(www.vknews.in) : ಪ್ರವಾಸ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ! ಅವಕಾಶ ಸಿಕ್ಕಿದರೆ ಎಲ್ಲರೂ ಹೊಸ ಸ್ಥಳಗಳಿಗೆ, ಪರ ರಾಜ್ಯಗಳಿಗೆ, ಪರ ದೇಶಗಳಿಗೆ ಹೋಗಲು ಇಷ್ಟಪಡುತ್ತಾರೆ. ಕೆಲವರು ಸುತ್ತಾಡಲು ಮಾತ್ರ ಹೋದರೆ ಮತ್ತೆ ಕೆಲವರು ಭಕ್ತಿಯಿಂದ ಪವಿತ್ರ ಸ್ಥಳಗಳಿಗೆ ಹೋಗುತ್ತಾರೆ. ಪ್ರತಿಯೊಬ್ಬರ ಭಾವನೆಗಳು, ಕಲ್ಪನೆಗಳು, ಅನುಭವಗಳು, ಆಸೆ ಆಕಾಂಕ್ಷೆಗಳು ಪ್ರತ್ಯೇಕವಾಗಿರುತ್ತವೆ. ತಮ್ಮ ಕನಸಿನ ಪ್ರವಾಸಕ್ಕೋಸ್ಕರ ಮಧ್ಯಮವರ್ಗದವರು ಕಷ್ಟಪಟ್ಟು ಹಣ ಉಳಿತಾಯ ಮಾಡಿ ಪವಿತ್ರ ಸ್ಥಳಗಳಿಗೆ ಹೋಗಿ ಬರಲು ಇಷ್ಟಪಡುತ್ತಾರೆ. ಜೀವನದಲ್ಲಿ ಪರದೇಶದ, ಪರಭಾಷೆಯ, ಪರಸಂಸ್ಕೃತಿಯ ಅನುಭವವೇ ಇರುವುದಿಲ್ಲ.
ಗುಂಪು ಗುಂಪುಗಳಲ್ಲಿ ಪ್ರವಾಸಿ ಏಜೆಂಟರುಗಳ ಜೊತೆ, ಅವರನ್ನು ನಂಬಿ ಹೊರಡುತ್ತಾರೆ. ಏಜೆಂಟರು ಒಳ್ಳೆಯವರಾದರೆ ಸರಿ, ಇಲ್ಲವಾದಲ್ಲಿ ಅನೇಕ ಕಷ್ಟಕರ ಅನುಭವಗಳಿಗೆ ಸಿಲುಕಿಕೊಳ್ಳಬೇಕಾಗುತ್ತದೆ. ದೂರದ ಪವಿತ್ರ ಸ್ಥಳಗಳಿಗೆ ಹೋಗುವ ಇಚ್ಛೆ ಇದ್ದರೆ, ಹತ್ತು ಕಡೆ ವಿಚಾರಿಸಿ, ಆ ಸ್ಥಳಗಳಿಗೆ ಹೋಗಿ ಬಂದವರ ಜೊತೆ ಭೇಟಿ ಮಾಡಿ ಎಲ್ಲಾ ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳಿ. ಇಂದಿನ ಬಹುತೇಕ ಏಜೆಂಟರು ಮೋಸ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಎಷ್ಟೋ ಏಜೆಂಟರು ಹಜ್ ಮತ್ತು ಉಮ್ರಾ ಗೆ ಕರೆದುಕೊಂಡು ಹೋಗುತ್ತೇವೆ ಎಂದು ನಂಬಿಸಿ ಜನರ ಹಣವನ್ನು ನುಂಗಿದ್ದಾರೆ. ಬಹಳ ಜಾಗೃತೆಯಿಂದ ನಿಮ್ಮ ಟೂರ್ಸ್ ಮತ್ತು ಟ್ರಾವೆಲ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
