(www.vknews.in) : ಒಂದು ಕೆಲಸದ ನಿಮಿತ್ತ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಲು ಹೋದೆ. ಮೇಷ್ಟ್ರು ಬೇರೆ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದರು. ಅವರ ಕೋಣೆಯ ಪಕ್ಕ ಒಬ್ಬ ಹುಡುಗನಿಗೆ ಅವನ ಉಪಾಧ್ಯಾಯರು ಬಹಳ ಗಂಭೀರವಾಗಿ ಮಾತನಾಡಿಸುತ್ತಿದ್ದರು. ಹುಡುಗ ಏನೋ ಕುಚೇಷ್ಟೆ ಮಾಡಿರಬಹುದು ಎಂದು ಮನಸ್ಸಿನಲ್ಲೇ ಊಹಿಸಿಕೊಂಡೆ. ನನ್ನ ಮುಖದಲ್ಲಿ ಕುತೂಹಲದ ಗೆರೆಗಳನ್ನು ಗಮನಿಸಿ ಮೇಷ್ಟ್ರು ಹೇಳಿದರು – ಆ ಹುಡುಗನಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ.
5 ನೇ ತರಗತಿ ಹುಡುಗ, ಆತನ ಸಹಪಾಠಿ ಹುಡುಗಿಗೆ ” ಐ ಲವ್ ಯು” ಅಂತ ಹೇಳಿ ಪ್ರಪೋಸ್ ಮಾಡಿಬಿಟ್ಟಿದ್ದಾನೆ. 5 ನೇಯ ತರಗತಿಯ ಹುಡುಗ ಹುಡುಗಿಯರ ವಿಷಯ ಹಾಗಿರಲಿ, 3 ನೇಯ ತರಗತಿ ಹುಡುಗ ಬರೆದಿರುವ ಲವ್ ಲೆಟರ್ ತೋರಿಸಿದರೆ ನೀವು ದಿಗ್ಭ್ರಮೆಗೊಳ್ಳುತ್ತೀರಿ. ಇನ್ನಡುವೆ ವಿದ್ಯಾರ್ಥಿಗಳಲ್ಲಿ “ನಡವಳಿಕೆ” ಸಮಸ್ಯೆಗಳು ಬಹಳ ಹೆಚ್ಚಾಗುತ್ತಿವೆ. 7 ರಿಂದ 10 ನೇಯ ತರಗತಿ ಹುಡುಗರನ್ನು ನಿಯಂತ್ರಿಸುವುದಕ್ಕೇ ಆಗುತ್ತಿಲ್ಲ. ಪ್ರತಿದಿನ ನಾವು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಮೊಬೈಲ್ ಮತ್ತು ಅಂತರ್ಜಾಲ ಟಿವಿಯ ಹಾವಳಿ ತುಂಬಾ ಹೆಚ್ಚಾಗಿದೆ. ಅವರ ಮುಗ್ಧ ಮನಸ್ಸುಗಳ ಮೇಲೆ ಬಹಳ ಪ್ರಭಾವ ಬೀರುತ್ತಿದೆ. ವಿದ್ಯಾರ್ಥಿಗಳ ಜೊತೆ ಎಷ್ಟು ಸಮಾಲೋಚನೆ ನಡೆಸಿದರೂ ಪುನಃ ಪುನಃ ಅದೇ ತಪ್ಪುಗಳನ್ನು ಮಾಡುತ್ತಾರೆ.
