(www.vknews.in) : ಚುನಾವಣೆ ಬರುವುದನ್ನೇ ಕಾಯುತ್ತಿರುತ್ತಾರೆ. ಚುನಾವಣೆ ದಿನ ಕೆಲವರು ಮತ ಚಲಾಯಿಸುತ್ತಾರೆ, ಕೆಲವರು ಮತ ಚಲಾಯಿಸುವುದಿಲ್ಲ. ನನ್ನ ಸ್ನೇಹಿತ ಮತ ಚಲಾಯಿಸಿ ಹದಿಮೂರು ವರ್ಷಗಳು ಕಳೆದಿವೆ. ಯಾಕಪ್ಪ ವೋಟ್ ಹಾಕಲ್ಲ ಎಂದು ಕೇಳಿದರೆ, ನಾನು ಎಜುಕೇಶನ್ ಲೋನ್ ತೆಗೆದುಕೊಳ್ಳಲು ಬಹಳ ಪ್ರಯತ್ನ ಪಟ್ಟೆ ಆದರೆ ಹಾಳಾದ ವ್ಯವಸ್ಥೆ ನನಗೆ ಲೋನ್ ಸಿಗಲಿಲ್ಲ. ಹಣ ಸಿಕ್ಕಿದ್ದಿದ್ದರೆ ಇಂಜಿನಿಯರ್ ಆಗಿರುತ್ತಿದ್ದೆ. ಈಗ ಗುಲಾಮಗಿರಿ ಕೆಲಸ ಮಾಡಿಕೊಂಡಿದ್ದೇನೆ. ಬಡತನವೆಂಬ ಪೀಡೆ ವಿದ್ಯಾಭ್ಯಾಸ ಮುಂದುವರೆಸಲು ಬಿಡಲಿಲ್ಲ. ಯಾವ ಸರ್ಕಾರ ಬಂದರೇನಂತೆ ಬಡವರು ಶ್ರೀಮಂತರಾಗಲ್ಲ. ಶ್ರೀಮಂತರು ಬಡವರಾಗಲ್ಲ. ಅದಕ್ಕೆ ನಾನು ವೋಟ್ ಹಾಕಲ್ಲ ಎಂದ. ಮತ್ತೆ ಕೆಲವರು ಊರಿಗೆ ಹೋಗಿ ವೋಟ್ ಹಾಕಲು ದುಡ್ಡು ಖರ್ಚಾಗುತ್ತೆ, ಅದಕ್ಕೆ ನಾವು ಎಲ್ಲೂ ಹೋಗಲ್ಲ ಎನ್ನುತ್ತಾರೆ. ಟಿವಿ ನೋಡುತ್ತಾ ಇಡೀ ದೇಶದ ರಾಜಕೀಯದ ಲೆಕ್ಕಾಚಾರ ಹಾಕಿ ನಮಗಿಂತ ಬುದ್ಧಿವಂತ ಜನರು ಯಾರೂ ಇಲ್ಲ ಎಂದು ಕಡಲೆ ಕಾಯಿ ತಿನ್ನುತ್ತಾ ಉಪದೇಶ ಮಾಡುತ್ತಾ ಕಾಲ ಕಳೆದು ಬಿಡುತ್ತಾರೆ.
ಚುನಾವಣೆ ನಾಳೆ ಎಂದರೆ ಹಣದ ಹೆಂಡದ ಕೊಡಿಯೇ ಒಡೆದು ಹೋಗಿರುತ್ತದೆ. ಲೆಕ್ಕಪತ್ರ ಸಾಕ್ಷಿ ಆಧಾರ ಏನೂ ಇಲ್ಲ. ಹಣ ಹಂಚಿದವನಿಗೆ ಕೈಗಳಿಲ್ಲ, ತೆಗೆದುಕೊಂಡವನಿಗೆ ಕಣ್ಣಿಲ್ಲ. ಅಂದರೆ ಯಾವ ಸಬೂತು ಉಳಿಸಲ್ಲ. ಕಳ್ಳರಿಗಿಂತ ಜಾಣ ಕಳ್ಳರಾಗಿ ಹೋಗುತ್ತಾರೆ. ಸುಳ್ಳೂ ಸಹ ನಾಚಿಕೆ ಪಡುವಂತೆ, ಹಣಕ್ಕೆ ಓಟು ಮಾರಿಕೊಳ್ಳಬೇಡಿ, ಹೊಲಸು ತಿನ್ನಬೇಡಿ ಎಂಬ ಮಂತ್ರದ ಫೇಸ್ಬುಕ್ ಪೋಸ್ಟ್ ಸಹ ಹಾಕಿರುತ್ತಾರೆ. ಐದು ವರ್ಷ ಮಾಯವಾಗಿದ್ದ ಲೀಡರುಗಳು ಅವರ ಚಮಚಾಗಳು ಭಿಕ್ಷುಕರಾಗಿ ಬೀದಿಬೀದಿಗಳಲ್ಲಿ ಓಟು ಕೇಳಲು ಬರುತ್ತಾರೆ. ಕಾಲ ಬಂದರೆ ಕತ್ತೆಗೂ ಕೈ ಮುಗಿಯಬೇಕು ಅಂತಾರಲ್ಲ ಇದಕ್ಕೆ ಇರಬೇಕು.
