(www.vknews. in) ; ಕೂರ್ನಡ್ಕ ಪೀರ್ ಮೊಹಲ್ಲ ಜುಮಾ ಮಸೀದಿಯ ಪ್ರಭಾಷಣ ಕಾರ್ಯಕ್ರಮದ 8ನೇ ಮತ್ತು ಕೊನೆಯ ದಿನ. ಪ್ರಭಾಷಣ ಲೋಕದ ದ್ರುವ ತಾರೆ,ಸುಮಧುರ ಕಂಠ ಮತ್ತು ವಾಕ್ಚಾತುರ್ಯದ ಅನುಗ್ರಹೀತ ಆಲಿಮ್, ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಉಸ್ತಾದರ ಪ್ರಭಾಷಣ.
ತುಂಬಿ ತುಳುಕುವ ಸಭಾಂಗಣದ ಮುಂದೆ ಕುರ್’ಆನ್ ಪಾರಾಯಣ ಮೂಲಕ ಭಾಷಣ ಆರಂಭಿಸಿದ ಉಸ್ತಾದರು, ಒಬ್ಬ ವಿಶ್ವಾಸಿಯ ಸ್ವರ್ಗಕ್ಕೆ ಸಾಕ್ಷಿ ನಿಲ್ಲುವ ನಾಲ್ಕು ಜನರಲ್ಲಿ ಇಬ್ಬರ ಬಗ್ಗೆ ವಿಶ್ಲೇಷಿಸಿದರು. ಉತ್ತಮ ಸ್ನೇಹಿತ ಮತ್ತು ಮಹಿಳೆಗೆ ಆಕೆಯ ಪತಿ,ಪುರುಷನಿಗೆ ಆತನ ಪತ್ನಿ. ಉತ್ತಮ ಸ್ನೇಹಿತನ ಬಗ್ಗೆ ವಿಮರ್ಶಿಸಿದ ಉಸ್ತಾದರು,ಸಅದ್ ಇಬ್ನ್ ಅಬೀ ವಖ್ಖಾಸ್ (ರ ಅ) ಮತ್ತು ಅಬ್ದಿಲ್ಲಾಹಿ ಬಿನ್ ಜಹ್ಶ್ (ರ ಅ)ರ ಚರಿತ್ರೆಯನ್ನು ವಿವರಿಸಿ, ಉತ್ತಮ ಸ್ನೇಹಿತ ಅಲ್ಲಾಹನ ತೃಪ್ತಿ ಸಂಪಾದಿಸುವ ದಾರಿ ತೋರುತ್ತಾನೆ ಎಂದರು.
ಉತ್ತಮ ಪತಿಯನ್ನು ಪರಿಚಯಿಸಿದ ಉಸ್ತಾದರು,ಆಯಿಶಾ ಬೀವಿ (ರ ಅ) ರ ಸಂದಿಗ್ಧ ಘಟ್ಟದಲ್ಲಿ ರಸೂಲ್(ಸ ಅ)ಸಲ್ಲಮರು ತನ್ನ ಪತ್ನಿಗೆ ಬೆಂಬಲವಾಗಿ ನಿಂತ ಚರಿತ್ರೆಯನ್ನು ನೆನಪಿಸಿದರು. ಉತ್ತಮ ಪತ್ನಿಯ ಬಗ್ಗೆ ವಿವರಿಸುತ್ತಾ ಆಯಿಶಾ ಬೀವಿ (ರ ಅ),ಖದೀಜ ಬೀವಿ (ರ ಅ)ರ ಚರಿತ್ರೆಯನ್ನು ಹೇಳುತ್ತಾ,ನಾವೂ ಕೂಡ ಪತಿ ಪತ್ನಿಯರು ಪರಸ್ಪರ ಪ್ರೇಮಿಸುವ ಮೂಲಕ ಉತ್ತಮ ಪತಿ ಪತ್ನಿಯರಾಗಿ,ಸ್ವರ್ಗದಲ್ಲಿ ಸಾಕ್ಷಿ ನಿಲ್ಲುವವರಾಗಲು ಶ್ರಮಿಸಬೇಕೆಂದು ಕರೆಕೊಟ್ಟರು.
