(www.vknews.in) : “ಉರಿಗೌಡ ಮತ್ತು ನಂಜೇಗೌಡ ಮತದಾನ ಮಾಡಲಿಲ್ಲ, ಅದಕ್ಕೆ ಬಿಜೆಪಿ ಸೋತು ಹೋಯಿತು” ಎಂಬ ಲೇವಡಿ ಪೋಸ್ಟನ್ನು ಕಾಂಗ್ರೆಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷದವರನ್ನು ರೇಗಿಸಲು ಹರದಾಡಿಸಿದರು. ಮೈಸೂರು ಬೆಂಗಳೂರು ಹೆದ್ದಾರಿಯನ್ನು ಉದ್ಘಾಟಿಸಲು ಪ್ರಧಾನಿ ಮೋದಿಜಿಯವರು ಬಂದಾಗ ಉರಿಗೌಡ ನಂಜೇಗೌಡರ ಪೋಸ್ಟರನ್ನು ಹೆದ್ದಾರಿ ಬಾಗಿಲಿಗೆ ಹಾಕಿಸಲಾಗಿತ್ತು. ಅಂದಿನ ಬಿಜೆಪಿ ಮಂತ್ರಿಗಳಾದಂತಹ ಅಶ್ವಥನಾರಾಯಣ, ಮುನಿರತ್ನ ಮತ್ತು ಸಿಟಿ ರವಿಯವರು ಉರಿಗೌಡ ಮತ್ತು ನಂಜೇಗೌಡ ಬಗ್ಗೆ ಎಲ್ಲಿಲ್ಲದ ಅಪಾರ ಪ್ರೀತಿ ಮತ್ತು ಗೌರವ ವ್ಯಕ್ತಪಡಿಸಿದರು.
ವಿವಿಧ ಸಂದರ್ಭಗಳಲ್ಲಿ ಉರಿಗೌಡ ಮತ್ತು ನಂಜೇಗೌಡ ಮೈಸೂರು ಸಂಸ್ಥಾನದ ಪ್ರಗತಿಗೆ ಬಹಳ ಶ್ರಮ ಪಟ್ಟಿದ್ದಾರೆ, ಟಿಪ್ಪು ಸುಲ್ತಾನನ ಕೊಡುಗೆ ಏನೂ ಇಲ್ಲ, ಟಿಪ್ಪು ಸುಲ್ತಾನನ್ನು ಕೊಂದದ್ದೇ ಉರಿಗೌಡ ಮತ್ತು ನಂಜೇಗೌಡ ಎಂಬ ಕಥೆಯನ್ನು ಸೃಷ್ಟಿಯೇ ಮಾಡಿಬಿಟ್ಟರು. ಮುನಿರತ್ನ ಸಿನಿಮಾ ಮಾಡಲು ಸಿದ್ಧರಾಗಿ ಪೋಸ್ಟರ್ ಬಿಡುಗಡೆ ಮಾಡಿದರು. ಆ ಪೋಸ್ಟರ್ ಬಹಳ ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿತು. ಆಗ ಆಲ್ಟ್ ನ್ಯೂಸ್ ಜುಬೇರ್ ಒಂದು ಟ್ವೀಟ್ ಮಾಡಿದರು – ಪೋಸ್ಟರ್ನಲ್ಲಿರುವ ಉರಿಗೌಡ ಮತ್ತು ನಂಜೇಗೌಡರ ಚಿತ್ರಗಳು ತಮಿಳುನಾಡಿನ ಪಾಂಡಿಯಾರ್ ಸಹೋದರರದ್ದು. ಪೆರಿಯಮರುಧು ಮತ್ತು ಚಿನ್ನಮರುಧು ಎಂಬ ಸಹೋದರರು ಸಿವಗಂಗಾ ಸಂಸ್ಥಾನವನ್ನು ಆಳುತ್ತಿದ್ದರು.
ಬ್ರಿಟಿಷರನ್ನು ಹಿಮ್ಮೆಟಿಸಲು ಹೋರಾಡಿದರು. ೧೮೦೧ ನೇ ಇಸವಿಯಲ್ಲಿ ತಿರುಪ್ಪಾತೂರ್ ಕೋಟೆಯಲ್ಲಿ ಅವರಿಗೆ ಬ್ರಿಟಿಷರು ನೇಣುಹಾಕಿದರು. ತಮಿಳುನಾಡಿನ ಪಾಂಡಿಯಾರ್ ಸಹೋದರರ ಭಾವ ಚಿತ್ರದ ರೂಪುರೇಷೆಗಳನ್ನು ಕದ್ದು, ಕಾಲ್ಪನಿಕ ಉರಿಗೌಡ ನಂಜೇಗೌಡ ಎಂಬ ಪಾತ್ರಗಳನ್ನು ಹುಟ್ಟುಹಾಕಿದರೆ ಮಂಡ್ಯ ಜನರು ನಂಬುವರೇ? ಇದೆಲ್ಲಾ ನಾಟಕ ಚುನಾವಣೆ ಗೆಲ್ಲಲು ಮಾಡುತ್ತಿರುವ ಕುತಂತ್ರ ಎಂದು ಅರಿತುಕೊಂಡರು. ಮುಸಲ್ಮಾನರು ಮತ್ತು ಗೌಡರು ಹೊಡೆದಾಡಬೇಕು ವೋಟ್ ಬ್ಯಾಂಕ್ ನಮ್ಮದಾಗಬೇಕು ಎಂಬುದು ಬಿಜೆಪಿ ಯವರ ಗುರಿಯಾಗಿತ್ತು. ಒಕ್ಕಲಿಗರ ಸ್ವಾಮಿಜಿ ನಿರ್ಮಲಾನಂದನಾಥಸ್ವಾಮಿಯವರ ಬಳಿ ವಿಷಯ ತಲುಪಿತು. ಮುನಿರತ್ನರವರಿಗೆ ಕರೆದು ಬುದ್ಧಿವಾದ ಹೇಳಿದರು. ಆಗ ಅವರು ಸಿನಿಮಾ ಮಾಡುವುದನ್ನು ಕೈಬಿಟ್ಟರು.
