(www.vknews. in) ; ಕರಾವಳಿಗರ ಮನೆ-ಮನದ ದುಬೈ ಕಥೆ; ಪ್ರವಾಸಿ ಜೀವನಕ್ಕೆ ಜೀವ ತುಂಬಿದ ಪುರುಷ..!ಹಾಸ್ಯ, ಭಾವನಾತ್ಮಕ, ಮಾನವೀಯ ಮೌಲ್ಯದ ಕೌಟುಂಬಿಕ ಕನ್ನಡ ಚಲನಚಿತ್ರ “ಪುರುಷೋತ್ತಮನ ಪ್ರಸಂಗ”
ಯುವಸಮೂಹ ತಕ್ಷಣ ಹಣ ಗಳಿಸಬೇಕು, ನೆನೆಸಿದ್ದನ್ನೆಲ್ಲಾ ಈಡೇರಿಸಬೇಕೆಂಬ ದಾವಂತದಲ್ಲಿರುವುದು ಪ್ರಸ್ತುತ ಕಾಲಘಟ್ಟದ ಸನ್ನಿವೇಶ. ಅದಕ್ಕಾಗಿ ನಾನಾ ಕನಸು ಕಾಣುತ್ತಾರೆ. ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ “ಪುರುಷ” ತಾನು ದುಬೈಗೆ ಹೋಗಬೇಕು, ಕುಟುಂಬ ಸಲಹಬೇಕು, ಅಕ್ಕನ ಮದುವೆ ಮಾಡಿ ತಾನೂ ಮದುವೆಯಾಗಿ ಸುಖವಾಗಿರಬೇಕು ಎಂಬ ದೃಢ ನಿಲುವಿನೊಂದಿಗೆ ದುಬೈಗೆ ಹೋಗುತ್ತಾನೆ. ಇದು “ಪುರುಷೋತ್ತಮನ ಪ್ರಸಂಗ” ಚಿತ್ರದ ಥೀಮ್.
ಪಕ್ಕಾ ಮಂಗಳೂರಿಗರ ಕನ್ನಡ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಈ ಚಲನಚಿತ್ರ ದುಬೈ, ಅಬುದಾಬಿ, ದೇರಾದ ಬ್ಲೂ ರಾಯಲ್ ಕಂಪೆನಿ, ಶರಫಿಯಾ ಲೇಬರ್ ಕ್ಯಾಂಪ್ ಮತ್ತು ಮಂಗಳೂರಿನ ಬಜ್ಪೆ, ಕೆಂಜಾರು, ಮುರನಗರ, ದೇರಳಕಟ್ಟೆ, ಸ್ಟೇಟ್ ಬ್ಯಾಂಕ್, ಕ್ಲಾಕ್ ಟವರ್ ಸುತ್ತಮುತ್ತಲ ಪ್ರದೇಶದಲ್ಲಿ ಶೂಟಿಂಗ್ ನಡೆಸಿದೆ. ಬಹುತೇಕ ಕಲಾವಿದರು ತುಳು ಚಿತ್ರರಂಗದ ನಟ, ನಟಿಯರೇ. ಆದ್ದರಿಂದ ಇಲ್ಲಿ ಸಹಜವಾಗಿ ಕಾಮಿಡಿ ಸೀನ್ ಇದ್ದರೂನೂ ಮಾನವೀಯ ಮೌಲ್ಯವನ್ನು ಪ್ರತಿಪಾದಿಸುವ ನವನಟನ ಚಾಕಚಕ್ಯತೆಗೆ ಭೇಷ್ ಎನ್ನಲೇಬೇಕು.
ಬೆಂಗಳೂರು ಮೂಲದ ಅಜಯ್ ಪೃಥ್ವಿ ಇಡೀ ಚಿತ್ರಕ್ಕೆ ಜೀವ ತುಂಬಿದ ನಾಯಕ ನಟ. ಮೂರು ವರ್ಷಗಳ ಕಾಲ ಕೆನಡಾದ ಟೊರೆಂಟೋ ಫಿಲಂ ಇಂಡಸ್ಟ್ರಿಯಲ್ಲಿ ನಟನೆಯನ್ನು ಕಲಿತು ಪ್ರಪ್ರಥಮವಾಗಿ ಚಿತ್ರಕ್ಕೆ ನಾಯಕನಾಗುತ್ತಿದ್ದಾರೆ. ಆದರೆ ಅವರ ನಟನೆ ನೋಡುವಾಗ ತುಂಬಾ ಅನುಭವೀ ಕಲಾವಿದನ ತರ ಪಾತ್ರ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದಾರೆ.