ಎಲೆಕ್ಷನ್ ಡ್ಯೂಟಿಯ ಹೆಸರಲ್ಲಿ ಸರ್ಕಾರಿ ನೌಕರರ ಒಂದು ರೀತಿಯ ಗೋಳು. ಹಳ್ಳಿ ಇರಲಿ ಗುಡ್ಡಗಾಡಿರಲಿ ಒಂದು ರಾತ್ರಿ ಮೊದಲೇ ಹಾಜರಿರಬೇಕು. ದೆವ್ವಗಳ ಕೋಣೆಗಳಂತಿರುವ ಸರ್ಕಾರಿ ಶಾಲೆಗಳು, ಬಿಕೋ ಎನ್ನುತ್ತಿರುವ ಮೈದಾನಗಳು, ಸೊಳ್ಳೆಗಳಿಂದ ಕಚ್ಚಿಸಿಕೊಂಡು ಬೆಳಕು ಯಾವಾಗ ಯಾರಿಯುತ್ತದೋ ಎಂದು ಕಾಯುತ್ತಿರಬೇಕು. ಟಾಯ್ಲೆಟ್ ವ್ಯವಸ್ಥೆ ಕೆಲವು ಕಡೆ ಇರುತ್ತೆ ಕೆಲವು ಕಡೆ ಇರಲ್ಲ. ಮಹಿಳಾ ಸಿಬ್ಬಂದಿಗಳು ಕತ್ತಲೆಯಲ್ಲಿ ಪರದಾಡಿ, ಸುರಕ್ಷಿತವಾಗಿ ರಾತ್ರಿ ಹಗಲು ಕಳೆದರೆ ಸಾಕು ಎಂದು ದೇವರಲ್ಲಿ ಬೇಡುತ್ತಿರುತ್ತಾರೆ. ಕುಡುಕರ ಕಾಟ, ಹಾವುಗಳ ಕಾಟ, ಸೊಳ್ಳೆಗಳ ಕಾಟ, ಅಧಿಕಾರಿಗಳ ಕಾಟ, ಲೋಕಲ್ ಲೀಡರುಗಳ ಕಾಟ. ಒಂದಲ್ಲ ಎರಡಲ್ಲ ತಲೆ ಮೇಲೆ ಜವಾಬ್ದಾರಿಯ ಗಂಟು ಮೂಟೆ ಹೊತ್ತುಕೊಂಡು ತುಟಿಕ್ ಪಿಟಿಕ್ ಎನ್ನದೆ ಕೈಕಟ್ಟಿ ಬಾಯಿಮುಚ್ಚಿ ಎಲೆಕ್ಕ್ಷನ್ ಡ್ಯೂಟಿ ನಿಭಾಯಿಸಿ ಹಿಂತಿರುಗಬೇಕಾಗುತ್ತದೆ.
ಚುನಾವಣೆ ಮುಗಿದ ದಿನ ಏಜೆಂಟರಿಗೆ ದಿನಗೂಲಿ ಮತ್ತು ಎಣ್ಣೆ ಪಾರ್ಟಿ ಸಿದ್ಧವಾಗಿರುತ್ತದೆ. ಅಬ್ಬಬ್ಬಾ… ಪೀಡೆ ತೊಲಗಿತು ಮಜಾ ಮಾಡಿರೋ ಎಂದು ಹೇಳಿ ಮಧ್ಯವರ್ತಿಗಳು ಅರ್ಧ ಹಣ ಹಂಚಿ ಅರ್ಧ ಹಣವನ್ನು ನುಂಗಿ ಬಿಡುತ್ತಾರೆ. ಒಬ್ಬ ಎಂ.ಎಲ್.ಎ. ೫೦ ರಿಂದ ೧೦೦ ಕೋಟಿ ಖರ್ಚು ಮಾಡುತ್ತಾನೆ. ಒಂದು ಓಟಿಗೆ ೩೦೦೦ ಸಾವಿರ. ೨೨೪ ಎಂ.ಎಲ್.ಎ. ಸ್ಥಾನಗಳಿಗೆ ಎಷ್ಟು ಹಣ ಖರ್ಚು ಆಗಬಹುದು ನೀವೇ ಲೆಕ್ಕ ಹಾಕಿ. ಚುನಾವಣಾ ಆಯೋಗ ೪೦ ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಬಾರದು ಎಂದು ಹೇಳುತ್ತದೆ. ಆದರೆ ಅದು ಕೇವಲ ಹೆಸರಿಗೆ ಮಾತ್ರ. ನಿಜ ಏನು ಎನ್ನುವುದು ಎಲ್ಲರಿಗೂ ಗೊತ್ತು. ಕಳ್ಳತನ ಮಾಡಿ ಸಿಕ್ಕಿಬಿದ್ದವನು ಮಾತ್ರ ಕಳ್ಳ. ಆದರೆ ಇಲ್ಲಿ ಯಾರೂ ಸಿಕ್ಕಿಬೀಳುವುದಿಲ್ಲ.