ರಷ್ಯಾ ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಸಿನಿಮಾ ತಯಾರಾಗುವುದು ಭಾರತ ದೇಶದಲ್ಲೆ. ಮೊದಲಿನಿಂದಲೂ ಸಿನಿಮಾ ಮನರಂಜನೆಯ ಮಾಧ್ಯಮವಾಗಿ ಬೆಳೆದು ನಿಂತಿದೆ. ಸಾಮಾಜಿಕ ಕಥೆಗಳು ವ್ಯಥೆಗಳು, ಪ್ರೇಮ ಕಥೆಗಳು, ನೈಜ ಚರಿತ್ರೆಗಳು, ಕಾಲ್ಪನಿಕ ಡ್ರಾಮಾಗಳು, ವೈಜ್ಞಾನಿಕ ವಿಚಾರಗಳು, ಮೂಢನಂಬಿಕೆಗಳು, ಆಕ್ಷನ್ ಕಟ್ಗಳು, ಇತ್ಯಾದಿ. ಅನೇಕ ರೀತಿಯ ಸಿನಿಮಾಗಳು, ಟಿವಿ ಸೀರಿಯಲ್ ಗಳು, ಡಾಕ್ಯುಮೆಂಟರಿಗಳು, ವೆಬ್ ಸೀರೀಸ್ ಗಳು ಹುಟ್ಟುತ್ತಿವೆ ಮತ್ತು ಸಾಯುತ್ತಿವೆ. ಸಿನಿಮಾಗಳು ಜನರ ಮನಸ್ಸುಗಳ ಮೇಲೆ ಪ್ರಭಾವ ಬೀರುತ್ತಿವೆ. ಅದರ ಉಪಯೋಗ ಅಥವಾ ದುರುಪಯೋಗ ವೈಯಕ್ತಿಕ ಆಯ್ಕೆ.
ಸಿನಿಮಾ ಕ್ಲಿಕ್ ಆಗಲಿ, ನಮಗೆ ಹಣ ಹರಿದು ಬರಲಿ ಎಂಬ ಹಾವಳಿಯಲ್ಲಿ ಸ್ತ್ರೀ ಪಾತ್ರಗಳನ್ನು ಮತ್ತು ಸೆನ್ಸಿಟಿವ್ ವಿಷಯಗಳನ್ನು ನಿರ್ಮಾಪಕರು ಮತ್ತು ನಿರ್ದೇಶಕರು ಕೆಲವೊಮ್ಮೆ ಸಾಮಾಜಿಕ ಜವಾಬ್ದಾರಿಯನ್ನು ಮರೆತು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದುಂಟು. ಅಥವಾ ಅವರಿಗೆ ಹಣಕೊಟ್ಟು ಮಾಡಿಸಲಾಗುತ್ತದೆ. ವದಂತಿಗಳಿಗೆ ಜನರು ಮೋಸ ಹೋಗುತ್ತಾರೆ. ಮಾಧ್ಯಮಗಳನ್ನು ಖರೀದಿಸಿ ಸುದ್ದಿಗಳಿಗೆ ತಮಗೆ ಬೇಕಾದ ಬಣ್ಣ ಬಳಿದು ಲಂಗುಲಗಾಮಿಲ್ಲದೆ ಹರಿದಾಡಿಸಬಹುದು. ಅಧಿಕಾರದ ಬಲ, ತೋಳು ಬಲ, ಹಣದ ಬಲ ಮತ್ತು ಧರ್ಮದ ಹೆಸರಿನ ಬಲ ಎಲ್ಲಾ ರೀತಿಯ ಆಟಗಳನ್ನು ಆಡಿಸುವ ಬಲವನ್ನು ಹೊಂದಿರುತ್ತದೆ. ಬಲಿಪಶುಗಳಾಗುವುದು ಮಾತ್ರ ಜನಸಾಮಾನ್ಯರು.
