ಚಿಕ್ಕಬಳ್ಳಾಪುರ:(ವಿಶ್ವ ಕನ್ನಡಿಗ ನ್ಯೂಸ್) ಜಿಲ್ಲೆಯಲ್ಲಿ ಕನ್ನಡ ಏಳ್ಗೆಯ ಚಟುವಟಿಕೆಗಳನ್ನು ಉತ್ತೇಜಿಸಿ,ಪೋಷಿಸಲು ಪೂರಕವಾಗಲಿರುವ “ಜಿಲ್ಲಾ ಕನ್ನಡ ಭವನದ ಕಾಮಗಾರಿಯು ಜಿಲ್ಲಾ ಕೇಂದ್ರದಲ್ಲಿ ಪ್ರಗತಿಯಲ್ಲಿದ್ದು, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ 69ನೇ ಕನ್ನಡ ರಾಜ್ಯೋತ್ಸವದ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಭರವಸೆ ನೀಡಿದರು.
ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ,ನಂತರ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮಸಲ್ಲಿಸಿ ಅವರು ಮಾತನಾಡಿದರು.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ದರ್ಜೆಯ ಕ್ರೀಡಾಂಗಣವನ್ನು ಸುಮಾರು 70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಸಂಬಂಧ ಸಕಲ ಸಿದ್ಧತೆಗಳು ನಡೆದಿದ್ದು ನೀಲ ನಕ್ಷೆ ಕೂಡ ಅಂತಿಮ ವಾಗಿದೆ ಎಂದು ಹೇಳಿದರು.
ನಮ್ಮ ನಾಡು-ನುಡಿ, ನೆಲ-ಜಲ,ಕಲೆ, ಜಾನಪದ ಹಾಗೂ ಸಾಹಿತ್ಯ-ಸಂಸ್ಕೃತಿಗಳ ಪರಂಪರೆ ನಡೆದು ಬಂದ ದಾರಿಯನ್ನು ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ. ಎಲ್ಲಕ್ಕಿಂತ ಮುಖ್ಯವಾಗಿ ‘ಕನ್ನಡ’ ಒಂದು ಭಾಷೆ ಮಾತ್ರವಲ್ಲ, ಅದು ನಮ್ಮ ಪಾದೇಶಿಕತೆಯ ಭಾವನೆ. ಕನ್ನಡ ನಾಡುನುಡಿಯನ್ನು ಕಟ್ಟಿಬೆಳೆಸಿದ ಆದಿಕವಿ ಪಂಪ, ರನ್ನ, ಪೊನ್ನ, ಕುಮಾರವ್ಯಾಸ, ಕೇಶೀರಾಜ, ಸರ್ವಜ್ಞ ಕವಿ, ಸಂತರು, ದಾಸರು, ಬಸವಾದಿ ಶಿವಶರಣರು, ಜಾನಪದ ಶ್ರಮಜೀವಿಗಳನ್ನು ಹಾಗೂ ಹಳ್ಳಿಹಳ್ಳಿಗಳಲ್ಲಿ ಕನ್ನಡ ಪರಂಪರೆಯನ್ನು ಜೀವಂತವಾಗಿ ಹಿರಿಯರನ್ನು ಸ್ಮರಿಸಬೇಕು. ಗಂಗ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಮತ್ತು ಮೈಸೂರು ಅರಸರು ಹಾಗೂ ದಿವಾನರುಗಳ ಆಳ್ವಿಕೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಕಲೆ ಶ್ರೀಮಂತವಾಗಿ ಬೆಳೆದಿದೆ ಎಂದು ಹೇಳಿದರು.