ಕರಾವಳಿಯಲ್ಲಿ ಮನೆ ಮನೆಗಳಲ್ಲಿ ಇಂತಹ ಪುರುಷೋತ್ತಮನನ್ನು ನಾವು ಕಾಣಬಹುದು. ಹೊಟ್ಟೆಪಾಡಿಗಾಗಿ ದುಬೈ ಕನಸು ಕಾಣುವ ಪುರುಷರು. ದುಬೈ ಎಂಬ ಮಾಯಾನಗರಿಯ ಹಿಂದಿನ ಮುಖವಾಡವನ್ನು ಈ ಚಿತ್ರ ಬಿಚ್ಚಿಟ್ಟಿದೆ. ದುಬೈ ಎಂದರೆ ಬಹುಮಹಡಿ ಆಕಾಶ ಚುಂಬಿಸುವ ಕಟ್ಟಡಗಳು, ಜಗಮಗಿಸುವ ದೀಪಗಳು, ಜಾಲಿ ಲೈಫ್, ಮರುಭೂಮಿಯ ನಿದ್ದೆಗೆಡಿಸುವ ರಾತ್ರಿಗಳು, ಕ್ಲೀನ್ ಸಿಟಿ, ಐಶಾರಾಮಿ ಕಾರುಗಳು, ಸೂಟ್ ಬೂಟ್ ಗಳು, ಸೆಂಟಿನ ಪರಿಮಳ… ಇತ್ಯಾದಿ, ಇತ್ಯಾದಿ… ಅಂತ ತಿಳಿದಿರುವವರಿಗೆ ಅದಕ್ಕೂ ಆಚೆ ಇನ್ನೊಂದು ಕರಾಳ ಮುಖವಿದೆ, ಕಷ್ಟವಿದೆ, ಪ್ರವಾಸಿಯ ಬವಣೆಗೆ ಓಗೊಡುವವರಿಲ್ಲ ಎಂಬುವುದನ್ನು ಬಹಳ ಆಳವಾಗಿ ಈ ಚಿತ್ರ ಬಿಂಬಿಸಿದೆ. ಲೇಬರ್ ಕ್ಯಾಂಪಿನ ಬದುಕನ್ನು ಬಹಿರಂಗಪಡಿಸಿದೆ. ನಮ್ಮಲ್ಲೂ ತುಂಬಾ ಮಂದಿ ಪುರುಷೋತ್ತಮರು, ಅಶ್ರಫ್ ಗಳು, ಚಾರ್ಲಿಯಂತಹವರು ದುಬೈ ಜೀವನವನ್ನು ಅನುಭವಿಸಿ ಅಲ್ಲಿನ ಬದುಕು-ಬವಣೆಗಳಿಗೆ ಸಾಕ್ಷಿಯಾಗಿ ಮತ್ತೆ ಊರಲ್ಲಿ ಸೆಟಲ್ ಆದವರಿದ್ದಾರೆ.
ಈ ಚಿತ್ರದಲ್ಲಿ ದುಬೈಗೆ ಹೋದ ಪುರುಷೋತ್ತಮ ಮೋಸಹೋದ ಕಥೆ, ಹಿಂತಿರುಗಿ ಊರಲ್ಲಿ ಹಗಲೂ ರಾತ್ರಿ ಕಷ್ಟಪಟ್ಟು ಹಣ ಸಂಪಾದಿಸುವುದು, ಇತ್ತ ಅಕ್ಕನ ಮದುವೆ ಸಮೀಪಿಸುವಾಗಲೇ ದುಡಿದು ಕೂಡಿಟ್ಟ ಹಣ ದರೋಡೆಯಾಗುವುದು, ಪ್ರೀತಿಸಿದ ಹುಡುಗಿ ಬೇರೆ ಮದುವೆಯಾಗುವುದು, ನಿರಂತರ ನೋವು ಅನುಭವಿಸುವುದು, ಕೊನೆಗೆ ನಟನ ಮಾನವೀಯ ಮೌಲ್ಯಗಳಿಗಾಗಿ, ಭಾವನೆಗಳಿಗಾಗಿ, ಸತ್ಯಸಂಧತೆಗಾಗಿ, ಒಳ್ಳೆಯ ಗುಣಗಳಿಗಾಗಿ ಸುಂದರ ಅಂತ್ಯ ಕಾಣುತ್ತದೆ.
