ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ನಿಗಾವಹಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಎಚ್ಚರ ವಹಿಸುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಕೃಷಿ ಮಳೆ – ಬೆಳೆ ಹಾಗೂ ಬರ ಪರಿಸ್ಥಿತಿ ಕುರಿತು ಪ್ರಗತಿಪರ ಪರಿಶೀಲನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ನಾಲೈದು ದಿನ ರೈಲ್ವೆ ಸಾರಿಗೆ ಸಮಸ್ಯೆಯಿಂದ ಸಾಗಾಣಿಕೆ ವಿಳಂಬವಾಗಿತ್ತು. ಈಗಾಗಲೇ ಗೋಧಾಮಗಳಿಗೆ ಸಾಗಾಣಿಕೆಯಾಗುತ್ತಿದೆ ಯಾವುದೇ ವ್ಯತ್ಯಯ ಆಗದಂತೆ ಅಧಿಕಾರಿಗಳು ನಿಗಾ ವಹಿಸಬೇಕೆಂದು ನಿರ್ದೇಶನ ನೀಡಿದರು . ರಸಗೊಬ್ಬರ ವಿವರ : ಜಿಲ್ಲೆಯಲ್ಲಿ 2023 ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 38281 ಮೆಟ್ರಿಕ್ ಟನ್ಗಳಷ್ಟು ರಸಗೊಬ್ಬರ ಬೇಡಿಕೆಯಿದ್ದು , ಈವರೆಗೆ 24566 ಮೆ.ಟನ್ ಸರಬರಾಜಾಗಿದ್ದು , 29831 ಮೆ.ಟನ್ ವಿತರಣೆಯಾಗಿದ್ದು , 7563 ಮೆ.ಟನ್ ದಾಸ್ತನು ಇರುತ್ತದೆ.
ಬಿತ್ತನೆ ಬೀಜ ವಿತರಣೆ : ಜಿಲ್ಲೆಯಲ್ಲಿ 2023 ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 2122 ಕ್ವಿಂಟಾಲ್ ಅಷ್ಟು ಬಿತ್ತನೆ ಬೀಜದ ವಿತರಣೆ ಗುರಿಹೊಂದಿದ್ದು , 1513.5 ಕ್ವಿಂಟಾಲ್ ಅಷ್ಟು ವಿತರಣೆ ಮಾಡಲಾಗಿರುತ್ತದೆ . ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಗಾಗಿ ಒಟ್ಟು 11345 ವಿಮಾ ಅರ್ಜಿಗಳ ನೋಂದಣಿಯಾಗಿದ್ದು , 4763.19 ಹೇಕ್ಟರ್ ಪ್ರದೇಶ ವಿಮಾ ಯೋಜನೆಯ ವ್ಯಾಪ್ತಿಗೊಳಪಡುತ್ತದೆ. ಜಿಲ್ಲೆಯಲ್ಲಿ ಮಾಲೂರು ತಾಲ್ಲೂಕು ಸಾಧಾರಣ ಬರಪೀಡಿತ ತಾಲ್ಲೂಕು , ಕೋಲಾರ , ಬಂಗಾರಪೇಟೆ , ಕೆ.ಜಿ.ಎಫ್ . ಮುಳಬಾಗಿಲು , ಶ್ರೀನಿವಾಸಪುರ ತಾಲ್ಲೂಕುಗಳು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದ್ದು , ಬೆಳೆ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ , ಹವಾಮಾನ , ರೈತರ ಪರಿಸ್ಥಿತಿ ಗಮನದಲ್ಲಿಟ್ಟು ಕೊಂಡು ಸರ್ವೆ ನಡೆಸಿ ಮಾಹಿತಿ ನಮೂದಿಸಿ ಎಂದರು. ಸಚಿವರು , ಇ.ಕೆ ವೈ.ಸಿ ಶೇ 100 ರಷ್ಟು ಗುರಿ ಸಾಧನೆಯಾಗ ಬೇಕೆಂದು ಅವರು ನಿರ್ದೇಶನ ನೀಡಿದರು. ಬರ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಚಿವರು ನಿರ್ದೇಶನ ನೀಡಿದರು.
