(www.vknews.in) : ಕರೋನ ಮಹಾಮಾರಿ ಪುನಃ ಅದೇ ರೀತಿ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮಾಧ್ಯಮಗಳು ಹುಸಿ ಸುದ್ದಿಯನ್ನು ಹಬ್ಬುವಲ್ಲಿ ನಿಸ್ಸೀಮರಾಗಿದ್ದಾರೆ. ಜನರಲ್ಲಿ ಈಗಾಗಲೇ ನಿಧಾನವಾಗಿ ಕರೋನ ಭೀತಿ ಪ್ರಾರಂಭವಾಗುತ್ತಿದೆ. ಲಸಿಕೆ ಬಗ್ಗೆ ವಿಚಾರಿಸಲು ಜನರು ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಅತ್ಯಗತ್ಯ ನಿಜ. ಆದರೆ ಅದು ಜನಸಾಮಾನ್ಯರ ಬದುಕನ್ನು ಅಲ್ಲೋಲಕಲ್ಲೋಲ ಮಾಡಬಾರದಷ್ಟೆ. ಸುಳ್ಳು ಸುದ್ದಿಗಳು ಹರಡದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿ. ಕೆಲ ಆಸ್ಪತ್ರೆಗಳಂತೂ ಕರೋನ ಹೊಸ ಅಲೆ ಬಂದರೆ ಸಾಕು ಎಂದು ವಿಷಸರ್ಪಗಳಂತೆ ಕಾದು ಕುಳಿತಿದ್ದಾರೆ.
ಕರೋನ ಮಹಾಮಾರಿ ಅಮಾಯಕ ಜನರಿಂದ ಹಣವನ್ನು ಲೂಟಿ ಮಾಡುವ ಅತ್ಯಂತ ಸರಳ ಮಾರ್ಗವಾಗಿ ಮಾರ್ಪಟ್ಟಿತ್ತು. ಹೋದ ಕರೋನ ಕಾಲದ ಆಸ್ಪತ್ರೆಯ ಬಿಲ್ಲುಗಳನ್ನು ಸರ್ಕಾರದ ವತಿಯಿಂದ ಆಡಿಟ್ ಮಾಡಿದರೆ, ಆಸ್ಪತ್ರೆಗಳು ಎಷ್ಟು ನೀಚ ಕೃತ್ಯಗಳು ಮಾಡಿವೆ ಎಂದು ಬೆಳಕಿಗೆ ಬರಬಹುದು. ಬೆಂಗಳೂರಿನ ಸುಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದು ಕರೋನ ರೋಗಿಯ ಬಿಲ್ಲು ೩೨ ಲಕ್ಷಕ್ಕಿಂತಲೂ ಹೆಚ್ಚು ದಾಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನೇಕ ದುಃಖ ಭರಿತ ವೀಡಿಯೋಗಳನ್ನು ನಾವು ಕಾಣಬಹುದು. ಕೆಲ ವೈದ್ಯರು ತನ್ನ ಪ್ರಾಣ ಒತ್ತೆ ಇಟ್ಟು ರೋಗಿಗಳನ್ನು ರಕ್ಷಣೆ ಮಾಡಿದರು. ಮತ್ತೆ ಕೆಲ ವೈದ್ಯರು ಅವಕಾಶದ ದುರುಪಯೋಗ ಪಡಿಸಿಕೊಂಡು ಜನರನ್ನು ಲೂಟಿ ಮಾಡಿದರು ಮತ್ತು ಜನರ ಭಾವನೆಗಳ ಮತ್ತು ಪ್ರಾಣಗಳ ಜೊತೆ ಚೆಲ್ಲಾಟವಾಡಿದರು.
ಏನಾದರು ಪುನಃ ಹೊಸ ಕರೋನ ಅಲೆ ಬಂದೇ ಆದಲ್ಲಿ, ಜನರಿಗೆ ಆಸ್ಪತ್ರೆಗಳು ಕಷ್ಟ ಕೊಡಬಾರದು ಎಂದು ಎಚ್ಚರಿಕೆ ನೀಡಿ. ನೀತಿ ನಿಯಮಗಳನ್ನು ಮಾಡಿ. ಹೋದ ಕರೋನ ಕಾಲದಲ್ಲಿ ಸರ್ಕಾರಗಳ, ಆಸ್ಪತ್ರೆಗಳ, ವೈದ್ಯರ ಕಾರ್ಯವೈಖರಿಯನ್ನು ಜನರು ಬಹಳ ಹತ್ತಿರದಿಂದ ನೋಡಿದ್ದರೆ. ಈ ಸಲ ಕರೋನ ಬಂದು ಏನಾದರು ಅವ್ಯಹಾರಗಳು, ಬೇಜವಾಬ್ದಾರಿತನ ಕಂಡು ಬಂದರೆ ಅದಕ್ಕೆ ನೇರ ಹೊಣೆ ಸರ್ಕಾರವೇ ಆಗಬೇಕಾಗುತ್ತದೆ. ಅದರ ಪರಿಣಾಮ ಮುಂದಿನ ಚುನಾವಣೆಗಳಲ್ಲಿ ಕಾಣಸಿಗಬಹುದು. ಸರ್ಕಾರಗಳ ಕರೋನ ಮುನ್ನೆಚ್ಚರಿಕೆ ಕ್ರಮ ಕೇವಲ ಪೇಪರ್ ಮೇಲೆ ಆಗಿರದೆ, ಪ್ರಾಯೋಗಿಕವಾಗಿಯೂ ನಡೆಯಲಿ. ಆಸ್ಪತ್ರೆಗಳು ಸರ್ಕಾರದ ಆದೇಶಗಳಿಗೆ ನಡುಗುವಂತಾಗಲಿ. ಜನಸಾಮಾನ್ಯರು ನಿಸ್ಸಹಾಯಕರಾಗಿ ಪರದಾಡುವಂತೆ ಆಗದಿರಲಿ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.