ಚುನಾವಣೆಯನ್ನು ಇಷ್ಟೊಂದು ದುಬಾರಿ ಮಾಡಿದವರು ಯಾರು ? ಮತ್ತು ಏಕೆ ? ರಾಜಕೀಯ ವ್ಯಕ್ತಿಗಳೇ ಇದರ ರೂವಾರಿಗಳು. ಬಡವರು, ಸಾಮಾನ್ಯ ಜನರು, ಸತ್ಯವಂತರು, ನಿಷ್ಪಕ್ಷಪಾತಿಗಳು, ಸಮಾಜಸೇವಾ ಮನೋಭಾವ ಉಳ್ಳವರು, ದೇಶದ ಹಿತಕ್ಕಾಗಿ ಯೋಚಿಸುವವರು ಯಾರೂ ಚುನಾವಣೆಗೆ ನಿಲ್ಲಬಾರದು. ಅದಕ್ಕೆ ಚುನಾವಣೆಗಳನ್ನು ಅಷ್ಟೊಂದು ದುಬಾರಿ ಮಾಡಿಬಿಡಲಾಗಿದೆ.
ಮತಗಳನ್ನು ಒಡೆದು ತಮ್ಮ ಪಕ್ಷವನ್ನು, ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದು ಸಹ ಒಂದು ಕಲೆ. ಕುತಂತ್ರ. ಜಾತಿಪಾತಿಯ ಸಂಪೂರ್ಣ ಲೆಕ್ಕಾಚಾರ ಹಾಕಲಾಗುತ್ತದೆ. ಹಣ ಚೆಲ್ಲಿ ಆತ್ಮಸಾಕ್ಷಿಗಳನ್ನು ಖರೀದಿಸಲಾಗುತ್ತದೆ. ಪ್ರಚಾರ ತಂತ್ರವನ್ನು ರೂಪಿಸಲಾಗುತ್ತದೆ. ಮಾಧ್ಯಮಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಕುದುರೆ ವ್ಯಾಪಾರ ಮಾಡಲಾಗುತ್ತದೆ. ಪರದೆ ಹಿಂದೆ ಎಲ್ಲಾ ಪಕ್ಷದವರು ಗುಟ್ಟಾಗಿ ಮಾತನಾಡಿಕೊಳ್ಳುತ್ತಾರೆ. ಬರಹಗಾರರು, ಸಿನಿಮಾ ನಟರು, ಪ್ರಭಾವಿ ವ್ಯಕ್ತಿಗಳು ಮತ್ತು ಸ್ವಾಮೀಜಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಸ್ವಾರ್ಥಕ್ಕೋಸ್ಕರ ಧರ್ಮದ ಆಸರೆಯನ್ನು ತೆಗೆದುಕೊಳ್ಳಲಾಗುತ್ತದೆ. ದೇವರಿಗೂ ಚುನಾವಣೆಗೂ ಏನು ಸಂಬಂಧ ? ಆದರೆ ಬಹಳ ಚಾಣಾಕ್ಷತನದಿಂದ ಷಡ್ಯಂತ್ರ ರಚಿಸಿ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತದೆ. ನಿರುದ್ಯೋಗಿ ಯುವಕರನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗುತ್ತದೆ.
ಕ್ಲೈಮ್ಯಾಕ್ಸ್ ಇಷ್ಟೆ – ಪುನಃ ಐದು ವರ್ಷ ದೇಶದ ಅಂದರೆ ಜನರ ಸಂಪತ್ತನ್ನು ಲೂಟಿ ಮಾಡಲಾಗುತ್ತದೆ. ಧರ್ಮದ ಹೆಸರಿನಲ್ಲಿ ರಕ್ತ ಹರಿಸಲಾಗುತ್ತದೆ. ಸೋತವನು ಪಾಪರ್ ಆಗುತ್ತಾನೆ, ಗೆದ್ದವನು ಬಿಳಿಕಾಲರ್ ಲೋಫರ್ ಆಗುತ್ತಾನೆ ಎಂದು ಜನರು ಹೇಳುತ್ತಾರೆ.
ದೇಶದಲ್ಲಿ ಬದಲಾವಣೆ ಬರಲ್ಲ. ಯಾಕೆ ಗೊತ್ತಾ? ಯಾರಾದರೂ ಬಂದು ಬದಲಾವಣೆ ಮಾಡುತ್ತಾರೆ ಎಂದು ನಾವು ಕಾಯುತ್ತಾ ಕೈಕಟ್ಟಿ ಕುಳಿತಿದ್ದೇವೆ. ನಾವೇ ಬದಲಾಗಬೇಕು, ಬದಲಾವಣೆ ತರಲು ಪ್ರತ್ನಿಸಬೇಕು ಎಂಬ ಮನಸ್ಥಿತಿ ನಮ್ಮಲ್ಲಿಲ್ಲ. ಎದೆಯಲ್ಲಿ ಆ ಬೆಂಕಿ ಯಾವಾಗ ಚಿಗುರುತ್ತೋ ಅಂದೇ ಕ್ರಾಂತಿ.
–ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.