1956 ರ ನವೆಂಬರ್ ರ ಏಕೀರಣದ ನಂತರ ಕನ್ನಡ ನಾಡು ಮೈಸೂರು ರಾಜ್ಯವಾಗಿ ರೂಪಿತಗೊಂಡಿದ್ದು ನಿಮೆಗೆಲ್ಲಾರಿಗೂ ಗೊತ್ತೇ ಇದೆ. 1973ರ ನವೆಂಬರ್ 1 ರಂದು ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ‘ಕರ್ನಾಟಕ’ ಎಂದು ನಾಮಕರಣಗೊಂಡಿತು.ದೇಶ-ವಿದೇಶಗಳಲ್ಲಿ ನಮ್ಮ ಕರ್ನಾಟಕವೀಗ ತನ್ನದೇ ಅದ್ಭುತ ಶಕ್ತಿಯನ್ನು ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಕನ್ನಡಿಗರನ್ನು ಇಂದು ಜಗತ್ತಿನ ಯಾವುದೇ ಮೂಲೆಗೆ ಹೋದರು ನೋಡಬಹುದಾಗಿದೆ. ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿದೆ ಜಗತ್ತಿನ ಮೂರನೇ ಅತ್ಯಂತ ಹಳೇಯ ಭಾಷೆ ಕನ್ನಡ ಎಂಬುದೇ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಾತನಾಡುವ ಭಾಷೆಗಳ ಪೈಕಿ ಕನ್ನಡ 29 ನೇಯ ಸ್ಥಾನದಲ್ಲಿದೆ. ಒಟ್ಟಾರೆ 6.5 ಕೋಟಿ ಜನರ ಮಾತೃ ಭಾಷೆ ಕನ್ನಡ ಹಾಗಾಗಿ ನಮ್ಮ ಭಾಷೆಗಿರುವ ಅಂತಸತ್ವವನ್ನು ನಾವು ಅರಿಯಬೇಕಾಗಿದೆ.ಕನ್ನಡ ಭಾಷೆಗೆ “ಅಭಿಜಾತಭಾಷೆ” ಎಂದು ಕೇಂದ್ರ ಸರ್ಕಾರ ಗೌರವ ನೀಡಿದೆ. ಅಲ್ಲದೇ ದೇಶದ ಭಾಷೆಗಳಲ್ಲಿ ನಾಲ್ಕನೇಯ ಸ್ಥಾನ ಕನ್ನಡಕ್ಕಿದೆ ಎಂಬುದು ನಮ್ಮ-ನಿಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ಜಾತಿ ಮತ ಮೀರಿ ಅನ್ಯಭಾಷಿಕರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುವ ಕನ್ನಡಿಗರ ಹೃದಯವಂತಿಕೆ ವಿಶಾಲವಾದದ್ದು ಮತ್ತು ಜಗತ್ತಿನಾದ್ಯಂತ ಪ್ರಶಂಸನೀಯವಾದದ್ದು, ದೇಶದಲ್ಲೇ ಎಂಟು ಪ್ರತಿಷ್ಠಿತ ಜ್ಞಾನಪೀಠ ಪುರಸ್ಕೃತರು ನಮ್ಮವರು ಎಂಬುದು ದೇಶದ ಸಾಹಿತ್ಯದಲ್ಲಿ ನಮ್ಮ ಮೌಲ್ಯ ಹೆಚ್ಚಿಸಿದೆ.
ಸಾಹಿತ್ಯ-ಸಂಸ್ಕೃತಿ-ಕಲೆ-ಶೈಕ್ಷಣಿಕವಾಗಿ 21ನೇ ಶತಮಾನದಲ್ಲಿ ಕನ್ನಡಿಗರ ಸಾಧನೆ ಅಪಾರವಾದದ್ದು. ಕನ್ನಡ ಬರೀ ಭಾಷೆ ಮಾತ್ರವಲ್ಲ ನಮ್ಮ ಉಸಿರು ನಾವದನ್ನು ಭದ್ರವಾಗಿ ಕಾಪಾಡಿಕೊಳ್ಳಬೇಕಾಗಿದೆ. ಆಧುನಿಕತೆ, ಜಾಗತೀಕರಣದ ನಡುವೆ ನಗರ ಪ್ರದೇಶಗಳಲ್ಲಿ ಕನ್ನಡ ಬಳಕೆ ಕಡಿಮೆ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದರೂ ಸಹ, ಕರ್ನಾಟಕದ ಗ್ರಾಮೀಣ ಭಾಗಗಳು ಕನ್ನಡದ ತವರುಗಳಾಗಿವೆ ಎಂದರು.
ನಮ್ಮ ಸರ್ಕಾರ ಕನ್ನಡದ ಕಂಕಣಕ್ಕೆ ಸದಾ ಬದ್ದವಾಗಿದೆ. ಖಾಸಗಿ ವಲಯದಲ್ಲಿ ಪ್ರತಿಭಾವಂತ ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸುವಂತಹ ಮಾತುಕತೆಗಳು ನಡೆಯುತ್ತಿವೆ. *ನಮ್ಮ ಸಾಹಿತ್ಯ-ಸಾಂಸ್ಕೃತಿಕ ರುವಾರಿಗಳಾದ ಬಿ.ಎಂ.ಶ್ರೀ, ಬೇಂದ್ರ, ಕುವೆಂಪು, ಶಿವರಾಮಕಾರಂತರು, ಮಾಸ್ತಿವೆಂಕಟೇಶ ಅಯ್ಯಂಗಾರ್, ಹೋರಾಟಗಾರರಾದ ಆಲೂರು ವೆಂಕಟರಾವ್, ಮ.ರಾಮಮೂರ್ತಿ ಮುಂತಾದವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಬೇಕು ಎಂದರು.
ರಾಜ್ಯೋತ್ಸವವು ನಾಡಹಬ್ಬವಾಗಿದ್ದು ಕನ್ನಡಿಗರೆಲ್ಲರು ಸಂಭ್ರಮಿಸಬೇಕಾದ ಸಂದರ್ಭ. ಈ ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ನಾಡು ನುಡಿಗಳ ಅಭಿವೃದ್ಧಿಗಾಗಿ ಕನ್ನಡವನ್ನು ಕಟ್ಟಿಕೊಳ್ಳಬೇಕು. ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ, ನೆಲ-ಜಲ, ಕೃಷಿ-ಕೈಗಾರಿಕೆ, ಅನ್ನ, ಅಕ್ಷರ ಮತ್ತು ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕರ್ನಾಟಕದ ಸರ್ವಾಂಗೀಣ ವಿಕಾಸದ ಕುರಿತು ಚಿಂತಿಸಬೇಕಾದ ಸಂದರ್ಭ ಇದಾಗಿದೆ ಎಂದು ಹೇಳಿದರು.
ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಮಾತನಾಡಿ,ಮಾತೃಭಾಷೆ ಮಾಧ್ಯಮ ಮತ್ತು ಗುಣಮಟ್ಟಕ್ಕೂ ಸಕಾರಾತ್ಮಕ ಸಂಬಂಧವಿದೆ. ಮಾತೃಭಾಷಾ ಶಿಕ್ಷಣವನ್ನು ಕುರಿತು ಅನೇಕ ಶಿಕ್ಷಣ ತಜ್ಞರು ಸಕರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ. ಇದಲ್ಲದೇ ಪೂರ್ವ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಹೇರಿದರೆ ಮಕ್ಕಳ ಮನಸ್ಸು, ಸಂವೇದನೆ, ಆಲೋಚನೆ, ಸಂವಹನ, ಸಂಸ್ಕೃತಿ ರೂಪುಗೊಳ್ಳುವುದಿಲ್ಲ. ಕನ್ನಡ ಮಾಧ್ಯಮದ ಶಾಲೆಗಳನ್ನು ರೂಪಿಸಿಕೊಂಡು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಭದ್ರ ಬುನಾದಿ ಹಾಕಬೇಕು. ಆಂಗ್ಲ ಭಾಷೆ ಒಂದು ಕಲಿಕಾ ಭಾಷೆಯಾಗಿರಬೇಕು.
