ಹುಬ್ಬಳ್ಳಿ (www.vknews. in) : ಬಾಹ್ಯಾಕಾಶದ ವಿಶೇಷ ಅಧ್ಯಯನಕ್ಕಾಗಿ 2025 ಮುಗಿಯವುದರೊಳಗಾಗಿ ಮಾನವ ಸಹಿತ ಗಗನಯಾನ ನಡೆಯಲಿದ್ದು, ಇದೇ ರೀತಿ ಸಾಗರದ ರಹಸ್ಯಗಳನ್ನು ಬೇಧಿಸುವಲ್ಲಿ ಪೂರಕ ಅಧ್ಯಯನಕ್ಕಾಗಿ 2026ರಲ್ಲಿ ಸಮುದ್ರಯಾನ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹ ನಿರ್ದೇಶಕ, ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ. ಬಿ.ಎಚ್.ಎಂ. ದಾರುಕೇಶ ಹೇಳಿದರು.
ಅವರು ಇತ್ತೀಚೆಗೆ ನಗರದ ಶಾಂತವೀರ ಲೇ-ಔಟ್ ಬಡಾಣೆಯ ಶಿಕ್ಷಕ ಸಹೋದರರಾದ ಸಂಜೀವಕುಮಾರ ಭೂಶೆಟ್ಟಿ ಮತ್ತು ರಾಜು ಭೂಶೆಟ್ಟಿ ಅವರು ತಮ್ಮ ಮನೆಯಂಗಳದಲ್ಲಿ ಬಾಹ್ಯಾಕಾಶದ ವಿಸ್ಮಯಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಸುಮಾರು 450 ಕಿ.ಮೀ. ಎತ್ತರಕ್ಕೆ 3 ಜನ ಭಾರತೀಯ ಗಗನಯಾತ್ರಿಗಳು ಹೋಗಿ 2-3 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಿಸ್ತೃತ ಸಂಶೋಧನೆಗಳೊಂದಿಗೆ ವಾಪಸ್ಸಾಗಲಿದ್ದಾರೆ. ಇದೇ ರೀತಿ ಸಮುದ್ರದ ಆಳದ ಅಧ್ಯಯನಕ್ಕಾಗಿ ಚೆನ್ನೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಓಸಿಯನ್ ಟೆಕ್ನಾಲಜಿ ಯೋಜನೆ ರೂಪಿಸಿದ್ದು, ತನ್ಮೂಲಕ ಸಾಗರದ ರಹಸ್ಯಗಳನ್ನು ಸಾಗರದ ಆಳಕ್ಕೆ ಇಳಿದು ಬೇಧಿಸಲಾಗುತ್ತಿದೆ. ಅಲ್ಲಿಯೂ ಬೆಳಕಿಗೆ ಬರುವ ವ್ಯಾಪಕ ಹೊಸ ಸಂಗತಿಗಳು ಗಮನಸೆಳೆಯಲಿವೆ ಎಂದರು.
ಚಂದ್ರನಲ್ಲಿರುವ ಹೀಲಿಯಂ-3 ಕುರಿತು ಮಾತನಾಡಿ, ಭೂಮಿಯಲ್ಲಿ ಇರುವುದಕ್ಕಿಂತ ಹೆಚ್ಚಿನ ಹೀಲಿಯಂ-3 ಚಂದ್ರನಲ್ಲಿ ಇದೆ. ಆದರೆ ಅದು ಲಾಭದಾಯಕ ಗಣಿಗಾರಿಕೆ ಆಗುವದಿಲ್ಲ. 2040 ರಲ್ಲಿ ಜಾಗತಿಕ ಶಕ್ತಿಯ ಬೇಡಿಕೆಯ 10% ಅನ್ನು ಪೂರೈಸುತ್ತೇವೆ ಎಂದರೆ ವರ್ಷಕ್ಕೆ ಬೇಕಾಗುವ 200 ಟನ್ ಹೀಲಿಯಂ-3 ತರಲು ಪ್ರತಿ ಸೆಕೆಂಡಿಗೆ 630 ಟನ್ ಗಣಿಗಾರಿಕೆ ಮಾಡಬೇಕು. ಸದ್ಯಕ್ಕೆ ಅದು ನಷ್ಟಕಾರಿಯಾಗುವ ಸಾಧ್ಯತೆಯೇ ಹೆಚ್ಚು. ಚಂದ್ರನ ಮೇಲೆ ಮಾನವನ ಹೆಜ್ಜೆ ಗುರುತು ವಿಶ್ಲೇಷಿಸಿದ ಅವರು, ನೀಲ್ ಆರ್ಮಸ್ಟ್ರಾಂಗ್ ಅವರು ಚಂದ್ರನ ಮೇಲಿಳಿದಿದ್ದು, ಅವರೊಂದಿಗೆ ಇನ್ನೂ 11 ಜನರು ಅಂದರೆ ಒಟ್ಟು 12 ಜನರ ತಂಡ 1949ರಿಂದ 1972ರ ಮಧ್ಯದಲ್ಲಿ ಚಂದ್ರನ ಮೇಲೆ ಇಳಿದು ವಾಪಸ್ಸು ಬಂದಿದ್ದಾರೆ. ಇವತ್ತಿಗೂ ಚಂದ್ರನಲ್ಲಿ ಅವರ ಹೆಜ್ಜೆ ಗುರುತುಗಳನ್ನು ನಾವು ನೋಡಬಹುದಾಗಿದೆ ಎಂದರು.
ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಾಹಿತ್ಯದ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡ ಡಾ.ದಾರುಕೇಶ್, ಬರೀ ಕನ್ನಡವಷ್ಟೇ ಅಲ್ಲ, ಇಂಗ್ಲೀಷ್ ಭಾಷೆಯಲ್ಲೂ ಸಾಹಿತ್ಯದ ಲಭ್ಯತೆ ಕಡಿಮೆ ಇದೆ. ಬಾಹ್ಯಾಕಾಶ ತಂತ್ರಜ್ಞಾನವು ಅತ್ಯಂತ ವೇಗದಲ್ಲಿ ಬದಲಾಗುವ ತಂತ್ರಜ್ಞಾನವಾಗಿದೆ. ಈಗಿನ ಮಕ್ಕಳಿಗೆ ಅತ್ಯಂತ ಕಡಿಮೆ ಸಮಯದಲ್ಲಿ ವಿಷಯವನ್ನು ವೇಗವಾಗಿ ಒದಗಿಸಬೇಕಾಗಿದೆ. ಈ ಉದ್ದೇಶವನ್ನು ಈಡೇರಿಸಬೇಕೆಂದರೆ ಅದು ಸಾಮಾಜಿಕ ಜಾಲತಾಣಗಳ ಮೂಲಕ ಸಾಧ್ಯ. ಪ್ರಶ್ನೋತ್ತರ ಅಥವಾ ಚರ್ಚಾ ವಿಧಾನಗಳ ಮೂಲಕ ಯು-ಟ್ಯೂಬ್ಗಳಿಂದಲೂ ವೇಗವಾಗಿ ತಲುಪಿಸಬಹುದಾಗಿದ್ದು, ಅದು ಪರಿಣಾಮಕಾರಿಯೂ ಆಗಿದೆ ಎಂದರು.
ಈ ಮುಕ್ತ ಸಂವಾದದಲ್ಲಿ ಯುವರಾಜ್, ಸಂಜೀವಕುಮಾರ ಭೂಶೆಟ್ಟಿ, ಸಹನಾ, ಮೃತ್ಯುಂಜಯ, ರಾಜು ಭೂಶೆಟ್ಟಿ, ಗೌರಿ ಬರದೇಲಿ, ಮುತ್ತು ಪಾಟೀಲ, ಈರಣ್ಣ ಇಳಕಲ್ ಇತರರು ಪಾಲ್ಗೊಂಡಿದ್ದರು.
ಡಾ. ಬಿ.ಎಚ್.ಎಂ. ದಾರುಕೇಶ ಕುರಿತು..
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಈಗಿನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಳ್ಳಿಗಾಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಪಡೆದಿರುವ ಡಾ. ಬಿ.ಎಚ್.ಎಂ. ದಾರುಕೇಶ, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನೂ ಕಲ್ಯಾಣ ಕರ್ನಾಟಕದಲ್ಲಿಯೇ ಪಡೆದಿದ್ದು, ಪ್ರಸ್ತುತ ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹ ನಿರ್ದೇಶಕರಾಗಿದ್ದು, ಹಿರಿಯ ಬಾಹ್ಯಾಕಾಶ ವಿಜ್ಞಾನಿಯೂ ಆಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.