ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್): ನೆರೆಯ ಆಂಧ್ರಪ್ರದೇಶ,ತಮಿಳುನಾಡು ಮತ್ತು ಮಹರಾಷ್ಟ್ರದಲ್ಲಿ ಯಾವ ರೀತಿಯಲ್ಲಿ ನೇಕಾರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಸಹ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ಮಹಾಮಂಡಳದ ನೂತನ ಅಧ್ಯಕ್ಷ ಶಿಡ್ಲಘಟ್ಟ ತಾಲೂಕು ಬೈಯ್ಯಪ್ಪನಹಳ್ಳಿಯ ಬಿ.ಜೆ.ಗಣೇಶ್ ತಿಳಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಹುಟ್ಟಿದ ಊರು ಬೈಯ್ಯಪ್ಪನಹಳ್ಳಿಗೆ ಬಂದ ಬಿ.ಜೆ.ಗಣೇಶ್ ಅವರನ್ನು ಊರಿನ ಜನರು ಹೂ ಹಾರಿ ಹಾಕಿ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿ ಸಿಹಿ ಹಂಚಿದರು. ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.
ರಾಜ್ಯದಲ್ಲಿ ನಮ್ಮ ಮಂಡಳದ 10 ಮಾರಾಟ ಮಳಿಗೆಗಳಿವೆ. ಹೆಚ್ಚು ವಹಿವಾಟು ನಡೆಯುವಂತೆ ಮಾಡಿ ನೇಕಾರಿಕೆ ವಸ್ತುಗಳಿಗೆ ಬೇಡಿಕೆ ಹಾಗೂ ಮಾರುಕಟ್ಟೆಯನ್ನು ಸೃಷ್ಟಿಸುವ ಕೆಲಸ ಮಾಡಲಿದ್ದೇನೆ ಎಂದರು.
ನೆರೆಯ ಆಂಧ್ರದಲ್ಲಿ ಪ್ರತಿ ತಿಂಗಳು ನೇಕಾರರಿಗೆ ತಲಾ 2 ಸಾವಿರ ರೂ.ನೆರವು ನೀಡಲಾಗುತ್ತಿದೆ. ಅಲ್ಲಿನಂತೆ ನಮ್ಮ ರಾಜ್ಯದಲ್ಲೂ ಸವಲತ್ತು ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರಲ್ಲದೆ ವಿವಿಧ ರಾಜ್ಯಗಳ ಪ್ರವಾಸ ಮಾಡಿ ನೇಕರಾರರ ಕಲ್ಯಾಣಕ್ಕಾಗಿ ಯಾವ ವಿಧವಾದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಧ್ಯಯನ ಮಾಡಿ ಕರ್ನಾಟಕದಲ್ಲಿಯೂ ಸಹ ನೇಕಾರರಿಗೆ ಎಲ್ಲಾ ರೀತಿಯ ಸಹಕಾರ ಮತ್ತು ನೆರವು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜವಳಿ ಖಾತೆ ಸಚಿವರು, ಲಕ್ಷ್ಮಣಸೌಧಿ ಮತ್ತು ತೇರದಾಳ ಕ್ಷೇತ್ರದ ಶಾಸಕರು ಸಹಕಾರ ನೀಡಿದ್ದರಿಂದ ಅವಿರೋಧವಾಗಿ ಅಧ್ಯಕ್ಷರಾಗಿದ್ದು ಅದಕ್ಕಾಗಿ ಎಲ್ಲರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಶ್ಚಿತ ಮಂಜುನಾಥ್, ಬಿ.ಜೆ.ಗಣೇಶ್ ಕುಟುಂಬದವರು ಸೇರಿದಂತೆ ಗ್ರಾಮದ ಮುಖಂಡರಾದ ನರಸಿಂಹರೆಡ್ಡಿ, ರಾಮಲಿಂಗಾರೆಡ್ಡಿ, ದೇವರಾಜ್, ವೆಂಕಟರಾಯಪ್ಪ, ನಾರಾಯಣಸ್ವಾಮಿ, ಪ್ರಕಾಶ್, ಚಲಪತಿ, ಗುರುಮೂರ್ತಿ ಉಪಸ್ಥಿತರಿದ್ದರು.
ವರದಿ:ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.