ಜರ್ತಾರಿ ಸೀರೆ ಉಟ್ಟವರು, ಕೊರಳಾಗ ಶಾಲ ಹಾಕ್ಕೊಂಡವ್ರ ಗುಂಪೊಂದ ಕಟ್ಟಿಕೊಂಡಾರ, ಬೆಳ್ಳಿ ಬಟ್ಟಲಾಗ ಅಕ್ಷತೆಯ ತುಂಬ್ಕೊಂಡು, ಎಂದೂ ತಳದವರ ತಲಬಾಗಿಲು ಮೆಟ್ಟದವರು, ಅವರ ಮನ್ಯಾಗ ಕುಂತು ಮಂತ್ರಾಕ್ಷತೆ ಮಹಿಮೆಯನ್ನು ಬಾಯ್ತುಂಬಾ ಹೊಗಳ್ಯಾರ……
ಧರ್ಮದ ನಷೆಯ ಕುಡಿದವರು, ದೇವ್ರ ರಕ್ಷಣೆಯನ್ನ ಗುತ್ತಿಗೆಗೆ ತಗೊಂಡೊವ್ರು. ಯಾರವರು ……?
ಮಾತಾಡಲು ಮಾರು ದೂರ ನಿಲ್ಲೊರು, ಅವಳ ಹಣೆಗೆ ಬೊಟ್ಟ ಕೂಡ ಇಡ್ತಾರ, ಮುಡಿಗೆ ಹೂಕೊಟ್ಟು ಕೈಯಾಗ ನಾಕ ಅಕ್ಷತೆಯ ಕಾಳ ಇಟ್ಟು, ದೇಶಕೊಬ್ಬನೆ ದೇವ್ರು ಅಂತ ಮಂತ್ರಾಕ್ಷತೆಯ ತಂತ್ರಗಾರನನು ಹಾಡ್ಯಾಡಿ ಗುಣಗಾನ ಮಾಡ್ಯಾರ….
ಗುಣಗಾನದ ಪೇಟೆಂಟ್ ತಗೊಂಡು, ನಾವೆಲ್ಲರೂ ಒಂದೆ ಎಂದು ಬೋರ್ಡ ಹಾಕಿಕೊಂಡೋರು, ತಮ್ಮೊಳಗ ತಾವೇ ಕಚ್ಚಾಡ್ಯಾರ. ಯಾರವರು….?
ಉಣ್ಣಾಕ ಅಕ್ಕಿಕೊಡಂಗಿಲ್ಲ ಅಂದಬಿಟ್ರು ಆದ್ಕಾಗಿ ಅರ್ಧ ಅಕ್ಕಿ – ಅರ್ಧ ರೊಕ್ಕ ಕೊಡಕತ್ತಾರ ನಮ್ಮ ಸರ್ಕಾರದವ್ರು. ಮ್ಯಾಲಿನ ಸರ್ಕಾರವ್ರು ನಾವ ಬೆಳ್ದ ಅಕ್ಕಿನ ನಮಗೆ ಕೊಡಂಗಿಲ್ಲ ಅಂತಾರ, ನಾಕಕಾಳ ಅಕ್ಷತೆ ಕೊಡೊ ಬದ್ಲು, ದೇವ್ರ ಹೆಸರ ಮೇಲಾದ್ರೂ ಹೊಟ್ತುಂಬಾ ಉಣ್ಣಾಕ ಅಕ್ಕಿ ಕೊಟ್ಟಿದ್ರೆ ಅವರ ಮನಿ ಗಂಟೇನು ಕಳಕೊಂತಾರ……?
ಹೊಟ್ಟಿಗೆ ತಿನ್ನಾಕ ಅಕ್ಕಿ ಕೊಡದವ್ರು ನಾಕಕಾಳ ಅಕ್ಷತೆ ಕೊಟ್ಟ ಕೈತೊಳಕೊಂಡಾರ. ಯಾರವರು….. ?
