(www. vknews.in) ; (ಆಗಸ್ಟ್ 30) ಮಂಗಳೂರು ಬದ್ರಿಯಾ ಕಾಲೇಜು ಸಭಾಂಗಣದಲ್ಲಿ “ಸರ್ಕಾರಿ ಉದ್ಯೋಗ ಜಾಗೃತಿ” ಎಂಬ ಒಂದು ಶಿಬಿರ ನಡೆಯಿತು. ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ಗೈರು ಹಾಜರಾತಿಯಲ್ಲಿ ಅವರು ನೀಡಿದ್ದ ವಾಯ್ಸ್ ಮೆಸೇಜನ್ನು ಸಭೆಯಲ್ಲಿ ಮಂಡಿಸಲಾಯಿತು.
ಕಾರ್ಯಕ್ರಮದ ಆಯೋಜಕರು ” ಇಲ್ಮ್ ಇಂಡಿಯಾ” ಎಂಬ ಸಂಸ್ಥೆ. 2006 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ನಾಸಿರ್ ಸಜೀಪ ಅವರು ಮಾಹಿತಿ ಕಾರ್ಯಗಾರರಾಗಿದ್ದರು. ಸಂಸ್ಥೆಯ ಉಪಾಧ್ಯಕ್ಷನೆಂಬ ನೆಲೆಯಲ್ಲಿ ನಾನೂ ಹಾಜರಿದ್ದೆ.
ಬದ್ರಿಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಿ.ಬಿ. ಅಬ್ದುಲ್ ಹಮೀದ್ ( ಇವರು ಅಜಿಲಮೊಗರು ದರ್ಗಾ ಸಮಿತಿಯ ಅಧ್ಯಕ್ಷರು ಕೂಡಾ) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೇನೆಪೋಯ ನಾಗರಿಕ ಸೇವಾ ಸಂಸ್ಥೆಯ ತರಬೇತುದಾರರಾದ ಮುಹಮ್ಮದ್ ಅಲಿ ರೂಮಿ ಅವರು ತರಗತಿ ನಡೆಸಿಕೊಟ್ಟರು. ಇವರು ಮತ್ತು ನಾಸಿರ್ ಸಜೀಪ ಇಬ್ಬರ ಕ್ಲಾಸ್ ಬಹಳ ಪರಿಣಾಮಕಾರಿಯಾಗಿತ್ತು. ಪಿ.ಎಮ್. ಇಕ್ಬಾಲ್ ಕೈರಂಗಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.
*ನಿಜವಾಗಿಯೂ ಏನಿದು?*
ಸರ್ಕಾರಿ ಉದ್ಯೋಗ ಜಾಗೃತಿ ಅಂದರೇನು, ಏನಿದರ ಉದ್ದೇಶ ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಒಂದೇ ಮಾತಲ್ಲಿ ಹೇಳುವುದಾದರೆ; ಸರಕಾರಿ ಉದ್ಯೋಗಕ್ಕೆ ಸೇರಲು ಹಾಗೂ ಅದಕ್ಕೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಲು ಮುಸ್ಲಿಮ್ ಸಮಾಜಕ್ಕೆ ಮಾರ್ಗದರ್ಶನ ನೀಡುವುದು.
ಇಲ್ಮ್ ಇಂಡಿಯಾ ಎಂಬ ಸಂಸ್ಥೆಯನ್ನು ನಾಸಿರ್ ಸಜಿಪರವರು ಹುಟ್ಟು ಹಾಕಿದ್ದೇ ಇದೇ ಉದ್ದೇಶದಿಂದ. ಮುಸ್ಲಿಮ್ ಸಮುದಾಯದಿಂದ ಬೆರಳೆಣಿಕೆಯಷ್ಟು ಮಂದಿ ಸರ್ಕಾರಿ ಉನ್ನತ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಖ್ಯಾತರಾಗಿದ್ದಾರೆ. ಅದು ಮುಸ್ಲಿಮರಲ್ಲಿ ಅಡಗಿರುವ ಸಾಮರ್ಥ್ಯದ ಹೆಗ್ಗುರುತುಗಳಾಗಿ ಚರಿತ್ರೆಯ ರಜತ ಹಾಳೆಯಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಿದೆ.
