ಬೆಳ್ತಂಗಡಿ (www.vknews. in) ; ನಮ್ಮ ವಸ್ರ್ತಧಾರಣೆ ಮತ್ತು ನಮ್ಮ ಬಾಹ್ಯ ಸೌಂದರ್ಯ ದ ಮೇಲೆ ಅಲ್ಲಾಹನ ನೋಟ ಇರುವುದಲ್ಲ. ಅವನ ನೋಟ ನಮ್ಮ ಪರಿಶುದ್ಧ ಅಂತರ್ ಮನಸಿನ ಮೇಲೆ. ಆದ್ದರಿಂದ ಪರಸ್ಪರ ಅಸೂಯೆ ಇಲ್ಲದ, ದ್ವೇಷ ಹಗೆತನವಿಲ್ಲದ, ಅಹಂಕಾರವಿಲ್ಲದ, ಶುದ್ಧ ಹೃದಯಿಗಳಾಗೋಣ. ಆ ಮೂಲಕ ಅವನ ಇಷ್ಟದಾಸರಾದ ಔಲಿಯಾಗಳ ಕೃಪೆ ಪಡೆಯೋಣ. ನಮ್ಮನ್ನು ಅವರು ನಿಯಂತ್ರಿಸುತ್ತಿದ್ದಾರೆ ಎಂಬ ಸತ್ಯ ವಿಶ್ವಾಸ ಹೊಂದೋಣ ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಹೇಳಿದರು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ನಲ್ಲಿ ಮೇ.3 ರಂದು ನಡೆದ ಉರೂಸ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು. ಉದ್ಘಾಟನೆಯನ್ನು ತಾ.ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ನೆರವೇರಿಸಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಪಕೀರಬ್ಬ ಮಾಸ್ಟರ್ ಮರೋಡಿ ಮಾತನಾಡಿ, ಕಾಜೂರು ಇಂದು ಶೈಕ್ಷಣಿಕವಾಗಿ, ಮೂಲಸೌಕರ್ಯ ವಿಚಾರವಾಗಿ ಭಾರೀ ವೇಗದಿಂದ ಬೆಳೆಯುತ್ತಿದೆ. ಇದಕ್ಕಾಗಿ ಇಲ್ಲಿನ ಸಮಿತಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಖ್ಯಾತ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಾತನಾಡಿ, ಕುಗ್ರಾಮವಾಗಿದ್ದ ಕಾಜೂರು ಪ್ರದೇಶವು, ಇಂದು ಜಗತ್ತಿನಲ್ಲಿ ಗುರುತಿಸಲ್ಪಟ್ಟ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ.ನೂರಾರು ವರ್ಷಗಳ ಹಿಂದಿನಿಂದ ಇಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಹಜರತ್ ಅವುಲಿಯರವರ ಕಾರಣದಿಂದಾಗಿ, ಈ ಪ್ರದೇಶ ಅಭಿವೃದ್ಧಿಯಿಂದ ಅಭಿವೃದ್ಧಿಡೆಗೆ ಸಾಗಿದೆ. ಹಲವಾರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ಈ ಭಾಗದಲ್ಲಿ ನಡೆದು ಲಕ್ಷಾಂತರ ಮಂದಿಯನ್ನು ಈ ಭಾಗಕ್ಕೆ ಕೈಬೀಸಿ ಕರೆಯುತ್ತಿದೆ. ಸೌಹಾರ್ದದ ಪ್ರತೀಕವಾದ ಕಾಜೂರು ಸಮಾಜಕ್ಕೆ ಮಾದರಿಯಾಗಿ ನಿಂತಿದೆ ಎಂದರು .
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರ. ಕಾರ್ಯದರ್ಶಿ ನಝೀರ್ ಮಠ ಮಾತನಾಡಿ, ಕುಗ್ರಾಮ ಕಾಜೂರು ಇಂದು ಔಲಿಯಾಗಳ ಕಾರಣಕ್ಕಾಗಿ ಸುಗ್ರಾಮವಾಗಿದೆ ಎಂದರಲ್ಲದೆ, ಶಾಂತಿ ಪ್ರತಿಪಾದಿಸುವ ಇಸ್ಲಾಂ ಧರ್ಮದ ಯುವ ಜನತೆ ಅಮಲು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರಿಕೆ ಕೊಡುವ ಕೆಲಸ ಆಗಬೇಕು. ವರದಕ್ಷಿಣೆ ಪಿಡುಗು ನಿಂತರೂ ಆಭರಣ ರೂಪದಲ್ಲಿ ಪರೋಕ್ಷವಾಗಿ ವಸೂಲಿ ಕ್ರಮಗಳು ಕಾಣಲ್ಪಡುತ್ತಿವೆ. ಇವುಗಳ ಬಗ್ಗೆ ಜಾಗೃತಿ ಮೂಡಿಸಿ ನೈತಿಕ ಶಿಕ್ಷಣ ಇನ್ನಷ್ಟು ಬಲಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಯ್ಯಿದ್ ಕಾಜೂರು ತಂಙಳ್, ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮಾರ್ಗದರ್ಶನದ ಮಾತುಗಳನ್ನಾಡಿದರು.