ಓದಿನ ಕಡೆಗೆ, ಮುಂದಿನ ಜೀವನದ ಭವಿಷ್ಯದ ಕಡೆಗೆ ಹೆಚ್ಚಾಗಿ ಗಮನ ಹರಿಸುತ್ತಿಲ್ಲ. ಒಂದು ಕೋತಿ ವನ ಕೆಡಿಸುತ್ತೆ ಅಂತ ಹೇಳುತ್ತಾರೆ. ಕೆಲ ಹುಡುಗರಿಂದ ಬೇರೆ ವಿದ್ಯಾರ್ಥಿಗಳು ಸಹ ಹಾಳಾಗುತ್ತಿದ್ದಾರೆ. ಇದು ಒಂದು ಶಾಲೆಯ ವಿಷಯವಲ್ಲ. ಇಡೀ ದೇಶ ಈ ಹಾಳಾದ ಮೊಬೈಲ್ ಸಮಸ್ಯೆ ಎದುರಿಸುತ್ತಿದೆ. ಅದರ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ. 18 ವರ್ಷಗಳ ಮುನ್ನವೇ ಅನೇಕ ದುಷ್ಟ ಚಟಗಳಿಗೆ ಯುವ ಪೀಳಿಗೆ ಬಲಿಯಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಪೋಷಕರಿಗೆ ಗೊತ್ತಿಲ್ಲದೆಯೇ ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದಾರೆ. ಯಸ್ ಟಿ ಡಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪೋಷಕರು 24 ತಾಸು ಮಕ್ಕಳ ಮೇಲೆ ನಿಗಾ ವಹಿಸಲು ಸಾಧ್ಯವಿಲ್ಲ. ಮಕ್ಕಳು ಶಾಲಾ ಮಟ್ಟದಿಂದಲೇ ಪ್ರೀತಿಪ್ರೇಮದ ಗುಂಗಲ್ಲಿ ಬೀಳುತ್ತಿದ್ದಾರೆ. ಉಪಾಧ್ಯಾಯರು ಎಷ್ಟು ಬುದ್ಧಿ ಹೇಳಿದರೂ ಕೆಲ ಮಕ್ಕಳು ಲೆಕ್ಕಿಸುವುದೇ ಇಲ್ಲ. ಆದಷ್ಟು ಮಕ್ಕಳ ಜೊತೆ ನಾವು ಸಮಾಲೋಚನೆ ನಡೆಸುತ್ತೇವೆ. ಅವರಿಗೆ ಸರಿಯಾದ ದಿಕ್ಕನ್ನು ತೋರಿಸಲು ಪ್ರಯತ್ನಿಸುತ್ತೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಿದ್ದೇವೆ. – ಹೀಗೆ ತಮ್ಮ ನಿಸ್ಸಹಾಯಕ ಪರಿಸ್ಥಿಯನ್ನು ಮೇಷ್ಟ್ರು ನನ್ನೊಂದಿಗೆ ಹಂಚಿಕೊಂಡರು.
ಮಕ್ಕಳಿಗೆ ಸರಿ-ತಪ್ಪು ಎನ್ನುವುದು ಅಷ್ಟಾಗಿ ಗೊತ್ತಾಗುವುದಿಲ್ಲ. ಆ ವಯಸ್ಸೇ ಅಂಥದ್ದು. ಪೋಷಕರು ಆದಷ್ಟು ಮಕ್ಕಳ ಮೇಲೆ ನಿಗಾ ವಹಿಸಬೇಕು. ಅವರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಯಾವಾಗಲೂ ಕೋಪದಿಂದ ಗದರಿಸುವುದು ಸಮಸ್ಯೆಗಳಿಗೆ ಪರಿಹಾರವಲ್ಲ. ಅದರಿಂದ ಕೆಲವೊಮ್ಮೆ ಸಮಸ್ಯೆಗಳು ಇನ್ನೂ ಹದಗೆಡಬಹುದು. ಮಕ್ಕಳು ಪೋಷಕರಿಗೆ ಹೆದರಿ ಅನೇಕ ಸತ್ಯ ವಿಷಯಗಳನ್ನು ಬಿಚ್ಚಿಡುವುದಿಲ್ಲ. ಪೋಷಕರು ಜಾಣ್ಮೆಯಿಂದ, ಪ್ರೀತಿಯಿಂದ, ಸ್ನೇಹಿತರಂತೆ ಅವರೊಂದಿಗೆ ವರ್ತಿಸಿ ವಿಷಗಳನ್ನು ಕೂಲಂಕುಷವಾಗಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಮತ್ತು ಯಾವುದೇ ರೀತಿಯ ಅನಾಹುತಗಳಿಗೆ ಆಸ್ಪದ ಕಲ್ಪಿಸಿಕೊಡಬಾರದು. ಎಲ್ಲಾ ಮಕ್ಕಳ ಸಮಸ್ಯೆ ಮತ್ತು ಸ್ವಭಾವ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಾಗದೇ ಇದ್ದಲ್ಲಿ ನುರಿತ ಮಾನಸಿಕ ಸಲಹೆಗಾರರ ಸಹಾಯ ಪಡೆಯುವುದು ಒಳಿತು. ಏಕೆಂದರೆ ಎಷೋ ಮಕ್ಕಳು ಅತೀ ಸಣ್ಣ ವಿಷಯಗಳಿಗೂ ಆತ್ಮಹತ್ಯೆ ಮಾಡಿಕೊಂಡಿರುವುದುಂಟು.