ಪುರುಷೋತ್ತಮನ ಪ್ರಸಂಗ ಕುಟುಂಬಿಕರು ಕೂತು ನೋಡಬಹುದಾದ ಸುಂದರ, ಅರ್ಥಪೂರ್ಣ ಚಿತ್ರ. ಎಲ್ಲಷ್ಟೂ ಕೆಟ್ಟ ಸೀನ್ ಗಳಿಲ್ಲ. ನಾಡಿನ ಖ್ಯಾತ ಹಿರಿಯ ಸಾಹಿತಿಗಳಿಂದ ರಚಿಸಲಾದ ನಾಲ್ಕು ಮನ ಮುದ ನೀಡುವ ಹಾಡುಗಳಿವೆ. ಅದ್ಭುತ ಸಂಗೀತವಿದೆ. ಕಥೆ ಕಾಮಿಡಿಯೊಂದಿಗೆ ಭಾವನಾತ್ಮಕವಾಗಿ ಕಣ್ಣಲ್ಲಿ ಆನಂದ ಬಾಷ್ಪ ಭರಿಸುತ್ತದೆ.
ಬೆಂಗಳೂರು ರಾಷ್ಟ್ರಕೂಟ ಫಿಲಂಸ್ ನ ರವಿಕುಮಾರ್ ಚಿತ್ರದ ನಿರ್ಮಾಪಕರು. ಅವರು ತುಳು ಕಲಾವಿದರಾದ ಡಾ. ದೇವದಾಸ್ ಕಾಪಿಕ್ಕಾಡ್ ಅವರ ದೊಡ್ಡ ಅಭಿಮಾನಿ. 14 ವರ್ಷಗಳ ಹಿಂದೆ ರಮೇಶ್ ಅರವಿಂದ್ ಅವರ “ವೆಂಕಟ ಇನ್ ಸಂಕಟ” ಮೂವಿಯಲ್ಲಿ ದೇವದಾಸ್ ಕಾಪಿಕ್ಕಾಡ್ ನಟಿಸಿದ್ದರು. ಅದನ್ನು ರವಿಕುಮಾರ್ ನೋಡಿ ಕಾಪಿಕ್ಕಾಡ್ ಅಭಿಮಾನಿಯಾಗಿದ್ದರು. ತುಳು ಕಾಮಿಡಿಯನ್ನು ರವಿ ಯೂಟೂಬಲ್ಲಿ ನೋಡುತ್ತಿದ್ದರು. ಆದರೆ ಕಾಪಿಕಾಡ್ ಅವರನ್ನು ಸಂಪರ್ಕಿಸಲಾಗಿರಲಿಲ್ಲ. ರವಿಕುಮಾರ್ ನಿರ್ಮಾಪಕರಾಗಿ ಈ ಹಿಂದೆ “ಕಿಸ್” ಹೆಸರಿನ ಮೂವೀ ಮಾಡಿ ಹಿಟ್ ಆಗಿತ್ತು. ಈ ಚಿತ್ರದಿಂದ ಪರಿಚಯವಾದ ನಾಯಕಿ ಇಂದು ತೆಲುಗು ಚಿತ್ರದಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಇನ್ನೊಂದು ಚಿತ್ರವನ್ನು ದೇವದಾಸ್ ಕಾಪಿಕ್ಕಾಡ್ ನಿರ್ದೇಶನದಲ್ಲಿ ಮಾಡಬೇಕೆಂಬ ಹಂಬಲ ರವಿ ಅವರಲ್ಲಿತ್ತು. ಈ ಬಗ್ಗೆ ರವಿಕುಮಾರ್ ಸ್ನೇಹಿತರಾದ ಅಬೂಬಕರ್ ಪುತ್ತು ಉಪ್ಪಿನಂಗಡಿ ಅವರ ಮೂಲಕ ಕಾಪಿಕಾಡ್ ರನ್ನು ಸಂಪರ್ಕಿಸಿ ಪುರುಷೋತ್ತಮನ ಪ್ರಸಂಗಕ್ಕೆ ಅಂಕಿತ ಹಾಕಿದರು.