ಕಲಿಕೆ ಉತ್ತಮವಾಗಿ ಗುಣಾತ್ಮಕವಾಗಿ ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತ ಮತ್ತು ಸಂವಹನವನ್ನು ಕನ್ನಡದಲ್ಲಿ ನಡೆಸಿ ಆಡಳಿತವನ್ನು ಜನತೆಗೆ ತಲುಪಿಸುವುದು ಅಪೇಕ್ಷಿಣೀಯ, ಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಭಾಷೆಯಲ್ಲಿ ಆಡಳಿತ ನಡೆಸಬೇಕೆಂದು ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಬಚ್ಚೆಗೌಡ ಮಾತನಾಡಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯವರಾದ ಕೈವಾರ ನಾರಾಯಣಪ್ಪ, ಜ.ಚ.ನಿ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಡಿ.ವಿ.ಗುಂಡಪ್ಪ, ಪ್ರಧಾನ ಗುರುದತ್, ತೀ.ತಾ. ಶರ್ಮ, ಹಂಪ ನಾಗರಾಜಯ್ಯ, ಮೊದಲಾದವರು ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಸಿರಿಭೂವಲಯ ಕೃತಿ ರಚಿಸಿರುವ ಕುಮುದೆಂದು ಕವಿಯು ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವಹಳ್ಳಿಯಲ್ಲಿದ್ದರು ಎಂಬುದು ಹೆಮ್ಮೆಯ ಸಂಗತಿ. ಚಿಕ್ಕಬಳ್ಳಾಪುರ ಜಿಲ್ಲೆಯು ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಡಾ|| ಸಿ.ಎನ್.ಆರ್.ರಾವ್ ಈ ಇಬ್ಬರು ಭಾರತ ರತ್ನಗಳನ್ನು ದೇಶಕ್ಕೆ ನೀಡಿದೆ. ಶಿಕ್ಷಣ ತಜ್ಞ ಡಾ|| ಎಚ್.ನರಸಿಂಹಯ್ಯ ನವರು ಜಿಲ್ಲೆಯ ಶಿಕ್ಷಣ ಪ್ರಸಾರಕ್ಕೆ ಸಲ್ಲಿಸಿರುವ ಸೇವೆ ಸ್ಮರಣೀಯ. ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು, ವಯಸ್ಕರ ಶಿಕ್ಷಣ ಮತ್ತು ಗ್ರಾಮೀಣ ಗ್ರಂಥಾಲಯಗಳನ್ನು ತೆರೆದು ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುತ್ತಾರೆ ಎಂದು ತಿಳಿಸಿ ಕರ್ನಾಟಕ ಏಕೀಕರಣ, ಕನ್ನಡ ಭಾಷೆ ಬೆಳವಣಿಗೆಯ ಇತಿಹಾಸವನ್ನು ನೆನೆದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ಜನಪ್ರಿಯ ಕನ್ನಡ ಗೀತೆಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿದರು. (ವಿಷ್ಣುಪ್ರಿಯ ಪ್ರೌಢಶಾಲೆ ಹೊಸಹುಡ್ಯ, ಇಂಡಿಯನ್ ಪಬ್ಲಿಕ್ ಶಾಲೆ, ಆಕಾಶ್ ಗ್ಲೋಬಲ್ ಶಾಲೆ, ವಾಸವಿ ಪ್ರೌಢಶಾಲೆ)
ದೇವರಮಳ್ಳೂರು ಜಾನಪದ ಕಲಾವಿದ ಮಹೇಶ್ ಕುಮಾರ್ ಅವರ ತಂಡದಿಂದ ಐದು ಕನ್ನಡ ಗೀತೆಗಳ ಗಾಯನ ನೆರವೇರಿ ಕನ್ನಡ ಪ್ರೇಮಿಗಳ ಮನಸೋರೆಗೊಳಿಸಿತು.ಅವರ ಕಂಠದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,ಎಲ್ಲಾದರೂ ಇರು ಎಂತಾದರು ಇರು,ಒಂದೇ ಒಂದೇ ಕರ್ನಾಟಕ ಒಂದೇ, ಹೊತ್ತಿತೋ ಹೊತ್ತಿತೋ ಕನ್ನಡದ ದೀಪ ಮತ್ತು ಹೆಸರಾಯಿತು ಕರ್ನಾಟಕ ಉಸಿರಾಗಲಿ ಗೀತಾ ಗಾಯನ ಜನರ ಚಿತ್ತ ಸೆಳೆಯಿತು.
