರೆ ಪ್ರಯೋಜನವಿಲ್ಲ ತಪ್ಪಗಳಿಂದಲ್ಲೇ ಸೊಸೈಟಿ ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ ಸಾಲ ಪಡೆದ ರೈತರ ಮನೆ ಬಾಗಿಲಿಗೆ ಹೋಗಿ ಮರು ಪಾವತಿ ಮಾಡುವಂತೆ ಮನವೊಲಿಸುವ ಕೆಲಸವನ್ನು ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿ ಮಾಡಬೇಕಾಗಿತ್ತು ಎಂದರು. ಸಹಕಾರಿ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರೆ ವಸೂಲಿ ಮಾಡುವುದು ಕಷ್ಟ ರೈತರ ಮೇಲೆ ದೂರು ದಾಖಲಿಸಲು ಸಾಧ್ಯವಿಲ್ಲ ಮನವೊಲಿಸಬೇಕು ಎಂದ ಅವರು , ಅವಿಭಜಿತ ಜಿಲ್ಲೆಯಲ್ಲೇ ಹುತ್ತೂರು ಸೊಸೈಟಿ ಅತಿ ದೊಡ್ಡ ಸೊಸೈಟಿ , ಹೆಚ್ಚು ವಿಸ್ತಾರ ಹೊಂದಿದೆ.
ಇಲ್ಲಿ ಕನಿಷ್ಟ ೫೦ ಕೋಟಿ ಸಾಲ ನೀಡಬೇಕಾಗಿತ್ತು ಆದರೆ ಸಾಧ್ಯವಾಗಿಲ್ಲ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು , ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದಿದ್ದರೆ ಮತ್ತು ಸೊಸೈಟಿಯ ಸಿಇಒ ಕಾರ್ಯವೈಖರಿಯನ್ನು ಗಮನಿಸದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದರು.
ಸಾಲ ವಸೂಲಾತಿ ಅಭಿಯಾನ ಮಾಡಿ
ಸೊಸೈಟಿ ಆಡಳಿತ ಮಂಡಳಿ ಜವಾಬ್ದಾರಿ ಅರಿತು ಮುನ್ನಡೆಯಬೇಕು , ರೈತರಿಂದ ಬಾಕಿ ಇರುವ ಸಾಲವನ್ನು ವಸೂಲಿ ಮಾಡಲು ಬದ್ಧತೆ ತೋರಬೇಕು , ರೈತರ ಮನೆಬಾಗಿಲಿಗೆ ತೆರಳಿ ಒತ್ತಡ ಹಾಕಿದರೆ ಸಾಲ ಕಟ್ಟುತ್ತಾರೆ , ರೈತರೇನು ಮೋಸಗಾರರಲ್ಲ ಎಂದು ತಿಳಿಸಿದರು.
ನೀವು ದಾಖಲೆಗಳ ಸಮರ್ಪಕ ನಿರ್ವಹಣೆ ಮಾಡಿದರೆ ಖಂಡಿತಾ ಡಿಸಿಸಿ ಬ್ಯಾಂಕ್ ವತಿಯಿಂದ ಮರುಸಾಲ ನೀಡುತ್ತೇವೆ ಹುತ್ತೂರು ಹೋಬಳಿಯಲ್ಲಿ ಕನಿಷ್ಠ ೫೦ ಕೋಟಿ ಸಾಲ ನೀಡಿ , ಈ ಭಾಗದ ರೈತರು , ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಆಶಯ ನಮಗೂ ಇದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ , ಯಲವಾರ ಸೊಣ್ಣೆಗೌಡ , ಆಡಳಿತ ಮಂಡಳಿ ಇರುವುದು ಅಲಂಕಾರಕ್ಕಾಗಿ ಅಲ್ಲ , ನಿಮ್ಮಲ್ಲೂ ಬದ್ಧತೆ ಇರಬೇಕು , ಸೊಸೈಟಿಯ ಬೆಳವಣಿಗೆ ಗಮನಿಸುತ್ತಿರಬೇಕು , ಯಾರೋ ಮಾಡಿದ ತಪ್ಪಿನಿಂದ ರೈತರು , ಮಹಿಳೆಯರಿಗೆ ಶಿಕ್ಷೆಯಾಗಿದೆ , ಎಲ್ಲಾ ಕಡೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಈ ಸೊಸೈಟಿ ವ್ಯಾಪ್ತಿಯ ಮಹಿಳೆಯರು , ರೈತರಿಗೆ ಮಾತನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು .
ಸೊಸೈಟಿ ಅಧ್ಯಕ್ಷ ವಡಗೂರು ರಾಮು ಮಾತನಾಡಿ , ನಮ್ಮ ಆಡಳಿತ ಮಂಡಳಿ ಬಂದ ನಂತರ ೧.೮೩ ಕೋಟಿ ರೂ ಸಾಲ ನೀಡಿದ್ದೇವೆ ಹಿಂದಿನ ಕಾರ್ಯದರ್ಶಿ ವಿಜಯಕುಮಾರ್ ಮಾಡಿದ ತಪ್ಪಿಗೆ ಈ ಸೊಸೈಟಿ ಈ ಸ್ಥಿತಿಗೆ ಬಂದಿದೆ.
ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗತ್ತೇವೆ , ಅದಕ್ಕಾಗಿ ಸಂಕಲ್ಪ ಮಾಡಿದ್ದೇವೆ ಎಂದರು ಷೇರುದಾರಾದ ವಡಗೂರು ನಾಗರಾಜ್ ಮತ್ತಿತರರು ಮಾತನಾಡಿ ಹುತ್ತೂರು ಹೋಬಳಿಯಲ್ಲಿ ಸುಮಾರು ೫೨ ಹಳ್ಳಿಗಳು ಇದ್ದು ಪಂಚಾಯತಿಗೊಂದು ಸಹಕಾರ ಸಂಘ ಪ್ರಾರಂಭಿಸಲು ಒತ್ತಾಯಿಸಿದರು. ಇದಕ್ಕೆ ಸರ್ವಾನುಮತದ ಅಂಗೀಕಾರ ದೊರೆಯಿತು.
ಒಟ್ಟಾರೆ ಸರ್ವಸದಸ್ಯರ ಸಭೆಯಲ್ಲಿ ಗದ್ದಲವಾಗುವ ಮುನ್ಸೂಚನೆ ಇತ್ತು , ಆಡಳಿತ ಮಂಡಳಿ ಹಾಗೂ ಷೇರುದಾರರ ಮಧ್ಯೆ ಉದ್ವಿಗ್ನ ವಾತಾವರಣವಿದ್ದರೂ ಯಾವುದೇ ಗಲಾಟೆ , ಮಾತಿನ ಚಕಮಕಿಗೆ ಅವಕಾಶವಿಲ್ಲದಂತೆ ಸಭೆಯನ್ನು ಯಶಸ್ವಿಯಾಗಿ ಮುಗಿಸಲಾಯಿತು.
ವಡಗೂರು ಸೊಸೈಟಿ ಉಪಾಧ್ಯಕ್ಷ ಅಂಬರೀಶ್ , ನಿದೇರ್ಶಕರಾದ ಚಂದ್ರಶೇಖರ್ , ರಾಜೇಂದ್ರಪ್ರಸಾದ್ , ರಮೇಶ್ ಕುಮಾರ್ , ಕೆ.ರಮೇಶ್ , ಶ್ರೀನಿವಾಸಪ್ಪ , ನಾರಾಯಣಸ್ವಾಮಿ , ಕೃಷ್ಣಮೂರ್ತಿ , ಚಂದ್ರಶೇಖರ್ , ಅಮರಾವತಿ , ನಾರಾಯಣಮ್ಮ ,ಕಾರ್ಯನಿರ್ವಾಹಣಾಧಿಕಾರಿ ವೈ.ವಿ ನಾಗರಾಜ್ , ಹಿರಿಯ ಸಹಕಾರಿ ಅಬ್ಬಣಿ ಶಂಕರ್ , ಅಬ್ಬಣಿ ಶಿವಪ್ಪ , ವಿಟ್ಲಪನಹಳ್ಳಿ ವೆಂಕಟೇಶ್ ಮುಂತಾದವರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.