(www.vknews.in) ಕೇವಲ ಅಕ್ಷರ ಕಲಿಸಿ ಉತ್ತಮ ಅಂಕಗಳಿಸಲು ಶ್ರಮಿಸುವವರು ಪರಿಪೂರ್ಣ ಶಿಕ್ಷಕರಾಗಲು ಸಾಧ್ಯವಿಲ್ಲ.
ಒಬ್ಬ ಪರಿಪೂರ್ಣ ಶಿಕ್ಷಕರೆನಿಸಿಕೊಂಡವರು ಪಠ್ಯಪುಸ್ತಕದ ಪಾಠದ ಜೊತೆಗೆ ಜೀವನದ ಪಾಠ , ಮಾನವೀಯ ಮೌಲ್ಯಗಳು, ಸೌಹಾರ್ದ ಹಾಗೂ ಶಿಸ್ತಿನ ಬದುಕನ್ನು ಕಲಿಸಿಕೊಟ್ಟು ವಿದ್ಯಾರ್ಥಿಯನ್ನು ಒಬ್ಬ ಸತ್ಪ್ರಜೆಯಾಗಿ ರೂಪಿಸಲು ಪ್ರಯತ್ನಿಸುತ್ತಾರೆ. ಅದರ ಜೊತೆಗೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಸಾಧನೆಯ ಗುರಿ ಮುಟ್ಟಲು ಸಹಕಾರ ನೀಡುತ್ತಾರೆ. ಎಲ್ಲಾ ಶಿಕ್ಷಕರು ಹೀಗೆ ಆಗಲು ಸಾಧ್ಯವಿಲ್ಲ. ಆದರೆ ಪ್ರತೀ ಶಾಲಾ ಕಾಲೇಜುಗಳಲ್ಲಿ ಒಬ್ಬರಾದರೂ ಇಂತಹ ಆದರ್ಶನೀಯ ಶಿಕ್ಷಕ \ ಶಿಕ್ಷಕಿ ಇದ್ದೇ ಇರುತ್ತಾರೆ. ಅಂತಹ ಒಬ್ನ ಶಿಕ್ಷಕಿಯೇ ನನ್ನ ಕಾಲೇಜು ದಿನಗಳಲ್ಲಿ ದೊರೆತ ‘ಜಯಲಕ್ಷ್ಮೀ ಮಿಸ್’.
ಹತ್ತನೇ ತರಗತಿಯ ನಂತರ ಕಾಲೇಜಿಗೆ ಸೇರಲು ನನ್ನ ಊರಿನಿಂದ ಹದಿನಾರು ಕಿ.ಮೀ. ದೂರದಲ್ಲಿರುವ ಮಡಿಕೇರಿಗೆ ಬಸ್ಸಿನಲ್ಲಿ ಹೋಗಬೇಕಾಗಿತ್ತು. ದಿನಾ ಬಸ್ಸಿನಲ್ಲಿ ಹೋಗಿ ಬರುವುದು ನನ್ನಮ್ಮನಿಗೆ ಇಷ್ಟವಿರಲಿಲ್ಲ. ನನ್ನ ಗೆಳತಿಯರೆಲ್ಲರೂ ಕಾಲೇಜಿಗೆ ಸೇರಿದಾಗ ನನಗೂ ಕಲಿಯಲು ಅದಮ್ಯ ಬಯಕೆಯಿದ್ದರೂ ಅಮ್ಮನ ಇಚ್ಛೆಗೆ ವಿರುದ್ಧವಾಗದೆ ಅವರ ಆಸೆಯಂತೆ ಕಟ್ಟಿಂಗ್ ಕ್ಲಾಸ್ಗೆ ಸೇರಿದೆ.ಜೊತೆಗೆ ಟೈಪಿಂಗ್ ಕ್ಲಾಸ್ಗೂ ಹೋಗುತ್ತಿದ್ದೆ. ನನ್ನ ಮಡಿಕೇರಿಯ ಚಿಕ್ಕಮ್ಮನ ಮನೆಯ ಮುಂದೆಯೇ ಶ್ರೀ ರಾಜರಾಜೇಶ್ವರಿ ಕಾಲೇಜು ಇತ್ತು. ಅಲ್ಲಿಯ ಟೀಚರ್ಸ್ಗಳೆಲ್ಲಾ ನನ್ನ ಚಿಕ್ಕಮನ ಆತ್ಮೀಯರು. ಅವರು ಬಿಡುವಿನ ವೇಳೆಯಲ್ಲಿ ಚಿಕ್ಕಮನ ಮನೆಯಲ್ಲಿ ಸಮಯ ಕಳೆಯುತ್ತಿದ್ದರು. ಒಂದು ದಿನ ಚಿಕ್ಕಮನ ಮನೆಗೆ ನನ್ನಮ್ಮ ಹೋದಾಗ ಜಯಲಕ್ಷ್ಮಿ ಮಿಸ್ ನನ್ನಮ್ಮನಲ್ಲಿ ಮಾತನಾಡುತ್ತಿರುವಾಗ ನನ್ನ ವಿಷಯ ಪ್ರಸ್ತಾಪವಾಯಿತು. ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿದ್ದೇನೆ ಎಂದು ಅರಿವಾದ ತಕ್ಷಣ ಜಯಲಕ್ಷ್ಮೀ ಮಿಸ್ ” ಇಷ್ಟು ಒಳ್ಳೆಯ ಅಂಕಗಳಿಸಿ ಯಾಕೆ ಕಾಲೇಜಿಗೆ ಕಳಿಸುತ್ತಿಲ್ಲ. ನಾಳೆನೇ ಅವಳನ್ನು ನಮ್ಮ ಕಾಲೇಜಿಗೆ ಸೇರಿಸಿ. ನೀವು ಕಲಿಸದಿದ್ದರೆ ನಿಮ್ಮ ಮಗಳ ಫೀಸ್ ನಾನೇ ಕಟ್ಟಿ ಕಲಿಸುತ್ತೇನೆ ಎಂದು ತುಂಬಾ ಹಠ ಹಿಡಿದರು. ಕೊನೆಗೂ ಅವರ ಹಠಕ್ಕೆ ಮಣಿದ ನನ್ನಮ್ಮ ಮಾರನೇ ದಿನವೇ ನನ್ನನ್ನು ರಾಜೇಶ್ವರಿ ಕಾಲೇಜಿಗೆ ಸೇರಿಸಿದರು. ಆಗಲೇ ಕಾಲೇಜು ಶುರುವಾಗಿ ಎರಡು ತಿಂಗಳಾಗಿತ್ತು. ಇನ್ನು ನಾನು ಕಾಲೇಜು ಮೆಟ್ಟಿಲು ಹತ್ತವುದಿಲ್ಲವೆಂದು ಭಾವಿಸಿದ್ದ ನನಗೆ ನಡೆದ ಘಟನೆಗಳೆಲ್ಲವೂ ಕನಸಂತೆ ಗೋಚರಿಸಿತು. ಕಾಲೇಜಿಗೆ ಮೊದಲ ದಿನ ಹೋದಾಗ ಹೊಸಬಳಾದ ನನಗೆ ತುಂಬಾ ಮುಜುಗರವಾಗುತ್ತಿತ್ತು. ಅದನ್ನು ಅರ್ಥೈಸಿದ ಜಯಲಕ್ಷ್ಮೀ ಮಿಸ್ ” ಏನೂ ಹೆದರಬೇಡ. ನಾನಿದ್ದೇನೆ ಎಂದು ಧೈರ್ಯ ತುಂಬುತ್ತಾ ನನ್ನ ಬೆನ್ನು ಸವರಿ ಸಹಪಾಠಿಗಳಿಗೆ ಪರಿಚಯ ಮಾಡಿಸಿದ ನೆನಪು ಈಗಲೂ ಕಣ್ಣ ಮುಂದಿದೆ. ನನಗೆ ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವುದೆಂದರೆ ಬಹಳ ಆಸಕ್ತಿ. ಇದನ್ನು ಗಮನಿಸಿದ ಜಯಲಕ್ಷ್ಮೀ ಮಿಸ್ ನನ್ನನ್ನು ಪ್ರತೀ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತೇಜಿಸಿ, ಬಹುಮಾನ ಸಿಕ್ಕಿದಾಗ ಪ್ರಶಂಸಿಸಿ ಪ್ರೋತ್ಸಾಹಿಸುತ್ತಿದ್ದರು. ದ್ವಿತೀಯ ಪಿ.