(www.vknews.in) : ಮರಗಳು ಪ್ರಾಣಿ ಪಕ್ಷಿಗ.ಳಿಗೆ ಆಶ್ರಯ ಮತ್ತು ಆಹಾರವನ್ನು ಒದಗಿಸುತ್ತವೆ. ಕಡು ಬಿಸಿಲಿನಲ್ಲಿ ಎಲ್ಲರು ಆಶ್ರಯ ಪಡೆಯಲು ಹುಡುಕುವುದು ಮರಗಳ ನೆರಳನ್ನೇ. ನಮ್ಮ ವಾಹನಗಳನ್ನು ಸಹ ನೆರಳಲ್ಲಿ ನಿಲ್ಲಿಸಲು ನೆರಳು ಹುಡುಕುತ್ತೇವೆ. ಮರಗಳು ನೆರಳು ಕೊಡುವುದಲ್ಲದೆ ಮಾಲಿನ್ಯದ ಗಾಳಿಯನ್ನು ಶುದ್ಧೀಕರಿಸು ತ್ತವೆ ಮತ್ತು ಪರಿಸರದ ತಾಪಮಾನವನ್ನು ನಿಯಂತ್ರಿಸುವಲ್ಲಿ ಸಹಾಯಕರವಾಗಿವೆ. ಮರಗಳು ಮಾನವ ಜೀವನದ ಗುಣಮಟ್ಟದಲ್ಲಿ ಮತ್ತು ಯೋಗಕ್ಷೇಮದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ.
ಮರಗಳನ್ನು ನೆಡುವುದು ನಮ್ಮ ಜವಾಬ್ದಾರಿಯಲ್ಲ ಎಂದು ಕೆಲವರು ಮರಗಳ ಪ್ರಾಮುಖ್ಯತೆಯ ವಿರುದ್ಧ ವಾದಿಸುತ್ತಾರೆ, ಆದರೆ ನಾವು ನಿಜವಾಗಿಯೂ ಮರಗಳ ಸಂಪೂರ್ಣ ಸಾಮರ್ಥ್ಯವನ್ನು ಮತ್ತು ಅವುಗಳು ಒದಗಿಸುವ ಸೇವೆಗಳ ಆರ್ಥಿಕ ಮೌಲ್ಯವನ್ನು ಪರಿಗಣಿಸಿದ್ದೇವೆಯೇ? ಹವಾಮಾನದ ಹರಿವನ್ನು ನಿರ್ವಹಿಸುವಲ್ಲಿ, ಗಾಳಿಯ ಗುಣಮಟ್ಟವನ್ನು ನಿಯಂತ್ರಿಸುವಲ್ಲಿ, ಮತ್ತು ಇಂಗಾಲವನ್ನು ಬೇರ್ಪಡಿಸುವಲ್ಲಿ ಮರಗಳು ಪ್ರಮುಖ ಪಾತ್ರವಹಿಸುತ್ತವೆ. ಒಂದು ಆಕ್ಸಿಜನ್ ಸಿಲಿಂಡರ್ ಬೆಲೆ ಮತ್ತು ಮಹತ್ವ ಕರೋನ ಮಹಾಮಾರಿ ಕಾಲದಲ್ಲಿ ನಮಗೆಲ್ಲರಿಗೂ ಗೊತ್ತಾಯಿತು. ಒಂದು ದೊಡ್ಡ ಮರವು ನಾಲ್ಕು ಜನರಿಗೆ ಒಂದು ದಿನದ ಆಮ್ಲಜನಕವನ್ನು ಒದಗಿಸುತ್ತದೆ ಎಂದು ಪ್ರಸ್ತಾಪಿಸಲಾಗಿದೆ. ಪ್ರಕೃತಿಯ ಅನುದಾನಗಳಿಗೆ ನಾವು ಬೆಲೆ ಕಟ್ಟಲು ಸಾಧ್ಯವೇ. ನಾವು ಪ್ರಕೃತಿಯೊಂದಿಗೆ ಸಮತೋಲನ ಕಾಪಾಡಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಅದರ ಕೋಪಕ್ಕೆ ಬಲಿಯಾಗಬೇಕಾಗುತ್ತದೆ.