ಗುಡಿನ ಇನ್ನ ಪೂರ್ತಿ ಕಟ್ಟೆ ಇಲ್ಲ ಮೂರ್ತಿನ ಇಡಾಕ ಹೊಂಟಾರ, ದ್ಯಾವ್ರ ತಲಿಮ್ಯಾಲಿ ಬಿದ್ದ ಅಕ್ಷತೆಗೆ ತಾನೆ ಮಂತ್ರಾಕ್ಷತೆ ಅಂತಾರ? ಮನಿ- ಮನಿಗೆ ಓಡಾಡಿ ಹಂಚುವ ಅಕ್ಕಿಕಾಳನ್ನ, ಮಂತ್ರಾಕ್ಷತೆ ಎಂದೇಳಿ ಮಂದಿ ಕಣ್ಣಗ ಮಂಕಬೂದಿ ಉಗ್ಗ್ಯಾರ………
ಹೊಟ್ತುಂಬಾ ಅಕ್ಕಿ ಕೊಟ್ಟವರನ್ನ ಮರೆತಾರ, ನಾಕಕಾಳ ಅಕ್ಷತೆ ಕೊಟ್ಟವರನ್ನ ಕಣ್ಗೊತ್ತಿಕೊಂಡ ನೆನೆತಾರ. ಯಾರವರು ….?
ತಿನ್ನಾಕ ಬಾನ ಇಲ್ಲ, ಬೆಲೆ ಏರಿಕೆ ನಿಂತೇ ಇಲ್ಲ, ದಿನಸಿ ರೇಟ ಆಗಸದಾಗ , ಕೇಳೋಯ್ಯಾರ ಅದಾರ ? ಓದ್ಕೊಂಡ ಮಕ್ಕಳ ಕೈಗೆ ಕೆಲ್ಸಾ ಕೊಡದವ್ರು, ಮೊಕ್ಷಾಕ್ಕಾಗಿ ಅಕ್ಕಿಕಾಳ ಕೈಗೆ ಇಟ್ಟಾರ, ಅಂದ್ರರಿಂದ ಮನಿ ಕಷ್ಟ ನೀಗತೈತಿ ಅನ್ನೊದನ್ನ , ನಂಬಾಕ ರೆಡಿ ಯ್ಯಾರ ಅದಾರ…. ?
ದುಡಿಯೋ ಕೈಗೆ ಬಡಿಗೆ ಕೊಟ್ಟಾರ, ತಮ್ಮ ಮಕ್ಕಳ್ನ ಮಾತ್ರ ವಿದೇಶದಾಗ ಓದಸ್ತಾರ. ಯಾರವರು……?
ಜಾತಿ -ಜಾತಿ ಒಡೆದಾಳಿ ಧರ್ಮ- ಧರ್ಮದ ಕಿಚ್ಚು ಹಚ್ಯಾರ, ಹೊಟ್ಟಿಗೆ ಹಿಟ್ಟಿಲ್ಲಂದ್ರೂ ಜುಟ್ಟಿಗೆ ಬೇಕು ಮಲ್ಲಿಗೆ ಹೂ ಅಂತಾರ, ಅದ ಯಾಕಬೇಕು ಎಂದು ಕೇಳಿದವರನ್ನ ದೇಶದ್ರೋಹಿ ಅಂತಾರ……
ದೇಶವನ್ನೆ ಗುಡಿಸಿ ಗುಂಡಾತರ ಮಾಡಿ ವಿಶ್ವಕ್ಕೆ ಗುರು ಅಂತ ಮೆರಿತಾರ. ಯಾರವರು…?
ಯಾರದರೇನು? ಮತಿಹೀನರವರು, ಮಂತ್ರಿಸಿದರೆ ಮಾವಿನಕಾಯಿ ಉದರತೈತೇನು? ಇದನ್ನ ಕೇಳಬೇಕಾದವರು ಮತಿಯುಳ್ಳ ಮತದಾರರಾದ ನಾವು, ಮತಿಗೆಟ್ಟ ನಾವೇನಾದರೂ ಮಂತ್ರಾಕ್ಷತೆಯ ತಂತ್ರಕ್ಕೆ ಮಾರುಹೋದ್ರ, ದೇಶ ಮಾರೇ ಬಿಡ್ತಾರ…..
ದೇಶ ಮಾರಿದ್ರೂ ಚಿಂತೆಯಿಲ್ಲ ತಮ್ಮ ಗೆಳಯರು ಆರಾಮಾಗಿದ್ರ, ಸಾಹೇಬ್ರಿಗೆ ಬಲು ನಿರಾಳ ಅಙದುಕೊಂಡಾರ ಯಾರವರು….?
— ಶೈಲಜಾ ಹಿರೇಮಠ. ಗಂಗಾವತಿ…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.