(www.vknews.in) : ಮೂರು ನಾಲ್ಕು ವರ್ಷದ ನರ್ಸರಿ ಮಕ್ಕಳಿಗೆ ಕೇವಲ ಒಂದೆರಡು ತಿಂಗಳುಗಳಲ್ಲಿ ಬಣ್ಣಗಳ ಪರಿಚಯವನ್ನು ಮಾಡಿಸಲಾಗುತ್ತದೆ. ನೀವು ಯಾವ ಬಣ್ಣ ತೋರಿಸಿದರೂ ಮಕ್ಕಳು ಥಟ್ ಎಂದು ಹೇಳಿ ಬಿಡುತ್ತವೆ. ಹಣ್ಣುಗಳ, ತರಕಾರಿಗಳ ಮತ್ತು ಕಾಲುಗಳ ಪರಿಚಯ ಸಹ ಮಾಡಿಸಲಾಗುತ್ತದೆ. ಪ್ರೀತಿಯಿಂದ ಪೆನ್ಸಿಲ್ ಹಿಡಿಯುವುದನ್ನು ಸಹ ಹೇಳಿಕೊಡಲಾಗುತ್ತದೆ. ಒಂದು ವರ್ಷದ ಒಳಗೆ ಇನ್ನಿತರೆ ಚಟುವಟಿಕೆಗಳನ್ನು ಸುಲಲಿತವಾಗಿ ಕಲಿತು ತನ್ನ ತೊದಲು ನುಡಿಯಲ್ಲೇ ಎಲ್ಲರಿಗು ಮೋಡಿ ಮಾಡಿ ಬಿಡುತ್ತವೆ.
ಸಮವಸ್ತ್ರ, ನೀರಿನ ಬಾಟಲಿ, ಕೈವಸ್ತ್ರ, ಚಪ್ಪಲಿ ಅಥವಾ ಶೂಗಳು, ಊಟದ ಡಬ್ಬಿ, ಪುಸ್ತಕದ ಚೀಲ, ಸ್ನೇಹಿತರು, ಉಪಾಧ್ಯಯರು, ಎಲ್ಲವನ್ನು ಗಮನಿಸುತ್ತಾ ತನ್ನ ಪುಟ್ಟ ತಲೆಯಲ್ಲಿ ತುಂಬಿಕೊಳ್ಳುತ್ತ ಹೋಗುತ್ತದೆ. ಇದೆಲ್ಲ ಕಲಿಕೆ ನಡೆಯುವುದು ಕೇವಲ ಎರಡು ಅಥವಾ ಮೂರು ತಾಸಿನ ಸಮಯದಲ್ಲಿ. ಆ ಮೂರು ತಾಸು ಸಹ ಸಂಪೂರ್ಣ ಕಲಿಕೆಯಲ್ಲಿ ಕಳೆಯುವುದಿಲ್ಲ. ಅರ್ಧ ಸಮಯ ಆಟದಲ್ಲಿ ಹೊರತು ಹೋಗುತ್ತದೆ. ಒಂದು ಗಂಟೆಯಲ್ಲಿ ಮಗು ಇಷ್ಟೆಲ್ಲಾ ಕಲಿಯುತ್ತಿದ್ದರೆ ಅಥವಾ ಜ್ಞಾನ ಸಂಪಾದನೆ ಮಾಡುತ್ತಿದೆ ಎಂದರೆ ಏನೋ ರಹಸ್ಯ ಇರಬೇಕಲ್ಲ? ಹೌದು, ಆ ರಹಸ್ಯ ಉಪಾಧ್ಯಾಯರ ಪ್ರೀತಿ ಮತ್ತು ಪ್ರೀತಿಯಿಂದ ಹೇಳಿಕೊಡುವ ಪಾಠ. ಎಲ್ಲ ಮಕ್ಕಳಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಪ್ರತಿ ಮಗುವಿನ ಸ್ವಭಾವ, ಕಲಿತುಕೊಳ್ಳುವ ಕ್ಷಮತೆ ಪ್ರತ್ಯೇಕವಾಗಿರುತ್ತದೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು, ಅವರಿಗೆ ಬೇಕಾದ ರೀತಿಯಲ್ಲೇ ವಿಷಯವನ್ನು ತಲುಪಿಬಿಟ್ಟರೆ, ಮಕ್ಕಳು ಬಹಳ ಬೇಗ ಗ್ರಹಿಸಿಕೊಳ್ಳುತ್ತಾರೆ.