ಮರಗಳ ಬಗ್ಗೆ ಇಂದು ಬರೆಯಲು ಒಂದು ಕಾರಣವಿದೆ. ಬನಶಂಕರಿ ತರಕಾರಿ ಮಾರುಕಟ್ಟೆಯಿಂದ ಹಿಡಿದು ವಸಂತಪುರದ ಕಡೆಗೆ ಕಾವೇರಿ ನೀರಿನ ಪೈಪ್ ಲೈನ್ ಹಾದು ಹೋಗಿದೆ. ಒಂದು ಕಾಲದಲ್ಲಿ ಅದು ಪಾಳು ಬಿದ್ದಿದ್ದ ರಸ್ತೆಯಾಗಿತ್ತು. ಜನರು ಒಂಟಿಯಾಗಿ ಓಡಾಡಲು ಸಹ ಹೆದರುತ್ತಿದ್ದರು. ಇಂದು ಕಾವೇರಿ ನೀರು ಸರಬರಾಜು ಪೈಪುಗಳ ಮೇಲೆ ಮಣ್ಣು ಹಾಯಿಸಿ ಅದರ ಮೇಲೆ ಸುಂದರವಾದ ಉದ್ಯಾನವನಗಳನ್ನು ಮಾಡಲಾಗಿದೆ. ಪೈಪ್ ಲೇನ್ ಪಕ್ಕದ ರಸ್ತೆಯನ್ನು ಸಹ ಡಾಂಬರೀಕರಣ ಮಾಡಿ ಜನರು ಸುಗಮವಾಗಿ ಓಡಾಡುವಂತೆ ಮತ್ತು ವಾಹನಗಳು ಸಂಚರಿಸುವಂತೆ ಮಾಡಲಾಗಿದೆ. ಆದರೆ ಜನರು ರಸ್ತೆಯ ಸುಂದರತೆಯನ್ನು ಕಾಪಾಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
ದಾರಿಯುದ್ದಕ್ಕೂ ಕಸದ ಗುಡ್ಡಗಳು ಕಾಣ ಸಿಗುತ್ತವೆ. ಜನರು ಸಾಮೂಹಿಕ ಜವಾಬ್ದಾರಿ ಮರೆತರೆ ಅನೇಕ ಸಂಕಷ್ಟಗಳಿಗೆ ತಿಳಿದೋ ತಿಳಿಯದೆಯೋ ಬಲಿಯಾಗಬೇಕಾಗುತ್ತದೆ. ಇದೇ ಪೈಪ್ ಲೇನ್ ರಸ್ತೆಯಲ್ಲಿ ನನಗೆ ಓರ್ವ ಜವಾಬ್ದಾರಿಯುತ ವ್ಯಕ್ತಿಯ ಜೊತೆ ಮಾತನಾಡುವ ಅವಕಾಶ ಸಿಕ್ಕಿತು. ಅವರ ಹೆಸರು ಮುನವರ್. ಜನರು ಅವರನ್ನು ಹಕೀಮ ಸಾಬ್ ಎಂದೇ ಕರೆಯುವುದು. ಏಕೆಂದರೆ ಅವರು ನಾಟಿ ಔಷಧಿಗಳನ್ನು ಮಾಡುತ್ತಾರೆ. ಮೂಲತಃ ಅವರು ಕನಕಪುರದ ಕೋಡಿಹಳ್ಳಿಯವರು. ಬೆಂಗಳೂರಿಗೆ ಬಂದು ನೆಲಸಿ ಸುಮಾರು ವರ್ಷಗಳಾಗಿವೆ. ಅವರ ತಂದೆಯವರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಹಕೀಮ್ ಸಾಬ್ ಚಿಕ್ಕಂದಿನಿಂದಲೂ ಪರಿಸರ ಪ್ರೇಮಿಯಾಗಲು ಅವರ ತಂದೆಯವರೇ ಕಾರಣ.
