(www. vknews.in) ಸಮಾಜದಲ್ಲಿ, ಉಪಯುಕ್ತ ವ್ಯಕ್ತಿಗಳಾಗಿ ಬೌದ್ಧಿಕ ಸಾಮರ್ಥ್ಯಗಳ ಮೂಲಕ ಕೌಶಲ್ಯಗಳನ್ನು ಬೆಳೆಸುವಂತಹಾ ಪಾತ್ರಗಳನ್ನು ಶಿಕ್ಷಕರಾದವರು ತುಂಬುತ್ತಾರೆ. ಅವರ ಸಮರ್ಪಣೆ, ಬುದ್ದಿವಂತಿಕೆ, ನೈತಿಕ ಗುಣಗಳು ಕಲಿಯುವ ಮನಸ್ಸುಗಳಿಗೆ ಜ್ಞಾನ ಸಂಪಾದಿಸಲು, ಭವಿಷ್ಯದ ಕನಸು ಕಾಣಲು ಮತ್ತು ವ್ಯಕ್ತಿತ್ವ ವಿಕಸನಗೊಳ್ಳಲು ಪ್ರೇರೇಪಿಸುತ್ತದೆ.
ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಹೇಳಿರುವಂತೆ, ‘ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನದಲ್ಲಿ ಸಂತೋಷವನ್ನು ಜಾಗೃತಗೊಳಿಸುವುದು ಶಿಕ್ಷಕರ ಅತ್ಯುನ್ನತ ಕಲೆಯಾಗಿದೆ’ ಉತ್ತಮ ಶಿಕ್ಷಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡುವುದರ ಜೊತೆಗೆ ಸಂದರ್ಭೋಚಿತ ಸಲಹೆ, ಮೌಲ್ಯಗಳ ತಿಳಿಸಿಕೊಡುವ ಮೂಲಕ ಉತ್ತಮ ಮಾರ್ಗದರ್ಶಕರೂ ಆಗುತ್ತಾರೆ.
ಶಿಕ್ಷಕರ ದಿನಾಚರಣೆ ಬರುವಾಗಲೆಲ್ಲಾ ಹೈಸ್ಕೂಲಿನಲ್ಲಿ ಕಲಿಯುತ್ತಿರುವಾಗ ನಮಗೆ ಕನ್ನಡ ಪಾಠ ಮಾಡಲು ಬರುತ್ತಿದ್ದ ಗಣೇಶ್ ಜಾಲ್ಸೂರು ಸರ್ ಅವರು ನೆನಪಾಗುತ್ತಾರೆ.ಹಾಗೆಯೇ ನನ್ನ ಬರಹದ ಶೈಲಿ ಚೆನ್ನಾಗಿದೆ ಎಂದು ಗುರುತಿಸಿದವರಲ್ಲೊಬ್ಬರು ಅವರು. ತರಗತಿಗೆ ಕಾಲಿಟ್ಟಾಗ ಅವರ ಮೇಲೆ ಅದೇನೋ ಗೌರವ! ಥಟ್ಟನೆ ಎಲ್ಲರೂ ಎದ್ದು ನಿಂತು ನಮಸ್ಕಾರ ಹೇಳುತ್ತಿದ್ದೆವು . ಪಾಠ ಮಾಡುವ ವೈಖರಿಯೂ ಅದೇ ರೀತಿ ಇತ್ತು. ಪ್ರತಿಯೊಬ್ಬರಲ್ಲೂ ಪಾಠಗಳನ್ನು ಓದಿಸುತ್ತಾ ಉಚ್ಚಾರಣೆಯ ಧಾಟಿಯನ್ನು ಹೇಳಿ ಕೊಟ್ಟು ತಪ್ಪುಗಳನ್ನು ಅಲ್ಲಿಯೇ ಸರಿಪಡಿಸುತ್ತಿದ್ದರು. ಕಥೆಗಳ ಸಾರಾಂಶವನ್ನು ವಿವರಿಸುವಾಗ ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಕೇಳುವಂತಹಾ ಸೆಳೆತವು ಅದರಲ್ಲಿರುತಿತ್ತು. ಕನ್ನಡ ವ್ಯಾಕರಣದ ಅಲಂಕಾರ ಮಾತೃಕೆಗಳನ್ನು ಚಂದವಾಗಿ ವಿವರಿಸಿ ಕೊಡುತ್ತಿದ್ದರು. ಬರವಣಿಗೆ ಉತ್ತಮವಾಗಲೆಂದು ನೋಟ್ ಪುಸ್ತಕದ ಕೊನೆಯಲ್ಲಿ ಸಹಿಯೊಂದಿಗೆ, ಬರವಣಿಗೆ ಚೆನ್ನಾಗಿದೆ/ ಒಳ್ಳೆಯದಾಗಿದೆ ಎಂಬ ಪ್ರೋತ್ಸಾಹದ ನುಡಿಯನ್ನು ಬರೆದು ಕೊಡುತ್ತಿದ್ದರು. ಅಲ್ಲದೇ, ಉತ್ತಮ ನಾಯಕರಿಗಿರಬೇಕಾದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಸ್ಪೂರ್ತಿದಾಯಕ ನುಡಿಗಳನ್ನು ಆಗಾಗ್ಗೆ ನೀಡುತ್ತಿದ್ದರು. ಶಾಲಾ ಶೈಕ್ಷಣಿಕ ಕಾರ್ಯಕ್ರಮದಲ್ಲೂ ತಾವೇ ಮುತುವರ್ಜಿ ವಹಿಸಿ “ಕುರುಡು ಕಾಂಚಾಣ ಕುಣಿಯುತ್ತಲಿತ್ತು” ಎಂಬ ಹಾಡನ್ನು ನಮ್ಮಿಂದ ಹಾಡಿಸಿದ್ದರು. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಂತಹ ಇಂತಹಾ ಶಿಕ್ಷಕರನ್ನು ನೆನೆದಾಗಲೆಲ್ಲ ಕೃತಜ್ಞತಾ ಭಾವ ತುಂಬಿಬರುತ್ತದೆ.
ಇದೇ ರೀತಿ, ವಿದ್ಯಾರ್ಥಿಗಳಲ್ಲಿ ಗ್ರಹಿಕೆಗಳನ್ನು ರೂಪಿಸುವ, ಅವರು ಮುನ್ನೋಟಗಳಿಗೆ ಸವಾಲು ಕೊಡುವ, ದುರ್ಬಲತೆಯನ್ನು ಪರಿಹರಿಸುವ ಶಿಕ್ಷಕರು ಸಮಾಜಕ್ಕಿಂದು ಅತ್ಯಗತ್ಯವಾಗಿದೆ. ಶ್ರೇಷ್ಠ ಶಿಕ್ಷಕ, ವಿದ್ವಾಂಸ, ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಸರ್ ಅವರಿಗೆ ಗೌರವ ಸಲ್ಲಿಸುತ್ತಾ ಪ್ರತ್ಯಕ್ಷ ಪರೋಕ್ಷವಾಗಿ ನನ್ನೊಳಗೆ ಜ್ಞಾನ ಧಾರೆಯೆರೆದ ಎಲ್ಲಾ ಶಿಕ್ಷಕ ವೃಂದಕ್ಕೆ ಈ ಶುಭದಿನದಂದು ಶುಭಾಶಯಗಳನ್ನು ಸಲ್ಲಿಸುತ್ತೇನೆ.
– ರಮೀಝ ಯಂ.ಬಿ ಕನ್ನಡ ಹಾಗೂ ಬ್ಯಾರಿ ಲೇಖಕಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.