(www.vknews.in) ಹೆಚ್ಚುಕಡಿಮೆ ನವತಾರಾಗಣದ ಕನ್ನಡ ಚಿತ್ರವೊಂದು ದೇಶದಲ್ಲಿ ಇಷ್ಟು ಸಂಚಲನ ಮೂಡಿಸಿದ್ದು ಬಹುಶಃ ಇದೇ ಮೊದಲಿರಬೇಕು.” ಕಾಂತಾರ” ಎನ್ನುವ ಆಕರ್ಷಕ ಟೈಟಲ್ ಚಿತ್ರರಂಗದ ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವ ಚಿತ್ರಕ್ಕೂ ಬಳಕೆಯಾಗದೆ ಉಳಿದದ್ದು ಈ ಚಿತ್ರತಂಡದ ಅದೃಷ್ಟ ಮತ್ತು ಮೊದಲ ಜಯ.
ಒಮ್ಮೆ ಹೊಕ್ಕುಳು ತನ್ನಷ್ಟಕ್ಕೆ ತೋರಿದ್ದು ಬಿಟ್ಟರೆ ಆಕರ್ಷಣೆಗಾಗಿ ಎದೆ, ತೊಡೆ, ಹೊಕ್ಕುಳು ತೋರಿಸುವ ವಾಮಮಾರ್ಗ ಹಿಡಿಯದಿದ್ದುದು ಈ ಚಿತ್ರದ ಸಾಮರ್ಥ್ಯವನ್ನು ಸೂಚಿಸುತ್ತದೆ. ಚಿತ್ರ ಚೆನ್ನಾಗಿದೆ ಎಂದು ಹೊಸತಾಗಿ ಏನೂ ಹೇಳಬೇಕಾಗಿಲ್ಲ. ಕುಟುಂಬ ಸದಸ್ಯರೆಲ್ಲರೂ ಒಂದಾಗಿ ಕುಳಿತುಕೊಂಡು ನೋಡುವ ಅಪರೂಪದ ಚಿತ್ರವೂ ಹೌದು. ಈ ಚಿತ್ರದ ಮೇಲೆ ಈ ಹಿಂದಿನ ಕನ್ನಡ ಚಿತ್ರಗಳಿಗಿಂತ ತುಳು ಚಿತ್ರಗಳ ಪ್ರಭಾವವೇ ತುಸು ಹೆಚ್ಚಿದೆ. ಚಿತ್ರದುದ್ದಕ್ಕೂ ಮಲಯಾಳಮ್ ಚಿತ್ರಗಳ ಮತ್ತು ಇತರ ಸ್ಥಳೀಯ ಜಾನಪದ ಕಲೆಗಳ ಪ್ರಭಾವವೂ ಪರೋಕ್ಷವಾಗಿ ಅಲ್ಲಲ್ಲಿ ಕಂಡುಬರುತ್ತದೆ.
ಬಲಪಂಥೀಯ ವಿಚಾರಗಳಿಗೆ ಚಿತ್ರ ಬೆಂಬಲ ನೀಡುತ್ತಿದೆ ಎಂಬ ಆಧಾರರಹಿತ ಆರೋಪವೊಂದು ಥಿಯೇಟರುಗಳ ಹೊರಗೆ ಸುಳಿದಾಡುತ್ತಿರುವುದರಿಂದ ಈ ಪಂಥವನ್ನು ಇಷ್ಟಪಡದ ಒಂದು ದೊಡ್ಡ ವರ್ಗ ಚಿತ್ರದಿಂದ ಅಂತರ ಕಾಯ್ದುಕೊಂಡಿರುವ ಅನುಮಾನ ದಟ್ಟವಾಗಿದೆ. ಇದು ಈ ಚಿತ್ರದ ಸರ್ವತ್ರ ಮನ್ನಣೆಗೆ ದೊಡ್ಡ ತೊಡಕಾಗಿದೆ. ಈ ಆರೋಪವನ್ನು ನಿವಾರಿಸುವಲ್ಲಿ ಚಿತ್ರತಂಡ ಅಷ್ಟೇನೂ ಗಂಭೀರವಿದ್ದಂತೆ ಕಾಣುತ್ತಿಲ್ಲ.