ಮುದಿವಯಸ್ಸಿನಲ್ಲೂ ಆ ಪ್ರೇಮ ಕಡಿಮೆಯಾಗಿಲ್ಲ. ಸಾವಿರಾರು ಮರಗಳನ್ನು ನೆಟ್ಟಿ ಪರಿಸರವನ್ನು ಕಾಪಾಡಲು ಪ್ರಯತ್ನಿಸಿದ್ದಾರೆ. ಪೈಪ್ ಲೇನ್ ರಸ್ತೆಯಲ್ಲಿ ಸುಮಾರು ೧೦೦ ಮರಗಳನ್ನು ಮಕ್ಕಳಂತೆ ಪೋಷಿಸಿ ಎತ್ತರಕ್ಕೆ ಬೆಳೆಯುವಂತೆ ಮಾಡಿದ್ದಾರೆ. ಜನರು ಮತ್ತು ಜಾನುವಾರುಗಳು ಅದರ ಲಾಭವನ್ನು ಪಡೆಯುತ್ತಿದ್ದಾರೆ. ಪ್ರತಿದಿನ ಬೆಳಕು ಹರಿದರೆ ಸಾಕು ಗಿಡಮರಗಳನ್ನು ನೆಡುವುದು, ರಕ್ಷಿಸುವುದು ಮತ್ತು ಬೆಳೆಸುವುದೇ ಅವರ ಕೆಲಸ. ನಾನು ಅವರಿಗೆ ಪ್ರಶ್ನಿಸಿದೆ- ಇದೆಲ್ಲ ಏತಕ್ಕೆ ಮಾಡುತ್ತಿದ್ದೀರಾ ? ಅವರ ಉತ್ತರ ಅದ್ಭುತವಾಗಿತ್ತು. ನಾವು ಇವತ್ತು ಇರುತ್ತೇವೆ ನಾಳೆ ಸತ್ತು ಹೋಗುತ್ತೇವೆ. ಏನಾದರು ಒಂದು ಸಮಾಜಕ್ಕೆ ಕೊಟ್ಟು ಹೋಗಬೇಕು. ಜನರಿಂದ ಏನೂ ಪ್ರತಿಫಲ ಬಯಸಬಾರದು. ದೇವರಿದ್ದಾನೆ.
ಅಲ್ಲಿ ನೋಡಿ, ನಾಯಿಗಳು ನೀರು ಕುಡಿಯಲು ವ್ಯವಸ್ಥೆ ಮಾಡಿದ್ದೇನೆ ಎಂದು ಕೈ ಸನ್ನೆ ಮಾಡಿ ತೋರಿಸಿದರು. ಮರಗಳ ಕೆಳಗೆ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಡ್ರಮ್ ಗಳನ್ನು ಹೂತು,ದೂರದಿಂದ ನೀರು ತಂದು ಅದರಲ್ಲಿ ಪ್ರತಿದಿನ ಹಾಕಿ, ನಾಯಿಗಳು ಮತ್ತು ಇತರೆ ಜಾನುವಾರುಗಳು ನೀರು ಕುಡಿದುಕೊಂಡು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಕಾಲದಲ್ಲೂ ಇಂತಹ ಸಾಮೂಹಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಜನರಿದ್ದಾರಲ್ಲಪ್ಪಾ ಎಂದು ಮನಸಲ್ಲೇ ಅವರ ಕೆಲಸಕ್ಕೆ ಸಲಾಮು ಹೇಳಿದೆ. ಬನಶಂಕರಿ ಪೈಪ್ ಲೇನ್ ಒಂದೇ ಅಲ್ಲ, ಬಹಳ ಕಡೆ ಹಸುಗಳಿಗೆ ನೀರು ಕುಡಿಯುವ ವ್ಯವಸ್ಥೆ ಮಾಡಿದ್ದೇನೆ ಎಂದರು. ಅದರ ಫೋಟೋಗಳು ಇದ್ದರೆ ತೋರಿಸಿ ಎಂದೆ. ಅವರು ಮೊಬೈಲ್ ತೆಗೆದು ತೋರಿಸಿದರು. ಆಶ್ಚರ್ಯವಾಯಿತು. ಫೋಟೋಗಳನ್ನು ಕಳುಹಿಸಿ ನ್ಯೂಸ್ ಪೇಪರ್ ನಲ್ಲಿ ಹಾಕಿಸುತ್ತೇನೆ ಎಂದೆ. ನನಗೆ ಯಾರ ಪ್ರಶಂಸೆಯ ಹಂಗೂ ಇಲ್ಲ ಎಂದು ಹೇಳಿ ಜಾರಿಕೊಂಡರು.