ನಮ್ಮ ಸಂಬಂಧಿಕರಿಗೆ ಇರಾಕ್ ನ ಬಾಗ್ದಾದ್, ನಜಫ್ ಮತ್ತು ಕರ್ಬಲಾದ ದರ್ಗಾಗಳನ್ನು ನೋಡಲು ಬಹಳ ಆಸೆ ಇತ್ತು. ಹಲವಾರು ವರ್ಷಗಳಿಂದ ಹೇಳುತ್ತಿದ್ದರು. ಹೇಗೋ ಹಣ ಸೇರಿಸಿ ಏಜೆಂಟನಿಗೆ ಕೊಟ್ಟರು. ಹಣ ಕೊಡುವ ಮುಂಚೆ ಇದ್ದ ಏಜೆಂಟರ ಮುತ್ತಿನಂಥ ಮಾತು, ನಡವಳಿಕೆ, ಸಂಪೂರ್ಣ ಹಣ ಕೊಟ್ಟ ನಂತರ ಇರಲಿಲ್ಲ. ಒಂದು ವಾರದ ನಂತರ ಮೆಡಿಕಲ್ ಚೆಕ್ಅಪ್ ಗಾಗಿ ನೀವು ಪ್ರತ್ಯೇಕವಾಗಿ ಹಣ ಪಾವತಿಸಬೇಕು ಎಂದು ತಕರಾರು ತೆಗೆದ. ಬೇರೆ ಏಜೆಂಟರುಗಳ ಜೊತೆ ವಿಚಾರಿಸಿದಾಗ ಹಾಗೇನೂ ಹಣ ಕೊಡಬೇಕಾಗಿಲ್ಲ ಎಂದರು. ಆದರೆ ನಮ್ಮ ಏಜೆಂಟು ಒಪ್ಪಲು ಸಿದ್ಧವಿಲ್ಲ. ವಾಪಸ್ಸು ನಮ್ಮ ಹಣ ನಮಗೆ ಕೊಟ್ಟುಬಿಡು ಎಂದರೂ ಕೇಳಲಿಲ್ಲ.
ಮಾತಿನ ಚಕಮಕಿ ನಡೆದು, ಮೆಡಿಕಲ್ ಚೆಕಪ್ಪಿಗಾಗಿ ಎಂದು ಹಣ ಪಡೆದುಕೊಂಡ. ಆತ ಮೋಸ ಮಾಡಿ ಹಣ ತೆಗೆದುಕೊಳ್ಳುತ್ತಿದ್ದಾನೆ ಎಂದು ಗೊತ್ತಿದ್ದರೂ ಏನೂ ಮಾಡಲಾಗಲಿಲ್ಲ. ಪಾಸ್ ಪೋರ್ಟ್ ಮತ್ತು ಪ್ರವಾಸದ ಪೂರ್ತಿ ಹಣ ಆಗಲೇ ಕೊಡಲಾಗಿತ್ತು. ಒಂದು ತಿಂಗಳು ವೀಸಾ ಬಂದಿಲ್ಲವೆಂದು ಕಾಲ ತಳ್ಳಿದ. ಬೇರೆ ವಿಧಿ ಇರಲಿಲ್ಲ ಕಾಯಲೇ ಬೇಕಾಯಿತು. ಕೊನೆಗೆ ಒಂದು ದಿನಾಂಕ ಹೇಳಿದ. ಕೊನೆಗೂ ಆ ಘಳಿಗೆ ಬಂದಿತಲ್ಲ ಎಂದು ನಮ್ಮ ಸಂಬಂಧಿಕರಿಗೆ ಎಲ್ಲಿಲ್ಲದ ಸಂತೋಷ. ಪ್ರವಾಸ ಹೋಗುವ ಎಲ್ಲಾ ತಯಾರಿ ಮಾಡಿಕೊಂಡರು. ಆದರೆ ಪುನಃ ದಿನಾಂಕ ಬದಲಾವಣೆಯಾಯಿತು. ರಾತ್ರಿ ೧೧ ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬನ್ನಿ ಎಂದ. ಅದೂ ಹೇಳಿದ್ದು ನಾವು ಸ್ವತಃ ಫೋನ್ ಮಾಡಿ ಕೇಳಿದಕ್ಕೆ. ಯಾವುದೇ ರೀತಿಯ ಜವಾಬ್ದಾರಿಯಾಗಲಿ ಕನಿಕರವಾಗಲಿ ಒಬ್ಬ ಏಜೆಂಟನಾಗಿ ತೋರಿಸಲಿಲ್ಲ. ಹೋಗುವ ಸಂತೋಷದಲ್ಲಿ ರಾತ್ರಿ ಊಟ ಯಾರೂ ತಿಂದಿರಲಿಲ್ಲ. ಫಲಹಾರಗಳನ್ನು ಮಾತ್ರ ಜೊತೆಯಲ್ಲಿ ತೆಗೆದುಕೊಂಡಿದ್ದೆವು. ವಿಮಾನ ನಿಲ್ದಾಣದಲ್ಲಿ ನಮ್ಮ ಸಂಬಂಧಿಕರ ಜೊತೆ ಹೋಗುವವರ ಪ್ರವಾಸಿಗರ ಗುಂಪು ಸಿಕ್ಕಿತು. ಎಲ್ಲರೂ ಏಜೆಂಟಿಗಾಗಿ ಕಾಯುತ್ತಿದ್ದರು. ಮಂತ್ರಿಗಳಂತೆ ತಡವಾಗಿ ಬಂದ.
ವಿಮಾನದಲ್ಲಿ ಏನೇನು ತೆಗೆದುಕೊಂಡು ಹೋಗಬಹುದು, ಏನೇನು ತೆಗೆದುಕೊಂಡು ಹೋಗಬಾರದು, ಎಷ್ಟು ಕೆಜಿ ಕೈಯಲ್ಲಿ ಮತ್ತು ಎಷ್ಟು ಕೆಜಿ ಲಗೇಜು ತೆಗೆದುಕೊಂಡು ಹೋಗಬಹುದು, ಪರದೇಶದ ಕರೆನ್ಸಿ ಬದಲಾವಣೆ ಹೇಗೆ, ಮೊಬೈಲ್ ಸಿಮ್ ಬದಲಾವಣೆ ಹೇಗೆ ಎಂಬುವುದರ ಬಗ್ಗೆ ಕಿಂಚತ್ತೂ ಪ್ರಯಾಣಿಕರಿಗೆ ಹೇಳಿರಲಿಲ್ಲ. ವಿಮಾನ ಹೊರಡುವ ಸಮಯ ಇದ್ದದ್ದು ರಾತ್ರಿ ನಾಲ್ಕುವರೆ ಗಂಟೆಗೆ. ಸಮಯ ಕಳೆಯಬೇಕಿತ್ತು. ಸಹ ಪ್ರವಾಸಿಗರ ಜೊತೆ ಸ್ವಲ್ಪ ಪರಿಚಯ ಮಾತುಕತೆ ಪ್ರಾರಂಭವಾಯಿತು. ವಿಮಾನದಲ್ಲಿ ೧೦ ಕೆಜಿ ಯಷ್ಟು ಕೈಯಲ್ಲಿ, ೩೦ ಕೆಜಿ ಯಷ್ಟು ಲಗೇಜಿನಲ್ಲಿ ಹಾಕಬಹುದು. ಬಾಗ್ದಾದಿನಲ್ಲಿ ಚಳಿಗಾಲ ಇದೆ. ಬೆಚ್ಚನೆಯ ಬಟ್ಟೆಗಳನ್ನು ತೆಗೆದುಕೊಳ್ಳಿ ಎಂದು ಏಜೆಂಟು ಮುನ್ನೆಚ್ಚರಿಕೆ ನೀಡಿರಲಿಲ್ಲ. ಮೊಬೈಲ್ ಬಳಸಲು ಸಹ ಬಾರದ ಹಳ್ಳಿ ಜನರು ಇದನ್ನೆಲ್ಲಾ ಗೂಗಲ್ ಮಾಡಿ ಹೇಗೆ ತಿಳಿದುಕೊಳ್ಳುತ್ತಾರೆ.