ಚಿತ್ರದ ಬಗ್ಗೆ ಕನ್ನಡದ ಕೆಲ ಹೆಸರಾಂತ ನಟ-ನಟಿಯರು ವ್ಯತಿರಿಕ್ತ ಹೇಳಿಕೆಗಳನ್ನು ಹೊರಡಿಸಿದ್ದಾರೆ. ಈ ಹೇಳಿಕೆಗಳಲ್ಲಿ ವಾಸ್ತವಕ್ಕಿಂತ, ಚಿತ್ರದ ಅಭೂತಪೂರ್ವ ಯಶಸ್ಸು ಕಂಡು ಅಸೂಯೆಪಟ್ಟಿದ್ದೇ ಹೆಚ್ಚು ಕಂಡುಬರುತ್ತದೆ. ಟಿವಿ ಆ್ಯಂಕರುಗಳ ಸಹವಾಸ ಚಿತ್ರತಂಡ ಅಗತ್ಯಕ್ಕಿಂತ ಹೆಚ್ಚು ಮಾಡಿದ್ದರಿಂದ ಅದಕ್ಕೆ ಬೆಲೆತೆತ್ತಿದೆ. ರಿಷಬ್ ಶೆಟ್ಟಿಯವರನ್ನು ಅಗತ್ಯಕ್ಕಿಂತ ಹೆಚ್ಚು ಏರಿಸಿ, ತಮ್ಮನ್ನು ಕ್ಯಾರೇ ಅನ್ನದ ವಿಜಯ್, ದರ್ಶನ್, ಸುದೀಪ್, ಯಶ್ ಮುಂತಾದವರಿಗೆ ಬಿಸಿ ಮುಟ್ಟಿಸಬೇಕೆಂಬ ಸಣ್ಣ ಬುದ್ಧಿ ಟಿವಿ ಆ್ಯಂಕರುಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಇವರುಗಳ ಮುಂದೆ ರಿಷಬ್ ಶೆಟ್ಟಿ ನಯ, ವಿನಯ, ಗೌರವದಿಂದ ಮಾತನಾಡಿದಷ್ಟು ಇನ್ನುಳಿದ ಸ್ಟಾರ್ ನಟರು ಮಾತನಾಡುವುದಿಲ್ಲ. ಅಗಲಿದ ಪುನೀತ್ ರಾಜ್ ಕುಮಾರ್ ಹೊರತುಪಡಿಸಿ ಈಗಿನ ಪೀಳಿಗೆಯ ಬಹುತೇಕ ಕನ್ನಡದ ಸ್ಟಾರ್ ನಟರು ರೀಲ್ ಮತ್ತು ರಿಯಲ್ ಲೈಫಲ್ಲಿ ಒಂದೇ ರೀತಿ ಡೈಲಾಗ್ ಹೊಡೆಯುವವರು. ಟಿವಿ ಆ್ಯಂಕರ್ ಅಗತ್ಯಕ್ಕಿಂತ ಹೆಚ್ಚಾಗಿ ನಖರಾ ಮಾಡಿದರೆ ಕ್ಯಾಮೆರಾ ಬೇಧ ಮರೆತು ಆ್ಯಂಕರುಗಳಿಗೆ ಬೇಧಿ ಬರಿಸುವಷ್ಟು ಮಾತಲ್ಲೇ ಬಡಿಯುತ್ತಾರೆ. ಈ ನಟರುಗಳ ಮುಂದೆ ಆ್ಯಂಕರುಗಳು ಕೃತಕ ನಗೆ ಮತ್ತು ಕುಲುಕುವಿಕೆಯೊಂದಿಗೇ ಹೆಚ್ಚು ಕಂಡುಬರುತ್ತಾರೆ.
ನಟರ ಮುಂದಿನ ಈ ಪರಿಸ್ಥಿತಿಗೆ ತಣ್ಣಗೆ ಸೇಡು ತೀರಿಸಿಕೊಂಡ ಭಾವನೆಯಲ್ಲಿ ಮೀಸೆಗಳ ಅಡಿಯಲ್ಲಿ ಈ ಆ್ಯಂಕರುಗಳು ಈಗ ರಿಷಬ್ ಶೆಟ್ಟಿಯವರ ಹಿಂದೆ ನಿಂತು ನಗುತ್ತಿದ್ದಾರೆ. ಚಿತ್ರದ ಸರ್ವ ಭೂಮಿಕೆಯಲ್ಲಿ ಗೆದ್ದ ನಾಯಕ- ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಟಿವಿಯವರ ರಾಜಕೀಯ ಪ್ರಶ್ನೆಗಳು ಯಾಮಾರಿಸಿ ಚಿತ್ರ ಬಲಪಂಥೀಯರನ್ನು ಮಾತ್ರ ಪ್ರತಿನಿಧಿಸುವಂತೆ ಮಾಡಿದೆ. ಚಿತ್ರ ಪದರ್ಶನದ ಮುಂಚೆ ಮತ್ತು ಪ್ರದರ್ಶನವಾಗುತ್ತಿರುವ ಸಂದರ್ಭದಲ್ಲಿ ಮನದೊಳಗಿನ ರಾಜಕೀಯ ಸಿದ್ಧಾಂತವನ್ನು ಅದುಮಿಡುವ ಚಾಕಚಕ್ಯತೆ ರಿಷಬ್ ತೋರಿಸಲಿಲ್ಲ. ಉತ್ತಮ ಚಿತ್ರವನ್ನು ಸಮಾಜದ ಸರ್ವವರ್ಗದವರು ತರ್ಕ ಮತ್ತು ತತ್ವಗಳಿಗೆ ಸಿಕ್ಕಿಸಿಕೊಳ್ಳದೆ ಸ್ಥಿತಪ್ರಜ್ಞರಾಗಿ ನೋಡುತ್ತಾರೆ, ಇಂತಹ ಚಿತ್ರಗಳಿಗೆ ಗಿಮಿಕ್ ಮಾಡಿದರೆ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬ ಜ್ಞಾನವೂ ರಿಷಬ್ ಶೆಟ್ಟಿಯವರನ್ನು ಯಾಮಾರಿಸಿದೆ.
ನೋ ಕಮೆಂಟ್ಸ್ ಎಂಬ ಒಂದು ಕಮೆಂಟ್ ಮಧ್ಯದಲ್ಲಿ ಹೇಳುವುದಕ್ಕಿಂತ ರಾಜಕೀಯ ಪ್ರಶ್ನೆಗಳ ಆರಂಭದಲ್ಲೇ ಹೇಳಿದ್ದಿದ್ದರೆ ಚಿತ್ರದ ಮನ್ನಣೆ ಇನ್ನಷ್ಟು ವಿಸ್ತಾರವಾಗುತಿತ್ತು. ಚಲನಚಿತ್ರಗಳಾಗಲೀ, ಧಾರಾವಾಹಿಗಳಾಗಲಿ ಜನಮಾನಸದಲ್ಲಿ ಬಹುಕಾಲ ದಟ್ಟವಾಗಿ ನೆಲೆಯೂರಲು ಪಾತ್ರಧಾರಿಗಳ ನಿಜ ಜೀವನದ ವ್ಯಕ್ತಿತ್ವ ಮತ್ತು ಬಾಹ್ಯ ವ್ಯವಹರಿಸುವಿಕೆಯು ಪ್ರಮುಖ ಕಾರಣವಾಗುತ್ತದೆ.