ಪೊಲೀಸ್ ಅಧಿಕಾರಿಗಳಾಗಿ ಬೀರಾ ಮೊಯಿದಿನ್, ಇಕ್ಬಾಲ್, ವಕೀಲರಾಗಿ ಯೂಸುಫ್ ಹೈದರ್ ಎಂಬ ಹಳೆ ತಲೆಮಾರಿನ ಹುಲಿಗಳಿಂದ ಹಿಡಿದು ಹೊಸ ತಲೆಮಾರಿನ ಜಿ.ಎ. ಬಾವಾ, ಇಬ್ರಾಹಿಮ್ ಗೂನಡ್ಕ ಮುಂತಾದವರನ್ನೆಲ್ಲ ಗಮನಿಸಿರಿ. ಇವರೆಲ್ಲ ಸಮಾಜದ ಕೆಳ ಹಂತದಿಂದ ಕಷ್ಟಪಟ್ಟು ಕಲಿತು ಸ್ವಸಾಮರ್ಥ್ಯದಿಂದ ಉತ್ತುಂಗಕ್ಕೇರಿದವರು. ಆದರೆ ನವ ಪೀಳಿಗೆ ಈ ಕಡೆ ತಲೆ ಹಾಕುವುದಿಲ್ಲ.
ಪೊಲೀಸ್ ಇಲಾಖೆ, ವೈದ್ಯಕೀಯ, ಶಿಕ್ಷಣ, ನಾಗರಿಕ ಸೇವಾ ಇಲಾಖೆ, ತಾಲೂಕು ಕಛೇರಿ, ಜಿಲ್ಲಾಡಳಿತ ಕಛೇರಿ ಮುಂತಾದ ಯಾವುದೇ ಸರ್ಕಾರೀ ಸೇವಾ ರಂಗದಲ್ಲಿ ಮುಸ್ಲಿಮರ ಪ್ರಾತಿನಿಧ್ಯವಿಲ್ಲ. ಇಂತಹ ಇಲಾಖೆಗಳಲ್ಲಿ ಮುಸ್ಲಿಮರು ಸೇರಿ ಕೊಂಡು ಮುಸ್ಲಿಮರ ಪರವಾಗಿ ಪಕ್ಷಪಾತ ಧೋರಣೆಯಿಂದ ಉಪಕಾರ ಮಾಡಬೇಕು ಎಂದು ಇದರ ಅರ್ಥವಲ್ಲ.
ಮುಸ್ಲಿಮ್ ಅಧಿಕಾರಿಗಳಿದ್ದರೆ ಅವಿದ್ಯಾವಂತ ಮುಸ್ಲಿಮರು, ಹಿರಿಯ ನಾಗರಿಕರು, ಮಹಿಳೆಯರು ಮುಂತಾದವರಿಗೆ ನಮ್ಮವರು ಎಂಬ ದೃಷ್ಟಿಯಿಂದ ಆತಂಕವಿಲ್ಲದೆ ಮುಕ್ತವಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ. ಏನಿಲ್ಲದಿದ್ದರೂ ಸ್ವಂತ ಭಾಷೆಯಲ್ಲಿ ತಮ್ಮ ಮನದಿಚ್ಛೆಯನ್ನು ತೋಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಮುಸ್ಲಿಮ್ ಅಧಿಕಾರಿಗಳಿಗೆ ಮುಸ್ಲಿಮ್ ಸಮಾಜದ ಎಲ್ಲಾ ಒಳ- ಹೊರಗು ಗೊತ್ತಿರುವುದರಿಂದ ಸಮಸ್ಯೆಗಳ ನಿಜವಾದ ಸ್ವರೂಪ ತಿಳಿದುಕೊಂಡು ಅರ್ಥಪೂರ್ಣವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡಕೊಳ್ಳಲು ಅನುಸರಿಸಬೇಕಾದ ಕ್ರಮ ಹೆಚ್ಚಿನ ಮುಸ್ಲಿಮರಿಗೆ ತಿಳಿದಿರುವುದಿಲ್ಲ. ಅಂತಹ ಒಂದು ಸವಲತ್ತು ಇದೆ ಎಂಬ ವಿಚಾರ ಕೂಡಾ ಗೊತ್ತಿಲ್ಲದವರಿದ್ದಾರೆ. ಮುಸ್ಲಿಮರು