(ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಭಾರತದ ಎಲ್ಲಾ ಪಳ್ಳಿ ದರ್ಸ್ ಗಳಲ್ಲಿ ಮುತಅಲ್ಲಿಮರು ಕಲಿಯುತ್ತಿರುವ ಅಧಿಕೃತ ಧಾರ್ಮಿಕ ವಿಜ್ಞಾನ ಗ್ರಂಥವಾದ ಫತ್ ಹುಲ್ ಮುಈನ್ ಎಂಬ ಗ್ರಂಥದ ಗ್ರಂಥಕರ್ತರೂ, ಉತ್ತಮ ವಿದ್ವಾಂಸರೂ, ಪ್ರಖ್ಯಾತ ಸೂಫೀವರ್ಯರೂ ಆದ ಝೈನುದ್ದೀನ್ ಮಕ್ದೂಮ್ (ರ ಅ) ರವರ ಪಾದ ಸ್ಪರ್ಶದಿಂದ ಪುನೀತಗೊಂಡ ಮಾತ್ರವಲ್ಲ ಕೇರಳದ ಮದೀನಾ ಎಂದೇ ಕರೆಯಲ್ಪಡುವ ಪೊನ್ನಾಣಿ ಯಲ್ಲಿ ಶೇಕುಟ್ಟಿ(ಮೊದಲನೇ) ಎಂಬ ಧರ್ಮನಿಷ್ಠ ವ್ಯಕ್ತಿಯೊಬ್ಬರು ಜೀವಿಸುತ್ತಿದ್ದರು..
1850 ನೇ ಇಸವಿ..
ಅಂದ್ರೆ ಸರಿಸುಮಾರು ಒಂದು ನೂರ ಎಪ್ಪತ್ತು ವರ್ಷಗಳಿಗೂ ಹಿಂದೆ…..!!, ಅಪಾರ ಧರ್ಮಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಶೇಕುಟ್ಟಿ ಎಂಬ ಆ ಮಹಾನುಭಾವರಿಗೆ ತನ್ನ ವಾಸ ಸ್ಥಳವನ್ನು ಬದಲಿಸುವ ಯೋಚನೆ ಹೊಳೆಯಿತು. ಬಾಳ ನೌಕೆ ದಿಕ್ಕು ನೋಡುತ್ತಾ ಸಾಗಿತು. ಸಾಗುತ್ತಾ ಸಾಗುತ್ತಾ ಉತ್ತರ ಕೇರಳದ ತುತ್ತ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಯ ಬಾಯಾರ್ ಎಂಬಲ್ಲಿ ದಡ ಸೇರಿತು. ಬಾಯಾರಿನಲ್ಲಿ ವಾಸವಾಗಿದ್ದ ಶೇಕುಟ್ಟಿ ಬಾಯಾರಿನಿಂದ ಮದುವೆಯಾಗಿ ದಾಂಪತ್ಯ ಜೀವನದ ನವ ಹೊಸ್ತಿಲಿಗೆ ಪ್ರವೇಶಿಸಿದರು.
ಬಾಯಾರ್ ಕುದ್ರಡ್ಕ ಎಂಬ ಪ್ರಸಿದ್ಧ ಮನೆತನದಲ್ಲಿ ಸಂತೋಷದಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ಶೇಕುಟ್ಟಿ ದಂಪತಿಗಳಿಗೆ 1870 ರ ಸುಮಾರಿಗೆ ಒಂದು ಗಂಡು ಮಗು ಜನಿಸಿತು. ಬಹಳ ಮುದ್ದಾದ ಮಗು ಮುದ್ದಿನಿಂದಲೇ ಆ ಮಗುವಿಗೆ ಬಾಪಕುಂಞಿ(ಮೊದಲನೇ) ಎಂದು ನಾಮಕರಣ ಮಾಡಲಾಯಿತು. ಈ ಬಾಪಕುಂಞಿ ಎಂಬ ಮಗು ಬೆಳೆದು ಯವ್ವನಾವಸ್ಥೆಗೆ ತಲುಪಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. 1900 ನೇ ಇಸವಿಯ ಸುಮಾರಿಗೆ ಈ ಬಾಪಕುಂಞಿ ದಂಪತಿಗಳಿಗೆ ಗಂಡು ಮಗುವೊಂದು ಜನ್ಮ ತಾಳಿತು. ಕಾಣಲು ಬಹಳ ಮೋಹಕವಾಗಿದ್ದ ಈ ಮಗುವಿಗೆ ತಂದೆ ಬಾಪಕುಂಞಿಯವರು ಶೇಕುಟ್ಟಿ(ಎರಡನೇ) ಎಂದು ನಾಮಕರಣ ಮಾಡಿ ತನ್ನ ತಂದೆಯ ನೆನಪು ಎಂದೆಂದಿಗೂ ಮಾಸಿಹೋಗದಂತೆ ನೋಡಿಕೊಂಡರು.