70ರ ದಶಕದಲ್ಲಿ ತೆರೆಕಂಡು ಜಗತ್ತಿನಾದ್ಯಂತ ಸಂಚಲನ ಮೂಡಿಸಿದ ಹಿಂದಿ ಚಿತ್ರ “ಶೋಲೆ”ಯು ಗಣ್ಯ ತಾರಾಗಣವನ್ನು ಹೊಂದಿತ್ತು. ಶೋಲೆ ಬಿಡುಗಡೆಯ ನಂತರ ಆ ಚಿತ್ರತಂಡದವರು ಚಿತ್ರವನ್ನು ದೇಶದ ಸರ್ವ ವರ್ಗದವರು ನೋಡುವಂತಹ ವಾತಾವರಣ ಮತ್ತು ವ್ಯಕ್ತಿತ್ವವನ್ನು ತೋರ್ಪಡಿಸಿದರು. ಚಿತ್ರದ ನಾಯಕ ಅಮಿತಾಭ್ ಬಚ್ಚನ್ ಇಂದಿರಾಗಾಂಧಿ ಕುಟುಂಬದ ಆಪ್ತರಾಗಿ ರಾಜೀವ್ ಗಾಂಧಿಯ ಹೆಗಲ ಮೇಲೆ ಕೈಯಿಟ್ಟು ತಿರುಗುವಷ್ಟು ಗಳಸ್ಯ ಕಂಠಸ್ಯರಾದರೂ, ಎಲ್ಲಿಯೂ ಅದು ಅಗತ್ಯಕ್ಕಿಂತ ಹೆಚ್ಚು ಬಹಿರಂಗವಾಗಿ ಗೋಚರವಾಗದಂತೆ ಎಚ್ಚರಿಕೆ ವಹಿಸಿದ್ದರು. ರಮೇಶ್ ಸಿಪ್ಪಿ ನಿರ್ದೇಶನದ ಶೋಲೆಯನ್ನು ದೇಶದ ಯಾವುದಾದರೂ ವರ್ಗಕ್ಕೆ ಸೀಮಿತವಾಗಿಸಿ ಅಥವ ಯಾವುದಾರೂ ಹೋಲಿಕೆಯಾಗುವ ಆರೋಪ ಹೊರಿಸಿ, ಚಿತ್ರಕ್ಕೆ ಅಡ್ಡಗಾಲಿಕ್ಕುವ ಚಿತ್ರರಂಗದ ಒಳಗಿನ ಅತೃಪ್ತ ಮತ್ತು ಅಸೂಯೆಯಿಂದ ಕೂಡಿದ ಆತ್ಮಗಳಿಗೆ, ಅಮಿತಾಭ್, ಧರ್ಮೇಂದ್ರ, ಹೇಮಾಮಾಲಿನಿ, ಅಮ್ಜದ್ ಖಾನ್, ಅಸ್ರಾಣಿ ಮುಂತಾದ ಪಾತ್ರಧಾರಿಗಳ ಸರ್ವರನ್ನು ಆವರಿಸಿಕೊಂಡು ಆಕರ್ಷಿಸುವ ವೈಯುಕ್ತಿಕ ಗುಣಗಳು ತೊಡಕಾದವು. ಹೀಗಾಗಿ ಶೋಲೆ ಹಿಂದಿ ಚಿತ್ರರಂಗದ ಪರಂಪರೆಗೆ ಹೊಸ ಭಾಷ್ಯ ಮುನ್ನುಡಿಯನ್ನು ಬರೆಯಿತು. ತದನಂತರದ ವರ್ಷಗಳಲ್ಲಿ ಇದೇ ಪಾತ್ರಧಾರಿಗಳು ರಾಜಕೀಯ ರಂಗಕ್ಕೆ ಧುಮುಕಿ ಪಕ್ಷ, ಪಂಗಡ, ಪ್ರದೇಶಗಳಿಗೆ ಸೀಮಿತವಾದರೂ ಅದಾಗಲೇ ಚಿತ್ರ ಸಾಧನೆಯ ಗೌರಿಶಂಕರವನ್ನು ಏರಿಯಾಗಿತ್ತು.
ಅದೇ ರೀತಿ, ಟಿ.ಎನ್ ಸೀತಾರಾಮ್ ನಿರ್ದೇಶನದ “ಮಾಯಾಮೃಗ” ಎನ್ನುವ ಧಾರಾವಾಹಿ 90ರ ದಶಕದಲ್ಲಿ ಕರ್ನಾಟಕದ ಮನೆ-ಮನಗಳ ಮಾತಾಗಿತ್ತು. ನಿಜಕ್ಕೂ ಆ ಧಾರಾವಾಹಿಯ ಪಾತ್ರಧಾರಿಗಳೆಲ್ಲ ಪಾತ್ರದಲ್ಲಿ ಪಾತ್ರವಾಗಿ ಮಾತ್ರ ಕಂಡುಬರಲಿಲ್ಲ, ಜೊತೆಗೆ ಒಂದೊಳ್ಳೆಯ ಗೌರವಾರ್ಹ ಪ್ರಬುದ್ಧ ವ್ಯಕ್ತಿತ್ವದಂತೆಯೂ ಕಂಡುಬಂದರು. ಜಾತಿ, ಧರ್ಮ, ಸಿದ್ಧಾಂತ ಪಂಗಡಗಳ ಹೊರತಾಗಿ ಈ ಧಾರಾವಾಹಿಯ ಪಾತ್ರಧಾರಿಗಳನ್ನು ನಾಡಿನ ಸರ್ವ ವರ್ಗದ ಜನ ಪ್ರೀತಿಸಿದರು. ಆ ಧಾರಾವಾಹಿ ಪ್ರಸಾರವಾದ ಕಾಲಘಟ್ಟ ಮತ್ತು ನಂತರದ ಕಾಲದಲ್ಲಿ ಇದಕ್ಕೆ ಪ್ರತಿಸ್ಪರ್ಧಿಯಾಗಿ ಅಥವ ಪರ್ಯಾಯವಾಗಿ ಇಲ್ಲಿಯವರೆಗೆ ಅಂತಹ ಧಾರಾವಾಹಿಯೇ ಕನ್ನಡದಲ್ಲಿ ಬರಲಿಲ್ಲ.
