(www.vknews.in) ; ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇಲ್ಲಿ ಹೊಸದಾಗಿ ನೊಂದಾಯಿತರಾದ ಗೃಹರಕ್ಷಕರಿಗೆ ದಿನಾಂಕ : 01-03-2024 ರಿಂದ 10-03-2024 ರವರೆಗೆ ನಡೆಯುವ ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ : 01-03-2024 ರಂದು ಮಧ್ಯಾಹ್ನ 12.00 ಗಂಟೆಗೆ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್ ಮಂಗಳೂರು ಇಲ್ಲಿ ನಡೆಯಿತು. ಶ್ರೀ ಬಿ.ಪಿ. ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ ಮಂಗಳೂರು ನಗರ ಇವರು ಜ್ಯೋತಿ ಬೆಳಗಿಸಿ ಮೂಲ ತರಬೇತಿ ಶಿಬಿರ ಉದ್ಘಾಟನೆಯನ್ನು ಮಾಡಿದರು.
ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮವಸ್ತ್ರ ಧರಿಸಿದ ನಂತರ ಶಿಸ್ತಿನಿಂದ ಇಲಾಖೆಯ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು, ಗೃಹರಕ್ಷಕರು ಇಲ್ಲಿ ನೀಡುವ ಎಲ್ಲಾ ರೀತಿಯ ತರಬೇತಿಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಸಮಾಜಕೋಸ್ಕರ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ, ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಪಡೆದುಕೊಳ್ಳಿ ಎಂದು ನುಡಿದರು.
ಈ ಸಮಾರಂಭದ ಅಧ್ಯಕ್ಷರಾದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಮಾತನಾಡಿ ಈ ಹತ್ತು ದಿನದ ತರಬೇತಿಯಲ್ಲಿ ಲಾಠಿ ಡ್ರಿಲ್, ಮಾರ್ಚ್ ಫಾಸ್ಟ್, ಫೈರ್ ಫೈಟಿಂಗ್, ವೈರ್ಲೆಸ್ ತರಬೇತಿ ಮುಂತಾದ ತರಬೇತಿ ನೀಡಲಿದ್ದಾರೆ. ಹತ್ತು ದಿನಗಳಲ್ಲಿ ಎಲ್ಲಾ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ನೀಡಿದ ಮಾಹಿತಿ ಇದ್ದರೆ ನಿಮಗೆ ಮುಂಬರುವ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಿಸಲು ಸಹಾಯವಾಗುವುದು. ಗೃಹರಕ್ಷಕರು ಸಮವಸ್ತ್ರ ಧರಿಸಿಕೊಂಡು ಯಾವ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಗೌರವಿಸಬೇಕು, ಮಾತನಾಡಬೇಕು ಎನ್ನುವುದರ ಬಗ್ಗೆ ಪರಿಜ್ಞಾನ ಇರಬೇಕು. ಈ ಹಿನ್ನೆಲೆಯಲ್ಲಿ ನಿಮಗೆ ಮನದಟ್ಟು ಮಾಡುವ ಉದ್ದೇಶದಿಂದ ಮೂಲ ತರಬೇತಿ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ನುಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್ಶೇರಾ ಅವರು ಸ್ವಾಗತ ಭಾಷಣ ಮಾಡಿದರು. ಗೃಹರಕ್ಷಕದಳ ಕಛೇರಿಯ ಪ್ರಥಮದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಯಶೋದಾ ಇವರು ಪ್ರಾರ್ಥನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಛೇರಿಯ ಅಧೀಕ್ಷಕರಾದ ಶ್ರೀ ಗೋಪಿನಾಥ್ ಬಿ.ಎನ್. ಇವರು ವಂದನಾರ್ಪಣೆಗೈದರು. ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಚಂಪಾ, ಆಶಾ, ಆಶಾಲತಾ, ನಂದಿನಿ, ಜೀವನ್ರಾಜ್ ಡಿ’ಸೋಜ, ಜ್ಞಾನೇಶ್ ಕೋಟ್ಯಾನ್, ದಿವಾಕರ್, ಸಂಜಯ್ ಹಾಗೂ 60 ಮಂದಿ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.