ಈ ಎರಡನೇ ಶೇಕುಟ್ಟಿ ಬೆಳೆದು ದೊಡ್ಡವರಾದಾಗ ಬಾಯಾರ್ ಸಮೀಪದ ಬಳ್ಳೂರು ಎಂಬಲ್ಲಿನ ದೀನೀ ತರವಾಡು ವಂಶದ, ಕುಲೀನ ಮನೆತನದ ಯೂಸುಫ್ ಎಂಬವರ ಪುತ್ರಿ ಫಾತಿಮಾ ಎಂಬ ಧರ್ಮ ಭಕ್ತೆ ಮಹಿಳೆಯನ್ನು ತನ್ನ ಬಾಳ ಸಂಗಾತಿಯಾಗಿ ವರಿಸಿದರು. ಬಳ್ಳೂರು ಯೂಸುಫ್ ಎಂಬವರು ಅಂದು ಶತಮಾನಗಳ ಇತಿಹಾಸವಿದ್ದ ಮಾಣಿಲ ಮಸೀದಿಯ ಮುತವಲ್ಲಿಯಾಗಿದ್ದರು. ಅವರ ನಂತರ ಆ ಸ್ಥಾನ ಅವರ ಮಗನಿಗೆ ನಂತರ ಅವರ ಮಗನಿಗೆ…. ಹೀಗೆ ಪರಂಪರಾಗತವಾಗಿ ಅಂದು ಮುಂದುವರಿಯುತ್ತಿದ್ದದ್ದು ವಿಶೇಷ….!
1930ನೇ ಇಸವಿ ಅಕ್ಟೊಬರ್ ತಿಂಗಳ 25ನೇ ತಾರೀಕಿನಂದು ಒಂದು ಸುಪ್ರಭಾತದಲ್ಲಿ ಶೇಕುಟ್ಟಿ ಫಾತಿಮಾ ದಂಪತಿಗಳಿಗೆ ಒಂದು ಗಂಡು ಮಗು ಹುಟ್ಟಿತು. ಉರುಟು ಮುಖ.. ಮಿನುಗುವ ಕಣ್ಣುಗಳು… ಸಹಜ ಮುಗ್ದತೆ… ಇವೆಲ್ಲವೂ ಮೇಳೈಸಿದ್ದ, ಕಾಣಲು ಬಹಳಷ್ಟು ಸ್ಪುರದ್ರೂಪಿಯಾಗಿ ಅಸಾಮಾನ್ಯ ವ್ಯಕ್ತಿತ್ವದ ಲಕ್ಷಣಗಳನ್ನು ಹೊಂದಿದ್ದ ಈ ಮಗುವಿಗೆ ತಂದೆ ಶೇಕುಟ್ಟಿ ”ಬಾಪಕುಂಞಿ”(ಎರಡನೇ) ಎಂದು ನಾಮಕರಣ ಮಾಡಿದರು. ತನ್ನ ತಂದೆಯ ನೆನಪು ಎಂದೆಂದಿಗೂ ಅಚ್ಚಳಿಯದೇ ಉಳಿಯಬೇಕೆಂಬ ಅದಮ್ಯ ಬಯಕೆಯಿಂದ ತನ್ನ ವಾತ್ಸಲ್ಯದ ಕರುಳ ಕುಡಿಗೆ ಈ ಹೆಸರನ್ನು ಹಾಕಿದ್ದರು ಶೇಕುಟ್ಟಿ…
ಈ ಮಗುವೇ ”ಬೆಲಿಯೆ ಉಸ್ತಾದ್” ಎಂಬ ಅರ್ಥಪೂರ್ಣ ವಿಶೇಷ ನಾಮದೊಂದಿಗೆ ಸಂಪ್ಯ ಎಂಬ ಊರಿಗೆ ಸರಿ ಸುಮಾರು ನಲುವತ್ತು ವರ್ಷಗಳ ಕಾಲ ನೇತೃತ್ವ ನೀಡಿ ಇಡೀ ಊರಿನ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಮುದಾಯಿಕ ಅಭಿವೃದ್ಧಿಯ ಹರಿಕಾರರಾಗಿದ್ದ ”ಸಂಪ್ಯ ಉಸ್ತಾದ್” ಎಂದೇ ಪ್ರಖ್ಯಾತರಾಗಿದ್ದ ಶ್ರೇಷ್ಠ ಧಾರ್ಮಿಕ ವಿದ್ವಾಂಸ, ಸುನ್ನತ್ ಜಮಾಅತ್ ನ ಆವೇಶಭರಿತ ಉಲಮಾ ದಿಗ್ಗಜ, ಖ್ಯಾತ ತಲ್ಸಮಾತ್ ಚಿಕಿತ್ಸಕ, ಹದಿನಾಲ್ಕು ಮಂದಿ ಮಕ್ಕಳ ಓರ್ವ ಜವಾಬ್ದಾರಿಯುತ ತಂದೆಯಾಗಿ, ಅದೆಷ್ಟೋ ಜನರ ಗೌರವಾನ್ವಿತ ಗುರುಗಳಾಗಿ, ಸಾವಿರಾರು ನೊಂದ, ಬೆಂದ ಮನಸ್ಸುಗಳ ಸಾಂತ್ವನ ಸಹಾಯಿಯಾಗಿ, ಪರಿಹಾರ ಪಿತನಾಗಿ ಸರ್ವ ಸ್ತರಗಳಲ್ಲೂ ಮಾದರೀ ಮಹಾನ್ ಪುರುಷನಾಗಿ ಬಾಳಿ ಸಂಪ್ಯ ಮಸೀದಿಯ ಗೋಡೆಯಂಚಿನ ಸನಿಹದಲ್ಲೇ ಮರೆಯಲ್ಲಿ ಮಲಗಿರುವ ಮರ್ಹೂಂ ಸಂಪ್ಯ ಬಿ ಕೆ ಬಾಪಕುಂಞಿ ಉಸ್ತಾದ್…
