(www.vknews.in) : ಸುಮಾರು ಐದು ವರ್ಷಗಳ ಹಿಂದಿನ ಕತೆ.ನಾನಿನ್ನೂ ಕ್ಲಿನಿಕಿಗೆ ತಲುಪಿರಲಿಲ್ಲ. ಅಂದು ನರ್ಸಿಂಗ್ ಸ್ಟಾಫ್ ರಜೆ ಹಾಕಿದ್ದಳು.ಗರ್ಬಿಣಿ ಮಹಿಳೆಯೊಬ್ಬರು ಟೆಟನಸ್ ಟಾಕ್ಸಾಯ್ಡ್ (ಟಿ.ಟಿ) ಇಂಜೆಕ್ಷನ್ ಕೊಡಿಸಲೆಂದು ಬಂದಿದ್ದರು.ನನ್ನ ಅರೆ ವೈದ್ಯಕೀಯ ಸಿಬ್ಬಂದಿಗಳಿಗೆಲ್ಲಾ ನಾನು ಟಿ.ಟಿ. ಇಂಜೆಕ್ಷನ್ ಕೊಡಲು ಕಲಿಸಿದ್ದೆ.ಅದೊಂದು ಅತೀ ಸರಳ ಇಂಜೆಕ್ಷನ್. ನನ್ನ ಸ್ಟಾಫ್ ಒಬ್ಬಾಕೆ ಟಿಟಿ ಇಂಜೆಕ್ಷನ್ ಲೋಡ್ ಮಾಡಿದಾಗ ಆಕೆಗೆ ಇಂಜೆಕ್ಷನ್ನ ಬಣ್ಣವು ಹಳದಿಯಾಗಿರುವುದು ಕಂಡು ನನಗೆ ಕರೆ ಮಾಡಿದಳು.ಇಂಜೆಕ್ಷನ್ ಚುಚ್ಚಬೇಡ..ನಾನು ಹತ್ತು ನಿಮಿಷದೊಳಗೆ ತಲುಪುತ್ತೇನೆ ಎಂದೆ.ಟಿಟಿ ಇಂಜೆಕ್ಷನ್ನ ಬಣ್ಣ ಹಳದಿಯಾಗಿತ್ತು. ಸಾಮಾನ್ಯವಾಗಿ ಟಿಟಿಯ ಲಿಕ್ವಿಡ್ ಬಿಳಿ ಬಣ್ಣದಲ್ಲಿರುತ್ತದೆ.ಇದ್ಯಾಕಪ್ಪಾ ಹೀಗಾಯಿತು ಎಂದು ಸಂಶಯ ಬಂದು ಎಕ್ಸ್ಪೈರಿ ಚೆಕ್ ಮಾಡಿದೆ. ಎಕ್ಸ್ಪೈರ್ ಆಗಿರಲಿಲ್ಲ. ಸಂಶಯ ಬಂದು ರೋಗಿಯನ್ನು ವಿಚಾರಿಸಿದೆ ” ಈ ಇಂಜೆಕ್ಷನನ್ನು ಕಪಾಟಿನಿಂದ ತೆಗೆದುಕೊಟ್ಟರೋ ಅಥವಾ ಫ್ರಿಡ್ಜ್ನಿಂದ ತೆಗೆದುಕೊಟ್ಟರೋ ಎಂದು ಪ್ರಶ್ನಿಸಿದೆ” ಆಕೆ ತಟ್ಟನೆ ಕಪಾಟಿನಿಂದ ಎಂದು ಉತ್ತರಿಸಿದಳು. ನನ್ನ ಸಂಶಯ ನಿವಾರಣೆಯಾಯಿತು.
