(www.vknews.in) ; ಅಣ್ಣ ತಂಗಿಯರ ಈ ಬಂಧ, ಜನುಮ.. ಜನುಮದಾ… ಅನುಬಂಧ ಈ ರಕ್ಷಾ ಬಂಧನ….. ರಕ್ಷಾ ಬಂಧನದ ಮಹತ್ವ, ಪ್ರಾಮುಖ್ಯತೆ ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಇದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಸಹೋದರ – ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಸಮರ್ಪಣೆಯಾಗಿದೆ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.
ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.
ರಾಖಿ ಹಬ್ಬ ಅಂತಲೂ ಕರೆಯುವ ಈ ಹಬ್ಬವನ್ನು ಭಾರತ ದೇಶದಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. *ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ರಾಖಿಯನ್ನು ಸಹೋದರಿ ಸಹೋದರನ ಮಣಿಕಟ್ಟಿಗೆ ಕಟ್ಟುತ್ತಾರೆ. ಜತೆಗೆ, ಸಹೋದರ ತನ್ನ ಸಹೋದರಿಗೆ ಉಡುಗೊರೆಯನ್ನು ನೀಡಬೇಕಿದೆ. ದುಬಾರಿ ಅಥವಾ ಅಗ್ಗ – ಹೀಗೆ ಯಾವುದೇ ಉಡುಗೊರೆಯನ್ನು ನೀಡಿದರೆ ಸಾಕು*
ಅಂಗಡಿ, ಮಳಿಗೆಗಳಲ್ಲಿ ಬಣ್ಣ ಬಣ್ಣದ ರಾಖಿಗಳು ರಾರಾಜಿಸುತ್ತಿವೆ. ಶ್ರಾವಣ ಮಾಸದ ಪೂರ್ಣಿಮ ತಿಥಿಯಂದು ಸಹೋದರಿಕೆಯ ಮಹತ್ವವನ್ನು ಸಾರುವ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ತಂಗಿಯರು ಅಣ್ಣನ ಕೈಗೆ ರಾಖಿ ಕಟ್ಟುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಅಣ್ಣ ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಸಹೋದರರ ಕೈಗೆ ರಾಖಿ ಕಟ್ಟುವ ಸಹೋದರಿ ಅವರಿಂದ ಉಡುಗೊರೆಗಳನ್ನು ಪಡೆಯುತ್ತಾಳೆ.
ಭಾತೃತ್ವದ ಅನುಬಂಧದ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾಡಿನದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ರಕ್ಷಾಬಂಧನ ಆಚರಣೆಯ ದಿನಾಂಕದಲ್ಲಿ ಗೊಂದಲವಿದೆ. ಕೆಲವರು ಆಗಸ್ಟ್ 30 ರಾಖಿ ಹಬ್ಬದವೆಂದರೆ ಕೆಲವರು ಆಗಸ್ಟ್ 31 ಎನ್ನುತ್ತಿದ್ದಾರೆ. ಹಾಗಾದರೆ ರಕ್ಷಾಬಂಧನದ ಆಚರಣೆ ಯಾವಾಗ ಆದರೆ ಈ ವರ್ಷ ಆಗಸ್ಟ್ 30 ಅಥವಾ 31 ರಾಖಿ ಕಟ್ಟಲು ಯಾವುದು ಶುಭದಿನ ಎಂಬ ಕುರಿತು ಗೊಂದಲಗಳಿವೆ. ಹಾಗಾದರೆ ರಾಖಿ ಹಬ್ಬ ಎಂದು?ರಕ್ಷಾಬಂಧನಕ್ಕೆ ಶುಭಮುಹೂರ್ತ ಯಾವುದು? ದೃಕ್ ಪಂಚಾಂಗದ ಪ್ರಕಾರ ರಕ್ಷಾಬಂಧನ ಅಥವಾ ರಾಖಿ ಹಬ್ಬದ ಆಚರಣೆ ಆಗಸ್ಟ್ 30ರ ಬುಧವಾರದಂದು ಬರಲಿದೆ. ಆದರೆ ಭದ್ರಕಾಲಾದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 31 ರಂದು ರಾಖಿ ಕಟ್ಟಲು ಶುಭಮುಹೂರ್ತವಾಗಿದೆ.