ಅಧಿಕಾರಿಗಳಾಗಿದ್ದರೆ ಇಂತಹ ಮಾಹಿತಿಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟು ಫಲಾನುಭವಕ್ಕೆ ಸಹಾಯ ಸಹಕಾರ ಮಾಡುತ್ತಾರೆ. ಇದಕ್ಕೆ ನಿವೃತ್ತ ಅಧಿಕಾರಿ ಮಂಗಳೂರಿನ ಯೂಸುಫ್ ವಕ್ತಾರ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಅವರು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಸ್ಕಾಲರ್ ಶಿಫ್ ಮುಂತಾದವುಗಳನ್ನು ತೆಗೆಸಿಕೊಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಈ ಸೇವೆ ಮಾಡುತ್ತಿರುವ ಅವರ ಉಪಕಾರವನ್ನು ಸಾವಿರಾರು ಮುಸ್ಲಿಮ್ ವಿದ್ಯಾರ್ಥಿಗಳು ಪಡಕೊಂಡಿದ್ದಾರೆ.
ನಿನ್ನೆಯ ಕಾರ್ಯಗಾರದಲ್ಲಿ ಸೇರಿದ್ದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ತರಬೇತುದಾರರು ಮನಮುಟ್ಟುವ ಹಾಗೆ ಮಾರ್ಗದರ್ಶನ ನೀಡಿದ್ದಾರೆ. ಬದ್ರಿಯಾ ಶಿಕ್ಷಣ ಸಂಸ್ಥೆ ಇದಕ್ಕೆ ಸಭಾಂಗಣ ಒದಗಿಸಿ ಕೊಟ್ಟು ಸಹಕರಿಸಿದೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳನ್ನು ಪದವಿ ಕೋರ್ಸ್ ಗಳಲ್ಲಿ ಕಲಿಯುತ್ತಿರುವವರನ್ನು ಹಾಜರಾಗಲು ಪ್ರೇರಣೆ ಕೊಡದೆ ಇರುವುದು ಬೇಸರ ತಂದಿದೆ.
ನಾಸಿರ್ ಸಜೀಪರವರು ಸ್ವಂತ ಖರ್ಚಿನಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವಾಗ ಅದಕ್ಕೆ ಮುಸ್ಲಿಮ್ ಮುಂದಾಳುಗಳು, ಶಿಕ್ಷಣ ಸಂಸ್ಥೆಗಳು ಉತ್ತಮ ಉತ್ತೇಜನ ನೀಡಬೇಕಾದ ಅಗತ್ಯವಿದೆ. ಕಾರಣ, ಇದು ಮುಸ್ಲಿಮ್ ಸಮಾಜದ ಸಬಲೀಕರಣಕ್ಕಾಗಿ ನಡೆಸುವ, ದೂರಗಾಮಿ ಸತ್ಪಲವಿರುವ ಯೋಜನೆಯಾಗಿದೆ. ಮುಸ್ಲಿಮ್ ಸಮಾಜದ ಕುಟುಂಬಗಳು ಗಂಡು ಮಕ್ಕಳಿಗೆ ಗಲ್ಫ್ ದೇಶಗಳಲ್ಲಿ ದುಡಿಯುವ ಚಿಂತನೆ ಹುಟ್ಟಿಸುವುದರಿಂದ ಮಕ್ಕಳು ಶಿಕ್ಷಣದ ಕಡೆಗೆ ಗಮನ ಕೊಡುವುದಿಲ್ಲ. ಹೇಗಾದರೂ ಪಿ.