ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಪ್ರಸ್ತುತ ಕೋಲಾರದಲ್ಲಿ 1500 ಬೋರ್ಗಳಿದ್ದು , ಅವುಗಳಲ್ಲಿ 1200 ಸಕ್ರಿಯವಾಗಿವೆ . ನಗರದಲ್ಲಿ ಚಾಲ್ತಿಯಲ್ಲಿರುವ ಬೋರ್ಗಳನ್ನು ಮೌಲ್ಯಮಾಪನ ಮಾಡಿ ಕೂಡಲೆ ವರದಿ ನೀಡುವಂತೆ ನಗರಸಭೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬರಘೋಷಣೆ ಬೆನ್ನಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಸೆಪ್ಟೆಂಬರ್ ಮಾಹೆಯಿಂದ ಜನವರಿ ವರೆಗೆ ನೀರಿನ ಸಮಸ್ಯೆಯಿರುವುದಿಲ್ಲ. ಜಿಲ್ಲೆಯಲ್ಲಿ ಅಂರ್ತಜಲ ಮಟ್ಟ ಚೆನ್ನಾಗಿದ್ದು ಹಾಗೂ ಕೆ.ಸಿ.ವ್ಯಾಲಿಯಿಂದ ವಾಟರ್ ಟ್ಯಾಂಕ್ಗಳಲ್ಲಿ ಶೇ .90 ರಷ್ಟು ನೀರಿದ್ದು , ನಗರ ಹಾಗೂ ಗ್ರಾಮೀಣ ನೀರಿನ ಸಮಸ್ಯೆ ಬಾರದಂತೆ ಅಂರ್ತಜಲ ಉಪಯೋಗಿಸುಕೊಂಡು ಸಾರ್ವಜನಿಕರಿಗೆ ನೀರನ್ನು ಒದಗಿಸುವುದು ಪ್ರಥಮ ಅದ್ಯತೆ ಎಂದರು.
ಮುಂದಿನ 3 ತಿಂಗಳಿಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ಇರುವ ಎಲ್ಲಾ ಬೋರ್ಗಳ ಮೌಲ್ಯಮಾಪನ ಮಾಡುವುದು ಹಾಗೂ ಅವುಗಳನ್ನು ಸುಸ್ಥಿತಿಯಲ್ಲಿಡಲು ಪ್ಲೆಶ್ ,ರಿರ್ಚಾಜ್ ಮಾಡಿಸಬೇಕು. ಹೊಸದಾಗಿ ಬೋರ್ ಕೊರೆಸುವ ಯೋಜನೆ ಮಾಡದೆ ಈಗಿರುವ ಬೋರ್ವೆಲ್ಗಳನ್ನು ಕಾರ್ಯಗತಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದರು.
ಬರ ಪರಿಹಾರಕ್ಕಾಗಿ ಟಾಸ್ಕ್ರ್ಸ್ ಸಮಿತಿಯನ್ನು ರಚಿಸಿದ್ದು , ಮಾರ್ಗಸೂಚಿಯನ್ವಯ ಕ್ಷೇತ್ರವಾರು ಹಣವನ್ನು ನೀಡಲಾಗುತ್ತಿದೆ ಹಾಗೂ ಇದನ್ನು ನಿರ್ವಹಿಸುವುದು ನಗರಸಭೆ ಆಯುಕ್ತರು ಹಾಗೂ ತಹಶೀಲ್ದಾರ್ ಅವರ ಜವಾಬ್ದಾರಿಯಾಗಿದ್ದು , ಈ ಬಗ್ಗೆ ನಗರಸಭೆಯವರು ಇನ್ನೆರಡು ದಿನದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕೆಂದು ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ 2800 ಬೋರ್ವೆಲ್ಗಳಿದ್ದು ,1600 ಚಾಲ್ತಿಯಲ್ಲಿವೆ. ಪ್ರಸ್ತುತ ಇರುವ ಬೋರ್ವೆಲ್ಗಳನ್ನು ಆಳಕ್ಕೆ ಇಳಿಸುವುದು. ಪ್ಲೆಶ್ ಮಾಡುವುದು ಹಾಗೂ ಪಂಪ್ ಮೋಟರ್ನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಇದರಿಂದ ನಮಗೆ ನೀರಿನ ಮೂಲ ಸೌಲಭ್ಯ ದೊರಕುತ್ತದೆ. ನೀರಿನ ಸರಬರಾಜು ಇಲ್ಲದ ಕಡೆ ಮೊಬೈಲ್ ಟ್ಯಾಂಕ್ರನ್ನು ಬಳಸಿ ನೀರು ವಿತರಣೆ ಮಾಡಬೇಕು ಎಂದರು.