*ಆಗಸ್ಟ್ 30 ರಂದು ಭದ್ರಕಾಲದ ಉಪಸ್ಥಿತಿಯ ಕಾರಣದಿಂದಾಗಿ ಈ ವರ್ಷ ಆಗಸ್ಟ್ 30ರ ರಾತ್ರಿ 9.01ರ ನಂತರ ರಕ್ಷಾಬಂಧನ ಆಚರಣೆಯನ್ನು ಪ್ರಾರಂಭಿಸಬೇಕು. ಯಾಕೆಂದರೆ 9.01ಕ್ಕೆ ಭದ್ರ ಕಾಲದ ಮುಕ್ತಾಯದವಾಗುತ್ತದೆ. ಪೂರ್ಣಿ ಮಾ ತಿಥಿ ಅಥವಾ ಹುಣ್ಣಿಮೆಯ ಹಂತವು ಆಗಸ್ಟ್ 30ರ ಬೆಳಿಗ್ಗೆ 10.58ಕ್ಕೆ ಪ್ರಾರಂಭವಾಗಿ, ಆಗಸ್ಟ್ 31 ರಂದು ಬೆಳಿಗ್ಗೆ 7.05ಕ್ಕೆ ಮುಕ್ತಾಯವಾಗುತ್ತದೆ.*- *ಆಚರಣೆ ಬಿನ್ನ.. ವಿಭಿನ್ನ…*-
ರಕ್ಷಾಬಂಧನವನ್ನು ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ರೀತಿ ಆಚರಿಸುತ್ತಾರೆ. ಈ ರಾಖಿಹಬ್ಬದಂದು ಸಹೋದರಿ ಸಹೋದರನಿಗೆ ಆರತಿ ಬೆಳಗುವ ಮೂಲಕ ಆತನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾಳೆ. ನಂತರ ಸಹೋದರ ಕೈಗೆ ರಾಖಿ ಕಟ್ಟಿ, ಹಣೆಯ ಮೇಲೆ ತಿಲಕ ಇಟ್ಟು ಸಿಹಿ ತಿಂಡಿ ಹಂಚುವುದು ವಾಡಿಕೆ. ಸಹೋದರರು ರಾಖಿ ಕಟ್ಟಿದ ಸಹೋದರಿಗೆ ಉಡುಗೊರೆ ಅಥವಾ ಹಣ ನೀಡುವ ಮೂಲಕ ಪ್ರೀತಿಯನ್ನು, ರಕ್ಷಣೆಯನ್ನು ಒದಗಿಸುತ್ತಾರೆ.ಹಿಂದೂ ಧರ್ಮದಲ್ಲಿ ರಕ್ಷಾಬಂಧನ ಆಚರಣೆಗೆ ಹಲವು ಧಾರ್ಮಿಕ ಮಹತ್ವಗಳಿವೆ.
*ರಕ್ಷಾಬಂಧನ ಹಿಂದಿನ ಕಥೆಗಳು ಇತಿಹಾಸ..*- ಒಮ್ಮೆ ಆಕಸ್ಮಿಕವಾಗಿ ಸುದರ್ಶನ ಚಕ್ರಕ್ಕೆ ಸಿಲುಕಿ ಶ್ರೀಕೃಷ್ಣನ ಬೆರಳು ಕತ್ತರಿಸುತ್ತದೆ. ಇದನ್ನು ನೋಡಿದ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಗಾಯಕ್ಕೆ ಕಟ್ಟಿ ರಕ್ತ ಸುರಿಯುವುದನ್ನು ನಿಲ್ಲಿಸುತ್ತಾಳೆ. ಅಂದು ಆಕೆಯನ್ನು ತನ್ನ ತಂಗಿಯಾಗಿ ಸ್ವೀಕರಿಸಿ, ಎಂದಿಗೂ ಅವಳನ್ನು ರಕ್ಷಿಸುವ ಭರವಸೆ ನೀಡುತ್ತಾನೆ. ಕೌರವರು ದ್ರೌಪದಿ ವಸ್ತ್ರಾಪಹರಣ ಮಾಡಲು ಯತ್ನಿಸಿದಾಗ ಶ್ರೀಕೃಷ್ಣ ದ್ರೌಪದಿಗೆ ಸೀರೆ ನೀಡುವ ಅವಳನ್ನು ಕಾಪಾಡುತ್ತಾನೆ. ಸೀರೆಯನ್ನು ಸುತ್ತಿ ಶ್ರೀಕೃಷ್ಣನ ಗಾಯವನ್ನು ಮಾಗಿಸಿದ ದ್ರೌಪದಿಯಿಂದ ರಾಖಿ ಹಬ್ಬ ಹುಟ್ಟಿತು ಎನ್ನುತ್ತದೆ ಪುರಾಣ.ಇತಿಹಾಸ, ದಂತಕಥೆ
ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.
ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು.ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು_ ಇದು ಇತಿಹಾಸ.
ನಾಡಿನಾದ್ಯಂತ ಭ್ರಾತೃತ್ವದ ಮಹತ್ವ ಸಾರುವ, ರಕ್ಷಾಬಂಧನ ಹಬ್ಬದ ತಯಾರಿ ಜೋರಾಗಿದೆ. ರಕ್ಷಾಬಂಧನ ಅಣ್ಣ- ತಂಗಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿನ ಅಂಗಡಿಗಳಲ್ಲಿನ, ಅಂಗಡಿಗಳಲ್ಲಿ ನಾನಾ ಬಗೆಯ ರಾಖಿಗಳು ರಾರಾಜಿಸುತ್ತಿವೆ. ಸಹೋದರ ಸಹೋದರಿಯರನ್ನು, ತಮ್ಮತ್ತ ಕೈಬೀಸಿ ಕರೆಯುತ್ತಿವೆ.
– ವಿ.ಜಿ.ವೃಷಭೇಂದ್ರ ಕೂಡ್ಲಿಗಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.