ಕೋಲಾರ ಶ್ರಮಜೀವಿಗಳ ಜಿಲ್ಲೆ ಸಕಾಲದಲ್ಲಿ ಬಿತ್ತನೆ ಬೀಜ ರಸಗೊಬ್ಬರ ನೀಡಿ , ವಿಶ್ವ ವಿದ್ಯಾನಿಲಯದ ಜೊತೆಗೂಡಿ ಟೊಮೆಟೊ ಬೆಳೆ ಕಿಟ ಬಾಧೆ ನಿಬಾಯಿಸಲು ನೆರವು ಮಾರ್ಗದರ್ಶನ ನೀಡಿ ಎಂದು ಅವರು ಒಂದು ಹೇಳಿದರು. ಜಿಲ್ಲೆಯ ಸಮಗ್ರ ಕೃಷಿ ಅಳವಡಿಕೆ ಅಭಿನಂದನೀಯ ಇದನ್ನು ಇನ್ನಷ್ಟು ಉತ್ತಮಪಡಿಸಿ ಎಂದು ಸಚಿವರು ತಿಳಿಸಿದರು . ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೃಷಿ ಭಾಗ್ಯ ಯೋಜನೆ ಪುನಾರಂಭ ಮಾಡಲಾಗಿದೆ . ಮುಂದಿನ ವರ್ಷ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಜಾರಿಗೊಳಿಸಲಾಗುವುದು ಎಂದರು.
ಬ್ಯಾಂಕ್ ಗಳು ಸರ್ಕಾರದಿಂದ ರೈತರ ಖಾತೆಗೆ ಹಾಕಲಾಗುವ ಸಬ್ಸಿಡಿ ಹಾಗೂ ನೆರವಿನ ಅನುದಾನವನ್ನು ಸಾಲಕ್ಕೆ ಕಡಿತ ಮಾಡದಂತೆ ಜಿಲ್ಲಾಧಿಕಾರಿ , ಜಿಲ್ಲಾ ಪಂಚಾಯತ್ ಸಿ.ಇ.ಒ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ನಿರ್ದೇಶನ ನೀಡಬೇಕು ಎಂದು ಸಚಿವರು ಸೂಚಿಸಿದರು. ಕೋಲಾರ ಜಿಲ್ಲೆಗೆ ಆಗಮಿಸುವ ಮಾರ್ಗದುದ್ದಕ್ಕೂ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಸಚಿವರು ಸಭೆಗೂ ಮುನ್ನ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ರೈತರ ಅಹವಾಲು ಆಲಿಸಿದರು.
ರೈತರ ಮನವಿಯಂತೆ ನರ್ಸರಿಗಳಿಗೆ ಪರವಾನಗಿ ವಿತರಣೆ ಹಾಗೂ ಮೇಲ್ವಿಚಾರಣೆ ನಡೆಸುವಂತೆ ತೋಟಗಾರಿಕೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ಸೂಚಿಸಿದರು.ಟೊಮೇಟೊ ಬೆಳೆ ಕೀಟ ಬಾಧೆ ನಿಯಂತ್ರಣ ಕ್ರಮಕ್ಕೆ ಕೃಷಿ ವಿಶ್ವವಿದ್ಯಾಲಯದ ತಜ್ಞರಿಂದ ಮಾಹಿತಿ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು . ಇದೇ ವೇಳೆ ಸಚಿವರು ಕೃಷಿ , ಹಾಗೂ ಜಲಾನಯನ ಇಲಾಖೆ ವತಿಯಿಂದ ಮಾವಿನ ಸಸಿಗಳು , ಜೇನು ಸಾಕಾಣಿಕಾ ಪೆಟ್ಟಿಗೆಗಳು ಹನಿ ನಿರಾವರಿ ಸಾಧನಗಳು ಸೇರಿದಂತೆ ರೈತರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು . ಯಂತ್ರಧಾರೆ ಯೋಜನೆ ಮುಂದುವರೆಸುವ ಜೊತೆಗೆ ಬೃಹತ್ ಕಟಾವು ಯಂತ್ರ ಗಳ ಹಬ್ ಸ್ಥಾಪನೆಗೆ ಸರ್ಕಾರ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸುತ್ತಿದೆ ಎಂದು ಎನ್ ಚಲುವರಾಯಸ್ವಾಮಿ ತಿಳಿಸಿದರು.