ನಮ್ಮ ದೇಶದಲ್ಲಿ ಶಾಲಾ-ಕಾಲೇಜುಗಳ ಪರೀಕ್ಷೆ, ಪರೀಕ್ಷೆ ಮಾತ್ರವಲ್ಲ ಅಗ್ನಿ ಪರೀಕ್ಷೆ. ವಿದ್ಯಾರ್ಥಿಗಳು ತಮಗೆ ಅರ್ಥವಾಗದೇ ಇರುವ ವಿಷಯಗಳನ್ನು ಬಾಯಿಪಾಠ ಮಾಡಿ, ಗಿಣಿಯ ಹಾಗೆ ಒದರಿಬಿಡುತ್ತಾರೆ. ಹೊಸ ವಿಷಯವನ್ನು ತಿಳಿದುಕೊಳ್ಳಲು ಅಲ್ಲ, ಕೇವಲ ಪರೀಕ್ಷೆ ಎಂಬ ಕಾಟಾಚಾರಕ್ಕೆ ಓದುತ್ತಾರೆ. ನಮ್ಮ ಪಠ್ಯಕ್ರಮ ಥಿಯರಿ ಹೆಚ್ಚು ಪ್ರಾಕ್ಟಿಕಲ್ ಕಡಿಮೆ. ಪಾಠದ ವಿಷಯವನ್ನು ಯಾರೂ ಕೂಲಂಕುಶವಾಗಿ ಅರ್ಥ ಮಾಡಿಸುವ, ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗಲ್ಲ.
ಪ್ರಾಪಂಚಿಕ ವಿದ್ಯೆಯಾಗಲಿ ಅಥವಾ ಧಾರ್ಮಿಕ ವಿದ್ಯೆಯಾಗಲಿ ಅರ್ಥ ಮಾಡಿಕೊಂಡು ಮುಂದುವರೆದರೆ ಆ ಮಾತೇ ಬೇರೆಯಾಗಿರುತ್ತದೆ. ಕಿರಿಯರಾಗಿರಲಿ ಅಥವಾ ಹಿರಿಯರಾಗಿರಿಲಿ ಸಂಸ್ಕೃದಲ್ಲಿ ಒಂದು ಶ್ಲೋಕವೋ, ಕುರಾನ್ ನ ಒಂದು ಅಧ್ಯಾಯವೋ, ಬೈಬಲ್ ನ ಒಂದು ಪಾಠವೋ ಮುಕ್ತ ಕಂಠದಿಂದ ಹೇಳಿ ಬಿಡುತ್ತಾರೆ. ಆದರೆ ಅದರ ಅರ್ಥ ಮಾತ್ರ ಕೇಳಬೇಡಿ. ಅವರಿಗೆ ಬಾಯಿ ಪಾಠ ಮಾತ್ರ ಹೇಳಿಕೊಡಲಾಗಿರುತ್ತದೆ. ಇಡೀ ಜೀವನ ಅದರ ಹಿನ್ನಲೆ, ಅರ್ಥ, ಪ್ರಯೋಜನ ತಿಳಿದುಕೊಳ್ಳುವ ಗೋಜಿಗೇ ಹೋಗಿರುವುದಿಲ್ಲ.
ಯಾವುದೇ ಧರ್ಮವಾಗಲಿ ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆ ಧರ್ಮದ ಪುಸ್ತಕಗಳನ್ನು ಓದಬೇಕು. ಕೇವಲ ಓದಿದರೆ ಸಾಲದು ಆಳವಾಗಿ ಅಧ್ಯಯನ ಮಾಡಬೇಕು. ಅಧ್ಯಯನ ಮಾಡಿದರೆ ಸಾಲದು, ಅರ್ಥ ತಿಳಿದುಕೊಳ್ಳಬೇಕು, ಅದರ ಸಂದೇಶಗಳನ್ನು, ತಿರುಳನ್ನು, ಸಾರಾಂಶಗಳನ್ನು ಗ್ರಹಿಸಿಕೊಳ್ಳಬೇಕು.
