ಉಡುಪಿ (ವಿಶ್ವ ಕನ್ನಡಿಗ ನ್ಯೂಸ್) : ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಬರಬಹುದು, ಆದರೆ ಕಾಂಗ್ರೆಸ್ನಿಂದ ಬೇರೆ ಪಕ್ಷಕ್ಕೆ ಹೋಗಬಾರದೇ?, ಪ್ರಪಂಚದ ಮೊದಲ ಪಕ್ಷಾಂತರಿ ನಾನಲ್ಲ. ರಾಜಕೀಯ ಸನ್ನಿವೇಶಗಳಿಗೆ ಪಕ್ಷಾಂತರ ಸಾಮಾನ್ಯ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕರ್ನಾಟಕ ರೈತ ಸಂಘ, ಭಾರತೀಯ ಲೋಕದಳ, ಸಮಾಜವಾದಿ ಜನತಾಪಕ್ಷ, ಜನತಾದಳ, ಜನತಾದಳ ಜಾತ್ಯಾತೀತ(ಜೆಡಿಎಸ್) ಮತ್ತು ಕಾಂಗ್ರೆಸ್ ಹೀಗೆ ಐದಾರು ಪಕ್ಷ ಬದಲಿದ್ದಾರೆ. ಜೆಡಿಎಸ್ ನಿಂದ ಉಪಮುಖ್ಯಮಂತ್ರಿಯಾಗಿದ್ದರೂ ಆ ಪಕ್ಷಕ್ಕೆ ನಿಷ್ಠೆ ತೊರಲಿಲ್ಲ. ಅವರು ಪಕ್ಷಾಂತರ ಬಗ್ಗೆ ಮಾತನಾಡುವುದಲ್ಲಿ ಅರ್ಥವೇ ಇಲ್ಲ ಎಂದು ಹೇಳಿದರು.
ನನ್ನ ತಂದೆ ಮಲ್ಪೆ ಮಧ್ವರಾಜ್ ಅವರು ಸ್ವಂತ ಹಣದಿಂದ ಕಾಂಗ್ರೆಸ್ ಪಕ್ಷ ಕಟ್ಟಿದ್ದರು. ತಾಯಿ ಮನೋರಮ್ಮ ಮಧ್ವರಾಜ್ ಅವರ ಪ್ರಮಾಣಿಕತೆ, ಕಾರ್ಯಬದ್ಧತೆಗೆ ಪಕ್ಷ ಟಿಕೆಟ್ ನೀಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದ ಸಂದರ್ಭದಲ್ಲಿ ಪುನರ್ಜೀವನ ನೀಡುವ ಕಾರ್ಯವನ್ನು ಮಾಡಿದ್ದೇನೆ. ಈಗ ಕಾಂಗ್ರೆಸ್ ದೊಡ್ಡ ಭ್ರಮೆಯಲ್ಲಿದೆ. ಟಿಕೆಟ್ ಹಂಚಿಕೆ ಆರಂಭವಾಗುತ್ತಿದ್ದಂತೆ ಅವರಲ್ಲಿ ಒಳಜಗಳ ಹೆಚ್ಚಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. ರಾಜ್ಯದಲ್ಲಿ 150 ಸೀಟುಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.
ಬಿಜೆಪಿ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸಿ, ಜಯಗಳಿಸಿ ಜನಸೇವೆ ಮಾಡುತ್ತೇನೆ. ಇಲ್ಲವಾದರೆ ಪಕ್ಷದ ಸೇವೆ ಮಾಡುತ್ತೇನೆ. ಟಿಕೆಟ್ ಹಂಚಿಕೆಯನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಜನ ಸೇವೆಗೆ ಆತ್ಮ ಶುದ್ಧವಿರಬೇಕು. ಬಿಜೆಪಿಗೆ ಸೇರಿದ್ದಕ್ಕೆ ಜನರು ಖುಷಿಪಟ್ಟಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.