ಯು. ಸಿ. ಮಾಡಿ ಮುಗಿಸಿ ಗಲ್ಪ್ ಗೆ ಹೋಗುವುದು ಎಂಬ ಚಿಂತನೆ ಯುವಕರ ತಲೆಯಲ್ಲಿ ಗಾಢವಾಗಿರುತ್ತದೆ. ಇಲ್ಲಿ ನಾನಾ ವಿಧ ಸರ್ಕಾರೀ ಇಲಾಖೆಗಳಲ್ಲಿ ಪ್ರತಿಷ್ಠಿತ ಉದ್ಯೋಗವಕಾಶಗಳಿದ್ದರೂ ಆ ಕಡೆ ತಲೆಕೊಡುವುದೇ ಇಲ್ಲ. ಐ. ಎ. ಎಸ್. ಪರೀಕ್ಷೆ ಪಾಸಾಗಲು ಪಿ.ಯು.ಸಿ. ಯಿಂದಲೇ ಸಿದ್ಧತೆ ನಡೆಸುತ್ತಾ ಬರಬೇಕು. ಹಾಗೆ ಪೂರ್ವ ಸಿದ್ಧತೆಯೊಂದಿಗೆ ಮುಂದುವರಿದರೆ ಐ. ಎ. ಎಸ್ ಪರೀಕ್ಷೆ ಬರೆಯಲು ಹೆಚ್ಚು ಪ್ರಯಾಸವಿರುವುದಿಲ್ಲ. ಆದರೆ ನಮ್ಮ ಇಂದಿನ ಮಕ್ಕಳಿಗೆ ಅಂತಹ ಯೋಚನೆ ಇರುವುದಿಲ್ಲ, ಹಿರಿಯರು ಅಂತಹ ಯೋಚನೆ ಹುಟ್ಟಿಸುವುದೂ ಇಲ್ಲ.
ಪಂಚಾಯತ್ ಕಾರ್ಯದರ್ಶಿ, ವಿ.ಎ. ತಹಶೀಲ್ದಾರ್, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿ, ನ್ಯಾಯಾಧೀಶರು, ಆಯೋಗಗಳ ಕಮಿಷನರ್ಸ್, ಭೂವಿಜ್ಞಾನ, ಕೃಷಿ ಇಲಾಖೆ, ರೈಲ್ವೇ ಇಲಾಖೆ, ವಿಮಾನಯಾನ ಮುಂತಾದ ಯಾವುದರಲ್ಲೂ ಒಂದು ಉನ್ನತ ಹುದ್ದೆ ಗಳಿಸಬೇಕು ಎಂಬ ಕನಸು ನಮ್ಮ ಮಕ್ಕಳಲ್ಲಿ ಕಂಡು ಬರುತ್ತಿಲ್ಲ. ಒಂದು ವೇಳೆ ಅಂತಹ ಕನಸು ಅಪರೂಪದಲ್ಲಿ ಕೆವರಿಗೆ ಇದ್ದರೂ ಅವರಿಗೆ ಏನು ಕಲಿಯಬೇಕು, ಹೇಗೆ ಕಲಿಯಬೇಕು ಎಂಬಂತಹ ಮಾರ್ಗದರ್ಶನ ಕೊಡುವವರಿಲ್ಲ. ನಮ್ಮ ಮುಸ್ಲಿಮ್ ಸಮಾಜ ಎಲ್ಲದರಲ್ಲೂ ಹಿಂದುಳಿಯಲು ಇದುವೇ ಕಾರಣ. ಕೃಷಿ ಇಲಾಖೆಯಿಂದ ನಾನಾ ವಿಧ ಸಬ್ಸಿಡಿಗಳು, ಕೃಷಿಕರಿಗೆ ಸಾಲ, ಕೃಷಿಯುಪಕರಣಗಳು ಮುಂತಾದ ಅನೇಕ ಉಚಿತ ಯೋಜನೆಗಳು ಸರಕಾರದ್ದಿದೆ. ಆದರೆ ಮಾಹಿತಿಯ ಕೊರತೆಯಿಂದ ಮುಸ್ಲಿಮ್ ಕೃಷಿಕರು ಇದರಿಂದ ವಂಚಿತರಾಗುತ್ತಾರೆ. ಕೃಷಿ ಇಲಾಖೆಯಲ್ಲಿ ಮುಸ್ಲಿಮ್ ಅಧಿಕಾರಿಗಳಿದ್ದರೆ ಅವರು ಮುಸ್ಲಿಮರಿಗೆ ಮಾಹಿತಿ ಒದಗಿಸುವ ಪ್ರಯೋಜನವಿದೆ.
