ಲೇಖನ: ಶಬೀನಾ ವೈ.ಕೆ ವಿಶೇಷಚೇತನರಿಗಾಗಿ ಮೀಸಲಿರಿಸಿದ 5% ಅನುದಾನದಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಮೂರು ಚಕ್ರಗಳ ಸ್ಕೂಟರ್ನ್ನು ವಿತರಿಸಿದ ಕೀರ್ತಿ ಕರ್ನಾಟಕದ ವಿಜಯಪುರ ಜಿಲ್ಲೆಗೆ ಸಲ್ಲುತ್ತದೆ. ಇದಕ್ಕಾಗಿ 2008-09ರ ಅವಧಿಯಲ್ಲಿ ಹೋರಾಟ ನಿರತ ನಲವತ್ತಕ್ಕೂ ಹೆಚ್ಚು ವಿಶೇಷಚೇತನರು ಒಂದು ದಿನ ದರ್ಗಾ ಜೈಲಿನ ಅತಿಥಿಗಳಾಗಬೇಕಾಯ್ತು.
ಹದಿಮೂರು-ಹದಿನಾಲ್ಕು ವರ್ಷಗಳ ಹಿಂದಿನ ಸಾರಿಗೆ, ಸಂವಹನ, ಸಂಪರ್ಕ ಸೇರಿದಂತೆ ವಿಶೇಷಚೇತನರಿಗೆ ಬೇಕಾದ ಸೌಕರ್ಯ ಸೌಲಭ್ಯಗಳು ಅಷ್ಟಾಗಿ ಅರಿವಿಗೆ ಬಾರದ ದಿನಗಳವು. ಅದರಲ್ಲಿಯೂ ಹೆಚ್ಚಿನ ವಿಶೇಷಚೇತನರು ಮನೆಗಳಲ್ಲಿ ಮೂಲೆಗುಂಪಾದ ಉದಾಹರಣೆಗಳೇ ಅಧಿಕ.
ಈ ವೇಳೆ, ವಿಶೇಷ ಚೇತನರ ಅಗತ್ಯತೆಗಳಿಗೆ ಬೇಕಾಗುವ ತ್ರೀ ಚಕ್ರ ಸ್ಕೂಟರ್ ಲಭಿಸಿದಲ್ಲಿ ಮನೆಯಿಂದ ಹೊರಗಿಳಿಯಲು ಒಂದಿಷ್ಟು ಮಂದಿಯಾದರೂ ಉತ್ಸಾಹ ತೋರುತ್ತಾರೆಂಬ ಆಶಯವೊಂದೆಡೆಯಾದರೆ, ಬೇರೊಬ್ಬರನ್ನು ಅವಲಂಭಿಸದೇ ಅವರ ದೈನಂದಿನ ಜೀವನವನ್ನು ಸಾಗಿಸಲು, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವುದೆಂಬ ಮಹತ್ತರ ಗುರಿಯೊಂದು ಇದರ ಹಿಂದಿತ್ತು.
ಸಬೀಹಾ ಬೇಗಂ ಕೂಡ ದರ್ಗಾ ಜೈಲು ಸೇರಿ ಬಂದ ಆ ನಲವತ್ತು ಜನ ಅಂಗವಿಕಲರಲ್ಲೊಬ್ಬರು. ಆಗಿನ ಅನುಭವಗಳನ್ನು ಬಿಚ್ಚಿಟ್ಟ ಅವರು, 40 ದಿನಗಳ ಕಾಲ ನಿರಂತರ ಧರಣಿ ನಡೆಸಿದ್ದನ್ನು ನೆನೆಯುತ್ತಾರೆ.
ಈ ಧರಣಿಗೂ ಮೊದಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಮಂತ್ರಿಗಳು, ವಿಕಲಚೇತನರ ಕಲ್ಯಾಣ ಇಲಾಖೆ ಸೇರಿದಂತೆ ಸ್ಥಳೀಯ ಶಾಸಕರಿಗೂ ಸ್ಕೂಟರ್ಗಾಗಿ ಮನವಿ ಸಲ್ಲಿಸುವ ಕಾಯಕವನ್ನು ಆರಂಭಿಸುತ್ತಾರೆ. ವಿಕಲಚೇತನರಿಗೆ ಮೀಸಲಿರಿಸಿದ ಶೇ.5 ಅನುದಾನದಲ್ಲಿ .
