(www.vknews.in) ಬದಿಯಡ್ಕ: ಭಾಷೆಗೆ ಸ್ವತಂತ್ರ ಅಸ್ತಿತ್ವ ಎಂಬುದಿಲ್ಲ. ಅದು ನಮ್ಮ ನಿತ್ಯ ಬದುಕಿನೊಂದಿಗೆ ಸೇರಿಕೊಂಡಿರುವ ಸಂಸ್ಕೃತಿಯ ಒಂದು ಭಾಗ. ಸಂಸ್ಕೃತಿ ಉಳಿದಾಗ ಮಾತ್ರ ಭಾಷೆಯೂ ಉಳಿಯುತ್ತದೆ. ಸಂಸ್ಕೃತಿಯನ್ನು ಉಳಿಸಲು ಸಮುದಾಯವು ಪ್ರಭಾವಿಯೂ ಪ್ರಬಲವಾಗಿಯೂ ಇರಬೇಕಾದ್ದು ಅವಶ್ಯಕ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಸಮಾವೇಶವನ್ನು ದೀಪ ಬೆಳಗಿ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ನಾವು ಕನ್ನಡದ ಸಂಸ್ಕೃತಿಯಲ್ಲಿ ಕನ್ನಡ ಭಾಷೆಯನ್ನು ಆಡುತ್ತ ಬದುಕಬೇಕಾದರೆ ನಮ್ಮ ನೆಲಮೂಲ ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕು. ಮನೆಯಲ್ಲಿ, ಶಾಲೆಗಳಲ್ಲಿ ಮತ್ತು ಸಮಾಜದಲ್ಲಿ ಕನ್ನಡವನ್ನು ಮಾತಾಡುತ್ತ, ನಮ್ಮ ಹಬ್ಬಹರಿದಿನಗಳನ್ನು ಆಚರಿಸಿದಾಗ ಭಾಷೆ ಮತ್ತು ಸಂಸ್ಕೃತಿ ಮುಂದಿನ ತಲೆಮಾರಿಗೆ ಹರಿದು ಹೋಗುತ್ತದೆ. ದಸರಾ ನಾಡಹಬ್ಬ, ಬಲಿಯೇಂದ್ರ ಪರ್ಬ ಮತ್ತು ಎಲ್ಲ ನೆಲಮೂಲ ಹಬ್ಬ ಹರಿದಿನಗಳನ್ನು ನಾವು ಮನೆಮನೆಯಲ್ಲಿ ಆಚರಿಸುವಂತಾಗಬೇಕು. ಆಗ ಭಾಷೆಯೂ ಉಳಿಯುತ್ತದೆ ಎಂದು ಡಾ. ಪೆರ್ಲ ಹೇಳಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಯತೀಶ್ ಕುಮಾರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ನಿವಾರಣೆಗೆ ಕನ್ನಡಿಗರು ಒಗ್ಗಟ್ಟಾಗಿ ಹೋರಾಡಬೇಕಾದ ಅಗತ್ಯವನ್ನು ಅವರು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಶಿವಕುಮಾರ್ ಎಸ್. ವಹಿಸಿದ್ದರು. ಕನ್ನಡದ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರ್ಪಡೆಗೊಳಿಸಿ ಕನ್ನಡ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು ಇದಕ್ಕೆ ಹೆತ್ತವರ ಸಹಕಾರ ಬೇಕು ಎಂದು ಅವರು ಹೇಳಿದರು.
ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾಡಿದರು. ದಸರಾ ನಾಡಹಬ್ಬದ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.
ಕಾರ್ಯದರ್ಶಿ ಡಾ. ಶ್ರೀಶಕುಮಾರ್ ಪಿ. ಸ್ವಾಗತಿಸಿದರು. ಸುಶೀಲಾ ಪದ್ಯಾಣ ಪ್ರಾರ್ಥನಾ ಗೀತೆ ಹಾಡಿದರು. ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಮತ್ತು ಕೇಂದ್ರಸಮಿತಿ ಕಾರ್ಯದರ್ಶಿ ಜಯಪ್ರಕಾಶ್ ಪಾಲೆಂಗ್ರಿ ಶುಭಾಶಂಸನೆಗೈದರು. ಅಧ್ಯಾಪಕಿ ಶ್ರೀಮತಿ ಶ್ಯಾಮಲಾ ನಿರೂಪಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಎಂ. ವಂದನಾರ್ಪಣೆಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.