(www. vknews.in) ಮಂಗಳೂರನ್ನು ಡ್ರಗ್ಸ್ ಮಾಫಿಯಾದಿಂದ ಮುಕ್ತಗೊಳಿಸಲು ಶಪಥ ಹೊತ್ತಿದ್ದ ಕಮಿಷನರ್ ವರ್ಗಾವಣೆಯ ಹಿಂದೆ ಕಾಣದ ಕೈಗಳ ಕೈವಾಡ:ಎಸ್ಡಿಪಿಐ ಆರೋಪ
ಕಮಿಷನರ್ ವರ್ಗಾವಣೆ ಆದೇಶವನ್ನು ಸರಕಾರ ಕೂಡಲೇ ಹಿಂಪಡೆಯಬೇಕು:ಅನ್ವರ್ ಸಾದತ್ ಬಜತ್ತೂರು
ದಕ್ಷ ಪ್ರಾಮಾಣಿಕ ಅಧಿಕಾರಿ,ಮಾದಕ ದ್ರವ್ಯದ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡು ಡ್ರಗ್ಸ್ ಪೆಡ್ಲರ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಯಾವುದೇ ಭ್ರಷ್ಟಾಚಾರ ನಡೆಸದೆ ಯಾವುದೇ ಪ್ರಚಾರ ಬಯಸದೆ ನಿಷ್ಠಾವಂತಿಗೆಯಿಂದ ಜನಪರವಾಗಿ ಕೆಲಸ ಮಾಡುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ರನ್ನು ದಿಡೀರ್ ವರ್ಗಾವಣೆ ಮಾಡಿದ ಸರ್ಕಾರದ ನಡೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.ಹಾಗೂ ಅವರ ವರ್ಗಾವಣೆ ಆದೇಶವನ್ನು ಸರಕಾರ ಕೂಡಲೇ ಹಿಂಪಡೆಯಲು ಒತ್ತಾಯಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರು ನಿಷ್ಠಾವಂತ ಅಧಿಕಾರಿಯ ವರ್ಗಾವಣೆಯ ಹಿಂದೆ ಡ್ರಗ್ಸ್ ಮಾಫಿಯಾ ಅಥವಾ ಕಾಣದ ಕೈಗಳ ಕೈವಾಡ ನಿಚ್ಚಳವಾಗಿ ಗೋಚರಿಸುತ್ತಿದೆ ಇವರು ಮಂಗಳೂರಿನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರಾಜಕೀಯ ಪ್ರಭಾವ ಹಾಗೂ ಒತ್ತಡಗಳಿಗೆ ಮಣಿಯದೆ ನಿಷ್ಠೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.ಇವರು ಅಧಿಕಾರ ಪಡೆದು ಕೇವಲ ಐದೇ ತಿಂಗಳಲ್ಲೇ ಡ್ರಗ್ಸ್ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಅಲ್ಲದೆ ಯುವ ಸಮೂಹದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಿದರು. ಅದೇ ರೀತಿ ಟ್ರಾಫಿಕ್ ವ್ಯವಸ್ಥೆ ಸುಗಮ ಗೊಳಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಂಡಿದ್ದರು.ಕೆಲವು ದಿನಗಳ ಹಿಂದೆ ನಂತೂರಿನಲ್ಲಿ ಸಿಟಿ ಬಸ್ ನಿಂದ ನಿರ್ವಾಹಕ ಬಿದ್ದು ಮೃತಪಟ್ಟ ಘಟನೆ ನಂತರ ಖಾಸಗಿ ಬಸ್ ಚಾಲಕ ಮಾಲೀಕರಿಗೆ ಹಲವು ಕಟ್ಟುನಿಟ್ಟಿನ ಆದೇಶಗಳನ್ನು ನೀಡಿ ,ನಿರ್ವಾಹಕರು ಹಾಗೂ ಪ್ರಯಾಣಿಕರು ಫುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸುವುದನ್ನು ನಿಷೇಧಿಸಿ,ಬಸ್ಸುಗಳಿಗೆ ಬಾಗಿಲು ಅಳವಡಿಸಬೇಕೆಂದು ಆದೇಶವನ್ನು ಹೊರಡಿಸಿದ್ದರು.ಅದಲ್ಲದೇ ನಿನ್ನೆ ಬಜ್ಪೆಯಲ್ಲಿ ಸಂಘಪರಿವಾರದ ಗೂಂಡಗಳು ಮುಸ್ಲಿಂ ಯುವಕರಿಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಲ್ಲದೆ ಮಂಗಳೂರಿನಲ್ಲಿ ಅವರು ಅಧಿಕಾರ ವಹಿಸಿಕೊಂಡ ನಂತರ ಅನೈತಿಕ ಪೋಲಿಸ್ ಗಿರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪ್ರಚಾರ ರಹಿತವಾಗಿ ಹಲವಾರು ಉತ್ತಮ ಕೆಲಸಗಳನ್ನು ಮಾಡಿದ್ದರು. ಇಂತಹ ಅಧಿಕಾರಿಯ ಅವಶ್ಯಕತೆ ಮಂಗಳೂರಿಗೆ ಇತ್ತು. ಆದರೆ ಇದೀಗ ಕಾಣದ ಕೈಗಳು ಇವರನ್ನು ವರ್ಗಾವಣೆ ಮಾಡಿಸುವುದರಲ್ಲಿ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
ಕುಲದೀಪ್ ಜೈನ್ ರವರ ವರ್ಗಾವಣೆ ಆದೇಶವನ್ನು ಸರಕಾರ ಕೂಡಲೇ ಹಿಂಪಡೆದು ಮಂಗಳೂರು ಪೋಲಿಸ್ ಆಯುಕ್ತರಾಗಿ ಮುಂದುವರೆಯುವ ಆದೇಶ ಹೊರಡಿಸಬೇಕೆಂದು ಅನ್ವರ್ ಸಾದತ್ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.