ಸಂಪ್ಯ ಮಸೀದಿಯ ಮಿಂಬರ್ ಮಿಹ್ ರಾಬಿನ ಮಾರು ದೂರದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಈ ಬಾಯಾರ್ ಕುಳ್ಯಾರ್ ಕುದ್ರಡ್ಕ ಎರಡನೇ ಶೇಕುಟ್ಟಿ – ಫಾತಿಮಾ ದಂಪತಿಗಳ ಮಕ್ಕಳಲ್ಲಿ ಒಂದಿಬ್ಬರು ಮಕ್ಕಳು ಸಣ್ಣದರಲ್ಲಿಯೇ ಮರಣ ಹೊಂದಿದ್ದಾರೆ. ಈಗ ಇರುವವರೆಂದರೆ, ಮರ್ಹೂಂ ಸಂಪ್ಯ ಬಾಪ ಕುಂಞಿ ಉಸ್ತಾದ್, ಮರ್ಹಮತ್ ಆಯಿಷಾ ಆಚಂಗಿ(ಮರ್ಹೂಂ ಸಕಲೇಶಪುರ ಮಗ್ಗೆ ಅಬ್ದುಲ್ ಖಾದರ್ ರವರ ಪತ್ನಿ), ಮರ್ಹೂಂ ಸಂಟ್ಯಾರ್ ಯೂಸುಫ್ ಮುಕ್ರಿಕ (ನಲುವತ್ತು ವರ್ಷಗಳ ಕಾಲ ಸಂಪ್ಯ ಮಸೀದಿಯಲ್ಲಿ ಮುಅಝ್ಝಿನ್ ಆಗಿ ಸೇವೆ ಸಲ್ಲಿಸಿದ್ದು ವರುಷಗಳ ಹಿಂದೆ ನಮ್ಮನ್ನಗಳಿದ ಇವರು ಸಂಟ್ಯಾರ್ ಮಸೀದಿಯ ಖಬರ್ ಸ್ಥಾನದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ)
ಬಿ ಕೆ ಮಹ್ ಮೂದ್ ಮುಸ್ಲಿಯಾರ್(ಹಿರಿಯ ತಲೆಮಾರಿನ ವಿದ್ವಾಂಸ,ಮುಟ್ಟತ್ತೋಡಿ,ಬೆಂಗ್ರೆ ಮಂಜೇಶ್ವರ,ಮಲ್ಲಂಗಯಿ ನೆಲ್ಲಿಕ್ಕುನ್ನು, ಮೊಗ್ರಾಲ್ ಪುತ್ತೂರು, ಪೆರಿಂಗಾಯಿ, ಉಳುವಾರ್, ಮುಲ್ಕಿ, ಅಡ್ಕತಬೈಲ್,ಪುತ್ತೂರು ಜುಮಾ ಮಸ್ಜಿದ್, ಚೂರಿ, ಮನಲ್ ಮುಂತಾದ ಸ್ಥಳಗಳಲ್ಲಿ ಮುದರ್ರಿಸ್ ಆಗಿ, ಖತೀಬ್ ಆಗಿ ದೀನೀ ಸೇವೆ ಸಲ್ಲಿಸಿ ಇದೀಗ ಸಂಪ್ಯದಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಇವರು ತನ್ನ ತಂದೆ ಶೇಕುಟ್ಟಿಯ ಪ್ರತಿರೂಪದಂತಿದ್ದಾರೆ). ಸಫಿಯಾ ಶೇಕಮಲೆ (ಮರ್ಹೂಂ ಶೇಕಮಲೆ ಎಸ್ ಪಿ ಮಹಮ್ಮದ್ ರವರ ಪತ್ನಿ), ಜಮೀಲ ಹಾಸನ(ಮರ್ಹೂಂ ಸಕಲೇಶಪುರ ಉಮ್ಮರ್ ರವರ ಪತ್ನಿ).
ಬಾಯಾರಿನ ಕುದ್ರಡ್ಕ ಎಂಬ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಹಿರಿಯ ಪುತ್ರ ಬಾಪಕುಂಞಿ ಉಸ್ತಾದ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಜನ್ಮ ನಾಡಿನಲ್ಲೇ ಪಡೆದರು. ನಾಲ್ಕನೇ ತರಗತಿಯಲ್ಲಿ ಶಾಲಾ ಶಿಕ್ಷಣಕ್ಕೆ ತಿಲಾಂಜಲಿಯನ್ನಿತ್ತು, ಧಾರ್ಮಿಕ ಶಿಕ್ಷಣವೆಂಬ ಆಳ ಸಮುದ್ರದಲ್ಲಿ ಈಜಾಡಿ ಜ್ಞಾನ ರತ್ನಗಳನ್ನು ತನ್ನದಾಗಿಸಿಕೊಳ್ಳಲು ತೀರ್ಮಾನಿಸಿದರು. ಚಿಕ್ಕಂದಿನಲ್ಲಿಯೇ ಓದಿನಲ್ಲಿ ನಿಪುಣರಾಗಿದ್ದ ಬಾಪ ಕುಂಞಿ ಉಸ್ತಾದ್ ಗುರು ಹಿರಿಯರಿಗೆ ನೆಚ್ಚಿನ ವಿದ್ಯಾರ್ಥಿಯಾಗಿದ್ದು, ಕಲಿಕೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು. ಆದರೆ ತನ್ನ ಮುತಅಲ್ಲಿಂ ಜೀವನದುದ್ದಕ್ಕೂ ಬಡತನವು ಶತ್ರುವಿನಂತೆ ಕಾಡಲಾರಂಭಿಸಿ ಇಲ್ಮ್ ಸಂಪಾದನೆಯ ಮಾರ್ಗದಲ್ಲೆಲ್ಲಾ ತಡೆಗೋಡೆಯಂತೆ ನಿಂತಿತ್ತು.