ಸದ್ದಾಂ ಹುಸೇನ್ ಹೆಸರಿನ ಕನ್ನಡ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿತ್ತು. ಸಮಾಜದ ಬಗ್ಗೆ ಕಾಳಜಿಯುಳ್ಳ ಗುರುಹಿರಿಯರು ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಮಾತನಾಡಿ ಸಿನಿಮಾದ ಹೆಸರನ್ನು ಬದಲಾಯಿಸಲು ವಿನಂತಿಸಿದರು. ನಂತರ ಅದು ಸುಲ್ತಾನ್ ಹೆಸರಲ್ಲಿ ತೆರೆ ಕಂಡಿತು. ಸಮಾಜದಲ್ಲಿ ಗೊಂದಲಗಳು ಉಂಟಾದಾಗ ಗುರುಹಿರಿಯರು ಮಧ್ಯೆ ಪ್ರವೇಶಿಸಿ ಅನ್ಯ ಧರ್ಮೀಯರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ನಿರ್ಮಲಾನಂದನಾಥ ಸ್ವಾಮೀಜಿಯರು ಮಾಡಿದ್ದೂ ಅದೆ. ಕರ್ನಾಟಕದ ಜನರ ಶಾಂತಿ ಹಾಳಾಗಬಾರದು ಎಂದು ಕ್ರಮ ತೆಗೆದುಕೊಂಡರು.
ಸಿನಿಮಾರಂಗವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಸದ್ಬಳಕೆ ಮತ್ತು ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವುದುಂಟು. ಹಿಟ್ಲರ್ ಕಾಲದಲ್ಲಿ ಪ್ರೊಪಗಾಂಡಾ ಮಾಡಲು ಸಿನಿಮಾಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಯಿತು. ಹಿಟ್ಲರ್ ನ ಆತ್ಮೀಯ ಪಾಲ್ ಜೋಸೆಫ್ ಗೊಬೆಲ್ಸ್ ಅನೇಕ ಚಲನ ಚಿತ್ರಗಳನ್ನು ಮಾಡಿಸಿದ. ನಾಝಿಗಳು ಸಿನಿಮಾಗಳಿಂದ ಪ್ರೇರಿತರಾದರು. ಸುಳ್ಳುಗಳನ್ನು ಸತ್ಯ ಎಂದು ನಂಬಿಕೊಂಡರು. ಸರ್ಕಾರಿ ಪ್ರೇರಿತ ಹತ್ಯಾಕಾಂಡಕ್ಕೆ ಕೈ ಜೋಡಿಸಿದರು. ಗೊಬೆಲ್ಸ್ ಪ್ರಕಾರ ಎಲ್ಲಾ ಕಡೆ ಸುಳ್ಳನ್ನು ಸತ್ಯ ನಾಚಿಸುವಂತೆ ಹರಡಬೇಕು, ಆಗ ಜನರು ಸುಳ್ಳನ್ನು ಸತ್ಯ ಎಂದು ನಂಬುತ್ತಾರೆ.
ಸತ್ಯ-ಸುಳ್ಳುಗಳ ನಡುವೆ ತಮ್ಮ ನೀಚ ಗುರಿಯನ್ನು ಸಾಧಿಸಿಕೊಳ್ಳಬಹುದು ಎಂಬುದಾಗಿತ್ತು. ಸುಮಾರು ೧೦೮೪ ಸಿನಿಮಾಗಳನ್ನು ನಿರ್ಮಿಸಲಾಯಿತು. ಸಿನಿಮಾಗಳು ಪರೋಕ್ಷವಾಗಿ ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾದವು. ಭಾರತದಲ್ಲೂ ಸಿನಿಮಾ ಪ್ರಯೋಗಾಲಯ ಪ್ರಾರಂಭವಾಗಿದೆ. ವೆಬ್ ಸೀರಿಸ್ , ಟಿವಿ ಸೀರಿಯಲ್ಗಳು ಪುಸ್ತಕಗಳು ಮತ್ತು ಸಿನಿಮಾಗಳ ಮುಖಾಂತರ ಜನರ ಮನಸ್ಸುಗಳಲ್ಲಿ ವಿಷಬೀಜ ಬಿತ್ತುವುದು, ಬರಹಗಾರರಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ಮಾಧ್ಯಮಗಳಿಗೆ ಅಷ್ಟು ದೊಡ್ಡ ವಿಷಯವೇನಲ್ಲ. ರೀಲ್ ಗಳು, ವಾಟ್ಸ್ ಆಪ್ ಯೂನಿವರ್ಸಿಟಿಗಳು, ಸಾಮಾಜಿಕ ಜಾಲತಾಣಗಳು 24×7 ಕಾರ್ಯನಿರತವಾಗಿವೆ.
