ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಜಿಲ್ಲೆಯ ಎಲ್ಲಾ ತಹಶೀಲ್ದಾರರುಗಳು ತಮ್ಮ ದಿನನಿತ್ಯದ ಕಛೇರಿ ಕರ್ತವ್ಯಗಳೊಂದಿಗೆ ಕನಿಷ್ಠ 2 ಹಳ್ಳಿಗಳಿಗೆ ಭೇಡಿ ನೀಡಿ ಅಲ್ಲಿನ ಸಾಮಾನ್ಯ ಜನರ ಕುಂದು ಕೊರತೆಗಳನ್ನು ಖುದ್ದು ಪರಿಶೀಲಿಸಬೇಕು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಮಟ್ಟದಲ್ಲಿ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಕಂದಾಯ ಇಲಾಖೆಯ ಸಮಗ್ರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದರು. ಸಭೆಯಲ್ಲಿ ಹೊಸದಾಗಿ ಗುರುತಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಅವರ ಖಾತೆಗಳನ್ನು ನೋಂದಾಯಿಸುವ ಕಾರ್ಯವನ್ನು ಚುರುಕುಗೊಳಿಸಲು ತಿಳಿಸಿದರು.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಪಿಂಚಣಿದಾರರ ವಿವರಗಳನ್ನು ಸಾಫ್ಟ್ವೇರ್ನಲ್ಲಿ ಇಂದೀಕರಿಸಲು ಸೂಚಿಸಿದರು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಆ ರೀತಿ ವಿಲೇವಾರಿ ಮಾಡಿದ ಅಂಕಿ ಅಂಶಗಳನ್ನು ಐ.ಪಿ.ಜಿ.ಆರ್.ಎಸ್. ಜಾಲತಾಣದಲ್ಲಿ ನಮೂದಿಸಬೇಕು ಅಂತೆಯೇ ನ್ಯಾಯಾಲಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇ ಮಾಡಬೇಕು ಹಾಗೆ ವಿಲೇ ಮಾಡಿದ ನಮೂದುಗಳನ್ನು ಸಂಬಂಧಿತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು ಇಲ್ಲವಾದಲ್ಲಿ ಪ್ರಕರಣ ಬಾಕಿ ಇರುವಂತೆ ವೆಬ್ಸೈಟ್ನಲ್ಲಿ ಪ್ರದರ್ಶಿತವಾಗಿರುತ್ತದೆಂದು ತಿಳಿಸಿದರು.
ತಮ್ಮ ಕ್ಷೇತ್ರಗಳಲ್ಲಿ 80 ಕ್ಕಿಂತ ಹೆಚ್ಚು ವಯಸ್ಸಾದ ಮತದಾರರನ್ನು ಗುರುತಿಸುವ ಕೆಲಸವನ್ನು ಚುರುಕುಗೊಳಿಸಬೇಕು ಜೊತೆಜೊತೆಗೆ ಮರಣ ಹೊಂದಿದ ಮತದಾರರ ವಿವರಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಆನ್ಲೈನ್ ಅನ್ವಯಿಕೆಯಲ್ಲಿ ನಮೂದಿಸಬೇಕು. ಕ್ಷೇತ್ರವಾರು ಎಲ್ಲಾ ಕೃಷಿಕರ ಸಾಗುವಳಿ ಭೂಮಿಯ ವಿವರಗಳನ್ನು ಶೂಟ್ಸ್ ಅನ್ವಯಿಕೆ ಮೂಲಕ ಇಂದೀಕರಿಸಬೇಕು ಎಂದು ತಿಳಿಸಿದರು.
ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥವಾದ ಕೂಡಲೆ ಸಂಬಂಧಿತ ದಾಖಲೆಗಳನ್ನು ಇಂದೀಕರಿಸಿಕೊಳ್ಳಬೇಕು. ತಾಲ್ಲೂಕು ಕಛೇರಿ ಹಾಗೂ ನಾಡ ಕಛೇರಿಗಳಲ್ಲಿ ವಿಲೇಯಾಗಿರುವ ಕಡತಗಳನ್ನು ಸೂಕ್ತವಾಗಿ ಸರ್ಕಾರದ ನಿಯಮಾವಳಿಗಳ ರೀತ್ಯಾ ಐದು ಕಟ್ಟುಗಳಂತೆ ವಿಭಾಗಿಸಿ ಜೋಡಿಸಿಡಬೇಕು ಅವಧಿ ಮುಗಿದ ಕಡತಗಳನ್ನು ಸೂಕ್ತ ಪಂಚನಾಮೆ ಮಾಡಿಸಿ ವಿವರಗಳನ್ನು ದಾಖಲಿಸಿ ನಾಶಗೊಳಿಸಬೇಕು ಎಲ್ಲಾ ಕಛೇರಿಗಳಲ್ಲಿ ಅನುಪಯುಕ್ತ ವಸ್ತುಗಳನ್ನು ಪಟ್ಟಿ ಮಾಡಿ ವಿಲೇ ಮಾಡಬೇಕು ಕಛೇರಿಗಳನ್ನು ಸಾರ್ವಜನಿಕ ಸ್ನೇಹಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲಾ ಕಛೇರಿಗಳಲ್ಲಿ ಕಡ್ಡಾಯವಾಗಿ ಇ-ಆಫೀಸ್ ತಂತ್ರಾಂಶವನ್ನು ಬಳಸಬೇಕು ಅದಕ್ಕೆ ಬೇಕಾದ ತರಬೇತಿಯನ್ನು ಇ-ಆಫೀಸ್ ಸಮಾಲೋಚಕರ ಮೂಲಕ ಪಡೆಯಬಹುದಾಗಿದೆ. ಅಂತಯೇ ತಮ್ಮ ಕಛೇರಿಗಳಲ್ಲಿ ಸ್ವೀಕೃತವಾಗುವ ಮಾಹಿತಿ ಹಕ್ಕು ಅರ್ಜಿಗಳನ್ನು ಸಮಯಮಿತಿಯೊಳಗೆ ವಿಲೇವಾರಿ ಮಾಡಲು ಸೂಚಿಸಿದರು.
ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಇಂದಿರಾ ಕ್ಯಾಂಟಿನ್ ಕಾಮಗಾರಿಗಳನ್ನು ಶೀಘ್ರ ಗತಿಯಲ್ಲಿ ಪೂರ್ಣಗೊಳಿಸಬೇಕು ನಗರಸಭೆಯಿಂದ ತೆರಿಗೆ ಪಾವತಿ ಬಾಕಿಯನ್ನು ವಸೂಲು ಮಾಡಲು ಸಂಬಂದಿಸಿದವರಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ಶಂಕರ ವಣಿಕ್ಯಾಳ್, ಉಪ ವಿಭಾಗಾಧಿಕಾರಿಗಳಾದ ವೆಂಕಟಲಕ್ಷ್ಮೀ, ನಗರಸಭೆ ಆಯುಕ್ತರಾದ ಶಿವಾನಂದ, ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ಅಂಬಿಕಾ, ತಹಶೀಲ್ದಾರುಗಳಾದ ಹರ್ಷವರ್ಧನ್, ಶರಿನ್ ತಾಜ್, ರಮೇಶ್, ನಾಗವೇಣಿ, ಮುನಿವೆಂಕಟಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.