ನೂರಾರು ವರ್ಷಗಳಿಂದ ಜನರನ್ನು ಕತ್ತಲೆಯಲ್ಲಿಡಲಾಗಿದೆ. ಮಕ್ಕಳು ಧಾರ್ಮಿಕ ವಿದ್ಯೆ ಕಲಿಯಲು ಆ ಧರ್ಮಗುರುಗಳ ಹತ್ತಿರ ಹೋಗುತ್ತಾರೆ. ಏನನ್ನು ಕಲಿಸಲಾಗುತ್ತದೆ? ಕೇವಲ ಔಪಚಾರಿಕ ವಿದ್ಯೆ. ಉದಾಹರಣೆಗೆ ಶುಕ್ರವಾರ ಮಸೀದಿಗೆ ನಮಾಜ್ ಮಾಡಲು ಎಷ್ಟು ಜನರು ಸೇರುತ್ತಾರೆ? ನೂರಾರು ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸಲು ಹಾಜರಾಗಿರುತ್ತಾರೆ. ಅವರಲ್ಲಿ ಎಷ್ಟು ಮಂದಿ ಸಂಪೂರ್ಣ ಕುರಾನ್ ಅರ್ಥ ಮಾಡಿಕೊಂಡು ಓದಿದ್ದಾರೆ? ಸಂಪೂರ್ಣ ಹದೀಸ್ ಪುಸ್ತಕಗಳನ್ನು ಎಷ್ಟು ಜನರು ಓದಿರುತ್ತಾರೆ? ಜೀವನದಲ್ಲಿ ಒಂದು ಸಲವೂ ಓದಿರಲಾರರು.
ಏಕೆ ? ಬೇಲಿಯೇ ಹೊಲವನ್ನು ಮೇದರೆ, ಹೊಲವನ್ನು ಕಾಪಾಡುವವರು ಯಾರು ? ನಮ್ಮ ಗುರುಹಿರಿಯರು, ಪೋಷಕರು ಇದುವರೆಗೂ ಆ ವ್ಯವಸ್ಥೆಯನ್ನು ಮಾಡಿ ಕೊಟ್ಟಿಲ್ಲ. ಯುವ ಪೀಳಿಗೆ ಏನು ಮಾಡಲು ಸಾಧ್ಯ. ತಾತ ಹಾಕಿದ ಮರಕ್ಕೇ ನೇಣು ಹಾಕಿಕೊಳ್ಳುತ್ತಾರೆ. ಅಂದರೆ ಧರ್ಮವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ ಹೆಸರಿಗೆ ಮಾತ್ರ ಅದರ ಆಚರಣೆಯನ್ನು ಮಾಡುತ್ತಿರುವುದುಂಟು. ಯಾರೋ ಮುಲ್ಲಾ ಏನೋ ಮಾತನ್ನು ಹೇಳಿ ಬಿಡುತ್ತಾರೆ. ಅದರ ಬಗ್ಗೆ ನಾವು ಅನ್ವೇಶಣೆ ಮಾಡಲು ಹೋಗುವುದೇ ಇಲ್ಲ. ಹಾಗೆಯೇ ಒಪ್ಪಿಕೊಳ್ಳುತ್ತೇವೆ. ಸರಿ ತಪ್ಪು ನೋಡಲು ಹೋಗುವುದೇ ಇಲ್ಲ.
ನಮ್ಮ ಕಂಪನಿಯಲ್ಲಿ ಒಂದು ಆಟ ಆಡಿಸಿದರು. ಅದನ್ನು ನೀವು ಸಹ ಪರೀಕ್ಷಿಸಬಹುದು. ಹತ್ತು ಜನರ ಗುಂಪು ದೂರ ದೂರ ನಿಲ್ಲಬೇಕು. ಹತ್ತು ಜನರಿಗೆ ಒಬ್ಬ ನಾಯಕ. ಒಂದು ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕು. ನೇರವಾಗಿ ಹೇಳುವಹಾಗಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ಕಿವಿಯಲ್ಲಿ ಹೇಳಬೇಕು. ನಾಯಕ ಚೀಟಿ ನೋಡಿ, ಸಂದೇಶವನ್ನು ಓದಿ, ಆ ಹತ್ತು ಮಂದಿಯಲ್ಲಿ ಒಬ್ಬನಿಗೆ ಹೇಳಿ, ಅದನ್ನು ಮತ್ತೊಬ್ಬರಿಗೆ ತಲುಪಿಸಲು ಹೇಳುತ್ತಾನೆ. ಆ ಸಂದೇಶ ಹತ್ತು ಜನರಲ್ಲಿ ಹರಿಯುತ್ತಾ ಹೋಗುತ್ತದೆ. ಕೊನೆಯವನು ಆ ಸಂದೇಶವನ್ನು ನಾಯಕನಿಗೆ ಜೋರಾಗಿ ಹೇಳಬೇಕು. ಆ ಸಂದೇಶ ಹೇಗೆ ಬದಲಾಯಿತು ಎಂದು ಕೇಳಿ ಎಲ್ಲರಿಗೂ ಆಶ್ಚರ್ಯವಾಗುವುದುಂಟು. ನಾಯಕ ಸಂದೇಶ ಹೇಳಿದ್ದು – ಬುಟ್ಟಿಯಲ್ಲಿ ಹಾವು ಇದೆ. ಕೊನೆಗೆ ನಾಯಕನಿಗೆ ಸಂದೇಶ ಬಂದಿದ್ದು – ಬುಟ್ಟಿಯಲ್ಲಿ ಹಾಲು ಇದೆ. ಕೇವಲ ಕೆಲವು ನಿಮಿಷಗಳ ಆಟದಲ್ಲಿ ಸಂದೇಶವೇ ಬದಲಾಗಿ ಹೋಯಿತು. ಧರ್ಮ ಗ್ರಂಥ ಕುರಾನ್ ಬಂದು ಸಾವಿರಾರು ವರ್ಷಗಳು ಉರುಳಿಹೋಗಿವೆ. ನಮಗೆ ಧರ್ಮವನ್ನು ತಲುಪಿಸುವವರು ಸರಿಯಾಗಿ ತಲುಪಿಸುತ್ತಿದ್ದಾರೆಯೇ ? ಕುರಾನ್ ನಾವು ಸಾಮಾನ್ಯವಾಗಿ ನಾವು ಅರಬ್ಬಿ ಭಾಷೆಯಲ್ಲಿ ಓದುತ್ತೇವೆ.