ಯಾವುದೇ ಇಂಜೆಕ್ಷನ್ ಚುಚ್ಚಿಸುವಾಗ ವೈದ್ಯರಲ್ಲೋ,ನರ್ಸ್ಗಳಲ್ಲೋ ಅದರ ದ್ರಾವಣದ ಬಣ್ಣ ಸರಿಯಾಗಿದೆಯೋ ಎಂದು ಪರೀಕ್ಷಿಸಲು ಹೇಳಿ. ಇಂಜೆಕ್ಷನ್ ಖರೀದಿಸಿದಾಗ ಎಕ್ಪೈರಿ ಡೇಟ್ ಮತ್ತು ಯಾವ ಟೆಂಪರೇಚರ್ನಲ್ಲಿಡಬೇಕಾದ ಇಂಜೆಕ್ಷನ್ ಎಂದು ಸರಿಯಾಗಿ ಓದಿ ತಿಳಿದುಕೊಳ್ಳಿ. 0-8°, 2-8° ಸೆಲ್ಸಿಯಸ್ ಎಂದಿದ್ದರೆ ಅದು ಕೋಲ್ಡ್ ಆಗಿರಲೇಬೇಕು. ಕೋಲ್ಡ್ ಇರದಿದ್ದರೆ ಅದನ್ನು ಖರೀದಿಸದಿರಿ. ಟಿಟಿ ಇಂಜೆಕ್ಷನ್ , ಇನ್ಸುಲಿನ್, ಕಿಡ್ನಿ ಖಾಯಿಲೆಗೆ ನೀಡುವ ಇಂಜೆಕ್ಷನ್, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಇಂಜೆಕ್ಷನ್, ಕೆಲವು ಮಲ್ಟಿ ವಿಟಮಿನ್ ಇಂಜೆಕ್ಷನ್ ಗಳನ್ನು ಅಗತ್ಯವಾಗಿ ಫ್ರಿಡ್ಜ್ನಲ್ಲಿಟ್ಟು ಟೆಂಪರೇಚರ್ ಮೈಂಟೇನ್ ಮಾಡಲೇಬೇಕಾಗುತ್ತದೆ.ಕೆಲವು ಇಂಜೆಕ್ಷನ್ ಗಳನ್ನು 8° ಸೆಲ್ಸಿಯಸ್ಗಿಂತ ಹೆಚ್ಚಿನ ಉಷ್ಟಾಂಶದಲ್ಲಿಡುವಂತಿಲ್ಲ. ಇನ್ನು ಕೆಲವು ಇಂಜೆಕ್ಷನ್ ಗಳನ್ನು ರೂಂ ಟೆಂಪರೇಚರ್ನಲ್ಲೇ ಇಡಬೇಕಾಗುತ್ತದೆ.ರೂಂ ಟೆಂಪರೇಚರ್ನಲ್ಲಿ ಇಡಬೇಕಾದುದನ್ನು ಫ್ರಿಡ್ಜ್ನಲ್ಲಿ ಇಡುವಂತೆಯೂ ಇಲ್ಲ. ಎಲ್ಲಾ ಇಂಜೆಕ್ಷನ್ ಸೀಸೆಯ ಹೊರಮೈಯಲ್ಲಿ ಇಂತಿಷ್ಟೇ ಟೆಂಪರೇಚರ್ನಲ್ಲಿಡಬೇಕು ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ ಕೂಡಾ.. ರೂಂ ಟೆಂಪರೇಚರ್ನಲ್ಲಿರಬೇಕಾದ ಇಂಜೆಕ್ಷನ್ ಎಂದು ನಮೂದಿಸಿದ್ದ ಇಂಜೆಕ್ಷನ್ ಕೋಲ್ಡ್ ಆಗಿದ್ದರೆ ಅದನ್ನೂ ಖರಿಸದಿರಿ.
ಟೆಂಪರೇಚರ್ ಮೈಂಟೇನ್ ಮಾಡದ ಇಂಜೆಕ್ಷನ್ ಚುಚ್ಚಿ ಯಾವುದೇ ಪ್ರಯೋಜನವೂ ಇಲ್ಲ.ಆದರೆ ನಾನು ಮೇಲೆ ಉಲ್ಲೇಖಿಸಿದಂತೆ ಮೂಲಬಣ್ಣ ಬದಲಾದ ಇಂಜೆಕ್ಷನ್ಗಳನ್ನು ಚುಚ್ಚಿದರೆ ಅಪಾಯವುಂಟಾಗಲೂಬಹುದು. ಮಧುಮೇಹಿಗಳಿಗೆ ಕೊಡುವ ಇನ್ಸುಲಿನ್ ಇಂಜೆಕ್ಷನ್ ನ ಟೆಂಪರೇಚರ್ ಫಾರ್ಮಸಿಯವರು ಮಾತ್ರ ಮೈಂಟೇನ್ ಮಾಡಿದರೆ ಸಾಕಾಗದು. ಅದು ಫಾರ್ಮಸಿಯಿಂದ ರೋಗಿಯ ಕೈಗೆ ಬಂದ ಬಳಿಕ ರೋಗಿಯೂ ಅದರ ಟೆಂಪರೇಚರ್ ಮೈಂಟೇನ್ ಮಾಡಬೇಕು ಅರ್ಥಾತ್ ಫ್ರಿಡ್ಜ್ನಲ್ಲಿಡಬೇಕು.ಇಲ್ಲವಾದರೆ ಆ ಇನ್ಸುಲಿನ್ ಕೊಡುವುದರಿಂದ ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಬಾರದು.(ಕ್ಯಾನ್ಸರ್, ಕಿಡ್ನಿ ಖಾಯಿಲೆಯ ಇಂಜೆಕ್ಷನ್ಗಳು ಬಹಳ ದುಬಾರಿಯಾದುದರಿಂದ ಅದರ ಬಗ್ಗೆ ಫಾರ್ಮಸಿಯವರು ಸಾಮಾನ್ಯವಾಗಿ ಅಷ್ಟು ತಾತ್ಸಾರ ತೋರುವುದಿಲ್ಲ.)ಹೆಚ್ಚಿನವರು ಯಾವುದೇ ಔಷಧಿ ಖರೀದಿಸುವಾಗ ಇಂತಹ ಸೂಕ್ಷ್ಮ ವಿಚಾರಗಳನ್ನು ಗಮನಿಸುವುದಿಲ್ಲ.
