ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ಐತಿಹಾಸಿಕ ಪರಂಪರೆಯುಳ್ಳ ನಂದಿ ಕ್ಷೇತ್ರವನ್ನು ವಿದೇಶಿ ಪ್ರವಾಸಿಗರು ಸೇರಿದಂತೆ ದೇಶದ ನಾನಾ ಮೂಲೆಗಳ ಪ್ರವಾಸಿಗರು ಭೇಟಿ ನೀಡಿ ಸಂದರ್ಶಿಸುತ್ತಾರೆ ಅದೇ ರೀತಿ ನಂದಿಗೆ ಸಮೀಪದಲ್ಲಿಯೇ ಇರುವ ಭಾರತ ರತ್ನ ಪುರಸ್ಕೃತ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿಯನ್ನು ಸಹ ಸಮಗ್ರವಾಗಿ ಅಭಿವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಂಗಳವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಜಿಲ್ಲಾ ಪ್ರವಾಸಿ ತಾಣಗಳ ದರ್ಶನದ ಪ್ರವಾಸವನ್ನು ಕೈಗೊಂಡಿದ್ದ ವಾಹನಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮುದ್ದೇನಹಳ್ಳಿ ವಿಶ್ವಖ್ಯಾತಿ ಪಡೆದ ನಂದಿಯ ಭೋಗನಂದೀಶ್ವರ ದೇವಾಲಯ, ವಿದುರಾಶ್ವತ್ಥ, ಕೈವಾರ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಪ್ರವಾಸವನ್ನು ಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ರೆಡ್ಡಿಗೊಲ್ಲರಹಳ್ಳಿ ಹಾಗೂ ಪೆರೆಸಂದ್ರ ಗ್ರಾಮಗಳ ಸರ್ಕಾರಿ ಪ್ರೌಢ ಶಾಲೆಗಳ ತಲಾ 25 ವಿದ್ಯಾರ್ಥಿಗಳು ಹಾಗೂ ತಲಾ ಒಬ್ಬ ಸಹ ಶಿಕ್ಷಕರನ್ನು ಆಯ್ಕೆ ಮಾಡಿ ಒಂದು ದಿನದ ಪ್ರವಾಸವನ್ನು ಏರ್ಪಡಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಐತಿಹಾಸಿಕ ಸ್ಥಳಗಳ ಮಹತ್ವವನ್ನು ತಿಳಿಸಿಕೊಡುವುದರಿಂದ ವಿದ್ಯಾರ್ಥಿಗಳ ಜ್ಞಾನವಿಕಸನಕ್ಕೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ನವರ ಜನ್ಮಸ್ಥಳ, ವಸ್ತು ಸಂಗ್ರಾಲಯ, ಕರ್ನಾಟಕ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ದಿಯಾಗಿರುವ ಗೌರಿಬಿದನೂರಿನ ವಿದುರಾಶ್ವತ್ಥ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರ ಹೆಸರಿನಲ್ಲಿ ತೆರೆದ ರಾಷ್ಟ್ರೀಯ ವಿಜ್ಞಾನ ಕೇಂದ್ರದ ಸ್ಥಳಗಳ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಭಾರತರತ್ನ ಪುರಸ್ಕೃತ ಸಿ.ಎನ್.ಆರ್.ರಾವ್ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮುದ್ದೇನಹಳ್ಳಿಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ನವರ ಪುತ್ಥಳಿಗೆ ಜಿಲ್ಲಾಧಿಕಾರಿಗಳು ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಮೊಮ್ಮಗ ಸತೀಶ್ ಮೋಕ್ಷಗುಂಡಂ, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ತಹಶೀಲ್ದಾರ್ ಗಣಪತಿಶಾಸ್ತ್ರಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ರಾಜೇಶ್ವರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ತೇ.ಮೀಂ.ಅನ್ಸಾರಿ ಚಿಕ್ಕಬಳ್ಳಾಪುರ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.