ಜೀವಂತ ಪರ್ಯಂತ ಅದರ ಸಂಪೂರ್ಣ ಅರ್ಥ ಓದಿಲ್ಲ, ಓದಿಲ್ಲವೆಂದ ಮೇಲೆ ತಿಳಿದುಕೊಳ್ಳುವುದುಂಟೆ ! ಯಾವ ಮುಲ್ಲಾ, ಫಕೀರ ಹೇಳಿದರೂ ತಲೆ ಅಲ್ಲಡಿಡುತ್ತೇವೆ. ಓದಿಲ್ಲ, ಅರ್ಥ ಮಾಡಿಕೊಂಡಿಲ್ಲ ಎಂದ ಮೇಲೆ ಪಾಲಿಸುವುದು ಹೇಗೆ ಸಾಧ್ಯ? ಮುಸಲ್ಮಾನರ ಮನೆಯಲ್ಲಿ ಹುಟ್ಟಿದ ಕಾರಣ, ಹೆಸರಿಗೆ ಮಾತ್ರ ಮುಸಲ್ಮಾನರು. ಮುಸಲ್ಮಾನರ ನಡೆನುಡಿಗಳನ್ನು ನೋಡಿ ಅನ್ಯ ಜನರು ಇದೇ ಇವರ ಧರ್ಮ ಎಂದು ಊಹಿಸಿಕೊಳ್ಳುವುದುಂಟು. ಆದರೆ ಮುಸಲ್ಮಾನರು ಸಂಪೂರ್ಣ ಇಸ್ಲಾಂ ಅಲ್ಲ.
ಪ್ರವಾದಿ ಮುಹಮ್ಮದರ(ಸ) ಜೀವನ ಚರಿತ್ರೆಯನ್ನು ಎಷ್ಟು ಮುಸಲ್ಮಾನರು ಓದಿದ್ದರೆ? ಎಷ್ಟು ಮುಸಲ್ಮಾನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ? ನೂರರಲ್ಲಿ ಒಬ್ಬರೂ ಸಿಗುವುದು ಕಷ್ಟ. ಹಾಗಾದರೆ ಯುವಪೀಳಿಗೆ ದಿಕ್ಕು ತಪ್ಪುತ್ತಿದೆಯಲ್ಲವೇ? ಹೌದು. ರೈಲು ಹಳಿ ತಪ್ಪಿದೆ. ಅನಾಹುತಗಳು ಸಂಭವಿಸುವುದು ಖಚಿತ.