ಆದರೆ ಈ ಧಾರಾವಾಹಿಯ ಜನಪ್ರಿಯತೆಯ ಲಾಭ ಪಡೆಯಲು ಹವಣಿಸಿದ ಕೆಲ ಪ್ರಮುಖ ಕಲಾವಿದರು ರಾಜಕೀಯದವರ ಹಿಂದೆ ಮುಂದೆ ಠಳಾಯಿಸತೊಡಗಿದರು. ನಟನೆ ಮೊದಲೆ ಗೊತ್ತಿದ್ದರಿಂದ ಸ್ವಂತಿಕೆ ಮತ್ತು ವ್ಯಕ್ತಿತ್ವ ಮರೆತು ಸಾರ್ವಜನಿಕವಾಗಿ ನಾಟಕೀಯವಾಗಿ ವರ್ತಿಸಿದರು. ಸ್ವತಃ ಅವರ ಪಕ್ಷದವರಿಗೇ ಅವರು ಧಾರಾವಾಹಿಯ ಪಾತ್ರದೊಳಗೆ ಕಂಡ ಪ್ರಬುದ್ಧರಾಗಿ ಕಾಣಲಿಲ್ಲ. ಈ ಧಾರಾವಾಹಿಯ ಪಾತ್ರಧಾರಿಗಳ ರಾಜಕೀಯದ ಅನಿಯಂತ್ರಿತ ಆಕಾಂಕ್ಷೆಗಳು ಮತ್ತು ವರ್ತನೆಗಳು “ಮಾಯಾಮೃಗ” ವೆನ್ನುವ ಸುಂದರ ಧಾರಾವಾಹಿಯ ವರ್ಚಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಿ ಈ ಧಾರಾವಾಹಿ ಕನ್ನಡಿಗರ “ಬದುಕಿನ ಧಾರಾವಾಹಿ” ಎಂಬ ಶಾಶ್ವತ ಪಟ್ಟದಿಂದ ವಂಚಿತವಾಗುವಂತಾಯಿತು.
ನಿರ್ದೇಶಕ ಸೀತಾರಾಮ್ ಕೂಡ ಆ ಧಾರಾವಾಹಿಯ ಒಬ್ಬ ಒಳ್ಳೆಯ ನಿರ್ದೇಶಕ ಮತ್ತು ಪಾತ್ರವಾದರೇ ಹೊರತು ಧಾರಾವಾಹಿಯನ್ನು ಸಾರ್ವಕಾಲಿಕವಾಗಿ ಪ್ರತಿನಿಧಿಸುವ ಒಂದು ಘನ ವ್ಯಕ್ತಿತ್ವವಾಗಿ ಕಂಡುಬರಲಿಲ್ಲ. ಕಲಾವಿದರ ವ್ಯಕ್ತಿತ್ವ, ಪಾತ್ರಗಳ ಘನತೆ-ಗೌರವಗಳಿಗೆ ಬಹಳ ಮುಖ್ಯ ಎನ್ನುವುದಕ್ಕೆ ಈ ಉದಾಹರಣೆಗಳೇ ಸಾಕು.
ಇನ್ನು, ಕಾಂತಾರ ಚಿತ್ರದ ಬಗ್ಗೆ ಮಾತನಾಡುವುದಾದರೆ, ಕೇರಳ ಕೋರ್ಟುಗಳ ತಡೆಯಾಜ್ಞೆ, ಅನುಕರಣೆಯ ಅಪವಾದ, ವಿಚಾರವಾದಿಗಳ ಅಪಸ್ವರ, ಪ್ರಮುಖ ನಟ-ನಟಿಯರ ಅಸೂಯೆಯ ಹೊರತಾಗಿಯೂ ಚಿತ್ರ ಅದ್ಭುತವಾಗಿದೆ ಮಾತ್ರವಲ್ಲ, ನೋಡಲೇಬೇಕಾದ ಚಿತ್ರವಾಗಿದೆ. ನಾಯಕ ರಿಷಬ್ ಶೆಟ್ಟಿಯವರ ಶ್ರಮ ಶತ್ರುವೂ ಮೆಚ್ಚುವಂತಿದೆ. ಹೊರಪ್ರಪಂಚದಲ್ಲಿ ಪ್ರಚಾರ ಪಡೆದಂತೆ ಚಿತ್ರದೊಳಗೇನೂ ವೈದಿಕತೆಯ ಪೋಷಣೆಯಾಗಲಿ, ಪಕ್ಷ-ಧರ್ಮ ಪ್ರೇಮಗಳಾಗಲಿ ಎಲ್ಲೂ ಕಂಡುಬರುವುದಿಲ್ಲ. ಹೆಚ್ಚುಕಡಿಮೆ ಕರಾವಳಿಯ ಜನಜೀವನದೊಳಗೆ ಶತಮಾನಗಳಿಂದ ಮಿಳಿತವಾಗಿರುವ ಸರಳ ಕಥಾವಸ್ತುವೇ ಅಲ್ಲಿರುವುದು. ಅದನ್ನೇ ಕಾಲಚಲನೆಯೊಂದಿಗೆ ಅದ್ಭುತವಾಗಿ ಮತ್ತು ಆಕರ್ಷಕವಾಗಿ ಚಿತ್ರದಲ್ಲಿ ಸಂಯೋಜಿಸಲಾಗಿದೆ. ಕರಾವಳಿಯ ಗತಕಾಲದ ಸೌಹಾರ್ದ ಜನಜೀವನವನ್ನು ಗರ್ನಲ್ ಅಬ್ಬು ಎಂಬ ಮುಸ್ಲಿಂ ಪಾತ್ರವನ್ನು ಸೃಷ್ಟಿಸಿ ಚಿತ್ರದಲ್ಲಿ ಬಹಳ ಸುಂದರವಾಗಿ ಪ್ರಸ್ತುತಪಡಿಸಲಾಗಿದೆ. ಗರ್ನಲ್ ಅಬ್ಬು ಪಾತ್ರ ಮಾಡಿದ ಪುಷ್ಪರಾಜ್ ಬೋಳಾರ್ ಚಿತ್ರದುದ್ದಕ್ಕೂ ಆವರಿಸಿಕೊಂಡು ಪ್ರಭಾವ ಬೀರಿದ್ದಾರೆ. ಅವರ ಪ್ರತೀ ಮಾತು ನಗು ತರಿಸುತ್ತದೆ. ಅದರಲ್ಲೂ ಜೈಲು ಪರಾರಿಯ ವಿಶಿಷ್ಟ ಪ್ಲಾನ್ ನೆನೆದಾಗಲೆಲ್ಲ ನಗದೇ ಇರಲಾಗದು. ಕಾಂತಾರವನ್ನು ಎಲ್ಲೂ ಬೋರು ಹೊಡೆಸದಂತೆ ಕೊನೆಯ ಕ್ಲೈಮ್ಯಾಕ್ಸಿನವರೆಗೆ ಯಶಸ್ವಿಯಾಗಿ ತಲುಪಿಸಿದ ಹಿರಿಮೆ ಚಿತ್ರದಲ್ಲಿರುವ ಕರಾವಳಿ ಭಾಗದ ರಂಗಭೂಮಿ ಮತ್ತು ತುಳು ಚಿತ್ರರಂಗದ ಹಾಸ್ಯ ಕಲಾವಿದರಿಗೆ ಸಲ್ಲಬೇಕು.
ಕರಾವಳಿ ಭಾಗದ ಹಾಸ್ಯ ಕಲಾವಿದರು ಈ ಚಿತ್ರ ತೆರೆಕಾಣುವ ಮುಂಚೆಯೇ ದೇಶ ವಿದೇಶದಲ್ಲಿರುವ ದೊಡ್ಡ ಸಂಖ್ಯೆಯ ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುವವರಿಗೆ ಅಚ್ಚುಮೆಚ್ಚು. ಪ್ರಕಾಶ್ ತುಮಿನಾಡ್, ನವೀನ್ ಡಿ ಪಡೀಲ್, ರಘು ಪಾಂಡೇಶ್ವರ್, ದೀಪಕ್ ರೈ ಪಾಣಾಜೆಯವರ ಕಾಮಿಡಿ ಚಿತ್ರದಲ್ಲಿ ಎಲ್ಲೂ ನಗಿಸದೇ ಬಿಟ್ಟಿಲ್ಲ. ಚಿತ್ರದ ಯಶಸ್ಸಿನಲ್ಲಿ ಹಾಸ್ಯ ಕಲಾವಿದರು ನಿರ್ಣಾಯಕ ಭೂಮಿಕೆಯನ್ನು ನಿಭಾಯಿಸಿದ್ದಾರೆ.
90ರ ದಶಕದ ಬಹುಭಾಷಾ ನಟಿ ಸುಹಾಸಿನಿಯ ನಗು ನೆನಪಿಸುವ ಸಾಮಾನ್ಯ ಸುಂದರಿಯಾದ ನಾಯಕಿ ಸಪ್ತಮಿ ಗೌಡ ನಟನೆಯಲ್ಲಿ ಅಷ್ಟೇನೂ ಸಾಧನೆ ತೋರಿಲ್ಲ. ಆದರೆ ಇಕ್ಕಟ್ಟಿನಲ್ಲಿ ಸಿಕ್ಕ ಅಮಾಯಕ ಹೆಣ್ಣುಮಗಳಾಗಿ ಆ ಪಾತ್ರವೇ ಅವರನ್ನು ಹುಡುಕಿ ಹೊಂದಿಕೊಂಡಿದೆ. ಹಾಡುಗಳಲ್ಲಿನ ಶೃಂಗಾರ ರಸವನ್ನು ನಾಯಕ ರಿಷಬ್ ಶೆಟ್ಟಿಗಿಂತ ಸಪ್ತಮಿಯೇ ಹೆಚ್ಚು ಸುಂದರವಾಗಿ ಅಭಿವ್ಯಕ್ತಿಸಿದ್ದಾರೆ. ಚಿತ್ರದ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡ, ಪದ್ಯವನ್ನು ಗದ್ಯ ಶೈಲಿಯಲ್ಲಿ ಸುಂದರವಾಗಿ ಪ್ರಸ್ತುತಪಡಿಸುವ ಭಾವಾಭಿನಯ ಚತುರೆ ಮಾನಸಿ ಸುಧೀರ್ ತಾಯಿಯ ಪಾತ್ರಕ್ಕಿಂತ ಅಕ್ಕನ ಪಾತ್ರಕ್ಕೆ ಹೆಚ್ಚು ಸೂಕ್ತ ಎನಿಸಿತು. ಅವರ ಬಾಡಿ ಲಾಂಗ್ವೇಜ್ ಹಳ್ಳಿಯ ತಾಯಿಯೊಬ್ಬಳ ಪಾತ್ರಕ್ಕೆ ಸೂಕ್ತವಾಗಿಲ್ಲ. ಆ ಪಾತ್ರಕ್ಕೆ ತುಸು ವಯಸ್ಸಾದ ಮತ್ತು ಅನುಭವಿ ನಟಿಯೇ ಇರಬೇಕಿತ್ತು ಎನಿಸುತ್ತದೆ.