ನಾವೇ ಉಡಾಫೆಯಿಂದ ಹಿಂದುಳಿದು ನಮ್ಮನ್ನು ಯಾರೋ ಹಿಂತಳ್ಳಿದರು ಎಂದು ಗೊಣಗುವುದರಲ್ಲಿ ಅರ್ಥವಿಲ್ಲ. ಇಲ್ಲಿ ಯಾರೂ ಯಾರನ್ನೂ ಹಿಂತಳ್ಳುವುದಿಲ್ಲ. ಅರ್ಹತೆ ಇದ್ದರೆ ಯೋಗ್ಯ ಉದ್ಯೋಗವೂ ದೊರೆಯುತ್ತದೆ, ಉತ್ತಮ ಸೇವೆ ಸಲ್ಲಿಸಿದರೆ ಭಡ್ತಿಯೂ ಸಿಗುತ್ತದೆ. ಪೊಲೀಸ್ ಆಫಿಸರ್ ಆಗಿ ರಾಜ್ಯಮಟ್ಟದಲ್ಲಿ ಕೀರ್ತಿ ಪಡೆದ ಜಿ.ಎ. ಬಾವಾರವರು ಉದಾಹರಣೆಯಾಗಿ ನಮ್ಮ ಕಣ್ಮುಂದೆ ಇದ್ದಾರೆ. ಬೀಡಿ ಕಟ್ಟಿ ಬಡತನದಿಂದ ಬದುಕು ನೂಕುತ್ತಿದ್ದ ಹಳ್ಳಿಯ ಬಡ ಕುಟುಂಬ ಮೂಲದಿಂದ ಬಂದ ಅವರು ಛಲದಿಂದ ಕಲಿತು, ಪರಿಶ್ರಮ ಪಟ್ಟುದರ ಫಲವಾಗಿ ಉನ್ನತ ಸ್ಥಾನಕ್ಕೇರಿದರು. ಅವರು ಮುಸ್ಲಿಮ್ ಎಂಬ ಕಾರಣಕ್ಕೆ ಅವರನ್ನು ಯಾರೂ ಹಿಂತಳ್ಳಲಿಲ್ಲ.
ಭಾರತದ ಅತ್ಯುನ್ನತ ಮಿಲಿಟರಿ ನಾಯಕತ್ವವನ್ನು ಅಬ್ದುಲ್ ಲತೀಫ್ ಅವರಿಗೆ ಭಾರತ ಒಪ್ಪಿಸಲಿಲ್ಲವಾ? ನೆರೆಯಲ್ಲಿ ಮುಸ್ಲಿಮ್ ರಾಷ್ಟ್ರ ಪಾಕಿಸ್ತಾನ ಇರುವುದರಿಂದ ಯುದ್ಧ ನಡೆದರೆ ಅಬ್ದುಲ್ ಲತೀಫ್ ಪಕ್ಷಪಾತ ತೋರುವರು ಎಂಬ ಕಲ್ಪನೆಯನ್ನು ಇಡದೆ ಭಾರತ ದೇಶವು ಇಡೀ ತನ್ನ ದೇಶದ ರಕ್ಷಣೆಯ ಹೊಣೆಯನ್ನು ಅಬ್ದುಲ್ ಲತೀಫ್ ರವರ ಕೈಯ್ಯಲ್ಲಿರಿಸಿತ್ತು! ತಕ್ಕುದಾದ ವಿದ್ಯಾರ್ಹತೆ, ಸೇವಾರ್ಹತೆ ಇದ್ದರೆ ಇಲ್ಲಿ ಮತೀಯ ತಾರತಮ್ಯವಿಲ್ಲದೆ ಅರ್ಹ ಸ್ಥಾನಮಾನ ಬಂದೇ ಬರುತ್ತದೆ.