ಸಮಾಜಕ್ಕೆ ಸತ್ಯವಾದಿ ಧರ್ಮಗುರುಗಳ ಅವಶ್ಯಕತೆ ಇದೆ. ಇಸ್ಲಾಂ ಧರ್ಮ ಹೇಗಿದೆ ಹಾಗೆ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ. ಇಲ್ಲಿ ಒಂದು ಪ್ರಶ್ನೆ ಏಳಬಹುದು. ನೀವೇ ಓದಿ, ನೀವೇ ತಿಳಿದುಕೊಳ್ಳಿ, ನೀವೇ ಪಾಲಿಸಿ. ಆ ಕಾಲವೂ ಬರಬಹುದು. ಆದರೆ ಕುರಾನ್ ವ್ಯಾಖ್ಯಾನದಿಂದ ಜನರಿಗೆ ದೂರವಿಟ್ಟವರಾರು? ಅವಕಾಶಗಳನ್ನು ಕಲ್ಪಿಸಿಕೊಡದೆ ಶತಮಾನಗಳಿಂದ ಕತ್ತಲಲ್ಲಿಟ್ಟವರಾರು? ಇಂದಿನ ದುರ್ಗತಿಗೆ ಬುನಾದಿ ಹಾಕಿದವರು ಯಾರು ? ಈ ನಿಟ್ಟಿನಲ್ಲಿ ಜಾಗೃತಿಯನ್ನೇ ಮೂಡಿಸದೆ ಮೌನ ತಾಳಿ ತಮಾಷೆ ನೋಡುತ್ತಿರುವವರು ಯಾರು ಮತ್ತು ಏಕೆ ?
ಮಾತೃ ಭಾಷೆಯನ್ನೇ ಸರಿಯಾಗಿ ಮಾತನಾಡಲು ಬಾರದ ಪುಟಾಣಿ ಮಕ್ಕಳು ಸಾವಿರಾರು ಮೈಲಿ ದೂರವಿರುವ ಬ್ರಿಟನ್ನಿನ ಇಂಗ್ಲಿಷ್ ಭಾಷೆಯಲ್ಲಿ ಪದ್ಯವನ್ನು ಓದುತ್ತಾರೆ. ಅರ್ಥಮಾಡಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯವಾಯಿತು. ಅವರವರ ಧರ್ಮ ಅವರವರಿಗೆ ಆರ್ಥವಾಗದೆ ಇರಲು ಕಾರಣಕರ್ತರು ಯಾರು ? ಧರ್ಮ ಅರ್ಥವಾಗಿ ಹೋದರೆ ಅಧರ್ಮಕ್ಕೆ ಉಳಿಗಾಲವಿಲ್ಲವೆಂದೋ, ಪ್ರಪಂಚದಲ್ಲಿ ಶಾಂತಿ ನೆಲೆಸಿಹೋಗುತ್ತದೆಂದೋ, ಸತ್ಯಕ್ಕೆ ಜಯ ಸಿಗುತ್ತದೆಂದೋ ಜನರನ್ನು ಧರ್ಮದಿಂದ ದೂರವಿಡಲಾಗುತ್ತಿದೆ. ಯಾವ ಧರ್ಮವೂ ಕೆಡಕನ್ನು ಬಯಸುವುದಿಲ್ಲ. ಆದರೆ ಪುಟಾಣಿಗಳು, ಯುವಕರು ಮತ್ತು ವೃದ್ಧರು ಧರ್ಮದಿಂದ ದೂರ ಬಲುದೂರವಾಗಿ ಹೋಗಿದ್ದಾರೆ. ಧರ್ಮ ಪಾಲಿಸಿದರೆ ಸತ್ಯ ಹೇಳಬೇಕಾಗುತ್ತದೆ. ಸಮಾಜದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳಬೇಕಾಗುತ್ತದೆ.
ಸಂಪೂರ್ಣವಾಗಿ ಬಾಳಿ ಬದುಕುವ ಕಲೆ ಕಲಿಯಬೇಕಾಗುತ್ತದೆ. ಆದುದರಿಂದ ಜನರಿಗೆ ನಿಜವಾದ ಧರ್ಮ ಬೇಡ. ನಾವು ಬಹಳ ಮಾಡ್ರನ್, ಪ್ರಪಂಚ ಬೇರೆ ಧರ್ಮ ಬೇರೆ ಎಂಬ ಹುಳು ತಲೆಯಲ್ಲಿ ಹಿರಿಯರು ತುಂಬಿಸಿಬಿಟ್ಟಿದ್ದಾರೆ. ಪ್ರಪಂಚ ಮತ್ತು ಧರ್ಮ ಬೇರೆ ಬೇರೆ ಎಂದು ತಿಳಿದವರು ಧರ್ಮದಿಂದ ಪ್ರೀತಿ ಮಾಡಲು ಸಾಧ್ಯವೇ ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ. ಚಿಕ್ಕಂದಿನಿಂದಲೂ ಔಪಚಾರಿಕ ಧರ್ಮವನ್ನು ಹೇಳಿಕೊಟ್ಟು ಈಗ ಧರ್ಮವನ್ನು ಪ್ರೀತಿಸಿ, ಪಾಲಿಸಿ ಎಂದರೆ ಹೇಗೆ ಸ್ವಾಮಿ?
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಊದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.