ಈ ಸ್ಕೂಟರ್ಗಳನ್ನು ನೀಡಲು ಆಗುವುದಿಲ್ಲ ಎಂಬ ಉತ್ತರದಿಂದ ಬೇಸತ್ತು 40ಕ್ಕೂ ಹೆಚ್ಚು ವಿಕಲಚೇತನರು ಧರಣಿ ನಿರತರಾದರು. ನಿರಂತರ 40 ದಿನಗಳ ಈ ಧರಣಿಯ ವೇಳೆ ಭೇಟಿ ನೀಡಿದ ಅಧಿಕಾರಿಗಳು, ಮಂತ್ರಿಗಳು ಸ್ಥಳೀಯ ಶಾಸಕರು ಸೇರದಂತೆ ಎಲ್ಲರಿಗೂ ಮತ್ತೆ ಮತ್ತೆ ಮನವಿ ಪತ್ರಗಳನ್ನು ನೀಡುವ ಕಾಯಕ ಮುಂದುವರಿದಿತ್ತು.
ದರ್ಗಾ ಜೈಲಿನ ಘಟನೆಯ ಬಳಿಕವೂ ಸ್ಕೂಟರ್ಗಾಗಿ ಹೋರಾಟ ನಿಲ್ಲಲಿಲ್ಲ. ಆ ವರ್ಷಾವಧಿಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು, ಉರುಳು ಸೇವೆ ಮಾಡಿ ಹಾಗೂ ರಸ್ತೆ ತಡೆಯೊಡ್ಡಿ ಹೀಗೆ ಹಲವು ಪ್ರತಿಭಟನೆಗಳನ್ನು ಮಾಡಿದ್ದನ್ನು ಸಬೀಹಾ ನೆನೆಯುತ್ತಾರೆ.
ಹೋರಾಟದ ಫಲವಾಗಿ 2010ನೇ ಸಾಲಿನಲ್ಲಿ ವಿಜಯಪುರದಲ್ಲಿ ಆರಂಭಿಕವಾಗಿ 40 ವಿಶೇಷ ಚೇತನರಿಗೆ 5% ಅನುದಾನ, ಶಾಸಕರ ನಿಧಿ ಸೇರಿದಂತೆ ವಿವಿಧ ಸರ್ಕಾರಿ ಮೂಲಗಳಿಂದ 40 ತ್ರಿಚಕ್ರಗಳ ಸ್ಕೂಟರ್ ವಿತರಿಸಲಾಗುತ್ತದೆ.
ಹೀಗೆ ಕರ್ನಾಟಕದಲ್ಲಿ ಇಂದು ತ್ರಿಚಕ್ರ ಸ್ಕೂಟರ್ಗಳನ್ನು ಪಡೆಯುತ್ತಿರುವ ಫಲಾನುಭವಿಗಳ ಪಾಲಿಗೆ ಇವರ ಹೋರಾಟ ಒಂದು ಸಾರ್ಥಕತೆಯನ್ನು ಕಟ್ಟಿಕೊಟ್ಟಿದೆ.
ಸಬೀಹಾ, ಬಳಗನೂರಿನ ಬಾಗಪ್ಪ ರಾಮವ್ವ ದಂಪತಿಗಳ ಐವರು ಮಕ್ಕಳಲ್ಲಿ ಮೂರನೆಯವರು. ಕಿತ್ತು ತಿನ್ನುವ ಬಡತನದಿಂದ ಮುಕ್ತಿ ಪಡೆಯಲು ಮುಂಬೈನಲ್ಲಿ ಕೆಲಸಕ್ಕೆಂದು ಕುಟುಂಬ ಸಮೇತ ತೆರಳಿದರು. ಸಬೀಹಾ 7 ವರ್ಷ ವಯಸ್ಸಿನವರಿದ್ದಾಗ ಬಸ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡರು.
ಎಲ್ಲರಂತೆ ಚೆನ್ನಾಗಿದ್ದ ಮಗಳ ಕಾಲನ್ನು ದೇವರು ಕಿತ್ತುಕೊಂಡು ಬಿಟ್ಟನಲ್ಲ ಎಂಬ ಆಕ್ರಂದನ ಮನೆಯಲ್ಲಿ ಮಡುಗಟ್ಟಿತ್ತು. ಈ ನಡುವೆ ಮುಂಬೈನಲ್ಲಿ ಅಲೆದು ಕೊನೆಗೂ ಸಬೀಹಾರಿಗೆ ಕೃತಕ ಕಾಲು ಹಾಕಿಕೊಂಡು ತಿರುಗಾಡಲು ವ್ಯವಸ್ಥೆಯಾಯಿತು.
ಬಳಗನೂರಿನ ಶಾಲೆಯಲ್ಲಿಯೇ 1 ರಿಂದ 9ನೇ ತರಗತಿಯ ವರೆಗೆ ಸಬೀಹಾ ವಿದ್ಯಾಭ್ಯಾಸ ಪಡೆದರು. ಪ್ರತಿದಿನ ತಂದೆ ಅವರನ್ನು ಹೊತ್ತುಕೊಂಡು ಹೋಗಿ ಶಾಲೆಗೆ ಬಿಡುತ್ತಿದ್ದುದ್ದನ್ನು ಅವರು ನೆನೆಯುತ್ತಾರೆ.
