ಕೋಲಾರ(ವಿಶ್ವ ಕನ್ನಡಿಗ ನ್ಯೂಸ್):ಕಾಂಗ್ರೆಸ್ ಹೈಕಮಾಂಡ್ ಒಪ್ಪಿದರೆ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಹಿನ್ನೆಲೆಯಲ್ಲಿ ಸಿದ್ದು ಪುತ್ರ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ ಸೋಮವಾರ ನಗರದಲ್ಲಿ ಕೋಲಾರಮ್ಮ ದೇವಾಲಯಕ್ಕೆ ಭೇಟಿ ಸೇರಿದಂತೆ ಕ್ಷೇತ್ರ ವೀಕ್ಷಣೆ ನಡೆಸಿದರು.
ಬೆಳಗ್ಗೆ ಆಗಮಿಸಿದ ಡಾ.ಯತೀಂದ್ರ ನಗರದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು . ನಂತರ ಸಿದ್ದರಾಮಯ್ಯರಿಗೆ ಈಗಾಗಲೇ ನೋಡಲಾಗಿರುವ ಬಸವನತ್ತ ಸಮೀಪದ ಮನೆಯನ್ನು ವೀಕ್ಷಣೆ ನಡೆಸಿ , ಮನೆ ಚೆನ್ನಾಗಿದೆ ಎಂದು ಮುಖಂಡರಿಗೆ ತಿಳಿಸಿ , ತಂದೆಯವರು ಒಂದು ಬಾರಿ ನೋಡಬೇಕಿದೆ ಎಂದರು.
ಬಳಿಕ ಬಸವನ , ಕೋಡಿರಾಮಸಂದ್ರ , ಕಳೀಪುರ , ಹೊನ್ನೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು . ಬಸವನತ್ತ ಗ್ರಾಮದಲ್ಲಿ ಮೆರವಣಿಗೆ ತೆರಳಿದ ಯತೀಂದ್ರರಿಗೆ ಮಹಿಳೆಯರು ಆರತಿ ಬೆಳಗಿದರು . ನಂತರ ನಡೆದ ಸಭೆಯಲ್ಲಿ 15 ನಿಮಿಷ ಕಾಲ ಭಾಗವಹಿಸಿದ್ದರು . ಅಲ್ಲಿಂದ ಕೋಡಿರಾಮಸಂದ್ರ ಗ್ರಾಮಕ್ಕೆ ತೆರಳಿ , ಸತ್ಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸಭೆ ನಡೆಸಿ ಮಾತನಾಡಿದರು ಬಳಿಕ ಕಳ್ಳಿಪುರಕ್ಕೆ ತೆರಳಿ ಬಸವಣ್ಣ , ಕ ಡಾ.ಶಿವಕುಮಾರಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ , ಸಭೆಯಲ್ಲಿ ಪಾಲ್ಗೊಂಡರು . ನಂತರ ಹೊನ್ನೇನಹಳ್ಳಿ ಗ್ರಾಮಕ್ಕೆ ತೆರಳಿ , ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ , ಮೆರವಣಿಗೆಯಲ್ಲಿ ತೆರಳಿ ಸಭೆಯಲ್ಲಿ ಪಾಲ್ಗೊಂಡರು.
ಗ್ರಾಮಗಳಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಡಾ.ಯತೀಂದ್ರ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ನಮ್ಮ ತಂದೆ ಸಿದ್ದರಾಮಯ್ಯ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಕೆಲಸ ಮಾಡಿದರು . ಆದರೂ ಪ್ರತಿ ಪಕ್ಷಗಳ ಕುತಂತ್ರದಿಂದಾಗಿ ಸೋತಿದ್ದೇವೆ. ಈಗಲೂ ಅವರನ್ನು ಸೋಲಿಸಲು ಪಟ್ಟಭದ್ರ ಹಿತಾಸಕ್ತಿಗಳು ಒಂದಾಗುವ ಸಾಧ್ಯತೆಗಳಿದ್ದು , ಹಾಗೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ತಿಳಿಸಿದರು.
ಡಾ.ಯತೀಂದ್ರ ಕೋಲಾರಕ್ಕೆ ಭೇಟಿ ನೀಡಿದ್ದ ವೇಳೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಬಣದ ಮುಖಂಡರು ಗೈರಾಗಿದ್ದರು . ಕೋಲಾ ರಮ್ಮ ದೇವಾಲಯದ ಬಳಿಯಿಂದಲೂ ಘಟಬಂಧನ್ ಟೀಮ್ನ ಮುಖಂಡರೇ ಜತೆಗಿದ್ದರು. ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದ್ದಾಗ ಕೆ.ಎಚ್.ಮುನಿಯಪ್ಪ . ಸೇರಿದಂತೆ ಬಣದ ಮುಖಂಡರು ಕಾಣಿಸಿ ಕೊಂಡಿದ್ದು , ಯತೀಂದ್ರರ ಭೇಟಿ ವೇಳೆ ಇಲ್ಲದಿರುವುದು ಕಾಂಗ್ರೆಸ್ನಲ್ಲಿನ ಭಿನ್ನಮತಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಎಂಎಲ್ಸಿಗಳಾದ ನಜೀರ್ ಅಹಮದ್ , ಅನಿಲ್ಕುಮಾರ್ , ಮಾಜಿ ಸಭಾಪತಿ ವಿ.ಆರ್.ಸುದರ್ಶನ್ , ನಗರಸಭೆ ಸದಸ್ಯ ಅಂಬರೀಶ್ , ಮಾಜಿ ಸದಸ್ಯ ಸೋಮು , ಮುಖಂಡರಾದ ದಯಾನಂದ , ಶಿವ , ಯುವ ಮುಖಂಡ ನವೀನ್ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.