೧೦೦ ವರ್ಷಗಳಲ್ಲಿ ಹಾಲಿವುಡ್ ಜಗತ್ತಿಗೆ ಯಾವ ರೀತಿಯ ಸಿನಿಮಾಗಳನ್ನು ಪ್ರಸ್ತುತ ಪಡಿಸುತ್ತಿದೆ ಎಂಬುದರ ಬಗ್ಗೆ ಸ್ವಲ್ಪ ಗಮನ ಹರಿಸಿ. ಪ್ರಪಂಚದಲ್ಲಿ ನಮಗಿಂತ ಬುದ್ಧಿವಂತರು ಯಾರೂ ಇಲ್ಲ, ನಾವೇ ಬಲಶಾಲಿಗಳು, ತಂತ್ರಜ್ಞಾನದಲ್ಲಿ ನಮ್ಮನ್ನು ಮೀರಿಸುವವರು ಯಾರೂ ಇಲ್ಲ, ನಮಗಿಂತ ಪ್ರಬಲಶಾಲಿ ಸೈನ್ಯ ಯಾರದೂ ಇಲ್ಲ. ಇತ್ಯಾದಿ. ಸಿನಿಮಾದ ಕಥೆ ಹೇಗಿರುತ್ತದೆ ಎಂದರೆ ಒಬ್ಬನೇ ಒಬ್ಬ ಸೈನಿಕ ಇಡೀ ಪ್ರಪಂಚವನ್ನು ಅನಾಹುತಗಳಿಂದ ಕಾಪಾಡಿಬಿಡುತ್ತಾನೆ. ಯುದ್ಧಗಳನ್ನು ತಡೆಹಿಡುದುಬಿಡುತ್ತಾನೆ. ಇಡೀ ಪ್ರಪಂಚ ದಂಗು ಬೀಳುವಷ್ಟು ಅನ್ವೇಷಣೆಗಳನ್ನು ಮಾಡಿ ಬಿಡುತ್ತಾನೆ. ಯಾರೂ ಸಾಧಿಸಲಸಾಧ್ಯವಾದುದನ್ನು ಸಾಧಿಸಿ ಜಯಗೊಳಿಸಿಬಿಡುತ್ತಾನೆ.
ಎಲ್ಲದರಲ್ಲೂ ಪಾಶ್ಚಿಮಾತ್ಯ ದೇಶಗಳೇ ನಂಬರ್ ಒನ್ ಎಂದು ಬಿಂಬಿಸಲಾಗುತ್ತದೆ. ಈ ಪ್ರಾಯೋಜಿತ ಪ್ರಾಪಗಾಂಡಗಳಿಗೆ ಇತರೆ ದೇಶ ಗಳ ಜನರು ಇಂದೂ ಸಹ ಬಿಳಿಜನರೇ ಪ್ರಬಲರು ಎಂದು ಭಾವಿಸುತ್ತಾರೆ. ಇಂಗ್ಲಿಷ್ ಸಂಸ್ಕೃತಿ ಯ ಪ್ರಾಬಲ್ಯ ಯಾವ ರೀತಿ ಬೇರೂರಿದೆ ಎಂದರೆ ಪ್ರತಿ ಆಚಾರವಿಚಾರದಲ್ಲೂ ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹಿಂಬಾಲಿಸುತ್ತೇವೆ. ಅವರೇ ಉತ್ತಮರು ಎಂಬ ಕೀಳರಿಮೆ ತಿಳಿದೋ ತಿಳಿಯದೋ ನಮ್ಮನ್ನು ಆವರಿಸಿದೆ.
ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲೆ ಅನೇಕ ಪ್ರಾಯೋಜಿತ ಹಾಲಿವುಡ್ ಸಿನಿಮಾಗಳು ಬಂದವು. ಮುಸಲಮಾನರೆಲ್ಲರೂ ಭಯೋದ್ಪಾದಕರು ಅವರಿಂದ ಮುಕ್ತಿ ಪಡೆಯಲು ಪಾಶ್ಚಿಮಾತ್ಯ ಪ್ರಬಲ ರಾಷ್ಟ್ರಗಳಿಂದ ಮಾತ್ರ ಸಾಧ್ಯ ಎಂದು ತೋರಿಸಲಾಯಿತು. ಆದರೆ ಮುಸ್ಲಿಂ ಭಯೋದ್ಪಾದಕರು 6% ಇದ್ದರೆ ಉಳಿದ 94% ಭಾಗ ಮುಸ್ಲಿಮೇತರರು ಆಗಿದ್ದರೆ. ಲ್ಯಾಟಿನೋಸ್ ೪೨%, ಎಕ್ಸ್ಟ್ರೀಮ್ ಲೆಫ್ಟ್ ವಿಂಗ್ ಗ್ರೂಪ್ಸ್ ೨೪%, ಯಹೂದಿ ಎಕ್ಸ್ಟ್ರೀಮ್ಮಿಸ್ಟ್ ೭%, ಕಮ್ಯುನಿಸ್ಟ್ ೫% ಮತ್ತು ಉಳಿದ ಭಯೋದ್ಪಾದಕರ ಸಂಘಟನೆಗಳು ೧೬% ಭಾಗವಾಗಿದ್ದಾರೆ. ಭಾರತದಲ್ಲಿ ೬೪ ಭಯೋದ್ಪಾದಕರ ಸಂಘಟನೆಗಳಿವೆ. ಮಣಿಪುರದಲ್ಲೇ ೩೪ ಸಂಘಟನೆಗಳಿವೆ. ಭಯೋದ್ಪಾದಕರು ಯಾವುದೇ ದೇಶದವರಾಗಿರಲಿ, ಯಾವುದೇ ಜಾತಿಗೆ ಸೇರಿದವರಾಗಿರಲಿ ಅವರು ಭಯೋದ್ಪಾದಕರೇ. ಭಯೋದ್ಪಾದಕರ ಧರ್ಮವಿಲ್ಲ.