ಬರಗಾಲದಲ್ಲಿ ಸಾರ್ವಜನಿಕರು ನೀರಿಗಾಗಿ ಪರದಾಡುವ ಸಮಸ್ಯೆ ಉಂಟಾಗದಂತೆ 24 ಗಂಟೆಯೊಳಗಾಗಿ ನೀರು ಸರಬರಾಜು ಮಾಡಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಂಟ್ರೋಲ್ ರೂಂನ್ನು ಸ್ಥಾಪಿಸಿದ್ದು , ಅದರ ಟೋಲ್ ಫ್ರಿ ನಂ -1077 ಆಗಿರುತ್ತದೆ. ನೀರಿನ ಸಮಸ್ಯೆ ಬಂದಾಗ ಸಾರ್ವಜನಿಕರು ಈ ನಂಬರ್ಗೆ ಕರೆ ಮಾಡಬೇಕು ಹಾಗೂ ನೀರು ಸರಬರಾಜು ಇಲಾಖಾ ಅಧಿಕಾರಿಗಳಿಗೆ ಈ ಬಗ್ಗೆ ಗಮನಹರಿಸಬೇಕೆಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಾಗೂ ನಗರಸಭೆಗಳಲ್ಲಿ ಸಹಾಯವಾಣಿಯನ್ನು ಸ್ಥಾಪಿಸಬೇಕೆಂದರು. ಈ ಎಲ್ಲಾ ಕ್ರಮಗಳನ್ನು ಬರ ಪರಿಹಾರದ ಮುನ್ನೆಚ್ಚರಿಕೆಯಾಗಿ ಸಿದ್ಧತೆಗಳು ಮಾಡಿಕೊಳ್ಳಬೇಕಾಗಿದ್ದು ,ಜನಸಾಮಾನ್ಯರು ತೊಂದರೆಗೊಳಗಾದಾಗ ಪ್ಲೆಶ್ ರಿಪೇರಿ ಎಂದು ಕಾರಣ ಹೇಳದೆ ಮುಂಚಿತವಾಗೇ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ ಒಟ್ಟು 195 ಕುಡಿಯುವ ನೀರಿನ ಘಟಕಗಳಿದ್ದು , ಅವುಗಳಲ್ಲಿ 51 ಮಾತ್ರ ಕೆಲಸ ಮಾಡುತ್ತಿವೆ. ಇನ್ನುಳಿದ ಕುಡಿಯುವ ನೀರಿನ ಘಟಕಗಳು ಕಳೆದ 3 ವರ್ಷದಿಂದ ಬಳಸದೇ ಇರುವುದರಿಂದ ಅವುಗಳು ಹಾಳಾಗಿವೆ ಎಂದರು. ಇನ್ನುಳಿದವುಗಳ ಬಗ್ಗೆ ನಗರಸಭೆ ಪೌರಾಯುಕ್ತರು ದೃಢೀಕರಿಸಿ ವರದಿ ನೀಡಬೇಕೆಂದರು. ಗ್ರಾಮೀಣ ಭಾಗದಲ್ಲಿಯೂ ಕುಡಿಯುವ ನೀರಿನ ಬಗ್ಗೆ ಇದೇ ಕ್ರಮವನ್ನು ಅನುಸರಿಸಲು ತಿಳಿಸಿದರು. ಕಳೆದ 3 ವರ್ಷಗಳಿಂದ ಕುಡಿಯುವ ನೀರಿನ ಘಟಕಗಳನ್ನು ಉಪಯೋಗಿಸದೆ ಇರುವುದರಿಂದ ಮೊಟ್ಟಮೊದಲು ಅದನ್ನು ಸ್ವಚ್ಛಗೊಳಿಸಲು ಅದ್ಯತೆ ನೀಡಬೇಕು ಹಾಗೂ ನೀರಿನ ಗುಣಮಟ್ಟ ಪರೀಕ್ಷೆ ನಡೆಸಬೇಕೆಂದರು.