ಹಗಲಿರುಳು ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಾ ಗಲ್ಫ್ ಗೆ ಹೋಗುವ ಕನಸಲ್ಲಿ ಶಿಕ್ಷಣದ ಕಡೆಗೆ ನಿರ್ಲಕ್ಯ ವಹಿಸುತ್ತಾ ಇರುವ ಇಂದಿನ ಯುವ ಪೀಳಿಗೆಯನ್ನು ಯೋಗ್ಯ ಶಿಕ್ಷಣದ ಹಾದಿಯಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ಮುಸ್ಲಿಮ್ ಸಮಾಜಕ್ಕಿದೆ. ಆ ಜವಾಬ್ದಾರಿ ನಿರ್ವಹಣೆಗೆ ಕೈಲಾದ ಸೇವೆ ಸಲ್ಲಿಸಲು ” ಇಲ್ಮ್ ಇಂಡಿಯಾ” ಸಿದ್ಧವಾಗಿದೆ. ಆದರೆ ಇದಕ್ಕೆ ಪ್ರೋತ್ಸಾಹದ ಕೊರತೆಯಿದೆ. ಹದಿನೇಳು ವರ್ಷಗಳ ಹಿಂದೆ ಸ್ಥಾಪನೆಯಾದ ಇಲ್ಮ್ ಇಂಡಿಯಾ ಸಂಸ್ಥೆ ಮುನ್ನೆಲೆಗೆ ಬಾರದಿರಲು ಪ್ರೋತ್ಸಾಹದ ಅಭಾವವೇ ಕಾರಣ. ಇದು ನಮ್ಮ ಸಮಾಜದ ಕಲ್ಯಾಣಕ್ಕಾಗಿ ದುಡಿಯುವ ಸಂಸ್ಥೆ ಎಂಬ ಅಸ್ಮಿತೆಯನ್ನು ಬೆಳೆಸಿಕೊಂಡು ಎಲ್ಲರೂ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
ಛಲ ಇದ್ದರೆ ಫಲ ಖಂಡಿತಾ ಇದೆ ಎಂಬುದಕ್ಕೆ ಭಾರತ ದೇಶದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಜಿಲ್ಲಾಧಿಕಾರಿ ಎಂಬ ಪ್ರತಿಷ್ಠೆಗೆ ಪಾತ್ರರಾದ ಮಹಾರಾಷ್ಟ್ರದ ಅನ್ಸಾರ್ ಶೇಖ್ ಸ್ಪಷ್ಟೋದಾಹರಣೆಯಾಗಿದ್ದಾರೆ. ತಂದೆ; ರಿಕ್ಷಾ ಚಾಲಕ. ಅವರಿಗೆ ಪ್ರಾಯವೂ ಆಗಿದ್ದುದರಿಂದ ಹೆಚ್ಚಿಗೆ ದುಡಿಯಲಾಗದೆ ಬಹಳ ಕಷ್ಟದಿಂದ ಕುಟುಂಬ ಪೋಷಣೆ ಮಾಡುತ್ತಿದ್ದರು. ಮಕ್ಕಳಾದ ಅನ್ಸಾರ್ ಶೇಖ್ ಮತ್ತು ಅವರ ಅಣ್ಣ ಬಹಳ ಕಷ್ಟಪಟ್ಟು ಕಲಿಯುತ್ತಿದ್ದರು. ಅನ್ಸಾರ್ ಶೇಖ್ ಗೆ ಆ ಬಡತನದ ಬೇಗೆಯಲ್ಲಿದ್ದರೂ ತಾನು ಡಿ. ಸಿ. ಆಗಬೇಕೆಂಬ ಛಲದಿಂದ ಪ್ರಯತ್ನ ಪಟ್ಟು ಕಲಿತರು. ಎಸೆಸೆಲ್ಸಿಯಲ್ಲಿ 91% ಹಾಗೂ ಪಿ.