ನಾಯಕಿ ಮತ್ತು ನಾಯಕನ ತಾಯಿಯ ಪಾತ್ರ ಮಾಡಿದವರ ನಟನೆಯ ಕೆಲ ನ್ಯೂನತೆಗಳು ಗೊತ್ತಿರುವ ಕಾರಣಕ್ಕೆ ಏನೋ, ಚಿತ್ರದುದ್ದಕ್ಕೂ ಕ್ಯಾಮೆರಾ ಅವರ ಮುಖದ ಮುಂದೆ ಮಿಂಚಿನಂತೆ ಸಂಚರಿಸಿದೆ. ಆದರೆ ಶೀಲಾ ಪಾತ್ರಧಾರಿ ಚಂದ್ರಕಲಾ ರಾವ್ ಮಾತ್ರ ಅದ್ಭುತವಾಗಿ ಅಭಿನಯಿಸಿದ್ದಾರೆ. ಮಹಿಳಾ ಹಾಸ್ಯ ಪಾತ್ರ ಅದೊಂದೇ ಆದರೂ ಚಿತ್ರದಲ್ಲಿನ ಇವರ ಸೊಪ್ಪಿನ ಸಲಹೆ ಮನೆಮಾತಾಗಿದೆ. ಚಿತ್ರ ನೋಡಿದವರೆಲ್ಲ ಕಂಡಕಂಡ ಬೋಳು ತಲೆಯವರಿಗೆ ಕಾಡಿನಲ್ಲಿ ಒಂದು ಸೊಪ್ಪು ಉಂಟು ಎಂದು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಖಳನಾಯಕ ದೇವೇಂದ್ರ ಸುತ್ತೂರು ಪಾತ್ರದಲ್ಲಿ ಅಚ್ಯುತ ಕುಮಾರ್ ಮಂಗಳೂರು ಕನ್ನಡ ಮಾತನಾಡುವಲ್ಲಿ ಸ್ವಲ್ಪ ಪರದಾಡಿದ್ದಾರೆ. ಬೆಂಗಳೂರಿನಿಂದ ಬಂದು ಮಂಗಳೂರಿನಲ್ಲಿ ಮಾತನಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದರೆ ಧಣಿಯೊಬ್ಬನ ಹಳ್ಳಿಯ ಜನರ ಮೇಲಿನ ಬಹುಕಾಲದ ಯೋಜಿತ ಕುತಂತ್ರ ಅವರ ಮಾತುಗಳಲ್ಲಿ ಆರಂಭದಿಂದಲೇ ಗೋಚರಿಸುತಿತ್ತು. ಭಾಷೆಯಲ್ಲಿ ಹಿಡಿತವಿಲ್ಲದಿದ್ದರೂ ನಟನೆಯಲ್ಲಿ ಹಿಡಿತ ಸಾಧಿಸಿ ಪಾತ್ರಕ್ಕೆ ಬೇಕಾದ ದಾರ್ಷ್ಟ್ಯ ತುಂಬಿ ಕೊರತೆಯನ್ನು ತುಂಬಿದ್ದಾರೆ.
ಕಂಬಳ ಗದ್ದೆಯ ಸ್ಟಂಟ್ ಬಿಟ್ಟರೆ ಉಳಿದಂತೆ ಚಿತ್ರದುದ್ದದ ಸ್ಟಂಟ್ ಕೊರಿಯಾಗ್ರಫಿ ತೀರ ಸಾಮಾನ್ಯವಾಗಿತ್ತು. ದೈವ ನರ್ತಕ ಗುರುವನ ಸಾವಿನ ರಹಸ್ಯ ಬೇಧಿಸಲ್ಪಟ್ಟ ಸ್ಥಳವಾದ ಕಮ್ಮಾರ ಸಾಲೆಯ ಸ್ಟಂಟ್ ಅನವಶ್ಯಕವಾಗಿತ್ತು. ಅಲ್ಲಿ ಕಮ್ಮಾರ ಓಡಿ ತಪ್ಪಿಸಿಕೊಂಡಿದ್ದರೇ ಚಿತ್ರದಲ್ಲಿ ಹೆಚ್ಚು ನೈಜತೆ ಮೂಡಿ ಅರ್ಥಪೂರ್ಣವಾಗುತಿತ್ತು. ಉಳಿದಂತೆ ಕಥೆ, ಸಂಗೀತ, ಸಂಭಾಷಣೆಗಳು ಗೆದ್ದಿವೆ. ಹಾಡುಗಳಲ್ಲಿ ವಿಜಯ್ ಪ್ರಕಾಶ್ ಮತ್ತು ಅನನ್ಯ ಭಟ್ ಮೋಡಿ ಮಾಡಿದ್ದಾರೆ. ಹಾಡುಗಳ ಸಾಹಿತ್ಯವೂ ಸಮಾಧಾನಕರವಾಗಿದೆ. ಅರಣ್ಯಾಧಿಕಾರಿಯಾಗಿ ಕಿಶೋರ್, ಅರಣ್ಯದ ಕುರಿತಾದ ಕಳಕಳಿ ಮತ್ತು ಸಂದಿಗ್ಧತೆಯನ್ನು ಸಹಜವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಗುರುವನ ತಂದೆಯ ಪಾತ್ರದಲ್ಲಿ ಬಾಸುಮಾ ಕೊಡಗುರನ್ನು ನೋಡಿದಾಗ ಬದುಕಿಡೀ ಹೊರಜಗತ್ತಿನೊಂದಿಗೆ ಸಂಪರ್ಕವೇ ಇರದ ನೈಜ ಕಾಡುಜನವಾಗಿ ಕಂಡರು. ಅವರ ಸಹಜ ಅಭಿನಯ ಇಷ್ಟವಾಗುತ್ತದೆ. ಪ್ರತಿಭಾವಂತರಾದರೂ ಚಿತ್ರದಲ್ಲಿ ಕಡಿಮೆ ಅವಕಾಶ ಪಡೆದ ಬಾಸುಮಾ ಕೊಡಗು ಮತ್ತು ಚಂದ್ರಕಲಾ ರಾವ್ ರನ್ನು ಸ್ವಲ್ಪ ಹೆಚ್ಚು ನೋಡಬೇಕು ಎಂದು ಅವರ ಅಭಿನಯದ ಕಾರಣಕ್ಕಾಗಿ ಪ್ರೇಕ್ಷಕ ಬಯಸಿರುವ ಸಾಧ್ಯತೆ ಹೆಚ್ಚಿದೆ.