ನಿಮ್ಹಾನ್ಸ್ ನ ಶಟ್ ಕ್ಲಿನಿಕ್ ಸಮನ್ವಯಕಾರ ಪ್ರೊ. ಡಾ. ಮನೋಜ್ ರವರ ಮಾಹಿತಿ ಓದಿ ಬಹಳ ದುಃಖವಾಯಿತು. ಸಾಮಾಜಿಕ ಜಾಲತಾಣಗಳ ವ್ಯಸನದಿಂದಾಗಿ ನಿಮ್ಹಾನ್ಸ್ ಗೆ ಚಿಕಿತ್ಸೆಗೆ ಬರುವ ಒಟ್ಟಾರೆ 13-19 ವರ್ಷದ ಮಕ್ಕಳಲ್ಲಿ ವಾರದಲ್ಲಿ 15 ರಿಂದ 16 ಮಕ್ಕಳು ಬ್ಲೂ ಫಿಲ್ಮ್ / ವಿಡಿಯೋಗಳನ್ನು ವೀಕ್ಷಿಸುತ್ತಾರೆ. ಉಳಿದಂತೆ 20 ಕ್ಕೂ ಹೆಚ್ಚು ಮಕ್ಕಳು ಶಾಲೆಗಳಲ್ಲಿ ಸ್ನೇಹಿತರೊಂದಿಗೆ ಈ ಬಗ್ಗೆ ಮಾತನಾಡುತ್ತಾರಂತೆ.
ಇದು ಅಭಿವೃದ್ಧಿಯ ಯುಗ ನಿಜ. ಎಲ್ಲಾ ದಿಕ್ಕುಗಳಲ್ಲೂ ಬದಲಾವಣೆಗಳು ನಡೆಯುತ್ತಿವೆ. ಕೆಲವರು ಪಬ್ಬು, ಬಾರು, ಹುಕ್ಕಾ, ಸಹಜೀವನ, ಜೂಜು, ಪುಂಡಾಟ, ಕುಡಿತ, ಮಾದಕ ವ್ಯಸನ, ಡೇಟಿಂಗ್ ಆಪ್ ಬಳಕೆ, ಗೇಮ್ಸ್, ರೇಸಿಂಗ್ , ತನ್ನಿಷ್ಟದ ಬಿಂದಾಸ್ ಜೀವನವನ್ನೇ ಅಭಿವೃದ್ಧಿ ಎಂದುಕೊಂಡಿರುತ್ತಾರೆ. ನಾವು ಅಭಿವೃದ್ಧಿ ಹೊಂದಿದ ಬಹಿರ್ಮುಖಿಗಳು, ವಿದ್ಯಾವಂತ ಸುಸಂಕೃತರು ಎಂಬ ಭಾವನೆ ವ್ಯಕ್ತಪಡಿಸುತ್ತಾರೆ. ಅವರ ದೃಷ್ಟಿಯಲ್ಲಿ ಅವರೇ ಮಹಾನರು. ಬೇರೆಯವರೆಲ್ಲ ಗಾಂಧಿಗಳು, ಅಂದರೆ ಜೀವನ “ಎಂಜಾಯ್” ಮಾಡದೆ “ವೇಸ್ಟ್” ಮಾಡುತ್ತಿರುವ ಮೂರ್ಖರು. ಮಕ್ಕಳು ಓದಿ ಉದ್ಧಾರವಾಗಲಿ, ತಮ್ಮ ಜೀವನವನ್ನು ಸಮೃದ್ಧಿ ಪಡಿಸಿಕೊಂಡು ಒಳ್ಳೆಯ ಜೀವನ ಸಾಗಿಸಲಿ ಎಂದು ಪೋಷಕರು ಹಗಲು ರಾತ್ರಿ ದುಡಿದು ಮಕ್ಕಳಿಗೆ ಒಳ್ಳೆಯ ಶಾಲೆಗೆ ಸೇರಿಸುತ್ತಾರೆ. ಸಹಪಾಠಿಗಳ ಸಹವಾಸದೋಶವೋ, ಇಂದಿನ ಮೀಡಿಯಾಗಳ, ಅಂತರ್ಜಾಲದ ಕರಾಮತ್ತೋ ಗೊತ್ತಿಲ್ಲ, ಯುವಪೀಳಿಗೆಯ ಮನಸ್ಸನ್ನು ನಿಧಾನವಾಗಿ ಬೇರೆಡೆಗೆ ಪರಿವರ್ತಿಸುತ್ತಿರುವುದರಲ್ಲಿ ಸಂದೇಹವೇ ಇಲ್ಲ.