ಇಂತಹ ಒಂದು ಅದ್ಭುತ ಕಥೆಯನ್ನು ದೇವದಾಸ್ ಕಾಪಿಕ್ಕಾಡ್ ಎಲ್ಲಿ ಅಡಗಿಸಿಟ್ಟಿದ್ದರೋ ನಾ ಕಾಣೆ. ಅಂತಹ ಅದ್ಭುತ ಚಿತ್ರವಿದು. ಹಲವಾರು ತುಳುಚಿತ್ರ ನಿರ್ದೇಶಿಸಿರುವ ಕಾಪಿಕಾಡ್ ಪ್ರಥಮ ಬಾರಿಗೆ ಕನ್ನಡ ಚಿತ್ರ ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಕಥೆ-ಚಿತ್ರಕಥೆ ಕೂಡಾ ಅವರದ್ದೇ. ಸಹ ನಿರ್ದೇಶಕರಾಗಿ ಅರ್ಜುನ್ ಕಾಪಿಕಾಡ್ ನ್ಯಾಯ ತುಂಬಿದ್ದಾರೆ. ಸಹ ನಿರ್ಮಾಪಕರಾಗಿ ರವಿಯ ಪರಮ ಮಿತ್ರ ಸಂಶುದ್ದೀನ್. ನಾಯಕಿಯರಾಗಿ ರಿಷಿಕಾ ನಾಯ್ಕ್ ಮತ್ತು ದೀಪಿಕಾ ಮನೋಜ್ಞವಾಗಿ ನಟಿಸಿದ್ದಾರೆ. ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ರೂಪಾ ವರ್ಕಾಡಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ, ರೊನಾಲ್ಡ್ ಮಾರ್ಟಿಸ್ ಕುಲಶೇಖರ, ನವೀದ್ ಮಾಗುಂಡಿ, ಮಂಗೇಶ್ ಭಟ್ ವಿಟ್ಲ, ಮಹಮ್ಮದ್ ಬಡ್ಡೂರು ಮೊದಲಾದವರು ತಾರಾಂಗಣದಲ್ಲಿದ್ದಾರೆ.
ಚಿತ್ರದಲ್ಲಿ ಮಂಗಳೂರಿನ ಕನ್ನಡ ಭಾಷೆಯಲ್ಲದೇ ಅಲ್ಪಸ್ವಲ್ಪ ಬ್ಯಾರಿ, ಕೊಂಕಣಿ, ಸರಳ ಇಂಗ್ಲಿಷ್ ಭಾಷೆ ಅಡಕವಾಗಿದೆ. ಸಹಾಯಕ ನಿರ್ದೇಶಕರಾಗಿ ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್, ಕ್ಯಾಮರಾ ವಿಷ್ಣು, ಸಹಾಯಕರಾಗಿ ಪುಟ್ಟ, ಸಂಗೀತ ನಕುಲ್ ಅಭಯಂಕರ್, ವಸ್ತ್ರ ವಿನ್ಯಾಸ ಶರತ್ ಪೂಜಾರಿ, ಸಹಾಯಕ ನಿರ್ಮಾಪಕರಾಗಿ ಅಬೂಬಕರ್ ಪುತ್ತು ಉಪ್ಪಿನಂಗಡಿ, ಲೈನ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಪ್ರೊಡಕ್ಷನ್ ತಂಡದಲ್ಲಿ ಸಂತೋಷ್, ರಮಾನಂದ, ಮುನ್ನ ಹಾಗೂ ರಾಜೇಶ್ ಸಹಕರಿಸಿದ್ದಾರೆ. ಒಟ್ಟಿನಲ್ಲಿ ಉತ್ತಮ ಚಲನಚಿತ್ರಗಳಿಲ್ಲದೇ ಪ್ರಸ್ತುತ ಬೋರ್ ಆಗಿರುವ ಸಿನಿಮಾ ಪ್ರಿಯರಿಗೆ “ಪುರುಷೋತ್ತಮನ ಪ್ರಸಂಗ” ಒಂದೊಳ್ಳೆಯ ಬೂಸ್ಟ್ ನೀಡುವುದಂತೂ ಖಂಡಿತ. ಮಾರ್ಚ್ 1 ರಿಂದ ರಾಜ್ಯಾದ್ಯಂತ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ ಮುಗ್ಧ ಮನಸ್ಸಿನ ಪುರುಷೋತ್ತಮನ ಪ್ರಸಂಗವನ್ನು ಕಣ್ತುಂಬಿಕೊಳ್ಳಬಹುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.