ಇನ್ನು, ರಿಷಬ್ ಶೆಟ್ಟಿಯವರ ಆರಂಭದ ಪಂಜುರ್ಲಿ ಮತ್ತು ಕೊನೆಯ ಭಾಗದ ಗುಳಿಗ ಊಹೆಗೆ ನಿಲುಕದ್ದಾಗಿದೆ. ಬಹುಶಃ ಬರೀ ಕನ್ನಡ ಚಿತ್ರರಂಗ ಮಾತ್ರವಲ್ಲ, ಸಮಸ್ತ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಇದು ನ: ಭೂತೋ ನ: ಭವಿಷ್ಯತಿ ಎನ್ನಬಹುದಾದ ಪಾತ್ರದೊಳಗಿನ ಪರಕಾಯ ಪ್ರವೇಶ. ಊಹನಾತೀತ ಮಾತ್ರವಲ್ಲ ವರ್ಣನಾತೀತ ಕೂಡ. ಅಬ್ಬರದ ಅಭಿನಯ ಮತ್ತು ಪಂಜುರ್ಲಿಯ ಮಾತುಗಳನ್ನು ಹೊರತುಪಡಿಸಿ, ಉಳಿದ ಭಾಗಗಳ ರಿಷಬ್ ಅಭಿನಯ ಸ್ವಲ್ಪ ಪಕ್ವತೆ ಪಡೆಯುವ ಅವಶ್ಯಕತೆಯಿದೆ.
ಚಿತ್ರವು ಪ್ರಕೃತಿಯ ಮಡಿಲಲ್ಲಿ ಸುಂದರವಾಗಿ ಚಿತ್ರಿಕರಣಗೊಂಡಿದೆ. ಚಿತ್ರದ ಯಶಸ್ಸಿನಲ್ಲಿ ಧ್ವನಿ ತಂತ್ರಜ್ಞಾನವು ಹೆಚ್ಚು ಕೆಲಸ ಮಾಡಿದೆ. ಥಿಯೇಟರ್ ನಿಂದ ಹೊರಗೆ ಈ ಚಿತ್ರ ಸಾಮಾನ್ಯ ಚಿತ್ರವಾಗಿ ಗೋಚರಿಸುವ ಸಾಧ್ಯತೆಯೇ ಹೆಚ್ಚು. ಚಿತ್ರದ ಅಂತಿಮ ಚರಣದಲ್ಲಿ” ನಂಬಿಕೆ ಬೇರೆಯಾದರೂ ಅಸ್ತಿತ್ವ ಒಂದೆ” ಎಂಬ ಅರಣ್ಯಾಧಿಕಾರಿಯಾಗಿ ಕಿಶೋರ್ ಆಡಿದ ಒಂದು ಜ್ಞಾನಪೂರ್ಣ ಮಾತು ಚಿತ್ರದ ಘನತೆಯನ್ನು ಎತ್ತರಿಸಿದೆ. ಹೊರಜಗತ್ತಿನಲ್ಲಿ ಟೀಕೆಗಳಿಗೆ ಒಳಗಾದಂತೆ ಚಿತ್ರದಲ್ಲಿ ಅಂಥದ್ದೇನೂ ಪ್ರತ್ಯಕ್ಷ ಪರೋಕ್ಷ ತೀವ್ರವಾದಗಳಿಲ್ಲ. ಅದು ಟೈಟಾನಿಕ್ ಆಗಿರಲಿ ಅಥವ ತಬರನ ಕಥೆಯಾಗಿರಲಿ ಜಗತ್ತಿನ 100% ಚಲನಚಿತ್ರಗಳು ಕಾಲ್ಪನಿಕ ನೆಲೆಗಟ್ಟಿನಲ್ಲೇ ಇರುತ್ತವೆ. ಈ ಚಿತ್ರ ನೋಡಿ ಯಾರೂ ತಮ್ಮ ಸಿವಿಲ್ ಕೇಸುಗಳನ್ನು ಹಿಂತೆಗೆದುಕೊಳ್ಳುವುದಿಲ್ಲ. ಚಲನಚಿತ್ರಗಳಿಗೆ ಪ್ರೇಕ್ಷಕರ ನಂಬಿಕೆಯನ್ನು ಗಾಢವಾಗಿಸುವ ಸಾಮರ್ಥ್ಯವಿರುವುದಿಲ್ಲ. ಹಾಗೆಯೇ, ಕಾಂತಾರದಲ್ಲಿ ಪ್ರೇಕ್ಷಕರ ನಂಬಿಕೆಯ ಮೇಲೆ ಪ್ರಭಾವ ಬೀರುವಷ್ಟು ವಿಚಾರಗಳೇನೂ ಇಲ್ಲ. ಚಲನಚಿತ್ರವು ಪ್ರೇಕ್ಷಕನಿಗೆ ಮನರಂಜನೆ ಮತ್ತು ಚಿತ್ರತಂಡದವರಿಗೆ ಆದಾಯದ ಮೂಲವೇ ಹೊರತು ಅದಕ್ಕಿಂತ ಹೊರತಾಗಿ ಬೇರೇನೂ ಅಲ್ಲ. ಚಿತ್ರದಲ್ಲಿ ಎಲ್ಲೂ ಚಿತ್ರಕಥೆಯು ಸತ್ಯ ಘಟನೆ ಎಂದು ನಂಬಿಸಲು ಪ್ರಯತ್ನ ಪಟ್ಟಿಲ್ಲ.