ತನ್ನ ಅಸಾಮಾನ್ಯ ಆತ್ಮಸ್ಥೈರ್ಯದಿಂದ ಅವೆಲ್ಲವನ್ನೂ ಎದುರಿಸುತ್ತಾ ಮುಂದೆ ಸಾಗಿದ ಉಸ್ತಾದ್ ದೃತಿಗೆಡದೆ ಕಲಿಕೆಯಲ್ಲಿ ತಲ್ಲೀನರಾದರು.. ಆದರೂ ಮುತಅಲ್ಲಿಮನಾಗಿ ಬದುಕುವ ಮದ್ಯೆ ಕುಟುಂಬವನ್ನು ಸಾಕುವುದಕ್ಕಾಗಿ ಈ ಹುಡುಗ ಏನನ್ನಾದರೂ ಸಂಪಾದನೆ ಮಾಡಲೇ ಬೇಕಾದ ಪರಿಸ್ಥಿತಿ ಎದುರಾಯಿತು. ಎಲೆ ವಯಸ್ಸಿನಲ್ಲಿಯೇ ವಾಕ್ಚಾತುರ್ಯವನ್ನು ಹೊಂದಿದ್ದ ಈ ಹುಡುಗ ಶುಕ್ರವಾರ ಜುಮಾ ನಂತರ ಉರ್ದಿ ಹೇಳಲು ಊರಿಂದೂರಿಗೆ ಸಂಚರಿಸಲು ಪ್ರಾರಂಭಿಸಿದರು. ವಾಹನ ಸಂಚಾರ ಅತೀ ವಿರಳವಾಗಿದ್ದ ಆಗಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿಯೇ ತೋಟ, ನದಿ, ಗುಡ್ಡ, ಕಾಡುಗಳನ್ನು ದಾಟಿ ಏಕಾಂಗಿಯಾಗಿ ಮಸೀದಿಯಿಂದ ಮಸೀದಿಗೆ ಅಲೆದಾಡುತ್ತಿದ್ದ ಪರಿಸ್ಥಿತಿ ಇಂದು ಊಹಿಸಲೂ ಅಸಾಧ್ಯ…!!!
ಪ್ರತೀ ಶುಕ್ರವಾರ ಸುಬುಹ್ ನಮಾಜಿನ ನಂತರ ತನ್ನಲ್ಲಿದ್ದ ಒಂದೇ ಒಂದು ಜತೆ ಬಿಳಿ ವಸ್ತ್ರವನ್ನು ಒಗೆದು ಒಣಗಲು ಹಾಕುವ ಬದಲಿಗೆ ಒದ್ದೆ ಬಟ್ಟೆಯನ್ನೇ ಮೈ ಮೇಲೆ ಧರಿಸಿ ಸೂರ್ಯೋದಯಕ್ಕೆ ಮೊದಲೇ ಉರ್ದಿಗಾಗಿ ತನ್ನ ಪ್ರಯಾಣ ಬೆಳೆಸುತ್ತಿದ್ದರು. ಅಂದಿನ ಕಾಲದಲ್ಲಿ ಬಹಳ ದೂರ ದೂರ ಪ್ರದೇಶಗಳಿಗೊಂದು ಮಸೀದಿ ಇದ್ದುದರಿಂದ ಜುಮಾಗೆ ಮೊದಲೇ ಉದ್ದೇಶಿತ ಸ್ಥಳವನ್ನು ತಲುಪಲು ಹೀಗೆ ಮಾಡಬೇಕಾಗಿತ್ತು….!, ಹೀಗೆ ವಯಲ್ ಗೆ ಹೋಗಿ ಕೈಗೆ ಸಿಕ್ಕಿದ ಅಲ್ಪ ಸ್ವಲ್ಪ ಹಣವನ್ನು ಯತಾ ಪ್ರಕಾರ ಮನೆಗೆ ತಲುಪಿಸಿ ತಂದೆ ತಾಯಿಯನ್ನು ತೃಪ್ತಿ ಪಡಿಸುತ್ತಿದ್ದರು….
