ಉಳ್ಳಾಲ (www.vknews.in) : ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಭಂಡಾರಮನೆ ಕಟ್ಟಡವನ್ನು ಕಿಡಿಗೇಡಿಗಳು ಜೆಸಿಬಿಯಿಂದ ನೆಲಸಮಗೊಳಿಸಿದ ಘಟನೆ ರವಿವಾರ ಬೆಳಗ್ಗೆ ವರದಿಯಾಗಿದೆ.
ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಿಸಲು ಜಮೀನನ್ನು ವ್ಯವಸ್ಥಾಪನಾ ಸಮಿತಿಯವರು ಇತ್ತೀಚೆಗೆ ಖರೀದಿಸಿದ್ದರು. ಆ ಜಾಗದಲ್ಲಿ ಜ.8ರಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಮುಂದಾಳುತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲಾನ್ಯಾಸ ಮಾಡಲಾಗಿತ್ತು. ಇದರ ಬಳಿಕ ನೂತನ ಕಟ್ಟಡ ಕಾಮಗಾರಿ ನಿರ್ಮಾಣ ಹಂತದಲ್ಲಿ ಇತ್ತು. ಈ ಕಟ್ಟಡವನ್ನು ರವಿವಾರ ಮುಂಜಾನೆ ಕಿಡಿಗೇಡಿಗಳು ಜೆ ಸಿ ಬಿ ಮೂಲಕ ಧ್ವಂಸಗೊಳಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಮತ್ತು ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮೂವರ ಬಂಧನ ; ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಉಳ್ಳಾಲ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.