ನಮ್ಮ ನಾಡಿಗೆ ಅನುಗ್ರಹವಾಗಿರುವ ಪೀರ್ ಮೊಹಲ್ಲ ಜುಮಾ ಮಸೀದಿಗೆ ಕರಾಮತ್ ಇದೆಯೆಂಬ ಮಾತು ಹಲವು ವರ್ಷಗಳ ಹಿಂದಿನಿಂದಲೇ ಹಿರಿಯರ ಮಾತಿನಲ್ಲಿ ಕೇಳುತ್ತಿದ್ದೇವೆ. ಈಗೀಗ ಆ ಕರಾಮತ್ ಯಾವ ರೀತಿ ನಮ್ಮ ಕಣ್ಣ ಮುಂದೆ ಎದ್ದು ಕಾಣುತ್ತಿದೆ ಎಂಬ ಬಗ್ಗೆ ಆಗಾಗ ನಮ್ಮ ಸಲೀಂ ಲತೀಫಿ ಉಸ್ತಾದರು ವಿವರಿಸುತ್ತಿರುತ್ತಾರೆ. ಇವತ್ತು ಆ ನಂಬಿಕೆ ನೆರೆದ ಜನ ಸಾಗರದ ಮುಂದೆ ಮತ್ತೊಮ್ಮೆ ಸಾಬೀತಾಯಿತು. ನಮ್ಮೂರಿನ ಹಿರಿಯ ವ್ಯಕ್ತಿ,ನಮ್ಮ ಮಕ್ಕಳಿಗೆ ಸಾಜನ್ ಉಪ್ಪಾಪ ಎಂದೇ ಚಿರಪರಿಚಿತರಾಗಿರುವ ರಿಕ್ಷಾ ಸಾಜನ್ ಇಬ್ರಾಹಿಂರವರ ಮೊಮ್ಮಗಳು,ತನ್ನ ಕೈಚಳಕದಲ್ಲಿ ಮೂಡಿಬಂದ ಆಯತುಲ್ ಕುರ್ಸಿಯ್ಯ್ ಕ್ಯಾಲಿಗ್ರಫಿಯನ್ನು ಸಿರಾಜುದ್ದೀನ್ ಖಾಸಿಮಿ ಉಸ್ತಾದರಿಗೆ ಗಿಫ್ಟ್ ಆಗಿ ನೀಡಿದ್ದಳು.ಮಾ ಷಾ ಅಲ್ಲಾಹ್.ಬಹಳ ಸುಂದರವಾಗಿತ್ತು.
ಉಸ್ತಾದರು ಅದನ್ನು ಏಲಂ ಮಾಡುವ ತೀರ್ಮಾನಕ್ಕೆ ಬಂದಾಗ,ಎರಡು ಸಾವಿರದಿಂದ ಏಲಂ ಪ್ರಾರಂಭವಾಯಿತು. ಐದೋ ಹತ್ತೋ ಸಾವಿರಕ್ಕೆ ಬರುವಾಗ ಏಲಂ ಪ್ರಕ್ರಿಯೆ ಮುಗಿಯಬಹುದೆಂಬ ನಮ್ಮೆಲ್ಲರ ಊಹೆ ಹುಸಿಯಾಯಿತು. ಸುಮಾರು ಅರ್ಧ ಗಂಟೆ ಕಾಲ ಸ್ಪರ್ಧಾತ್ಮಕ ರೀತಿಯಲ್ಲಿ ಏಲಂ ನಡೆದು,ಸುಬ್’ಹಾನಲ್ಲಾಹ್ ಬರೋಬ್ಬರಿ ಇಪ್ಪತ್ತು ಲಕ್ಷ ಮುನ್ನೂರ ಹದಿಮೂರು ರೂಪಾಯಿಗೆ ಬಶೀರ್ ಎಂಬ ಸಹೋದರರು ತಮ್ಮದಾಗಿಸುವ ಮೂಲಕ, ಮಧ್ಯ ರಾತ್ರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರೆಲ್ಲರ ದುಆದ ಮಹತ್ತರವಾದ ಪ್ರತಿಫಲ ಪಡೆಯುವ ಭಾಗ್ಯವಂತರಾದರು. ಮಾ ಷಾ ಅಲ್ಲಾಹ್. ಸಂತೋಷದಿಂದ ತಮ್ಮ ಹೆಗಲ ಶಾಲನ್ನು ಬಶೀರ್ ಅವರಿಗೆ ಹೊದಿಸಿ ಗೌರವಿಸಿದ ಉಸ್ತಾದರ,”ಮಕ್ಕಳು ಹಾಫಿಲ್ ಆಗಲಿ” ಎಂಬ ಮನತುಂಬಿದ ಹಾರೈಕೆಯನ್ನು ಅಲ್ಲಾಹ್ ಪೂರ್ತಿ ಮಾಡಿ ಅನುಗ್ರಹಿಸಲಿ. ಆಮೀನ್.
ಈ ಏಲಂ ಪ್ರಕ್ರಿಯೆ ಇಷ್ಟು ದೊಡ್ಡ ಮೊತ್ತದವರೆಗೆ ಮುಂದುವರಿಯಲು ಕಾರಣ,ಭೂಮಿಯ ಸ್ವರ್ಗವಾದ ದೀನೀ ಮಜ್ಲಿಸ್ ಮತ್ತು ನಮ್ಮ ಮಸೀದಿಯ ಕರಾಮತ್ ಎಂಬುದು ನನ್ನ ದೃಢವಾದ ನಂಬಿಕೆ. ಪ್ರಾರಂಭದಲ್ಲಿ ಸಲೀಂ ಉಸ್ತಾದರು ಮಾತನಾಡಿ ಎಂಟು ದಿವಸಗಳ ಸುದೀರ್ಘ ಮತ ಪ್ರಭಾಷಣ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಿದರು. ಜಮಾಅತಿನ ಪ್ರತಿಯೊಂದು ಆವಶ್ಯಕತೆಯ ಸಂದರ್ಭಗಳಲ್ಲಿ ಅತಿದೊಡ್ಡ ಸಹಾಯ ನೀಡುವ ಗಲ್ಫ್ ಸಹೋದರರ ಬದ್ರಿಯಾ ವೆಲ್ಫೇರ್ ಕಮಿಟಿಯನ್ನು ಸ್ಮರಿಸುತ್ತಾ ,ಅವರಿಗಾಗಿ ಪ್ರತ್ಯೇಕ ದುಆ ಮಾಡಿದರು.
— ಮಿಸ್ರಿಯ ರಶೀದ್ ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.