ಕೆಲವರು ಹಣವನ್ನು ಡಾಲರುಗಳಲ್ಲಿ ಪರಿವರ್ತಿಸಿಕೊಂಡಿದ್ದರು. ಒಂದು ಡಾಲರ್ ಬೆಲೆ ಭಾರತದ ೮೩.೬೦ ರೂಪಾಯಿಗಳಾಗಿತ್ತು. ಮತ್ತೆ ಕೆಲವರು ಹೇಳಿದರು – ಭಾರತದ ಕರೆನ್ಸಿ ಅಲ್ಲಿ ಕೊಟ್ಟರೆ ಇರಾಕೀ ಕರೆನ್ಸಿ ಕೊಡುತ್ತಾರೆ ಗಾಬರಿಗೊಳ್ಳಬೇಡಿ. ಭಾರತದ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟರೆ ಇರಾಕಿನ ಹದಿನೇಳು ಸಾವಿರ ರೂಗಳು ಸಿಗುತ್ತವೆ. ಕೆಲವರು ಅಲ್ಲಿಂದ ಮೊಬೈಲ್ ನಲ್ಲಿ ಮಾತನಾಡಲು IMO ಆಪ್ ಡೌನ್ಲೋಡ್ ಮಾಡಿಕೊಂಡರು. ಹಾಳಾದ ಏಜೆಂಟಿನಿಂದ ಸಾಮಾನ್ಯ ಜನರೇ ಜಾಣರು ಮತ್ತು ಹಿತೈಷಿಗಳು ಎನಿಸಿತು. ಏಜೆಂಟನಿಗೆ ಗೊತ್ತಿದ್ದೂ ಏನೂ ಹೇಳಿ ಕೊಡಲಿಲ್ಲ. ಬಾಗಿಲಿನವರೆಗೆ ಹೋಗಿ ಎಲ್ಲರನ್ನು ವಿದಾಯ ಹೇಳಿ ನಾವು ವಿಮಾನ ನಿಲ್ದಾಣದಿಂದ ಮನೆಗಳಿಗೆ ಹಿಂತಿರುಗಿದೆವು.
ಮೊಬೈಲ್ ಮೂಲಕ ನಂತರ ತಿಳಿದ ವಿಷಯ – ವಿಮಾನ ನೇರವಾಗಿ ಬಾಗ್ದಾದ್ ಗೆ ಹೋಗಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಶಾರ್ಜಾ ವಿಮಾನ ನಿಲ್ದಾಣಕ್ಕೆ ತಲುಪಿದರು. ಯಾರಿಗೂ ತಿಂಡಿಯ ಅಥವಾ ಊಟದ ವ್ಯವಸ್ಥೆ ಇರಲಿಲ್ಲ. ಗೊತ್ತಿದ್ದರೆ ಇಲ್ಲಿಂದಲೇ ತೆಗೆದುಕೊಂಡು ಹೋಗಬಹುದಾಗಿತ್ತು. ಕಟುಕ ಏಜೆಂಟರುಗಳ ಜೊತೆ ಹೋದರೆ ಹೀಗೆ ಆಗುವುದೇನೋ. ಹಣ್ಣು ಹಂಪಲು, ಬಿಸ್ಕತ್ತು ತಿಂದು ಕಾಲ ಕಳೆದು ಅಲ್ಲಿಂದ ಬಾಗ್ದಾದಿಗೆ ಹೊರಟರು. ರಾತ್ರಿಯಲ್ಲ ನಿದ್ದೆಯಿಲ್ಲ. ಸಾಲುಗಳಲ್ಲಿ ನಿಂತು ನಿಂತು ಕಾಲುಗಳಲ್ಲಿ ನೋವು. ಹೊಟ್ಟೆಗೆ ಊಟ ಇಲ್ಲ. ಗಂಟೆಗಟ್ಟಲೆ ಚೆಕಿಂಗ್. ಸೂರ್ಯ ಮುಳುಗುವ ಹೊತ್ತಿಗೆ ಬಾಗ್ದಾದಿಗೆ ತಲುಪಿದರು. ನಿತ್ರಾಣರಾಗಿದ್ದ ಪ್ರವಾಸಿಗರಲ್ಲಿ ಕೆಲವರು ರಾತ್ರಿ ಊಟ ಸಹ ಮಾಡದೆ ಹಾಗೆ ಮಲಗಿಕೊಂಡರು. ತಲ ಐದು ಮಂದಿಗೆ ಒಂದು ರೂಮು. ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕ ಕೋಣೆಗಳಿದ್ದವು.