ಮನೆಯೇ ಮೊದಲ ಪಾಠಶಾಲೆ ಎನ್ನುತ್ತಾರೆ. ಮಕ್ಕಳು ಹೆಚ್ಚಾಗಿ ಪೋಷಕರನ್ನೇ ಹಿಂಬಾಲಿಸುವುದು. ಆದರೆ ಯಾವ ಪೋಷಕರೂ ನಮ್ಮ ಮಕ್ಕಳ ಭವಿಷ್ಯ ಹಾಳಾದರೂ ಪರವಾಗಿಲ್ಲ, ಅವರು ದುಷ್ಟ ಚಟಗಳ ಜೊತೆಯೇ ಚೆನ್ನಾಗಿರಲಿ ಎಂದು ಬಯಸುವುದಿಲ್ಲ. ಒಟ್ಟಾರೆ ಹೇಳುವುದಾದರೆ ನಮ್ಮ ಸುತ್ತಮುತ್ತಲ ಇಡೀ ಸಮಾಜವೇ ನಮ್ಮ ಮಕ್ಕಳ ಭವಿಷ್ಯದ ಕನ್ನಡಿ. ಅದರಲ್ಲಿ ಪೋಷಕರು, ಶಾಲಾ ಕಾಲೇಜು, ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು, ಆನ್ ಲೈನ್ ಪ್ರಪಂಚ, ವಾಟ್ಸ್ ಆಪ್ ಯುನಿವರ್ಸಿಟಿ ಎಲ್ಲರ ಪಾಲೂ ಇದೆ. ಹಾಗಾದರೆ ಮಕ್ಕಳನ್ನು ದಾರಿಗೆ ತರುವುದು ಹೇಗೆ?
ಸತ್ಯ ಮತ್ತು ಮಿಥ್ಯದ ಅರ್ಥವನ್ನು ಹೇಳಿಕೊಡಬೇಕು. ಸರಿ ಮತ್ತು ತಪ್ಪುಗಳ ಅರಿವನ್ನು ಮೂಡಿಸಬೇಕು. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುವುದರ ಬಗ್ಗೆ ಪ್ರೀತಿಯಿಂದ ಹೇಳಿಕೊಡಬೇಕು. ಹಿರಿಯರ ಜೀವನದ ಅನುಭವದ ಪುಟಗಳನ್ನು ಎಳೆಎಳೆಯಾಗಿ ಅವರ ಮುಂದೆ ಶಾಂತಿಯಿಂದ ವಿವರಿಸಬೇಕು. ಅತ್ಯಂತ ಚತುರತೆಯಿಂದ ಸರಿಯಾದ ಸಮಯ ನೋಡಿ ಬುದ್ಧಿವಾದ ಹೇಳಬೇಕು. ಅವರ ಜೊತೆ ಆತ್ಮೀಯ ಸ್ನೇಹಿತರಂತೆ ನಡೆದುಕೊಳ್ಳಬೇಕು. ಮೊದಲು ಅವರ ವಿಶ್ವಾಸವನ್ನು ಗೆಲ್ಲಬೇಕು. ತಾಳ್ಮೆ ಮತ್ತು ಪ್ರೀತಿ ಇಲ್ಲದೆ ಅದು ಸಾಧ್ಯವಿಲ್ಲ. ನಿಧಾನವಾಗಿ ಮಕ್ಕಳಿಗೆ ಜವಾಬ್ದಾರಿ ಹೊರಿಸಬೇಕು. ಒಳ್ಳೆಯ ಪ್ರಜೆಯಾಗಲು ಏನೆಲ್ಲಾ ಮಾಡಬಹುದು ಅದನ್ನು ಹಂತ ಹಂತವಾಗಿ ಮಾಡಬೇಕು. ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ತಂದೆತಾಯಿಗೆ ನಾವು ಏನು ಮಾಡಿದ್ದೇವೋ, ನಮ್ಮ ಮಕ್ಕಳು ಸಹ ನಮ್ಮ ಜೊತೆ ಅದನ್ನೇ ಮಾಡುವುದು ಎಂಬುವುದನ್ನು ಮರೆಯಬಾರದು. ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರ. ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲವಂತೆ, ಸಂಸ್ಕಾರ ಕೆಡಲು ಬಿಡುವುದಿಲ್ಲವಂತೆ… !!!
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.