ಕಾಂತಾರ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿರುವುದು ಹೌದು. ಆದರೆ ಇದು ಎವರ್ ಗ್ರೀನ್ ಚಿತ್ರವಲ್ಲ. ಕನ್ನಡದ ಮಟ್ಟಿಗೆ ಎವರ್ ಗ್ರೀನ್ ಚಿತ್ರಗಳು ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್ ಕಾಲದಲ್ಲಷ್ಟೆ ಬಂದಿದೆ. ನಂತರದ ಪೀಳಿಗೆಯವರಾರೂ ಬಂಗಾರದ ಮನುಷ್ಯ, ಬಂಧನ, ಹೃದಯ ಹಾಡಿತು, ಅಟೋ ರಾಜದಂತಹ ಅಮರ ಚಿತ್ರಗಳನ್ನು ನೀಡಿಲ್ಲ. ಹೆಚ್ಚೆಂದರೆ ಒಂದು ವರ್ಷದವರೆಗೆ ಮಾತ್ರ ಹಾರಾಟ ಚೀರಾಟ ಅಷ್ಟೆ. ಬದುಕಿಡೀ ಗುನುಗುನಿಸುವ ಹಾಡುಗಳು ಮತ್ತು ಮನದಾಳದಿಂದ ಎಂದಿಗೂ ಮರೆಯಾಗದ ಕಥಾಹಂದರದಿಂದ ಕೂಡಿದ ಎವರ್ ಗ್ರೀನ್ ಚಿತ್ರ ನೀಡುವುದು ಅಷ್ಟು ಸುಲಭವೂ ಅಲ್ಲ.
ಈಗಿನ ಕಾಲಮಾನದ ಬಹುತೇಕ ಎಲ್ಲ ಭಾಷೆಯ ಎಲ್ಲ ಚಿತ್ರಗಳು ಆರಂಭದಲ್ಲಿ ಧೂಳೆಬ್ಬಿಸಿ ನಿರ್ದಿಷ್ಟ ಮತ್ತು ಸಂಕ್ಷಿಪ್ತ ಕಾಲದ ನಂತರ ಧರೆಯಲ್ಲಿ ಕಣ್ಣಿಗೆ ಕಾಣದೆ ಹರಡಿ ಬೀಳುವ ಚಿತ್ರಗಳೇ. ಕಾಂತಾರವೂ ಕೂಡ ಅಂತರರಾಷ್ಟ್ರೀಯ ಪ್ರೇಕ್ಷಕರಲ್ಲಿ ಮನ್ನಣೆ ಪಡೆಯಲು ಬಹುದೂರ ಸಾಗಬೇಕಾಗಿದೆ. ಇದರ ಹೊರತಾಗಿಯೂ ಆಸ್ಕರ್ ನಂತಹ ವೇದಿಕೆಯಲ್ಲಿ ಚಿತ್ರ ಕಂಡುಬಂದರೆ ಅದು ಪವಾಡವೇ ಸರಿ. ಆದರೆ ಒಂದಂತೂ ಸತ್ಯ, ರಿಷಬ್ ಶೆಟ್ಟಿ ನೇತೃತ್ವದ ಈ ತಂಡಕ್ಕೆ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಾಧಿಸಿ ಎವರ್ ಗ್ರೀನ್ ಚಿತ್ರ ನೀಡುವ ಮತ್ತು ಜಗತ್ತಿನ ಗಮನ ಸೆಳೆಯುವ ಸಾಮರ್ಥ್ಯವಿದೆ ಎಂಬುದು ಕಾಂತಾರ ಸಾಬೀತುಪಡಿಸಿದೆ. ಈ ಬಾರಿ ಕನ್ನಡೇತರ ಭಾಷೆಯವರು ಚಿತ್ರ ನೋಡುತ್ತಿರುವುದು ಗಮನಾರ್ಹ ಸಾಧನೆ. ಚಿತ್ರದೊಳಗೆ ಪ್ರೇಕ್ಷಕನನ್ನು ಗಿಮಿಕ್ ಗಳಿಂದ ವಂಚಿಸದೆ ಒಂದೊಳ್ಳೆ ಚಿತ್ರ ನೀಡಿದ್ದಕ್ಕಾಗಿ ಚಿತ್ರತಂಡಕ್ಕೆ ಅಭಿನಂದನೆಗಳು.
– ಮುಷ್ತಾಕ್ ಹೆನ್ನಾಬೈಲ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.