ಪೂರ್ವಿಕ ಉಲಮಾಗಳನ್ನು, ಅವರ ಜೀವನವನ್ನು ಶೋಧಿಸಿದರೆ ಇಂತಹಾ ಬಡತನ ಹಾಗೂ ತ್ಯಾಗವನ್ನು ಸಹಿಸದೇ ಯಾವುದೇ ಮಹೋನ್ನತ ಪದವಿಯನ್ನು ತಲುಪಲು ಸಾದ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ಚಿಮಿನಿ ದೀಪ ಉರಿಸಲು ಸೀಮೆ ಎಣ್ಣೆಗೆ ಚಿಕ್ಕಾಸು ಹಣವಿಲ್ಲದೆ ಚಂದ್ರನ ಬೆಳಕಿನಡಿಯಲ್ಲಿ ಅಲ್ಫಿಯ್ಯಾ ಕಿತಾಬ್ ಓದಿ ಕಲಿತ ಮರ್ಹೂಂ ಇ ಕೆ ಹಸನ್ ಮುಸ್ಲಿಯಾರ್, ಶರ್ಟ್ ಖರೀದಿಸಲು ಗತಿ ಇಲ್ಲದೆ ಬರೇ ಲುಂಗಿ ಉಟ್ಟು ಮೈ ಮೇಲೆ ಶಾಲು ಹೊದ್ದುಕೊಂಡು ದೀರ್ಘ ಯಾತ್ರೆ ಮುಗಿಸಿ ಪಳ್ಳಿ ದರ್ಸ್ ಗೆ ಓದಲು ಸೇರಿದ ಮರ್ಹೂಂ ಕೆ ಕೆ ಸ್ವದಕತುಲ್ಲಾಹ್ ಮುಸ್ಲಿಯಾರ್ ಮುಂತಾದ ಪಂಡಿತ ಶ್ರೇಷ್ಠರು ಬಡತನದ ವಿಚಾರಕ್ಕೆ ಸಂಬಂಧಿಸಿದಂತೆ ಉದಾಹರಣೆಗಳಾಗಿ ಸದಾ ಕಾಲ ಸ್ಮರಣೀಯರಾಗಿದ್ದಾರೆ…
ಬಾಪಕುಂಞಿ ಉಸ್ತಾದ್ ಪಮ್ಮಲೆ ಅಬ್ದುಲ್ ಖಾದರ್ ಮುಸ್ಲಿಯಾರ್ ಎಂಬ ವಿದ್ವಾಂಸರ ಬಳಿ ಮದ್ರಸಾ ಶಿಕ್ಷಣವನ್ನು ಪೂರ್ತಿಗೊಳಿಸಿದ ಬಳಿಕ ಉನ್ನತ ವಿದ್ಯಾಭ್ಯಾಸವನ್ನು ಮರ್ಹೂಂ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ, ಪ್ರಸಿದ್ಧ ಸೂಫೀವರ್ಯರಾದ ಪೈವಳಿಕೆ ಉಸ್ತಾದ್, ಕೀಯೂರ್ ಉಸ್ತಾದ್ ಮುಂತಾದವರ ಬಳಿ ಪಡೆದರು. ಮರ್ಹೂಂ ಇ ಕೆ ಹಸನ್ ಮುಸ್ಲಿಯಾರ್ ರವರ ಬಲಿಯಲ್ಲೂ ಅಲ್ಪ ಕಾಲ ದೀನೀ ವಿಜ್ಞಾನವನ್ನು ಕರಗತ ಮಾಡಿಕೊಂಡಿದ್ದರು…
ಕುಂಬೋಲ್ ದರ್ಸ್ ನಲ್ಲಿ ಹಲವಾರು ವರ್ಷಗಳ ಕಾಲ ಮುದರ್ರಿಸ್ ಆಗಿದ್ದ ಮರ್ಹೂಂ ಪಿ ಎ ಅಹ್ಮದ್ ಮುಸ್ಲಿಯಾರ್ ಪರ್ಯಕಳ, ಮಂಗಳೂರು ಬದ್ರಿಯಾ ಮಸೀದಿಯ ಖತೀಬರಾಗಿದ್ದ ಬಾಯಾರ್ ಕುಂಞಿ ಅಹ್ಮದ್ ಮುಸ್ಲಿಯಾರ್, ಸೇರಾಜೆ ಮಮ್ಮುಂಞಿ ಹಾಜಿ, ಸೇರಾಜೆ ಪೊಡಿಂಞಿ ಹಾಜಿ,ಮರ್ಹೂಂ ಆಲಂಪಾಡಿ ಉಸ್ತಾದ್, ಅಬ್ದುಲ್ ಖಾದರ್ ಮುಸ್ಲಿಯಾರ್ ಕೋಟಿಕ್ಕುಲಮ್ ಮುಂತಾದವರು ಸಹಪಾಠಿಗಳಾಗಿದ್ದ ದರ್ಸ್ ನಲ್ಲಿ ಉನ್ನತ ಶಿಕ್ಷಣವನ್ನು ಪೂರ್ತಿಗೊಳಿಸಿ ತಾಯ್ನಾಡಿಗೆ ಮರಳಿ ಬಂದ ಬಾಪಕುಂಞಿ ಉಸ್ತಾದ್ 1952 ರಲ್ಲಿ (ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ) ವಿಟ್ಲದ ಪುರಾತನ ಮಸೀದಿಯಲ್ಲಿ ಹಲವಾರು ದಶಕಗಳ ಕಾಲ ಇಮಾಮ್ ಆಗಿ ಸೇವೆ ಸಲ್ಲಿಸಿದ್ದ ಪ್ರಖ್ಯಾತ ವಿದ್ವಾಂಸ ಮನೆತನದ ಮರ್ಹೂಂ ವಿಟ್ಲ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ರವರ ಪುತ್ರಿ ಆಯಿಷಾ ಎಂಬವರನ್ನು ನಿಕಾಹ್ ಆಗುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ತನ್ನ ಬಾಳ ಸಂಗಾತಿಯಾಗಿ ವರಿಸಿದ ಹೆಣ್ಣು ಪ್ರಸಿದ್ಧ ವಿದ್ವಾಂಸರ ಕುಟುಂಬದಲ್ಲಿ ಹುಟ್ಟಿ ಬೆಳೆದ ಕಾರಣ ಪತಿಗೆ ತಕ್ಕ ಪತ್ನಿಯಾಗಿ ಇಸ್ಲಾಮಿನ ಸರಳ ಸುಂದರ ಶಿಷ್ಟಾಚಾರದ ನೈಜ ದಾಂಪತ್ಯ ಜೀವನ ನಡೆಸಲು ಪ್ರಾರಂಭಿಸಿದರು. 1952 ರಲ್ಲಿ ಕಲ್ಲಡ್ಕ ಜುಮಾ ಮಸೀದಿಯಲ್ಲಿ ಇಮಾಮ್ ಆಗಿ ನಿಯುಕ್ತರಾಗುವುದರ ಮೂಲಕ ತನ್ನ ಧಾರ್ಮಿಕ ಸೇವಾ ಬದುಕು ಪ್ರಾರಂಭಿಸಿದ ಬಾಪಕುಂಞಿ ಉಸ್ತಾದ್ ನಾಲ್ಕು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ ಪುತ್ತೂರು ತಾಲೂಕಿನ ಸಂಪ್ಯ ಜುಮಾ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ಬಾಯಾರಿನ ಕುಳ್ಯಾರ್ ಕುದ್ರಡ್ಕದಿಂದ ಕುಟುಂಬ ಸಮೇತ ತನ್ನ ವಾಸ ಸ್ಥಳವನ್ನು ಸಂಪ್ಯಕ್ಕೆ ಬದಲಾಯಿಸಿದ ಉಸ್ತಾದರ ಧಾರ್ಮಿಕ, ಸಾಮಾಜಿಕ, ಸಾರ್ವಜನಿಕ ಸೇವೆ ಜೀವನ ಪರ್ಯಂತ ಸಂಪ್ಯದಲ್ಲಿಯೇ ಮುಂದುವರಿಯಿತು..
1957 ನೇ ಇಸವಿ..
ಭಾರತ ದೇಶವು ಸ್ವಾತಂತ್ರ್ಯಗೊಂಡು ಕೆಲವೇ ವರ್ಷಗಳು ಕಳೆದಿದ್ದರೂ ಊರು ಕೇರಿಗಳು ಧಾರ್ಮಿಕವಾಗಿಯೂ ಶೈಕ್ಷಣಿಕವಾಗಿಯೂ ಹಿಂದುಳಿದಿತ್ತು. ಬಾಪಕುಂಞಿ ಉಸ್ತಾದರ ಆಗಮನವು ಊರಿನ ಜನತೆಗೆ ಒಂದು ವರದಾನವಾಯಿತು. ಪಾಂಡಿತ್ಯ, ಸತ್ ಸ್ವಭಾವ, ಸಹನೆ ಹಾಗೂ ಆಧ್ಯಾತ್ಮಿಕತೆಯ ಆಗರವಾಗಿದ್ದ ಉಸ್ತಾದ್ ಜನತೆಯ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ವಿಚಾರಗಳಿಗೆ ಒಂದು ಸಾಂತ್ವನ ಕೇಂದ್ರ ಎಂಬಂತೆ ಮೂಡಿ ಬಂದರು.. ಬಹುಮಾನ್ಯ ಮರ್ಹೂಂ ಮಾಡಾವು ಕೆ ಎನ್ ಆಟಕೋಯ ತಂಙಳ್ ರಿಂದ ಸಂಪ್ಯ ಜಮಾಅತ್ ನ ಧಾರ್ಮಿಕ ನೇತೃತ್ವವನ್ನು ಪಡೆದುಕೊಂಡ ಬಳಿಕ ಊರಿನ ಹಿರಿಯ ಕಿರಿಯ ಸ್ತ್ರೀ ಪುರುಷ ಎಂಬ ಭೇದವಿಲ್ಲದೆ ಎಲ್ಲರ ಬಾಯಿಯಲ್ಲಿಯೂ “ಬೆಲಿಯೆ ಉಸ್ತಾದ್” ಎಂಬ ಮಾತು ಹರಿದಾಡ ತೊಡಗಿತು. ಸಮರ್ಥ ವಿದ್ವಾಂಸರೊಬ್ಬರ ಸಮರ್ಥ ನೇತೃತ್ವಕ್ಕೆ ಇಡೀ ಊರೇ ಅವರ ಸ್ವಾಧೀನವಾಯಿತು. ಆದರೆ ಈ ಸ್ವಾಧೀನವನ್ನು ಎಳ್ಳಷ್ಟೂ ದುರುಪಯೋಗಿಸಿ ಕೊಳ್ಳದ ಅವರು ಒಂದು ಜಮಾಅತ್ ಗಾಗಿ ಇಡೀ ಊರಿನ ಜನರಿಗಾಗಿ ಅಹರ್ನಿಶಿ ದುಡಿದು ಇಡೀ ನಾಡನ್ನೇ ಬೆಳಗಿದರು.