ವಿವಿಧ ಇಲಾಖೆಗಳು,ತಂಡಗಳು ಹಾಗೂ ಪೊಲೀಸ್ ಕವಾಯತು ಪಥ ಸಂಚಲನ ಗಮನ ಸೆಳೆಯಿತು ಅದರಲ್ಲೂ ಪೊಲೀಸ್ ಉಪಾದೀಕ್ಷಕ ಮಂಜುನಾಥ್ ಅವರು ಪಥ ಸಂಚಲನ ಮತ್ತು ಕವಾಯತನ್ನು ಕನ್ನಡದ ಸೂಚನೆಗಳಿಂದ ಮುನ್ನಡೆಸಿದ್ದು ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು. ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ಆಯ್ಕೆಯಾದ 11 ಜನ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಸಾಧಕರ ಪಟ್ಟಿ: ಬಿ.ಎಂ.ಪ್ರಮೀಳಾ(ಸಾಹಿತ್ಯ), ಎಂ.ಕೃಷ್ಣಪ್ಪ(ಮಾಧ್ಯಮ ), ಎನ್.ವೆಂಕಟೇಶ್ (ಪತ್ರಿಕೋದ್ಯಮ), ಡಿ. ಎಂ ಮಹೇಶ್ ಕುಮಾರ್( ಕಲೆ), ಫಯಾಜ್ ಅಹ್ಮದ್ (ಸಾಹಿತ್ಯ),ಕೆ. ಎನ್ ಹರೀಶ್ (ಕನ್ನಡ ಪರ ಹೋರಾಟ),ಆರ್. ಜಿ ಜನಾರ್ದನ ಮೂರ್ತಿ (ಸಮಾಜ ಸೇವೆ)ಕೆ.ವಿ.ಪ್ರಕಾಶ್ (ಮಹಿಳಾ ಸಬಲೀಕರಣ), ಕುಂಟೆ ಗಡ್ಡೆ ಎಂ.ಲಕ್ಷ್ಮಣ್(ಸಂಘಟನೆ ಮತ್ತು ಸಮಾಜ ಸೇವೆ), ಹೆಚ್.ಎನ್ ಕಿರಣ್ ಕುಮಾರ್(ಸಾಹಿತ್ಯ).
ಕನ್ನಡ ರಾಜ್ಯೋತ್ಸವದ ಜಿಲ್ಲಾ ಕಾರ್ಯಕ್ರಮದ ನಂತರ ಅದೇ ವೇದಿಕೆಯಲ್ಲಿ “ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಜಿಲ್ಲಾ ಅಭಿಯಾನ”ಕ್ಕೆ ಸಚಿವರು, ಗಣ್ಯರು ಬಿತ್ತಿ ಪತ್ರಗಳು ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸುವ ಮೂಲಕ ಚಾಲನೆಯನ್ನು ನೀಡಿದರು. ಕಿರು ಚಿತ್ರ ಮತ್ತು ಸಾಕ್ಷಾಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ಗೃಹ ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಬಗ್ಗೆ ಹಾಗೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಸಿ.ಇ.ಓ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್,ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಶೀಲ್ದಾರ್ ಅನಿಲ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.