ನಮ್ಮಲಿರುವ ಜಲಮೂಲಗಳು ಕಡಿಮೆಯಾದಲ್ಲಿ ಮುಂಜಾಗ್ರತೆ ಕ್ರಮವಾಗಿ ಖಾಸಗಿ ಬೋರ್ವೆಲ್ಗಳನ್ನು ಗುರುತಿಟ್ಟುಕೊಳ್ಳುವುದು. ಮುಂದೆ ತೊಂದರೆಯಾದಾಗ ಗುತ್ತಿಗೆ ಆಧಾರದ ಮೇಲೆ ಪಡೆಯಲು ಪರ್ಯಾಯ ಮಾರ್ಗವನ್ನು ಸಿದ್ಧಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಜಾನುವಾರುಗಳಿಗೆ ಮೇವು ನೀರು ಆದ್ಯತೆ ಪ್ರಸ್ತುತ ಜಾನುವಾರುಗಳಿಗೆ ಮೇವು – ನೀರಿಗೆ ತೊಂದರೆ ಇರುವುದಿಲ್ಲ. ಅದರೂ ಮುಂಬರುವ ದಿನಗಳಿಗೆ ಬೇಕಾಗುವ ಮೇವು – ನೀರನ್ನು ಸಂಗ್ರಹಿಸಲು ಯೋಜನೆ ರೂಪಿಸಬೇಕೆಂದರು. ಈ ಬಾರಿ ಕಟಾವು ಮಾಡಲು ಯಂತ್ರಗಳನ್ನು ಬಳಸದೆ ಕೈಯಲ್ಲಿ ಕಟಾವು ಮಾಡುವುದರಿಂದ ಜನರಿಗೆ ಕೂಲಿ ದೊರೆತು ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದ್ದು , ಜಿಲ್ಲೆಯಲ್ಲಿ ಎಲ್ಲರೂ ಈ ಪದ್ದತಿಯನ್ನು ಅಳವಡಿಸಿಕೊಳ್ಳಬೇಕೆಂದರು. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹಾಗೂ ಚರ್ಮಗಂಟು ರೋಗ ಹಬ್ಬಿದ್ದು , ಈಗಾಗಲೇ ಅವುಗಳಿಗೆ ಲಸಿಕೆ ನೀಡಲಾಗಿದೆ . ಜಿಲ್ಲೆಯಲ್ಲಿ 2.36 ಲಕ್ಷ ಜಾನುವಾರುಗಳಿದ್ದು , ಇದೇ 26 ರಿಂದ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದರು .
ಬೆಳೆ ಸಮೀಕ್ಷೆ ವರದಿ
ಸೆಪ್ಟೆಂಬರ್ 30 ರೊಳಗಾಗಿ ಬೆಳೆ ಸಮೀಕ್ಷೆ ವರದಿಯನ್ನು ಕಡ್ಡಾಯವಾಗಿ ಮುಗಿಸಬೇಕು ಹಾಗೂ ಬಿತ್ತನೆ ಮಾಡಿ ಬೆಳೆ ನಷ್ಟ ಆದವರಿಗೆ ಪರಿಹಾರ ನೀಡಲು ತಹಶೀಲ್ದಾರರು ಪರಿಶೀಲಿಸಿ ಮಾಹಿತಿ ನೀಡಬೇಕೆಂದರು. ನಮ್ಮ ಜಿಲ್ಲೆಗೆ ಸಕಾಲದಲ್ಲಿ ಮಳೆಯಾಗದ ಕಾರಣ ಬೆಳೆ ಸಮೀಕ್ಷೆ ವರದಿಯಲ್ಲಿ ಹಿಂದೆಯಿದ್ದು , ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ಈಗಿನಿಂದಲೇ ಸರ್ವೆ ಆರಂಭಿಸಬೇಕೆಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರಾದ ವಿ.ಡಿ ರೂಪಾದೇವಿ ಅವರು ಬೆಳೆ ಸಮೀಕ್ಷೆ ಬಗ್ಗೆ ಮಾತನಾಡಿ ಮಾರ್ಗಸೂಚಿಯನ್ವಯ ಬಿತ್ತನೆ ಮಾಡಿ ಬೆಳೆ ನಷ್ಟ ಆದವರಿಗೆ ಸಬ್ಸಿಡಿ ನೀಡಲಾಗುವುದು. ಖಾಸಗಿ ನಿವಾಸಿಗಳು ಸರ್ವೆ ಮಾಡುವಾಗ ಬಹಳ ಎಚ್ಚರಿಕೆ ಹಾಗೂ ಕ್ರಮವಾಗಿ ಮಾಡಬೇಕು ಎಂದರು. ಖಾಸಗಿ ಸರ್ವೆಯವರಿಗೆ ಇನ್ನು 4-5 ದಿನದಲ್ಲಿ ವೇತನ ನೀಡಲಾಗುತ್ತಿದ್ದು , ಅದರಿಂದ ವೇಗವಾಗಿ ಹಾಗೂ ಶೀಘ್ರವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು. ಬೆಳೆ ಪರಿಹಾರಕ್ಕೆ ಸೆಪ್ಟೆಂಬರ್ 30 ರೊಳಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ರೈತರ ಹೆಸರು ಬಿಟ್ಟು ಹೋದರೆ ಅಲ್ಲಿನ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕೃಷಿ ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಸಹಾಯಕರೊಂದಿಗೆ ಸಹಕರಿಸಿ ಸರ್ವೆ ಮುಗಿಸಬೇಕೆಂದರು. ಆರ್.ಟಿ.ಸಿ ಯಲ್ಲಿ ಎರಡು ಎಕರೆಗೆ ಬೆಳೆ ನಷ್ಟ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಈಗ ಎಷ್ಟು ಜಮೀನು ಇದೆಯೋ ಅಷ್ಟನ್ನು ನಮೂದಿಸಿದಾಗ ಮಾತ್ರ ಅಷ್ಟೂ ಬೆಳೆಗೂ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಈ ಹಣವನ್ನು ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗುವುದು ಎಂದರು.
ನಮ್ಮ ಜಿಲ್ಲೆಯು ಕಂದಾಯ , ಕೃಷಿ , ತೋಟಗಾರಿಕೆ ಹಾಗೂ ಚುನಾವಣೆಯಂತಹ ಕೆಲಸಗಳಲ್ಲಿ ರಾಜ್ಯದಲ್ಲೇ ಐದನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿಯವರು ಹರ್ಷ ವ್ಯಕ್ತಪಡಿಸಿದರು. ಕಂದಾಯ ಮಂತ್ರಿಗಳು ಜಿಲ್ಲೆಯ ಈ ಉತ್ತಮ ಕೆಲಸಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಅಭಿನಂದನೆಗೆ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಯವರ ಶ್ರದ್ಧೆ ಹಾಗೂ ಶ್ರಮವೆ ಕಾರಣವಾಗಿದ್ದು ಎಲ್ಲರಿಗೂ ಧನ್ಯವಾದ ತಿಳಿಸಿದರು. ಮತಗಟ್ಟೆ ಭೇಟಿ ನೀಡಿ ಸಮೀಕ್ಷೆ ಮಾಡಿ ವರದಿ ನೀಡುವಲ್ಲಿ ನಮ್ಮ ಜಿಲ್ಲೆಯು ಪ್ರಥಮವಾಗಿದ್ದು , ಈ ವರದಿಯು ನಿಖರವಾಗಿದ್ದು ಎಲ್ಲಾ ಜಿಲ್ಲೆಯವರು ಈ ಮಾದರಿಯನ್ನು ಅನುಸರಿಸಬೇಕೆಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ. ಎಲ್ಲಾ ಇಲಾಖೆಯ ಸಹಕಾರದಿಂದ ಇನ್ನು ಉತ್ತಮ ಕೆಲಸಗಳನ್ನು ಸಾಧಿಸಲು ಸಹಕರಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ , ಅಪರ ಜಿಲ್ಲಾಧಿಕಾರಿ ಡಾ . ಶಂಕರ್ ವಣಿಕ್ಯಾಳ್ , ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.