ಕೂರತ್ ತಂಙಳ್, ಸಾದಾತ್ ತಂಙಳ್, ಇಸ್ಮಾಯಿಲ್ ತಂಙಳ್ ಅವರನ್ನು ಅಭಿನಂದಿಸಲಾಯಿತು. ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು ಅತಿಥಿಗಳನ್ನು ಗೌರವಿಸಿದರು.
ಕಾಜೂರು ಮುದರ್ರಿಸ್ ಮುಹಮ್ಮದ್ ತೌಸೀಫ್ ಸಅದಿ ಹರೇಕಳ, ಕಿಲ್ಲೂರು ಖತೀಬ್ ಶಂಶೀರ್ ಸಖಾಫಿ ಪರಪ್ಪು, ವಿವಿಧ ಮಸೀದಿ ಅಧ್ಯಕ್ಷರುಗಳಾದ ಬಿ.ಎಮ್ ಅಬ್ದುಲ್ ಹಮೀದ್ ಉಜಿರೆ, ಅಬ್ದುಲ್ ಬಶೀರ್ ಮುಂಡಾಜೆ, ಇಬ್ರಾಹಿಂ ಅರೆಕ್ಕಲ್ ಕಕ್ಕಿಂಜೆ, ಪ್ರಮುಖ ಗಣ್ಯರಾದ ಯು.ಎ ಹಮೀದ್ ಉಜಿರೆ, ಎಂ.ಎ ಕಾಸಿಂ ಮಲ್ಲಿಗೆಮನೆ ಕಿಲ್ಲೂರು, ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಸಯ್ಯಿದ್ ಹಬೀಬ್ ಸಾಹೆಬ್ ಮಂಜೊಟ್ಟಿ, ಸಿರಾಜುದ್ದೀನ್ ಸಖಾಫಿ, ಕಾಸಿಂ ಮುಸ್ಲಿಯಾರ್ ಮಾಚಾರು, ವಝೀರ್ ಮುಹಮ್ಮದ್ ಬಂಗಾಡಿ, ಗ್ರಾ.ಪಂ ಸದಸ್ಯ ಅಹಮದ್ ಕಬೀರ್ ಕಾಜೂರು, ಅಬ್ದುಲ್ ಸತ್ತಾರ್ ಸಾಹೇಬ್ ಬಂಗಾಡಿ, ಅಬ್ಬೋನು ಮದ್ದಡ್ಕ, ಖಾಲಿದ್ ಪುಲಾಬೆ, ಹಮೀದ್ ನೆಕ್ಕರೆ ಮುಂಡಾಜೆ, ಲುಕ್ಮಾನುಲ್ ಹಕೀಂ ಧರ್ಮಸ್ಥಳ, ಮುಹಮ್ಮದ್ ಸಲೀಂ ಪಿಚಲಾರು, ಬಿ. ಅಶ್ರಫ್ ನೆರಿಯ, ಜೆ ಹೆಚ್ ಅಬ್ಬಾಸ್, ಕಾಜೂರು ಮಾಜಿ ಅಧ್ಯಕ್ಷರುಗಳಾದ ಬಿ.ಎ ಯೂಸುಫ್ ಶರೀಫ್, ಇಬ್ರಾಹಿಂ ಮದನಿ ಮತ್ತು ಕೆ.ಯು ಉಮರ್ ಸಖಾಫಿ ಉಪಸ್ಥಿತರಿದ್ದರು. ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಉರೂಸ್ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು.
ಕಿಲ್ಲೂರಿನಿಂದ ಸಂದಲ್ ಮೆರವಣಿಗೆ; ಉರೂಸ್ ಆರಂಭದಲ್ಲಿ ಕಿಲ್ಲೂರಿನಿಂದ ಸಂದಲ್ ಮೆರವಣಿಗೆ ಆಗಮಿಸಿ ಕಾಜೂರಿನಲ್ಲಿ ಅದನ್ನು ಬರಮಾಡಿಕೊಳ್ಳಲಾಯಿತು. ನಾಡಿನ ಸುಭೀಕ್ಷೆಗಾಗಿ ದರ್ಗಾ ಶರೀಫ್ ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ದಿಡುಪೆ ಯಂಗ್ ಮೆನ್ಸ್ ವತಿಯಿಂದ ಪಾನೀಯ ವ್ಯವಸ್ಥೆ ಗೆ ಚಾಲನೆ ನೀಡಲಾಯಿತು.
ಧಾರ್ಮಿಕ ಉಪನ್ಯಾಸ ಮಾಲಿಕೆ ಉದ್ಘಾಟನೆ; ಉರೂಸ್ ಪ್ರಯುಕ್ತ ಮುಂದಿನ 10 ದಿನಗಳಲ್ಲಿ ಧಾರ್ಮಿಕ ಉಪನ್ಯಾಸ ಮಾಲಿಕೆಗೆ ಕಾಜೂರು ತಂಙಳ್ ಚಾಲನೆ ನೀಡಿದರು. ಆರಂಭದ ದಿನ ಕಿಲ್ಲೂರು ಮಸ್ಜಿದ್ ಖತೀಬ್ ಶಂಶೀರ್ ಸಖಾಫಿ ಪರಪ್ಪು ಪ್ರವಚನ ನಡೆಸಿಕೊಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.