(www.vknews.in)
ಕಳೆದು ಹೋಗಿದ್ದೇನೆ ನಾನು……
ದೂರದೂರಿನಲ್ಲಿ ಅಪ್ಪ ಅಮ್ಮ, ನಗರದಲ್ಲಿ ಹೆಂಡತಿ ಮಕ್ಕಳು, ಪ್ರವಾಸೋದ್ಯಮ ಉದ್ಯೋಗದಲ್ಲಿ ನಾನು,
ಕಳೆದು ಹೋಗಿದ್ದೇನೆ ನಾನು……..
ಗಾಂಧಿಗಿರಿ, ಬಸವ ಧರ್ಮ, ಅಂಬೇಡ್ಕರ್ ವಾದ, ಮನುಸ್ಮೃತಿ, ಹಿಂದೂ ಧರ್ಮ, ಭಾರತೀಯತೆಯ ಗೊಂದಲದಲ್ಲಿ,
ಕಳೆದು ಹೋಗಿದ್ದೇನೆ ನಾನು………
ಪ್ರೀತಿಯಾವುದೋ, ದ್ವೇಷವಾವುದೋ, ವಂಚನೆಯಾವುದೋ, ಶಾಂತಿಯಾವುದೋ, ಅಸಹನೆಯಾವುದೋ, ಅರ್ಥವಾಗದೆ,
ಅಣ್ಣನ ಹುಡುಕಾಟದಲ್ಲಿ, ತಂಗಿಯ ನೆನಪಿನಲ್ಲಿ, ಸ್ನೇಹಿತನ ವಂಚನೆಯಲ್ಲಿ, ಸಂಬಂದಿಗಳ ಸಾರ್ಥದಲ್ಲಿ, ನೆರೆಹೊರೆಯವರ ಕುಹುಕದಲ್ಲಿ,
ಕಳೆದು ಹೋಗಿದ್ದೇನೆ ನಾನು…….
ವೇಗದ ಬದುಕಿನಲ್ಲಿ, ಕೆಲಸದ ಒತ್ತಡದಲ್ಲಿ, ನಿದ್ದೆಯ ಮಂಪರಿನಲ್ಲಿ, ಊಟದ ಕಲಬೆರಕೆಯಲ್ಲಿ, ಅನಾರೋಗ್ಯದ ಭಯದಲ್ಲಿ,
ಬದುಕಿನ ಅಲೆದಾಟದಲ್ಲಿ, ನೆಮ್ಮದಿಯ ಹಂಬಲದಲ್ಲಿ, ಅಕ್ಷರಗಳ ನೆರಳಿನಲ್ಲಿ, ಜೀವನದ ಅವಶ್ಯಕತೆಯಲ್ಲಿ, ಕಳೆದೇ ಹೋಗಿದ್ದೇನೆ…..
ಹುಡುಕಿಕೊಡುವವರಾರು ? ಎಲ್ಲರೂ ನನ್ನಂತೆ ಕಳೆದು ಹೋದವರೇ !!
ಎಲ್ಲವನ್ನೂ ಪಡೆದೆ, ನನ್ನನ್ನು ನಾನು ಕಳೆದುಕೊಂಡೆ, ಈಗ , ಎಲ್ಲವನ್ನೂ ಕಳೆದುಕೊಂಡು, ನನ್ನನ್ನು ಮತ್ತೆ ಪಡೆಯುವಾಸೆ……
ಎಂತಹ ವಿಪರ್ಯಾಸ, ಎಂತಹ ಮರ್ಮ, ಎಂತಹ ನಿಗೂಢ, ಎಂತಹ ತಿರುವುಗಳು. ಎಂತಹ ಕನವರಿಕೆಗಳು,……..
ಎಲ್ಲೋ ಎಡವುತ್ತಿದ್ದೇವೆಯೇ ನಾವು ?
ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ? ಅಥವಾ, ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ ?
ಅಥವಾ,
ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯೇ ? ಅಥವಾ, ಬದುಕಿನ ಅರ್ಥವೇ ಬದಲಾಗುತ್ತಿದೆಯೇ ?
ನಾವೇ ಭ್ರಮೆಗೊಳಗಾಗುತ್ತಿದ್ದೇವೆಯೇ ? ಅಥವಾ, ಅಭಿವೃದ್ಧಿ ಎಂದರೆ ಏನೆಂದೇ ತಿಳಿಯುತ್ತಿಲ್ಲವೇ ?
ನಿಜಕ್ಕೂ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದೇವೆಯೇ ? ಅಥವಾ, ಇದೇ ಬದುಕಿನ ಸಹಜ ಕ್ರಮವೇ ?
ಎಲ್ಲಾ ಕಾಲಘಟ್ಟಗಳಲ್ಲೂ ಈ ತಳಮಳ ಇದ್ದದ್ದೆಯೇ ? ಅಥವಾ, ಸತ್ಯದ ಹುಡುಕಾಟವೇ ಅಂತಿಮ ಧ್ಯೆಯವೇ ?
ಇದೆಲ್ಲವನ್ನು ಮೀರಿದ ಇನ್ನೇನಾದರೂ ಇದೆಯೇ ?
ಕಾಡುತ್ತಲೇ ಇರುವ ಗೊಂದಲದ ಕಾಡಿನಲಿ, ಅಲೆಯುತ್ತಲೇ ಇರುವ ಮನದ ಸಾಗರದಲಿ, ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸಿದರೆ, ಬದುಕು ಒಂದಷ್ಟು ಸಹನೀಯವಾಗಬಹುದು, ಜೀವನಮಟ್ಟ ಸುಧಾರಿಸಬಹುದು, ಕ್ರಿಯಾತ್ಮಕ ಸಾಧನೆಗಳು ಸಾಧ್ಯವಾಗಬಹುದು,
ಆ ದಿನಗಳ ನಿರೀಕ್ಷೆಯಲ್ಲಿ ………………….
— ವಿವೇಕಾನಂದ ಎಚ್.ಕೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.