ಯು.ಸಿಯಲ್ಲಿ 93% ಅಂಕ ಗಳಿಸಿದರು. ಡಿಗ್ರಿ ಕಲಿಯುತ್ತಿರುವಾಗ ನಿರ್ವಾಹವಿಲ್ಲದೆ ಊಟಕ್ಕಾಗಿ ಪಾರ್ಟ್ ಟೈಮ್ ಕೆಲಸಕ್ಕೆ ಹೋಗಬೇಕಾದುದರಿಂದ ಅಂಕ 73 ಕ್ಕೆ ಇಳಿದಿತ್ತು. ಆದರೂ ಛಲ ಬಿಡದೆ ದೆಹಲಿಗೆ ಹೋಗಿ ಶಿಕ್ಷಣ ಮುಂದುವರಿಸಿದರು. ಡಿಗ್ರಿ ಮಾಡಿ ಕೆಲಸಕ್ಕೆ ಸೇರಿದ್ದ ಅಣ್ಣ ಮಾಹೆಯಾನ ಆರು ಸಾವಿರ ರೂಪಾಯಿಯಂತೆ ದೆಹಲಿಯಲ್ಲಿರುವ ತಮ್ಮನಿಗೆ ಕಳಿಸುತ್ತಾ ಬಂದರು. ತಮ್ಮ ಆ ಹಣವನ್ನು ಜಾಗ್ರತೆಯಿಂದ ಖರ್ಚು ಮಾಡಿದ್ದಲ್ಲದೆ ತಾನೂ ಒಂದು ಅರೆ ಕಾಲಿಕ ನೌಕರಿ ಗಿಟ್ಟಿಸಿಕೊಂಡು ದಿನದೂಡುತ್ತಾ ಕಲಿತು ಐ. ಎ.ಎಸ್ ಪರೀಕ್ಷೆ ಬರೆದು ಫಸ್ಟ್ ಎಟೆಂಪ್ಟ್ ನಲ್ಲೇ 367 ರ್ ಯಾಂಕ್ ನಲ್ಲಿ ಉತ್ತೀರ್ಣನಾಗಿ ಜಿಲ್ಲಾಧಿಕಾರಿಯಾದರು.
ತನಗೆ ರೋಲ್ ಮಾಡೆಲ್ ಅಬ್ದುಲ್ ಕಲಾಮ್ ರವರು ಎನ್ನುತ್ತಾರೆ ಅನ್ಸಾರ್ ಶೇಖ್. ಉತ್ತರ ಪ್ರದೇಶದ ಜೌಹಾನ್ ಪುರ ಜಿಲ್ಲೆಯ ಮಧವು ಪಟ್ ಎಂಬ ಒಂದು ಗ್ರಾಮದಲ್ಲಿರುವ 75 ಮುಸ್ಲಿಮ್ ಕುಟುಂಬಗಳ ಪೈಕಿ 43 ಕುಟುಂಬಗಳ ಮಕ್ಕಳು ಛಲದಿಂದ ಕಲಿತು ಐ.ಎ.ಎಸ್ ಅಧಿಕಾರಿಗಳಾಗಿದ್ದಾರೆ. ಈ 43 ಕುಟುಂಬಗಳ ಪೈಕಿ ಒಂದು ಕುಟುಂಬದಲ್ಲಿ ಐದು ಮಂದಿ ಐ.ಎ.ಎಸ್ ಆಫೀಸರುಗಳಿದ್ದಾರೆ. ಇಡೀ ದೇಶದ ಮುಸ್ಲಿಮರಿಗೆ ಹೆಮ್ಮೆಯಾಗಿರುವ ಇವರ ಗ್ರಾಮಕ್ಕೆ ಐ.ಎ.ಎಸ್. ಫ್ಯಾಕ್ಟರಿ ಎಂದು ಕರೆಯಲಾಗುತ್ತಿದೆ. ಪರಿಶ್ರಮ ಪಟ್ಟರೆ, ಗುರಿಯತ್ತ ಅಚಲ ನೋಟ ಇಟ್ಟುಕೊಂಡು ಮುನ್ನುಗ್ಗಿದರೆ ಫಲ ಖಂಡಿತ. ಮುಸ್ಲಿಮ್ ಸಮಾಜವು ಈ ಬಗ್ಗೆ ತುಂಬಾ ಗಮನ ಹರಿಸಬೇಕಾಗಿದೆ.
— ಡಿ. ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.