ಜಿಲ್ಲಾಡಳಿತದಿಂದ ನಂದಿನಿ , ಹಾಪ್ ಕಾಮ್ಸ್ ಗಳಂತೆ ಕೃಷಿ ಉತ್ಪಾದಕ ಸಂಸ್ಥೆ ಗಳ ಉತ್ಪನ್ನಗಳ ಮಾರಾಟಕ್ಕೆ ಜಾಗ ಗುರುತಿಸಿ ನೀಡುವಂತೆ ಸಚಿವರು ಸಲಹೆ ನೀಡಿದರು. ರಾಜ್ಯದಲ್ಲಿ ಬರಗಾಲದಿಂದ ಒಟ್ಟು 40 ಲಕ್ಷ ಹೆಕ್ಟರ್ ಕೃಷಿ ಪ್ರದೇಶ ಹಾನಿಯಾಗಿದ್ದು , ಎನ್.ಡಿ.ಆರ್.ಎಫ್ ಪ್ರಕಾರ 4000 ಕೋಟಿಗಳು ಪರಿಹಾರ ಕೋರಿದೆ . ಅಂದಾಜು ಬೆಳೆ ಹಾನಿ 28000 ಕೋಟಿಗಳು , 2023 ಮುಂಗಾರಿನಲ್ಲಿ 111 ಲಕ್ಷ ಟನ್ ಆಹಾರ ಧಾನ್ಯಗಳ ಗುರಿ ಹೊಂದಲಾಗಿದ್ದು , ಬರಗಾಲದಿಂದ ಉತ್ಪಾದನ ಹಾನಿ ಅಂದಾಜು 58 ಲಕ್ಷ ಟನ್ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಕೊತ್ತೂರು ಮಂಜುನಾಥ್ , ಮಾಲೂರು ಶಾಸಕರಾದ ಕೆ.ವೈ ನಂಜೇಗೌಡ , ವಿಧಾನ ಪರಿಷತ್ ಶಾಸಕರಾದ ಎಂ.ಎಲ್ . ಅನಿಲ್ ಕುಮಾರ್ , ಕೃಷಿ ಇಲಾಖೆ ಆಯುಕ್ತರಾದ ವೈ ಎಸ್ . ಪಾಟೀಲ್ , ಜಿಲ್ಲಾ ಪಂಚಾಯತ್ ಸಿ.ಇ.ಒ ಪದ್ಮಾ ಬಸವಂತಪ್ಪ , ಕೃಷಿ ಇಲಾಖೆ ಆಯುಕ್ತರಾದ ಡಾ ಪುತ್ರಜಲಾನಯನ ಇಲಾಖೆ ಆಯುಕ್ತರಾದ ಶ್ರೀನಿವಾಸ್ , ಕೃಷಿ ಇಲಾಖೆ ಅಪರ ನಿರ್ದೇಶಕರಾದ ರೆಡ್ಡಿ , ಕೃಷಿ ಜಂಟಿ ನಿರ್ದೇಶಕಿ ರೂಪದೇವಿ , ಉಪನಿರ್ದೇಶಕಿ ಭವ್ಯರಾಣಿ ಸೇರಿದಂತೆ ಜಿಲ್ಲಾ ಹಾಗೂ ಜಲಾನಯನ ಇಲಾಖೆಯ ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.