ಎಕ್ಸ್ಪೈರಿ ಡೇಟ್ ಗಮನಿಸುವುದೂ ಅತೀ ಅಗತ್ಯ.ಸಾಮಾನ್ಯವಾಗಿ ನೀವು ಬಿಡಿ ಮಾತ್ರೆಗಳನ್ನು ಖರೀದಿಸುವಾಗ ಅವುಗಳ ಎಕ್ಸ್ಪೈರಿ ಡೇಟ್ ಕಾಣುವುದಿಲ್ಲ. ನೀವು ವಿಚಾರಿಸಿದ್ರೆ ಅದು ಫುಲ್ ಸ್ಟ್ರಿಪ್ ತೆಗೆಯುವಾಗ ಮಾತ್ರ ಸಿಗುತ್ತದೆ. ಹಿಂದೆ ಬಿಡಿಯಾಗಿ ತೆಗೆಯುವವರಿಗೆ ಸ್ಟ್ರಿಪ್ ಕಟ್ ಮಾಡುವಾಗ ಅದರಲ್ಲಿ ಎಕ್ಸ್ಪ್ಪೈರಿ ಡೇಟ್ ಕಟ್ ಆಗಿದೆ ಎಂದು ಫಾರ್ಮಸಿಯವರು ಸಮಜಾಯಿಶಿ ಕೊಡಬಹುದು. ಅದು ಸಮರ್ಥನೀಯವಲ್ಲ.ಮೊದಲ ತುಂಡು ಕೊಡುವವನಿಗೆ ಎಕ್ಪೈರಿ ಡೀಟೈಲ್ಸ್ ಇದ್ದ ಭಾಗವನ್ನು ಕೊಡಬಾರದು.ಆ ಭಾಗವನ್ನು ಗ್ರಾಹಕನಿಗೆ ತೋರಿಸಿ ಅದರ ಇನ್ನೊಂದು ತುದಿಯಿಂದ ಕತ್ತರಿಸಬೇಕು. ಬಿಲ್ನಲ್ಲಿ ಬ್ಯಾಚ್ ನಂಬರ್ ಎಕ್ಸ್ಪೈರಿ ಡೇಟ್ ಇತ್ಯಾದಿಗಳನ್ನು ಕಡ್ಡಾಯವಾಗಿ ನಮೂದಿಸಬೇಕು.ಆ ಇಡೀ ಸ್ಟ್ರಿಪ್ನ ಕೊನೆಯ ಭಾಗವನ್ನು ಕೊಂಡೊಯ್ಯುವವನಿಗಾಗಿ ಎಕ್ಸ್ಪೈರಿ ಡೇಟ್ ಉಳಿಸಿಕೊಳ್ಳಬೇಕಾದುದು ಫಾರ್ಮಸಿಯವನ ಕರ್ತವ್ಯ.
ನೀವು ಫಾರ್ಮಸಿಯಿಂದ ಯಾವುದೇ ಮಾತ್ರೆ ತಂದರೂ ಅದರ ಸ್ಟ್ರಿಪ್ ಕಳಚುವಾಗ ಮಾತ್ರೆ ವಿರೂಪವಾಗಿ ಕಂಡರೆ ಆ ಮಾತ್ರೆಯನ್ನು ಸೇವಿಸದಿರಿ.
ಕಂದು ಬಣ್ಣದ ಸೀಸೆಗಳಲ್ಲಿ ಬರುವ ಮಾತ್ರೆಗಳನ್ನು ಪಾರದರ್ಶಕ ಬಣ್ಣದ ಸೀಸೆಗೋ, ಪ್ಲಾಸ್ಟಿಕ್ ಅಥವಾ ಕಾಗದದ ಕವರಿಗೋ ವರ್ಗಾಯಿಸದಿರಿ. ಕೆಲವು ಮಾತ್ರೆಗಳಿಗೆ ಅತಿಯಾದ ಬೆಳಕು ಬೀಳಬಾರದೆಂದಿದೆ.ಆ ಕಾರಣಕ್ಕಾಗಿಯೇ ಅವುಗಳನ್ನು ಕಂದು ಬಣ್ಣ ಸೀಸೆಗಳಿಗೆ ಹಾಕಿ ಪ್ಯಾಕ್ ಮಾಡಲಾಗುತ್ತದೆ. ಬೆಳಕಿಗೆ ಹೆಚ್ಚು ತೆರೆದುಕೊಳ್ಳಬಾರದೆಂಬ ನಿಯಮವಿರುವ ಮಾತ್ರೆಗಳು ಬೆಳಕಿಗೆ ತೆರೆದುಕೊಂಡರೆ ಸೇವಿಸಿಯೂ ಪ್ರಯೋಜನವಿಲ್ಲ.
ಇವನ್ನೆಲ್ಲಾ ಸಿಲ್ಲಿ ಎಂದು ಕಡೆಗಣಿಸದಿರಿ..
— ಇಸ್ಮತ್ ಪಜೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.