ಒಂದು ದಿನ ಪ್ರಯಾಣದಲ್ಲೇ ಹೊರತು ಹೋಯಿತು. ಎರಡನೇಯ ದಿನ ಸುತ್ತಾಡಿಸಲು ಕರೆದುಕೊಂಡು ಹೋದರು. ಅಲ್ಲಲ್ಲಿ ಇರಾಕಿ ಪೊಲೀಸರು ತಪಾಸಣೆ ನಡೆಸಿ ಮುಂದೆ ಹೋಗಲು ಬಿಡುತ್ತಾರೆ. ಒಂದು ರೀತಿಯ ಹೊಸ ಅನುಭವ. ಪವಿತ್ರ ದರ್ಗಾ ಸ್ಥಳಗಳಿಗೆ ಹೋಗಿ ಬಂದೆವು. ಮೂರನೇ ದಿನ ಎಲ್ಲೂ ಕರೆದುಕೊಂಡು ಹೋಗಲಿಲ್ಲ. ರೆಸ್ಟ್ ತೆಗೆದುಕೊಳ್ಳಿ ಎಂದು ಬಿಟ್ಟ. ಕೆಲವರು ಇಷ್ಟು ದೂರ ಬಂದಿರುವುದು ರೂಮುಗಳಲ್ಲಿ ಇರುವುದಕ್ಕಲ್ಲ, ನಾವೇ ಟ್ಯಾಕ್ಸಿ ಮಾಡಿಕೊಂಡು ಸುತ್ತಾಡೋಣವೆಂದು ಹೊರಟರು. ಕೆಲವರು ಎಲ್ಲೂ ಹೋಗಲಿಲ್ಲ ದಿನವೆಲ್ಲ ಹಾಳಾಯಿತು. ಹೊಸ ಜಾಗ ಹೊರಗೆ ಹೋಗಲು ಭಯ.
