ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): ಚುನಾವಣಾ ಕರ್ತವ್ಯ ಬಹಳ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಅತಿ ಸಣ್ಣ ವಿಷಯವೂ, ನಿರ್ಲಕ್ಷ್ಯತೆ ಬಹಳ ದೊಡ್ಡ ಪರಿಣಾಮ ಬೀರಬಹುದು. ಆದ್ದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿಗಳು ಈಗಿಂದಲೇ ಚುನಾವಣಾ ಕರ್ತವ್ಯಕ್ಕೆ ಮಾನಸಿಕವಾಗಿ ಸಿದ್ಧರಾಗಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು. ಇಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಕಾರ್ಯಾಲಯದಿಂದ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಸೆಕ್ಟರ್ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ, ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸೆಕ್ಟರ್ ಅಧಿಕಾರಿಗಳಿಗೆ ನಿರ್ಧಿಷ್ಟ ಸಂಖ್ಯೆಯ ಮತಗಟ್ಟೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಚುನಾವಣಾ ಪೂರ್ವ ಸಿದ್ಧತೆಯ ಅಂಗವಾಗಿ ಸೆಕ್ಟರ್ ಅಧಿಕಾರಿಗಳು ತಮಗೆ ಹಂಚಿಕೆ ಮಾಡಿದ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳು, ಮತದಾರರ ಪಟ್ಟಿ, ಮಹಿಳಾ ಮತ್ತು ಪುರುಷ ಮತದಾರರ ಸಂಖ್ಯೆ, ಅದರಲ್ಲಿ ವಯೋವೃದ್ಧರು, ವಿಕಲಚೇತನರ ಸಂಖ್ಯೆ, ಮತಗಟ್ಟೆಯ ಸೂಕ್ಷ್ಮತೆ, ಈ ಹಿಂದೆ ಮತಗಟ್ಟೆಯಲ್ಲಿ ನಡೆದ ಗಲಾಟೆ, ದ್ವಂದ್ವ ಅಥವಾ ಘರ್ಷಣೆ ಮುಂತಾದವುಗಳ ಕುರಿತು ಮುಂಚಿತವಾಗಿಯೇ ಪರಿಶೀಲಿಸಬೇಕು ಎಂದು ಹೇಳಿದರು. ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರಳ ಮತದಾನ ಪ್ರಕ್ರಿಯೆ ನಡೆಸಲು ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮತಗಟ್ಟೆಗೆ ಒದಗಿಸಲು ಸೆಕ್ಟರ್ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವುದೇ ಗೊಂದಲ, ಪ್ರಶ್ನೆಗಳು ಉಂಟಾದಾಗ ಚುನಾವಣಾ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ, ಸಲಹೆ ಪಡೆದು ಕಾರ್ಯನಿರ್ವಹಿಸಬೇಕು.
ಇದೆಲ್ಲವನ್ನೂ ಮಾಡಲು ಮುಖ್ಯವಾಗಿ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ಮಾನಸಿಕವಾಗಿ ಸಿದ್ಧರಾಗಿರಬೇಕು. ಇದರಿಂದ ಚುನಾವಣಾ ಕರ್ತವ್ಯದ ಒತ್ತಡದಿಂದ ಪಾರಾಗಬಹುದು. ಮುಂಚಿತವಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಂಡಾಗ ಒತ್ತಡದ ಕಾರ್ಯನಿರ್ವಹಣೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಚುನಾವಣಾ ಸಂಬಂಧಿತ ಎಲ್ಲಾ ತರಬೇತಿ, ಕಾರ್ಯಾಗಾರ, ಸಭೆಗಳಿಗೆ ತಪ್ಪದೇ ಹಾಜರಾಗಿ ನಿಮ್ಮ ಗೊಂದಲಗಳಿಗೆ ಪರಿಹಾರ ಕಂಡುಕೊಂಡು, ಸುಗಮ ಚುನಾವಣೆಗಳಿಗೆ ಸಹಕರಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮಾಸ್ಟರ್ ತರಬೇತಿದಾರರಾದ ಅಮೀರ್ ಪಾಷ ಅವರು ಮಾತನಾಡಿ, ಚುನಾವಣಾ ಮುನ್ನಾದಿನ ಪ್ರತಿ ಮತಗಟ್ಟೆಯ ಸುವ್ಯವಸ್ಥೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಚುನಾವಣಾ ದಿನ ಅಣಕು ಮತದಾನವನ್ನು ಕಡ್ಡಾಯವಾಗಿ ನಡೆಸಬೇಕು. ಇದರಿಂದ ವಿವಿ ಪ್ಯಾಟ್ಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಸಹಾಯಕವಾಗುತ್ತದೆ. ಪೋಲಿಂಗ್ ಏಜೆಂಟ್ಗಳ ಹಾಜರಿ, ಗೈರು ಹಾಜರಿ ಬಗ್ಗೆ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ಇರಬೇಕು. ಅಗತ್ಯ ಪೊಲೀಸ್ ಭದ್ರತೆಗೆ ಕ್ರಮ ವಹಿಸಬೇಕು.
ಸೆಕ್ಟರ್ ಅಧಿಕಾರಿಗಳು ನಿಗದಿಪಡಿಸಿದ ನಮೂನೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಾಲಕಾಲಕ್ಕೆ ವರದಿ ಸಲ್ಲಿಸಬೇಕು. ಸೆಕ್ಟರ್ ಅಧಿಕಾರಿಗಳಿಗೆ ಮತದಾನ ದಿನದ 7 ದಿನಗಳ ಮೊದಲು ವಲಯ ಮ್ಯಾಜಿಸ್ಟ್ರೇಟ್ ಅಧಿಕಾರಿಯ ಅಧಿಕಾರವನ್ನು ನೀಡಲಾಗುತ್ತದೆ. ಮತಗಟ್ಟೆಗಳ ವ್ಯಾಪ್ತಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು, ಯಾವುದೇ ತೊಂದರೆ ಉಂಟಾದಲ್ಲಿ ಅವುಗಳನ್ನು ಪರಿಹರಿಸಲು ಅಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬಹುದು ಎಂದು ಸೆಕ್ಟರ್ ಅಧಿಕಾರಿಗಳ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಕೋಲಾರ ವಿಭಾಗದ ಡಿವೈಎಸ್ಪಿ, ಚುನಾವಣಾಶಾಖೆಯ ಮಂಜುಳ, ಗೌತಮ್ ಸೇರಿದಂತೆ ನಿಯೋಜಿತ ಸೆಕ್ಟರ್ ಅಧಿಕಾರಿಗಳು, ಸೆಕ್ಟರ್ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.