ಏಕೆಂದರೆ ಯಾವುದೇ ಧರ್ಮ ನೀವು ಅಮಾಯಕರ ಕೊಲೆ ಮಾಡಿ ಎಂದು ಹೇಳುವುದಿಲ್ಲ. ನಾಲ್ಕು ದಿನದ ಪ್ರಪಂಚದಲ್ಲಿ ಶಾಂತಿಯಿಂದ ಬದುಕುವುದನ್ನು ಕಲಿತುಕೊಳ್ಳಬೇಕು. ತಮ್ಮ ಕುತಂತ್ರಗಳಿಗೆ ಧರ್ಮದ ಹಣೆಪಟ್ಟಿ ಕಟ್ಟಿ ಧರ್ಮಗಳ ಹೆಸರನ್ನು ಬಲಿ ತೆಗೆದುಕೊಳ್ಳುವುದು ಸರಿಯಲ್ಲ. ಶ್ರೀ ಕೃಷ್ಣ ಯುದ್ಧ ಮಾಡಿದ್ದು ನ್ಯಾಯಕ್ಕಾಗಿ. ಪ್ರವಾದಿವರ್ಯರು ಯುದ್ಧ ಮಾಡಿದ್ದೂ ನ್ಯಾಯಕ್ಕಾಗಿ. ಅದಕ್ಕೆ ತನ್ನದೇ ಆದ ಚರಿತ್ರೆ ಇದೆ. ನಕ್ಸಲರ, ಸಿಖ್ಖರ, ತಮಿಳರ, ಕಾಶ್ಮೀರಿಗಳ, ಮಣಿಪುರಿಗಳ, ಅಸ್ಸಾಮಿಗಳ, ಹಿಂದೂ-ಮುಸಲ್ಮಾನರ,ತಾಲಿಬಾನಿಗಳ, ಕೆಲ ಉಗ್ರ ಸಂಘಟನೆಗಳ ಹೋರಾಟದ ಫಲ ಏನಾಯಿತು, ಏನಾಗುತ್ತಿದೆ ಎಂಬುದಕ್ಕೆ ಪ್ರಪಂಚ ಸಾಕ್ಷಿಯಾಗುತ್ತಿದೆ.
ಕಗ್ಗೊಲೆಗಳಿಂದ ಶಾಂತಿ ಸಿಗುವುದಿಲ್ಲ. ಮಾರಣಹೋಮ ಮಾರಣಹೋಮವನ್ನು, ಯುದ್ಧ ಯುದ್ಧವನ್ನು ಸೃಷ್ಟಿಸುತ್ತದೆ. ನಷ್ಟ ಯಾರಿಗೆ ? ಜನಸಾಮಾನ್ಯರಿಗೆ ಮಾತ್ರ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರಾಜಕೀಯಾಟದಲ್ಲಿ ಜನಸಾಮಾನ್ಯರ ಗೋಳು ಕೇಳುವವರಾರು? ಇರಾಕ್, ಅಫ್ಘಾನಿಸ್ತಾನ, ಸಿರಿಯಾ, ಯೆಮನ್, ದೇಶಗಳಲ್ಲಿ ೯೩೭೦೦೦ ಅಮಾಯಕ ಜನರನ್ನು ಕೊಂದವರನ್ನು ಯಾರು? ಮೊದಲನೆಯ ಮಹಾಯುದ್ಧದಲ್ಲಿ ೧೬ ಮಿಲಿಯನ್ ಜನರ ಕೊಲೆಗಾರರು ಯಾರು ? ೨ ನೇ ಮಹಾಯುದ್ಧದಲ್ಲಿ ಸೋವಿಯತ್ ಒಕ್ಕೂಟ, ಜರ್ಮನಿ, ಜಪಾನ್, ಬ್ರಿಟನ್ ದೇಶಗಲ್ಲಿ ಕೇವಲ ಸೈನ್ಯದ ಜನರೇ ಸತ್ತಿಲ್ಲ. ಲಕ್ಷಾಂತರ ಅಮಾಯಕ ಜನರೂ ಇದ್ದರು. ಮೂರನೇ ಮಹಾಯುದ್ಧಕ್ಕೂ ಪ್ರಪಂಚ ಸಚ್ಚಾಗುತ್ತಿದೆ. ರಷ್ಯಾ-ಯುಕ್ರೇನ್ ಯುದ್ಧದ ದಿಕ್ಕು ಯಾವ ತಿರುವು ಪಡೆಯುತ್ತದೋ ..! ಇಡೀ ಪ್ರಪಂಚದ ಮೇಲೆ ನಮ್ಮ ಪ್ರಾಬಲ್ಯ ಇರಬೇಕು ಎಂದು ದೇಶಗಳ ನಡುವೆ ಷಡ್ಯಂತ್ರಗಳು ನಡೆಯುತ್ತಿವೆ.