ಹತ್ತನೆ ತರಗತಿ ವಿದ್ಯಾಭ್ಯಾಸ ಹುಬ್ಬಳ್ಳಿಯಲ್ಲಿ ಮಾಡಿದ ಅವರು ಬಿಎ ಪದವಿಧರೆ ಆಗಿದ್ದಾರೆ. ಮೂಢನಂಬಿಕಯ ಪ್ರತಿಫಲವಾಗಿ, ಅಂಗವಿಕಲಳೆಂಬ ಕಾರಣಕ್ಕೆ ಗಣಪತಿಗೆ ಆರತಿ ಮಾಡುತ್ತಿದ್ದಾಗ ಆರತಿ ತಟ್ಟೆಯನ್ನು ಕಸಿದುಕೊಂಡ ಕಹಿ ನೆನಪು ಅವರಿಗಿದೆ.
ವಿವಾಹದ ವಿಷಯದಲ್ಲಿಯೂ “ಕಾಲಿಲ್ಲದ ಇವಳಿಗೆ ಮದುವೆಗಿದುವೆ ಬೇಕಾ..?” ಎಂದು ಹೀಯಾಳಿಸಿದವರೇ ಅಧಿಕ. ಆದರೆ 21ನೇ ವಯಸ್ಸಿನಲ್ಲಿ ಅಂತರ್ಜಾತಿ ವಿವಾಹವಾದ ಸಬೀಹಾರಿಗೆ ಬಿಎಸ್ಸಿ ಹಾಗೂ ಇಂಜಿನಿಯರಿಂಗ್ ಕಲಿಯುತ್ತಿರುವ ಇಬ್ಬರು ಪುತ್ರಿಯರಿದ್ದು, ವೈವಾಹಿಕ ಜೀವನವು ಸುಖಕರವಾಗಿದೆ.
ತನ್ನಂತೆ ಹಲವು ವಿಶೇಷಚೇತನ ಮಹಿಳೆಯರು ಇದ್ದಾರೆ ಎಂಬುದನ್ನು ಬೆಂಗಳೂರಿನ ಎಪಿಡಿ ಸಂಸ್ಥೆಯಲ್ಲಿ ಕಂಡ ಬಳಿಕ ಅರಿತ ಸಬೀಹಾ, ಬಿಜಾಪುರ ಅಂದರೆ ಈಗಿನ ವಿಜಯಪುರದಲ್ಲಿ ಕರ್ನಾಟಕ ಅಂಗವಿಕಲತ ಐಕ್ಯತಾ ವೇದಿಕೆಯನ್ನು ಹುಟ್ಟು ಹಾಕಿದರು.
ವಿಶೇಷ ಚೇತನ ಪುರುಷರಿಗಿಂತ ಮಹಿಳೆಯರು ಅಧಿಕ ಮೂಲೆಗುಂಪಾಗಿರುವುದನ್ನು ಕಂಡ ಅವರು, ಮಹಿಳೆಯರ ಏಳಿಗೆಗಾಗಿ ಏನಾದರೂ ಮಾಡಬೇಕಂಬ ಉದ್ದೇಶದಿಂದ ಹಳ್ಳಿಗಳಿಗೆ ತೆರಳಿ ಅವರೊಂದಿಗೆ ಬದುಕಿ ಬಾಳಲು ಆರಂಭಿಸಿದರು.
ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾ, ಲಭಿಸುವ ಸೇವೆಗಳನ್ನು ಪಡೆಯಲು ಉತ್ತೇಜನ ನೀಡಿದರು.
ಸಬೀಹಾ 385ಕ್ಕೂ ಅಧಿಕ ಜನರಿಗೆ ಯುಡಿಐಡಿ(ಯೂನಿಕ್ ಡಿಸೆಬಿಲಿಟಿ ಐಡೆಂಟಿಟಿ ಕಾರ್ಡ್) ಕಾರ್ಡ್ ಮಾಡಿಸಲು, 300 ಪೋಷಣಾ ಭತ್ಯೆ, 100ಕ್ಕೂ ಹೆಚ್ಚು ಜನರಿಗೆ ಉದ್ಯೋಗ, 25 ಜನರಿಗೆ ತರಬೇತಿ ಹಾಗೂ ಕೊರೋನ ಅವಧಿಯಲ್ಲಿ 589 ರೇಷನ್ ಕಿಟ್ಗಳನ್ನು ಒದಗಿಸಲು ನೆರವಾಗಿದ್ದಾರೆ.
ಪ್ರಸ್ತುತ ಸಬೀಹಾರವರು ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್ನ ಗೌರವಾಧ್ಯಕ್ಷರಾಗಿದ್ದು, ವಿಶೇಷಚೇತನರಿಗೆ ಬೇಕಾಗುವ ಸುಲಭಲಭ್ಯತೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.