ಯು.ಸಿ ಮುಗಿದಾಗ ತರಗತಿಯಲ್ಲಿರುವ ಎಲ್ಲಾ ಮಕ್ಕಳನ್ನು ಅವರ ಮನೆಗೆ ಕರೆದು ಔತಣ ಕೂಟವನ್ನು ಏರ್ಪಡಿಸಿದ್ದರು. ತನ್ನ ಮಕ್ಕಳಿಗಾಗಿ ಪ್ರೀತಿಯಿಂದ ತಾನೇ ಕೈಯಾರೆ ತಯಾರಿಸಿದ ಆಹಾರವನ್ನು ಅಕ್ಕರೆಯಿಂದ ಉಣಬಡಿಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ನನ್ನ ತರಗತಿಯಲ್ಲಿರುವ ಒಬ್ಬ ಅನಾಥ ವಿದ್ಯಾರ್ಥಿನಿಗೆ ಹಾಸ್ಟೆಲ್ನಲ್ಲಿ ಕಲಿಯಲು ಕಷ್ಟವಾಗುತ್ತದೆಂದು ಅರಿವಾದ ತಕ್ಷಣ ಅವರ ಮನೆಯಲ್ಲೇ ಅವಳನ್ನು ಇರಿಸಿ ಕಲಿಸುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆವ ಜಯಲಕ್ಷ್ಮೀ ಮಿಸ್ ಪೀರಿಯೆಡ್ ಎಂದರೆ ನಮಗೆಲ್ಲರಿಗೂ ಬಹಳ ಖುಷಿ. ಪಾಠದ ಜೊತೆ ತನ್ನ ಅನುಭವ ಕಥೆಗಳು, ಜೋಕ್ಸ್ ಗಳಿಂದ ನಮ್ಮಲ್ಲರನ್ನೂ ರಂಜಿಸಿ ಎಲ್ಲೂ ಅವರ ಕ್ಲಾಸ್ ಬೋರಾಗದಂತೆ ನೋಡಿಕೊಳ್ಳುವ ಚಾಣಕ್ಯತೆ ಅವರಲ್ಲಿತ್ತು. ಇಂತಹ ಅದೆಷ್ಟೋ ಶಿಕ್ಷಕರು ನಮ್ಮ ನಡುವೆ ಇದ್ದಾರೆ.ತಾನು ಕಲಿಸಿದ ಮಕ್ಕಳು ದಾರಿ ತಪ್ಪದಂತೆ ಅವರ ಮೇಲೆ ನಿಗಾವಹಿಸಿ, ಒಬ್ಬ ಉತ್ತಮ ಪ್ರಜೆಯಾಗಿ ರೂಪಿಸಬೇಕೆಂದು ಪಣತೊಡುತ್ತಾರೆ. ಶಿಕ್ಷಕರೆಂದರೆ ನಮ್ಮ ಎರಡನೇ ಪೋಷರು, ಮಾರ್ಗದರ್ಶಕರು. ತಾನು ಕಲಿಸುವ ಮಕ್ಕಳ ಧರ್ಮ ಯಾವುದೆಂದು ನೋಡದೆ ಎಲ್ಲಾ ಮಕ್ಕಳನ್ನು ಸಮಾನರಾಗಿ ಪ್ರೀತಿಸಿ ಆಶೀರ್ವದಿಸುವ ಜಯಲಕ್ಷೀ ಮಿಸ್ ನಂತಹ ಶಿಕ್ಷಕರ ಅವಶ್ಯಕತೆ ಇಂದಿನ ಸಮಾಜಕ್ಕೆ ಬಹಳ ಅಗತ್ಯವಿದೆ.
ರಹ್ಮತ್ ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.