ಪ್ರತಿ ಬೀದಿಯಲ್ಲೂ ಚೆಕಿಂಗ್. ಅಲ್ಲಿಯ ಭಾಷೆ ಪ್ರವಾಸಿಗರಲ್ಲಿ ಯಾರಿಗೂ ಬರಲ್ಲ. ಹಜ್ರತ್ ಇಮಾಮ್ ಮೂಸಾ ಕಾಝಿಮ್ (ರ) ರವರ ದರ್ಗಾ ಬಳಿ ಹೋಟೆಲ್ ಇದ್ದ ಕಾರಣ ಕೆಲವರು ಪ್ರತಿದಿನ ಅಲ್ಲಿಗೆ ದರ್ಶನಕ್ಕೆ ಹೋಗಿ ಬರುತ್ತಿದ್ದರು. ಸೂಫಿ ಸಂತರ ಮಹಾಗುರು ಹಜ್ರತ್ ಅಬ್ದುಲ್ ಖಾದರ್ ಜೀಲಾನಿ (ರ ) ರವರ ದರ್ಗಾ ಅಲ್ಲಿಂದ ೬ ಕಿ.ಮೀ. ಮಾತ್ರ ದೂರದಲ್ಲಿತ್ತು. ಎಲ್ಲರೂ ಪ್ರಯಾಣ ಬೆಳೆಸಿದರು. ಆದರೆ ಅಲ್ಲಿ ಯಾರಿಗೂ ಗರ್ಭಗುಡಿಯಲ್ಲಿ ಪ್ರವೇಶ ಇರಲಿಲ್ಲ. ದರ್ಗಾದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. ಆದ ಕಾರಣ ಎಲ್ಲರು ಹೊರಾಂಗಣದಲ್ಲಿ ಬಿಡಾರ ಹೂಡಿದರು. ಇಷ್ಟು ದೂರ ಬಂದು ದರ್ಶನ ಪಡೆಯಲು ಆಗಲಿಲ್ಲವಲ್ಲ ಎಂದು ಕೆಲವರ ಮನ ನೋಯಿತು.
ಅಮೇರಿಕಾ ಯುದ್ಧ ಮಾಡಿ ಸರ್ವನಾಶ ಮಾಡಿದ ಇರಾಕ್ ದಶಕಗಳು ಉರುಳಿದರೂ ಇನ್ನೂ ಚೇತರಿಸಿಕೊಂಡಿಲ್ಲ. ಪ್ರಪಂಚವನ್ನೇ ಸರ್ವನಾಶ ಮಾಡುವ ಮಾರಕ ಅಸ್ತ್ರಗಳು ಇರಾಕ್ ಬಳಿ ಇವೆ, ಅದರಿಂದ ಪ್ರಪಂಚಕ್ಕೆ ಹಾನಿ ಉಂಟಾಗಬಹುದು ಎಂದು ಕುಂಟು ನೆಪ ಒಡ್ಡಿ, ಯುದ್ಧ ಮಾಡಿ, ಪೆಟ್ರೋಲ್ ಬಾವಿಗಳ ಮೇಲೆ ಅತಿಕ್ರಮಣ ಮಾಡಿಕೊಂಡು, ಸುಮಾರು ೧೦ ಲಕ್ಷ ಮುಗ್ಧ ಜನರನ್ನು ಕೊಗ್ಗೊಲೆ ಮಾಡಿ ಇಂದೂ ಸಹ ಪ್ರಪಂಚದಲ್ಲಿ ನಾನೇ ದೊಡ್ಡಣ್ಣ ಎಂದು ಮೆರೆಯುತ್ತಿದ್ದರೂ ಯಾವ ರಾಷ್ಟ್ರವೂ ಧ್ವನಿ ಎತ್ತುತ್ತಿಲ್ಲ. ಬ್ರಿಟಿಷರು ಬಲ ಪ್ರಯೋಗ ಮಾಡಿ ಎಷ್ಟೋ ದೇಶಗಳನ್ನು ಅಧೋಗತಿಗೆ ನೂಕಿವೆ. ಅದರ ಪ್ರಸ್ತಾವ ಮಾಡಲು ಯಾರಿಗು ಇಂದಿಗೂ ಧೈರ್ಯ ಇಲ್ಲ.