ಗಲ್ಫ್ ದೇಶಗಳಿಂದ ಸಂಪತ್ತು ಲೂಟಿ ಮಾಡಬೇಕಿತ್ತು. ಅದಕ್ಕೆ ಇರಾಕ್ ದೇಶದಲ್ಲಿ ಪ್ರಪಂಚವನ್ನು ಸರ್ವನಾಶಮಾಡುವ ಅತ್ಯಂತ ಅಪಾಯಕಾರಿ ಅಸ್ತ್ರಗಳಿವೆ ಎಂದು ಗುಲ್ಲೆಬಿಸಿ, ಯುದ್ಧ ಮಾಡಿ, ಸುಮಾರು ೧೦ ಲಕ್ಷ ಅಮಾಯಕ ಜನರನ್ನು ಕೊಲ್ಲಲಾಯಿತು. ಆ ಮಾರಕ ಅಸ್ತ್ರಗಳು ಯುದ್ಧ ಮುಗಿದ ನಂತರವೂ ಸಿಗಲಿಲ್ಲ. ಅದರ ಬಗ್ಗೆ ಯಾರೂ ಪ್ರಶ್ನಿಸಲಿಲ್ಲ. ಪ್ರಾಯೋಜಿತ ನೆಪ ಎಂದು ಎಲ್ಲಾ ದೇಶಗಳಿಗೂ ಗೊತ್ತಿತ್ತು. ಆದರೆ ದೊಡ್ಡಣ್ಣ ಅಮೆರಿಕಾಗೆ ಪ್ರಶ್ನೆ ಕೇಳುವ ಗತ್ತು ಯಾರಿಯೂ ಇರಲಿಲ್ಲ.
ರಷ್ಯಾ ದೇಶವನ್ನು ಮಣ್ಣು ಮುಕ್ಕಿಸಲು ಅಮೇರಿಕಾ ತಾಲಿಬಾನ್ ಪಡೆಯನ್ನು ಹುಟ್ಟುಹಾಕಿತು. ಅದರ ದುಷ್ಪರಿಣಾಮಗಳಿಗೆ ಬಲಿಯಾದವರು ಯಾರು? ಲಿಬಿಯಾ, ಸಿರಿಯಾ ಯುದ್ಧಗಳಿಂದ ತಲ್ಲಣಗೊಂಡಿವೆ. ಚೀನಾ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ. ಇರಾನ್ ಮತ್ತು ಟರ್ಕಿ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿವೆ. ೧೦೦ ವರ್ಷಗಳ ಪಾಶ್ಚಿಮಾತ್ಯರ ಕುತಂತ್ರಗಳನ್ನು ನೋಡಿದರೆ ಭಯೋದ್ಪಾದಕರು ಎಂಬ ಪದ ಸೃಷ್ಟಿ ಮಾಡಿ, ಧರ್ಮದ ಲೇಪವನ್ನು ಹಚ್ಚಿ, ಅದನ್ನು ಮುಸಲ್ಮಾನರ ಹಣೆಪಟ್ಟಿಗೆ ಬಹಳ ಸುಸಜ್ಜಿತವಾಗಿ ಬೇಕಂತಲೇ ಕಟ್ಟಲಾಗಿದೆ ಎನ್ನಿಸುತ್ತದೆ. ಇಸ್ಲಾಮೊಫೋಬಿಯಾವನ್ನು ಸೃಷ್ಟಿಸಲಾಗುತ್ತಿದೆ.
ಸಿನಿಮಾರಂಗಕ್ಕೂ ಇಸ್ಲಾಮೊಫೋಬಿಯಾದ ಬಿಸಿ ತಟ್ಟಿಸಲಾಗಿದೆ. ಮೀಡಿಯಾ ಮಾರ್ಕೆಟ್ ರಿಸರ್ಚ್ ಕಂಪನಿ ಸಮಂತ ಕೋಮ್ರೆಸ್ ಪ್ರಕಾರ ೬೯% ಮುಸಲ್ಮಾನರು ಇಸ್ಲಾಮೊಫೋಬಿಯಾ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಅಕಾಡೆಮಿ ಅವಾರ್ಡ್ ವಿಜೇತ ಅಮೆರಿಕನ್ ಕಲಾವಿದ ತಮ್ಮ ಒಂದು ಸಂದರ್ಶನದಲ್ಲಿ ಹೇಳಿದರು – ಅರಬ್ ಕಲಾವಿದರನ್ನು ಹಾಲಿವುಡ್ ನಲ್ಲಿ ಬಹಳ ಕ್ರೂರ ಪಾತ್ರಗಳನ್ನು ಕೊಡಲಾಗುತ್ತಿದೆ. ಅದರಿಂದ ಮುಸಲ್ಮಾನರ ಛಾಪು ಹಾಳಾಗುತ್ತದೆ. ಹಾಲಿವುಡ್ ಸಿನಿಮಾ ಮತ್ತು ಟಿವಿ ಸೀರಿಯಲ್ ಗಳಲ್ಲಿ ಮುಸಲ್ಮಾನರ ಪಾತ್ರಗಳನ್ನು ಹೇಗೆ ಬಿಂಬಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬ್ರಿಟಿಷ್ ಯೂಥ್ ಮುಸ್ಲಿಂ ರಿಜ್ ಟೆಸ್ಟ್ ಎಂಬ ಸಂಸ್ಥೆ ಕಾರ್ಯಕ್ರಮ ಹಮ್ಮಿಕೊಂಡಿತು.
ಮುಸಲ್ಮಾನರಿಗೆ ಯಾವ ರೀತಿಯ ಪಾತ್ರಗಳನ್ನು ಕೊಡಲಾಗುತ್ತದೆ, ಅವರ ಧರ್ಮ, ಸಂಸ್ಕೃತಿ ಮತ್ತು ಅಸ್ತಿತ್ವದ ಬಗ್ಗೆ ಯಾವ ರೀತಿ ಬಿಂಬಿಸಲಾಗುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದರು. ಅಕಾಡೆಮಿ ಅವಾರ್ಡ್ ವಿಜೇತ ರಿಜ್ ಅಹ್ಮದ್ ಈ ಕಾರ್ಯಕರಮಕ್ಕೆ ಪ್ರೇರಣೆ ನೀಡಿದರು. ಹಾಲಿವುಡ್ ನಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಅದರ ಫಲವಾಗಿ ನಿರ್ದೇಶಕ ಶರ್ಮಿನ್ ಒಬೈದ್, ಬಿಲಾಲ್ ಫಲಾಹ್ ಮತ್ತು ಆದಿಲ್ ಅಲ್ ಅರಬಿ ಹಾಲಿವುಡ್ ಚಿತ್ರಗಳಲ್ಲಿ ಮುಸಲ್ಮಾನರ ಪಾತ್ರಗಳಲ್ಲಿ ಸಮಾನತೆ ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಮಿಸ್ ಮಾರ್ವೆಲ್ ಇದಕ್ಕೆ ಒಂದು ಉದಾಹರಣೆ. ಇನ್ನೂ ಅನೇಕ ಸಿನಿಮಾ ಗಳಲ್ಲಿ ಒಳ್ಳೆಯ ಪಾತ್ರಗಳು ಬರಲಿವೆ. ಆದರೆ ಬಾಲಿವುಡ್ ನಲ್ಲಿ ಮೈದುಲ್ ಇಸ್ಲಾಂ ನವರ ರಿಸರ್ಚ್ ಪೇಪರ್ ಇಮೇಜಿಂಗ್ ಮುಸ್ಲಿಮ್ಸ್: ಲುಕಿಂಗ್ ಥ್ರೂ ದಿ ಲೆನ್ಸ್ ಆಫ್ ಬಾಲಿವುಡ್ ಪ್ರಕಾರ ಭಾರತೀಯ ಸಿನಿಮಾ ರಂಗ ಮುಸಲಮಾನರನ್ನು ಸಂಪೂರ್ಣ ದಿಕ್ಕುಗಳಲ್ಲಿ ವ್ಯಕ್ತಪಡಿಸಿಲ್ಲ.
ಇತ್ತೀಚಿನ ಕೇರಳ ಸ್ಟೋರಿ ಎಂಬ ಸಿನಿಮಾ ವಿವಾದಗಳ ಕಟಕಟೆಯಲ್ಲಿದೆ. ಸುಪ್ರೀಂ ಕೋರ್ಟ್ ಇದು ಕಾಲ್ಪನಿಕ ಕಥೆ ಎಂದು ಸಿಮಿಮಾ ಪ್ರಾರಂಭಿಸಿ ಎಂದು ಆದೇಶ ನೀಡಿದೆ. ಭಾರತದ ಒಂದು ರಾಜ್ಯ ಸಿನಿಮಾವನ್ನು ಬ್ಯಾನ್ ಮಾಡಿದರೆ ಇನ್ನೊಂದು ರಾಜ್ಯ ಟ್ಯಾಕ್ಸ್ ಫ್ರೀ ಮಾಡುತ್ತದೆ. ಇದರರ್ಥ ಸಿನಿಮಾರಂಗದಲ್ಲಿ ರಾಜಕೀಯ ಪ್ರವೇಶಿಸಿದೆ ಎಂದಾಯಿತು. ಎಲ್ಲಿ ಕೀಳು ರಾಜಕೀಯವಿರುತ್ತದೋ ಅಲ್ಲಿ ಸತ್ಯದ ಸಮಾದಿ ನಿಶ್ಚಿತ. ನಿರ್ಮಾಪಕರು, ನಿರ್ದೇಶಕರು ಸಹ ಇಬ್ಭಾಗವಾಗಿ ಹೋಗಿದ್ದಾರೆ. ದ ಕಾಶ್ಮೀರ ಫೈಲ್ಸ್, ಸೂರ್ಯವಂಶಿ, ತೆರೆಬಿನ್ ಲಾಡೆನ್, ದ ಸರ್ಜಿಕಲ್ ಸ್ಟ್ರೈಕ್, ಕಾರ್ಗಿಲ್, ಆರ್ಟಿಕಲ್ ೧೫, ಪಂಗ, ಖಾಕಿ, ಕಾಬುಲ್ ಎಕ್ಸ್ಪ್ರೆಸ್, ಜೈ ಭೀಮ್, ಸಂಸ್ಕಾರ, ಟ್ರೂ ಲೈಸ್, ಹಿಮೋಲಿಂಫ್, ಫರ್ಜಾನಿಯ, ಆಫ್ವಾಹ್, ಗರಂ ಹವಾ, ಧರ್ಮಾಪುತ್ರ, ನಸೀಮ್, ಫಿರಾಕ್, ಹೈದೆರ್, ಶಾಹಿದ್, ಚಕ್ ದೆ ಇಂಡಿಯಾ – ಅನೇಕ ಪರ ವಿರೋಧ ಸಿನಿಮಾಗಳು ತೆರೆ ಕಂಡಿವೆ.
