(www.vknews.in) : ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ‘ಶಕ್ತಿ’ ಯೋಜನೆಗೆ 100 ದಿನಗಳು ತುಂಬಿದ್ದು, ಈ ಅವಧಿಯಲ್ಲಿ ಒಟ್ಟು 64 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು, ಇದಕ್ಕಾಗಿ 1,472 ಕೋಟಿ ವೆಚ್ಚವಾಗಿದೆ.
ಈ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಈ ಯೋಜನೆ ಆರಂಭಿಸುವ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಮುಖ್ಯವಾಗಿ ಚಾಲಕರು ಮತ್ತು ನಿರ್ವಾಹಕರ ಕೊರತೆ ಇತ್ತು. ಬಸ್ಸುಗಳ ಸಂಖ್ಯೆಯೂ ಕಡಿಮೆ ಇತ್ತು. ಈ ಸಮಸ್ಯೆಗಳನ್ನು ನಿಭಾಯಿಸಿಕೊಳ್ಳುವ ಮೂಲಕ ಯೋಜನೆಯನ್ನೂ ಯಶಸ್ವಿಗೊಳಿಸಿದ್ದೇವೆ’ ಎಂದು ಹೇಳಿದ್ದಾರೆ.
ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. 5,000 ಬಸ್ಸುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಇವೆಲ್ಲದರ ಮಧ್ಯೆಯೂ ನಮ್ಮ ಸಾರಿಗೆ ಸಂಸ್ಥೆಗಳಿಗೆ 25 ಪ್ರಶಸ್ತಿಗಳು ಬಂದಿವೆ. ವಿರೋಧ ಪಕ್ಷಗಳೂ ಈ ಯೋಜನೆ ಯಶಸ್ವಿ ಆಗುವುದಿಲ್ಲ ಎಂದು ಕಾಲೆಳೆದಿದ್ದವು. ಈ ಯೋಜನೆಗಳನ್ನು ಬಳಸಿಕೊಂಡು ಮಹಿಳೆಯರು ಹಲವು ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.ಸ್ತ್ರೀ ಸಬಲೀಕರಣಕ್ಕೆ ಇದೊಂದು ಉತ್ತಮ ಯೋಜನೆ’ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಜೂನ್ 11 ರಂದು ಯೋಜನೆಗೆ ಚಾಲನೆ ನೀಡಲಾಗಿದ್ದು, ಸೆ. 21 ರವರೆಗೆ ಸುಮಾರು 64 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಅವರು ಹೇಳಿದರು. ಉಜ್ವಲ ಭವಿಷ್ಯದ ಕನಸುಕಟ್ಟಿಕೊಂಡು ಶಾಲೆಗೆ ಹೋಗುವ ಪ್ರತಿ ಹೆಣ್ಣು ಮಗಳು, ಕುಟುಂಬದ ಹೊಣೆಯನ್ನು ತನ್ನ ಹೆಗಲ ಮೇಲೆ ಹೊತ್ತು, ನಿತ್ಯದ ದುಡಿಮೆಗೆ ತೆರಳುವ ನಾಡಿನ ಅಕ್ಕ– ತಂಗಿಯರು, ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಣ ಬೆಳೆಸುವ ಬಡ ತಾಯಂದಿರ ಬದುಕಿನ ಬವಣೆ ನಮ್ಮ ಶಕ್ತಿ ಯೋಜನೆಯ ಪ್ರೇರಕ ಶಕ್ತಿ’ ಎಂದು ಅವರು ಹೇಳಿದ್ದಾರೆ
ಶಕ್ತಿ ಯೋಜನೆ ಜಾರಿಗೊಂಡ ಈ 100 ದಿನಗಳಲ್ಲಿ ಅಸಂಖ್ಯ ತಾಯಂದಿರಲ್ಲಿ ನೆಮ್ಮದಿಯ ನಿಟ್ಟುಸಿರಿಗೆ, ಲಕ್ಷಾಂತರ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ ಎಂಬುದು ಯೋಜನೆ ಜಾರಿಗೆ ಕೊಟ್ಟ ನನಗೆ ಅತ್ಯಂತ ಖುಷಿಯ ಸಂಗತಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.