ಮೊದಲನೇ ಮತ್ತು ಎರಡನೇಯ ಪ್ರಪಂಚ ಯುದ್ಧದಲ್ಲಿ ಆದ ನಷ್ಟ ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಮೂರನೇ ಮಹಾ ಯುದ್ಧಕ್ಕೆ ಪ್ರಪಂಚ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ರಷ್ಯಾ ತನ್ನದೇ ಆದ ಸಂಕಷ್ಟಗಳಲ್ಲಿದೆ. ಚೀನಾ ದೇಶದ ಬಲ ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ. ಇರಾಕ್ ಬೀದಿಗಳಲ್ಲಿ ಜನರನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಬಡತನದ ಬವಣೆಯಲ್ಲಿ ಬದುಕುತ್ತಿದ್ದಾರೆ. ಯುದ್ಧದ ನಂತರದ ಕರಿನೆರಳು ಇನ್ನೂ ಮಾಸಿ ಹೋಗಿಲ್ಲ. ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನಿಸ್ತಾನ ಅಧೋಗತಿಗೆ ತಲುಪಿವೆ. ಇನ್ನು ಮುಂದೆ ಇರಾನ್, ಪಾಕಿಸ್ತಾನ ಮತ್ತು ಟರ್ಕಿ ಬಲಿಯಾಗಲಿವೆ. ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ವಿಶ್ವವಿದ್ಯಾಲಯವಾಗಿದ್ದ ಬಾಗ್ದಾದ್ ಇಂದು ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಸಹ ಕೊಡಲು ಅರ್ಹವಿಲ್ಲದಂತೆ ಕಾಣುತ್ತಿತ್ತು.
ನಜಫ್ ಮತ್ತು ಕರ್ಬಲಾದಲ್ಲಿ ಶಿಯಾ ಹೆಚ್ಚಾಗಿ ಕಾಣಸಿಗುತ್ತಾರೆ. ಬೀದಿಗಳಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ಕಾಣ ಸಿಗುತ್ತಾರೆ. ನಾಲ್ಕನೇ ಖಲೀಫಾ ಹಜ್ರತ್ ಅಲಿ (ರ) ಮತ್ತು ಅವರ ಮಗ ಹಜ್ರತ್ ಇಮಾಮ್ ಹುಸೇನ್ (ರ) ರವರ ದರ್ಗಾ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಜನ ಬರುತ್ತಿರುತ್ತಾರೆ. ಇವರ ಸ್ಮರಣೆಯಲ್ಲಿ ಇಂದಿಗೂ ನಮ್ಮ ಕರ್ನಾಟಕದಲ್ಲಿ ಮೊಹರಂ ಹಬ್ಬವನ್ನು ಬಾಬಯ್ಯ ಹಬ್ಬವೆಂದು ಹಳ್ಳಿಗಳಲ್ಲಿ ಆಚರಿಸಲಾಗುತ್ತದೆ. ಡಾ| ರಾಜೇಂದ್ರಪ್ರಸಾದ್ ರವರು ಒಂದು ಮಾತನ್ನು ಹೇಳಿದ್ದರು – ಇಮಾಮ್ ಹುಸೇನ್ ರವರ ತ್ಯಾಗ ಕೇವಲ ಒಂದು ಸಮುದಾಯಕ್ಕೆ ಅಥವಾ ದೇಶಕ್ಕೆ ಸೀಮಿತವಲ್ಲ. ಅದು ಇಡೀ ಮಾನವಕುಲಕ್ಕೆ ಬಾಂಧವ್ಯವಾಗಿದೆ. ಈ ಮಾತು ನೂರಕ್ಕೆ ನೂರು ಸತ್ಯ ಎನಿಸಿತು.