ಸಂಪ್ಯ ಉಸ್ತಾದ್ ಎನ್ನುವಾಗ ತಟ್ಟನೆ ನೆನಪಾಗುವುದು ಅವರ ತಲ್ಸಮಾತ್ ಚಿಕಿತ್ಸೆ ಅವರಿಗೂ ಆಧ್ಯಾತ್ಮಿಕ ಚಿಕಿತ್ಸೆಗೂ ಅವಿನಾಭಾವ ಸಂಬಂಧ ಇತ್ತು. ತಲ್ಸಮಾತ್ ಚಿಕಿತ್ಸೆಯಲ್ಲಿ ಅವರು ಅಪಾರ ಪ್ರಾವೀಣ್ಯತೆ ಹೊಂದ್ದರು. ಆದರ್ಶ ದಂಪತಿಗಳಾಗಿ ಜೀವಿಸಿದ ಉಸ್ತಾದ್ ಮತ್ತು ಅವರ ಪ್ರಿಯ ಪತ್ನಿಗೆ ಹತ್ತು ಮಂದಿ ಪುತ್ರರು ಮತ್ತು ನಾಲ್ಕು ಮಂದಿ ಪುತ್ರಿಯರನ್ನೊಳಗೊಂಡ ಹದಿನಾಲ್ಕು ಮಂದಿ ಮಕ್ಕಳಿಗೆ ಜನ್ಮ ನೀಡುವ ಮಹಾ ಸೌಭಾಗ್ಯವನ್ನು ಅಲ್ಲಾಹು ಕರುಣಿಸಿದ
ಹತ್ತು ಮಂದಿ ಗಂಡು ಮಕ್ಕಳೂ ಪಳ್ಳಿ ದರ್ಸ್ ನಲ್ಲಿ ಓದಿ ಕಲಿತವರಾಗಿದ್ದು ನಾಲ್ಕು ಮಂದಿ ಹೆಣ್ಣು ಮಕ್ಕಳನ್ನೂ ಆಲಿಮ್ ಗಳಿಗೆ ಮದುವೆ ಮಾಡಿಸಿ ಕೊಟ್ಟಿರುವುದು ವಿಶೇಷ….!!
1.ಅಲ್ ಹಾಜ್ ಅಬುಲ್ ಬುಶ್ರಾ ಬಿ ಕೆ ಅಬ್ದುರ್ರಹ್ಮಾನ್ ಫೈಝಿ ಸಂಪ್ಯ (ಪಾಣಾಜೆ, ಇಚ್ಚಿಲಂಗೋಡು,ಪೇರೂರು,ಗೂಡಿನಬಳಿ,ಕಲ್ಲಡ್ಕ, ಕಣ್ಣಂಗಾರ್ ಮುಂತಾದ ಸ್ಥಳಗಳಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದು ಈಗ ಕೆಮ್ಮಾಯಿಯಲ್ಲಿ ವಾಸ್ತವ್ಯವಿದ್ದಾರೆ.. ಇವರ ಮಗಳನ್ನು ಖ್ಯಾತ ಧಾರ್ಮಿಕ ವಿದ್ವಾಂಸ, ಪ್ರಭಾಷಣಗಾರ,ಯುವ ಜನತೆಯ ಆಶಾಕಿರಣ ರಫೀಕ್ ಸಅದಿ ದೇಲಂಪಾಡಿ ಇವರಿಗೆ ಮದುವೆ ಮಾಡಿ ಕೊಡಲಾಗಿದೆ)
2. ಮರ್ಹೂಂ ಬಿ ಕೆ ಅಬ್ದುಲ್ ಕರೀಂ ಮುಸ್ಲಿಯಾರ್ ಸಂಪ್ಯ 3.ಅಲ್ ಹಾಜ್ ಬಿ ಕೆ ಮುಹಮ್ಮದಲಿ ಫೈಝಿ (ಕಳೆದ ಹಲವಾರು ವರ್ಷಗಳಿಂದ ಬಾಳೆಪುಣಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದು ಬಾಳೆಪುಣಿ ಉಸ್ತಾದ್ ಎಂದೇ ಖ್ಯಾತರಾಗಿದ್ದಾರೆ) 4.ಹಫ್ಸಾ (ಮರ್ಹೂಂ ಕಬಕ ಇಸ್ಮಾಯಿಲ್ ಮುಸ್ಲಿಯಾರ್ ರವರ ಪತ್ನಿ) 5.ಅಬ್ದುಲ್ ಖಾದರ್ ಸಂಪ್ಯ 6.ಅಬ್ದುಲ್ ಬಶೀರ್ ಮದನಿ ಸಂಪ್ಯ 7.ಅಬ್ದುಸ್ಸಮದ್ 8.ಅಬ್ದುಲ್ ಹಮೀದ್ 9.ಯಹ್ಯಾ ಝುಹುರಿ 10.ಅಬ್ದುರ್ರಷೀದ್ ಸಂಪ್ಯ 11.ಉಬೈದ್ ಫಾಲಿಲಿ ನಿಝಾಮಿ 12.ಫಾತಿಮತ್ ಝುಹುರಾ (ದೇಲಂಪಾಡಿ ಮುದರ್ರಿಸ್ ಇಸ್ಮಾಯಿಲ್ ದಾರಿಮಿ ಉಸ್ತಾದ್ ಇರ್ದೆ ರವರ ಪತ್ನಿ) 13.ಝೈನಬಾ (ಅರಿಯಡ್ಕ ಖತೀಬ್, ಕುಂಬ್ರ ಮರ್ಕಝ್ ಶರೀಅತ್ ವಿಭಾಗದ ಉಪ ಪ್ರಾಂಶುಪಾಲ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್ ರವರ ಪತ್ನಿ) 14.ಉಮೈರಾ (ಈಶ್ವರಮಂಗಿಲ ತ್ವಯಿಬಾ ಕಾರ್ಯದರ್ಶಿ ಹಾಗೂ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ ರವರ ಪತ್ನಿ)
