ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ಗೌರಿಬಿದನೂರು ತಹಸೀಲ್ದಾರ್ ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ ಅವರು ಭೇಟಿ ನೀಡಿ ತಾಲ್ಲೂಕು ಆಡಳಿತದ ಕಚೇರಿಯ ಸಮಸ್ಯೆಗಳು, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ರಾಜ್ಯ ಸರ್ಕಾರದ ಆದೇಶದನ್ವಯ ಪ್ರತಿ ಮಂಗಳವಾರ ಜಿಲ್ಲೆಯ ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗೌರಿಬಿದನೂರು ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಂತರ ಆಧಾರ್ ನೋಂದಣಿ, ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು.
ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ ಸಮಸ್ಯೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ನೀಡಿದರು. ತಾಲ್ಲೂಕು ಆಡಳಿತದಲ್ಲಿನ ಸಿಬ್ಬಂದಿಯ ಕೊರತೆ, ಸಾರ್ವಜನಿಕರಿಗೆ ಒದಗಿಸುವ ಸೇವೆ, ಜನರ ಕುಂದು ಕೊರತೆಗಳನ್ನು , ಆಡಳಿತದ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಿ ಅದರ ಸುಧಾರಣೆಗೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಗೌರಿಬಿದನೂರು ತಾಲ್ಲೂಕು ತಹಸಿಲ್ದಾರ್ ಶ್ರೀನಿವಾಸ್ ಅವರು ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಚಿಕ್ಕಬಳ್ಳಾಪುರ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.