ಪ್ರೇಕ್ಷಕರು ಸಹ ಇಬ್ಭಾಗವಾಗಿ ಹೋಗಿದ್ದಾರೆ. ಆದರೆ ಯಾರು ಯಾವ ದೃಷ್ಟಿಕೋನದಿಂದ ಸಿನಿಮಾ ಮಾಡುತ್ತಿದ್ದಾರೆ, ಅದರ ಉದ್ದೇಶ ಮತ್ತು ದುರದ್ದೇಶಗಳೇನು ಎಂಬುದು ಸಹ ಜನರು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಹಿಂದೂ-ಮುಸ್ಲಿಂ ಪರ ವಿರೋಧಿ ಸಿನಿಮಾಗಳು ಸಮಾಜಕ್ಕೆ ಬೇಕಾಗಿಲ್ಲ. ಸಮಾಜದ ಒಳಿತಿಗಾಗಿ, ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಸಿನಿಮಾಗಳು, ಎಲ್ಲರು ಸಹಿಷ್ಣುತೆ ಸಹಬಾಳ್ವೆಯಿಂದ ಸಂತೋಷವಾಗಿ ಜೀವನ ಸಾಗಿಸುವ ಮನೋರಂಜನೆಯ ಸಿನಿಮಾಗಳು ಹೊರ ಬರಲಿ.
ಸಮಾಜದಲ್ಲಿ ಸಮಾನತೆಯ ಕೂಗು ಎಬ್ಬಿಸಲು, ಸಮಾಜದ ಅಂಕು ಡೊಂಕುಗಳತ್ತ ಬೆಳಕು ಚೆಲ್ಲಲು ಸಾಹಿರ್ ಲೋದ್ಯಾನವಿಯವರಿಂದ ಪ್ಯಾಸಾ ಚಿತ್ರದ “ಏ ದುನಿಯಾ ಮಿಲ್ ಭೀ ಜಾಯೆ ಟು ಕ್ಯಾ ಹೈ” “ಜಿನ್ಹೇ ನಾಜ್ ಹೈ ಹಿಂದ್ ಪರ್ ವೊ ಕಹಾ ಹೈ” ಎಂಬ ಹಾಡುಗಳನ್ನು ಬರೆಸಲಾಯಿತು. ಆದರೆ ಈಗ “ನಮ್ದುಕ್ಕೆ ಪ್ಯಾರ್ಗೆ ಆಗಬುಟ್ಟೈತೆ” ಹಾಡು ಬರೆಸಿ ಉರ್ದುಗರನ್ನು ಕನ್ನಡ ಬರುವುದಿಲ್ಲವೆಂದು ವ್ಯಂಗ ಮಾಡುವಂತೆ ಹಾಡು ರಚಿಸಲಾಗುತ್ತದೆ. ತಾಯಿ ನಿತ್ಯೋತ್ಸವ ಬರೆದವರು ನಿಸಾರ್ ಅಹ್ಮದ್, ರಾಜ್ಯ ಪ್ರಶಸ್ತಿ ವಿಜೇತ ರಹ್ಮತ್ ತರೀಕೆರೆ ಯಾರ ಕಣ್ಣಿಗೂ ಕಾಣುವುದಿಲ್ಲವೇಕೆ. ಶಿಶುನಾಳ ಶರೀಫ, ಗುರು ಖಾದರ್ ಪೀರಾ ಕನ್ನಡ ಪ್ರೇಮಿಗಳಲ್ಲವೇ. ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿದ ಮೊದಲಿಗರು ಮೈಸೂರ್ ಮಹಾರಾಜರ ಆತ್ಮೀಯ ಸರ್ ಮಿರ್ಜಾ ಇಸ್ಮಾಯೀಲ್ ಗೊತ್ತೇ ಇಲ್ಲ. ಅಲ್ಲವೇ. ದೆಹಲಿಯ ಇಂಡಿಯಾ ಗೇಟ್ ಗೋಡೆಯ ಮೇಲೆ ಒಟ್ಟು ೯೫೩೦೦ ಸ್ವತಂತ್ರ ಹೋರಾಟಗಾರರ ಹೆಸರುಗಳಲ್ಲಿ ೬೧೩೯೫ ಮುಸಲ್ಮಾನರ ಹೆಸರುಗಳನ್ನೂ ಕೆತ್ತಲಾಗಿದೆ. ಆದರೂ ಸಿನಿಮಾ ಪಾತ್ರಗಳಲ್ಲಿ ಮುಸಲ್ಮಾನರ ಪಾತ್ರಗಳೊಂದಿಗೆ ಮಲತಾಯಿ ಧೋರಣೆ ಮಾಡಲಾಗುತ್ತಿದೆ ಏಕೆ ?
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.