1987 ರಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಂಡಿದ್ದ ಬಾಪಕುಂಞಿ ಉಸ್ತಾದ್ ರವರಿಗೆ ಪುತ್ತೂರಿನಲ್ಲಿ ಮೂವತ್ತು ವರ್ಷಗಳ ಕಾಲ ಮುದರ್ರಿಸ್ ಆಗಿದ್ದ ಮರ್ಹೂಂ ಪುತ್ತೂರು ತಂಙಳ್, ಸೂಫೀವರ್ಯ ಮರ್ಹೂಂ ಮಿತ್ತಬೈಲ್ ಜಬ್ಬಾರ್ ಉಸ್ತಾದ್, ಅತ್ರಾಡಿ ಖಾಝಿ ಮೂಡಬಿದ್ರೆ ಅಬೂಬಕರ್ ಹಾಜಿ, ಮರ್ಹೂಂ ಡಾ| ಶಾಹ್ ಮುಸ್ಲಿಯಾರ್ ಅರಂತೋಡು, ಮರ್ಹೂಂ ಪಿ ಎಂ ಕೆ ಮದನಿ ಪರ್ಲಡ್ಕ, ಶೈಖುನಾ ಎ ಬಿ ಹಸನುಲ್ ಫೈಝಿ ಅಜ್ಜಾವರ, ವಾಲೆಮುಂಡೋವು ಉಸ್ತಾದ್, ವೆಂಡೂರ್ ನಜೀಬ್ ಮೌಲವಿ ಉಸ್ತಾದ್, ಮರ್ಹೂಂ ಸಂಪ್ಯ ಇಬ್ರಾಹಿಂ ಹಾಜಿ, ಯೇನಪೋಯ ಅಬ್ದುಲ್ಲ ಕುಂಞಿ, ಮರ್ಹೂಂ ಶೇಕಮಲೆ ಮಮ್ಮುಂಞಿಹಾಜಿ ಮುಂತಾದವರು ಸಾಮಾಜಿಕ ಬದುಕಿನಲ್ಲಿ ಸಹವರ್ತಿಗಳಾಗಿದ್ದರು..
ಹಲವಾರು ಉಲಮಾ ಉಮರಾ ನೇತಾರರೊಂದಿಗೆ ಹಾಗೂ ಸಮುದಾಯದ ಮುಂದಾಳುಗಳೊಂದಿಗೆ ನಿಕಟ ಸಂಪರ್ಕವನ್ನುಟ್ಟುಕೊಂಡಿದ್ದ ಉಸ್ತಾದ್ ನಲುವತ್ತ ನಾಲ್ಕು ವರ್ಷಗಳ ಕಾಲ ಒಂದೇ ಊರಿನಲ್ಲಿ ತನ್ನ ಪುರುಷಾಯುಸ್ಸಿನ ಬಹುತೇಕ ಕಾಲವನ್ನು ದೀನೀ ಕಾರ್ಯಕ್ಕೆ ನೇತೃತ್ವ ನೀಡುವುದರಲ್ಲಿ ವ್ಯಯಿಸಿ 2000 ಇಸವಿಯ ಆಕ್ಟೊಬರ್ ತಿಂಗಳ ಐದನೇ ತಾರೀಕು (ಹಿಜಿರಾ 1421 ರಜಬ್ 6) ಗುರುವಾರ ಸಂಜೆ ಇಹಲೋಕವನ್ನು ತ್ಯಜಿಸಿದರು….
ಶುಕ್ರವಾರ ಬೆಳಗ್ಗೆ ಅವರ ಪವಿತ್ರ ದೇಹವನ್ನು ಸಂಪ್ಯ ಮಸೀದಿಯ ಪಕ್ಕದಲ್ಲೇ ದಫನ ಮಾಡಲಾಯಿತು. ಅವರು ನಮ್ಮನ್ನಗಲಿ ಇಪ್ಪತ್ತ ಮೂರು ವರ್ಷಗಳು ಸಂದರೂ ಅವರ ಆದರ್ಶ ಜೀವನ ನಮಗೆ ದಾರಿದೀಪವಾಗಿದೆ… ಅವರನ್ನೂ ನಮ್ಮನ್ನೂ ಜಗದೇಕ ಒಡೆಯನಾದ ಅಲ್ಲಾಹು ಸ್ವರ್ಗದಲ್ಲಿ ಒಟ್ಟು ಸೇರಿಸಲಿ…. ಆಮೀನ್ ಯಾ ರಬ್ಬಲ್ ಆಲಮೀನ್..
✍ ಎಸ್.ಪಿ ಬಶೀರ್ ಶೇಕಮಲೆ, ಕುಂಬ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.