ಕವನಗಳು(ವಿಶ್ವಕನ್ನಡಿಗ ನ್ಯೂಸ್:
ಅವ್ವ ನೋಡೇ ಈ ಅಂಗಿಯ ಹಚ್ಚ ಹಸುರಿನದಲ್ಲ, ಹಳದಿಯಂತೂ ಮೊದಲೇ ಅಲ್ಲ ಅವೆರಡನ್ನು ಬದಿಗೊತ್ತುವ ನನ್ನ ಮೈಬಣ್ಣಕ್ಕೊಪ್ಪುವ ಬೂದು ಬಣ್ಣದ ಅಂಗಿಯವ್ವ. ನಾ ತಂದದ್ದಲ್ಲ, ಅಣ್ಣ ಕೊಡಿಸಿದನವ್ವ.
ಹುಟ್ಟಿದಾಗಿನಿಂದಲೂ ನೀನು ತೋಡಿಸಿರುವ ಅಂಗಿಗಳವೆಷ್ಟೋ, ರಂಜಾನ್, ಬಕ್ರೀದ್ ಗಳಲ್ಲಿ ಅಪ್ಪನಿಂದ ಹಠ ಹಿಡಿದು ತರಿಸಿಕೊಂಡವುಗಳೆಷ್ಟೋ, ಅಕ್ಕಂದಿರೂ ಆಗಾಗ ಅಣ್ಣಂದಿರೂ ಆಗಾಗ ನೆಂಟರಿಷ್ಠರೂ ಆಗಾಗ ಶಾಸ್ತ್ರ-ಸಂಪ್ರದಾಯಗಳ ಬೆನ್ನತ್ತಿ ಕರ್ತವ್ಯ ಪಾಲನೆಗಾಗಿ ಉಡುಗೊರೆಯಿತ್ತವುಗಳೆಷ್ಟೋ.
ಪ್ರತಿ ಶೈಕ್ಷಣಿಕ ಕೋರ್ಸುಗಳ ಬೀಳ್ಕೊಡುಗೆಯ ಸಮಾರಂಭದಲ್ಲಿ ಸ್ನೇಹಿತರುಗಳೆಲ್ಲರೂ ಒಂದೇ ಬಗೆಯ ಅಂಗಿಯ ತೊಟ್ಟವುಗಳೆಷ್ಟೋ, ಪಿಕ್ನಿಕ್, ಪ್ರವಾಸ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಟ್ಟಾಗ ಕಣ್ ಸೆಳೆದ ಅಂಗಿಗಳ ಕೊಂಡು ಉಟ್ಟವುಗಳೆಷ್ಟೋ, ಬಿಟ್ಟವುಗಳೆಷ್ಟೋ.
ಮನಸ್ಸು ಇಂಚ್ಚಿಸಿದಂತೆ ಮನಸ್ಸಾದಾಗಲೆಲ್ಲಾ.. ಹಸಿರು, ಬಿಳಿ, ನೀಲಿ, ಕೆಂಪುಗಳಾದಿಯಾಗಿ ನಾ ತೊಟ್ಟುಟ್ಟು, ಹರಿದು ಹೋದವುಗಳೆಷ್ಟೋ.
ಅಗಣಿತದಷ್ಟು ಅಂಗಿಗಳ ಉಟ್ಟು ಸವೆಸಿರುವೆ. ಒಮ್ಮೆಯೂ ಅವುಗಳ ಮೇಲೆ ಅತಿಯಾದ ಪ್ರೇಮ ಬರಲಿಲ್ಲ. ಅಣ್ಣ ಕೊಡಿಸಿದ ಈ ಅಂಗಿ ಮಾತ್ರ ಇಂದೇಕೋ ನನ್ನ ಸೆಳೆಯುತಿದೆ. ನೋಡಿದಷ್ಟೂ ಚಂದ ಮನಸ್ಸಿಗೆ ಮಹಾದಾನಂದ ತೊಡಬೇಕೆಂಬ ತವಕ ಇದು ಏಕೆ ಅವ್ವ?
ಹ್ಞಾ ಅಣ್ಣನಾರಿವನೆಂದು ಕೇಳಿದೆಯಾ? ವಿಜಯಣ್ಣ, ಅವ್ವ ಓದಿಸುವ ಅಧ್ಯಾಪಕ ಓದುಗರ ಪೋಷಕ ಓದು ಓದಿರೆಂದು ಓಲೈಸುವ ಪ್ರೇರೇಪಕ ತನ್ನೆಸರಂತೆಯೇ ನಮ್ಮನ್ನೂ ವಿಜಯಶಾಲಿಗಳಾಗುವಂತೆ ಶ್ರಮಿಸುವ ಸೇವಕ ನನ್ನ ನೆಚ್ಚಿನ ಗುರು ಕಾಣೆ ಅವ್ವ.
ಗುರು ಕಾಣಿಕೆಯನಿತ್ತು ಕೀರ್ತಿಯನು ಪಡೆದ ಏಕಲವ್ಯನ ನೀ ಬಲ್ಲೆ, ಶಿಷ್ಯನಿಗೆ ಕಾಣಿಕೆಯಿತ್ತ ಸದ್ಗುರುವ ಎಲ್ಲಾದರೂ ಕಂಡಿರುವೆಯಾ? ಕೇಳಿರುವೆಯಾ? ಹೇಳೇ ಅವ್ವ.
ಇದೋ ನೋಡು ಈ ಅಂಗಿಯ, ಅಣ್ಣ ಕೊಡಿಸಿದ ಅಂಗಿ, ಖುಷಿಯಿಂದ ಉಡಲೇ ಹಾಳಾಗದಂತೆ ನೆನಪಿಗಾಗಿ ಇಟ್ಟಿರಲೇ. ನೀನೇ ಹೇಳು ನನ್ನವ್ವ?
✍️ರುಜುವಾನ್ ಕೆ ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.