ಮರಗಳ ಮತ್ತು ಸಸ್ಯಗಳ ಪ್ರಾಮುಖ್ಯತೆಯನ್ನು ಕುರಿತು ಪ್ರವಾದಿ ಮುಹಮ್ಮದ್ (ಸ) ರಿಂದ ಹಲವಾರು ಮಾತುಗಳಿವೆ. 1.ಮರಗಳನ್ನು ನೆಡುವುದನ್ನು ದಾನ ಎಂದು ಪರಿಗಣಿಸಲಾಗುತ್ತದೆ ಮತ್ತು ನೆಟ್ಟವನು ಅದರಿಂದ ಪ್ರಯೋಜನ ಪಡೆಯುವ ಎಲ್ಲರಿಂದ ಆಶೀರ್ವಾದವನ್ನು ಪಡೆಯುತ್ತಾನೆ. 2. ಮರಗಳನ್ನು ಗೌರವದಿಂದ ಪರಿಗಣಿಸಬೇಕು ಮತ್ತು ಅನಗತ್ಯವಾಗಿ ಹಾನಿ ಮಾಡಬಾರದು. 3. ಯಾರು ಮರವನ್ನು ನೆಡುತ್ತಾರೋ ಅವರಿಗೆ ಅಲ್ಲಾಹನು ಆ ಮರದಲ್ಲಿ ಬೆಳೆದ ಉತ್ಪನ್ನದಷ್ಟೇ ಪ್ರತಿಫಲವನ್ನು ನೀಡುತ್ತಾನೆ. 4.ಯಾರು ಒಂದು ಮರವನ್ನು ನೆಟ್ಟು ಅದು ಬೆಳೆದು ಫಲವನ್ನು ಕೊಡುವವರೆಗೆ ಅದನ್ನು ಶ್ರದ್ಧೆಯಿಂದ ನೋಡಿಕೊಳ್ಳುತ್ತಾರೋ ಅವರಿಗೆ ಪ್ರತಿಫಲ ದೊರೆಯುತ್ತದೆ. 5.ಪ್ರಳಯ ದಿನದಂದು ನಿಮ್ಮಲ್ಲಿ ಯಾರಾದರೂ ಖರ್ಜೂರದ ಸಸಿಯನ್ನು ಹೊಂದಿದ್ದರೆ – ಸಾಧ್ಯವಾದರೆ ಅದನ್ನು ನೆಡಬೇಕು.
ಪ್ರಳಯ ಎಂದರೆ ಹೇಗಿರುತ್ತದೆ ಸ್ವಲ್ಪ ಯೋಚಿಸಿ ನೋಡಿ. ಅಂತಹ ಭಯಾನಕ ಸಮಯದಲ್ಲಿ ನಮಗೆ ಯಾವ ಚಿಂತೆ ಇರುತ್ತದೆ. ಹೇಗಾದರೂ ಮಾಡಿ ಇದರಿಂದ ಮುಕ್ತಿ ಪಡೆದುಕೊಳ್ಳಬೇಕು ಎಂದು ಒದ್ದಾಡುತ್ತಿರುತ್ತೇವೆ. ಅಲ್ಲವೇ. ಅಂತಹ ಕ್ಲಿಷ್ಟ ಸಮಯದಲ್ಲಿ ಯಾರಾದರೂ ಗಿಡ ನೆಡಲು ಹೋಗುತ್ತಾರೆಯೇ. ಗಿಡಮರಗಳನ್ನು ನೆಡುವುದರ ಮಹತ್ವವನ್ನು ಜನರಿಗೆ ತಿಳಿಸುವುದು ಇಲ್ಲಿನ ಉದ್ದೇಶವಾಗಿದೆ.
ನನ್ನದು ನಿಮ್ಮಲ್ಲಿ ಇಷ್ಟೇ ವಿನಂತಿ ನಿಮ್ಮ ಸುತ್ತಮುತ್ತಲ ಹಸಿರು ಗಿಡಮರಗಳನ್ನು ಕಡಿಯಬೇಡಿ. ಆದಷ್ಟು ಪರಿಸರವನ್ನು ಸಂರಕ್ಷಿಸುವಲ್ಲಿ ಸಹಾಯ ಮಾಡಿ. ಲೋಕಕಲ್ಯಾಣದಲ್ಲಿ ಭಾಗಿಯಾಗಿ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಊದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.