ದರ್ಗಾದ ಬಳಿ ದೊಡ್ಡ ಮಾರುಕಟ್ಟೆಗಳಿವೆ. ಪ್ರವಾಸಿಗರಿಗೆ ಟೋಪಿ ಹಾಕುವವರು ಇದ್ದಾರೆ. ಮನಸಾರೆ ನ್ಯಾಯಯುತವಾಗಿ ವ್ಯಾಪಾರ ಮಾಡುವವರೂ ಇದ್ದಾರೆ. ಇರಾಕಿನ ಊಟ ಭಾರತೀಯರಿಗೆ ಸರಿ ಹೊಂದುವುದಿಲ್ಲ. ಎಲ್ಲೂ ಟೀ ಗೆ ಹಾಲು ಬೆರೆಸಲ್ಲ. ಅಲ್ಲಿಯ ಹವಾಮಾನವನ್ನು ಸಹ ಕೆಲ ನಮ್ಮ ಸಹ ಪ್ರವಾಸಿಗರಿಗೆ ಹೊಂದುಕೊಳ್ಳುವುದು ಕಷ್ಟವಾಯಿತು. ಮೈ ಕೊರೆಯುವಂಥ ಚಳಿ. ಒಬ್ಬರಿಗಂತೂ ಜ್ವರ ಬಂದೇ ಬಿಟ್ಟಿತು. ಔಷಧಿ ಕೊಡಿಸಲಾಯಿತು. ಪಾಪ ಅವರು ಎಲ್ಲೂ ಸುತ್ತಾಡಲು ಹೋಗಲೇ ಇಲ್ಲ. ರೂಮಿನಲ್ಲೇ ಕಾಲ ಕಳೆದರು. ಒಳ್ಳೆಯ ಚಿಕಿತ್ಸೆ ಸೌಲಭ್ಯ ಉಂಟು. ಏಜೆಂಟ್ ಮಾತ್ರ ಡಾಕು ಮಂಗಲ್ ಸಿಂಗ್ ರೀತಿ ಇದ್ದ. ಕೆಲವರು ಅಂಗಡಿಗಳಲ್ಲಿ ಚಿನ್ನ, ಬಟ್ಟೆ ಇತ್ಯಾದಿ ಸಾಮಾನುಗಳನ್ನು ಖರೀದಿಸಿದರು. ದರ ನಮ್ಮ ದೇಶಕ್ಕಿಂತ ಕಡಿಮೆ ಏನೂ ಇಲ್ಲ. ಕರ್ಬಲಾ, ನಜಫ್ ಮತ್ತು ಬಾಗ್ದಾದಿನ ಪ್ರಮುಖ ದರ್ಗಾಗಳ ದರ್ಶನಗಳನ್ನು ಮಾಡಿಕೊಂಡು ಅಲ್ಲಿಯ ಸಿಹಿ ಕಹಿ ನೆನಪುಗಳೊಂದಿಗೆ ಮನೆಗಳಿಗೆ ಹಿಂತಿರುಗಲಾಯಿತು.
ನಿಮ್ಮಲ್ಲಿ ಪುನಃ ಅದೇ ವಿನಂತಿ. ಪವಿತ್ರ ಸ್ಥಳಗಳಿಗೆ ಸಮಾನ ಮನಸ್ಕರ ಜೊತೆ ಹೋಗಿ. ನಿಮ್ಮದೇ ಒಂದು ಗುಂಪು ಮಾಡಿಕೊಳ್ಳಿ. ಪರಸ್ವರ ಜವಾಬ್ದಾರಿಗಳನ್ನು ಹಂಚಿಕೊಳ್ಳಿ. ವಿನಮ್ರತೆಯಿಂದ ನಡೆದುಕೊಳ್ಳಿ. ಜೊತೆಯಲ್ಲಿ ಸಿಹಿ ನೆನಪುಗಳನ್ನು ಮಾತ್ರ ತನ್ನಿ. ನಂಬಿಕಸ್ಥ ಟೂರ್ಸ್ ಅಂಡ್ ಟ್ರಾವೆಲ್ಲುಗಳ ಜೊತೆ ಪ್ರಯಾಣ ಮಾಡಿ. ಇಲ್ಲವಾದಲ್ಲಿ ಮನಶಾಂತಿಯ ಹುಡುಕಾಟದಲ್ಲಿ ಇರುವ ಮನಶಾಂತಿಯೂ ಸಹ ಕಳೆದುಕೊಳ್ಳಬೇಕಾಗುತ್ತದೆ.
ನಿಮ್ಮ ಪ್ರಯಾಣಗಳು ಶುಭವಾಗಿರಲಿ..
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಊದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.