(www.vknews.in) : ಬಹಳ ಸುಂದರವಾದ ಒಂದು ಮಗುವಿಗೆ ಜನ್ಮ ನೀಡಿ ಅಲ್ಲೇ ಗುಹೆಯಲ್ಲಿ ಬಿಟ್ಟು ಮನೆಗೆ ಹಿಂತಿರುಗಿ ಬರುವಾಗ ಆ ತಾಯಿಯಲ್ಲಿ ಹಝ್ರತ್ ಜಿಬ್ರೀಲರು ಹೇಳಿದರು. “ನೀವು ಇವತ್ತು ಕಂಡ ಯಾವುದೇ ಪವಾಡಗಳನ್ಮು ಮತ್ತು ಹೆರಿಗೆಯಾದ ವಿವರವನ್ನು ಪತಿಯಲ್ಲಿ ಹೇಳಬಾರದು” ಎಂದು.
ಹೆರಿಗೆಯಾದರೂ ಯಾವುದೇ ಸುಸ್ತು ಅಥವಾ ಆಯಾಸವಿಲ್ಲದೆ ಮನೆ ತಲುಪಿದ ಪತ್ನಿಯಲ್ಲಿ ಪತಿ ತಾರಹ್ರವರು ಕೇಳಿದರು. “ಇದೇನು ಹೊಟ್ಟೆ ಸಣ್ಣದಾಗಿದೆ? ಅಲ್ಲದೆ ನೀನು ಇವತ್ತು ಬಹಳ ಉತ್ಸಾಹದಿಂದ ಮತ್ತು ಚುರುಕಾಗಿ ಇರುವಿ. ಏನು ಕಾರಣ?” ಆಗ ಅವರು “ಅದೇನು ಗೊತ್ತಾ? ಅದು ಬರೀ ಗಾಳಿ ತುಂಬಿ ಹೊಟ್ಟೆ ಬಲೂನಿನಂತೆ ಆಗಿತ್ತು ಅಷ್ಟೆ. ಮಗು ಆಗಿರಲಿಲ್ಲ. ಈದಿನ ಆ ಗಾಳಿ ಠುಸ್ಸೆಂದು ಹೊರಗೆ ಹೋಯಿತು” ಎಂದು ಹೇಳಿದರು.
ಇದನ್ನು ಕೇಳಿದಾಕ್ಷಣ ಪತಿ ತಾರಹ್ರವರಿಗೆ ಬಹಳ ಸಂತೋಷವಾಯಿತು. ಅಲ್ಲದೆ ಆ ವೇಳೆಯಲ್ಲಿ ನಮ್ರೂದನಿಗೆ ಈ ದಿಶೆ ಬದಲಾಯಿಸುವ ಮಗು ಹುಟ್ಟುವ ಸಂಗತಿ ತನ್ನ ನೆನಪಿನಿಂದ ಹೋಗಿತ್ತು. ಆತ ಅತನ ವಿನೋದದಲ್ಲೇ ತಲ್ಲೀನನಾಗಿದ್ದನು.
ಹೆರಿಗೆಯಾಗಿ ಮೂರನೆಯ ದಿನ ತಾಯಿ ತನ್ನ ಮಗುವನ್ನು ನೋಡಲು ಗುಹೆಯತ್ತ ಹೋದರು. ಅಲ್ಲಿ ಹೋದಾಗ ಸಿಂಹ, ಹುಲಿ ಮುಂತಾದ ಕಾಡು ಮೃಗಗಳು ಗುಹೆಯ ದ್ವಾರದಲ್ಲಿ ಕಾವಲು ಕಾಯುತ್ತಿದ್ದವು. ತಾಯಿಗೆ ಇದನ್ನು ನೋಡುವಾಗ “ಮಗುವನ್ನು ಮೃಗಗಳು ತಿಂದಿರಬಹುದು” ಎಂಬ ಭಯವಾಯಿತು. ಆದರೂ ಹೆದರದೆ ಗುಹೆಯ ಒಳ ಹೋದರು. ಸುಬ್ಹಾನಲ್ಲಾಹ್! ಅಲ್ಲಿ ನೋಡುವಾಗ ಅದೊಂದು ಎಲ್ಲಾ ಸೌಕರ್ಯಗಳಿರುವ ಸುಸಜ್ಜಿತ ಹೆರಿಗೆ ಕೋಣೆಯಾಗಿತ್ತು. (BIRTH ROOM) ಮಗು, ಮೆತ್ತನೆಯ ರೇಷ್ಮೆಯ ಹಾಸಿಗೆಯ ಮೇಲೆ ತಲೆಗೆ ಎಣ್ಣೆ ಮತ್ತು ಕಣ್ಣಿಗೆ ಸುರುಮ ಹಾಕಿದ ರೂಪದಲ್ಲಿ ಆರಾಮವಾಗಿ ಮಲಗಿತ್ತು. ಇದನ್ನು ಕಂಡಾಗ “ಈ ಮಗುವಿಗೆ ನಮ್ರೂದ್ ಅಲ್ಲದ ಒಬ್ಬ ರಬ್ಬ್ ಇದ್ದಾನೆ” ಎಂದು ತಾಯಿಗೆ ಖಚಿತವಾಯಿತು.
ಮನೆ ತಲುಪಿದ ತಾಯಿ ಈ ಸತ್ಯ ಸಂಗತಿಯನ್ನು ತನ್ನ ಪತಿಯಲ್ಲಿ ಹೇಳಿದರು. ಆಗ ಪತಿ ತಾರಹ್ರವರು ಹೇಳಿದರು. “ಸಂಗತಿಯನ್ನು ಯಾರಲ್ಲೂ ಹೇಳಬೇಡ. ಮುಂದಕ್ಕೆ ಆ ಕಡೆ ಹೋಗುವುದೂ ಬೇಡ. ಹೋದರೆ ದೊಡ್ಡ ದುರಂತ ಬರಬಹುದು” ಎಂದು. ಆದರೆ ತಾಯಿ ಎರಡು ಮೂರು ದಿನಕ್ಕೊಮ್ಮೆ ಹೋಗಿ ಮಗುವನ್ನು ನೋಡಿ ಬರುತ್ತಿದ್ದರು. ಈ ಪ್ರಕ್ರಿಯೆ ಸುಮಾರು ನಾಲ್ಕು ವರ್ಷಗಳ ತನಕ ಮುಂದುವರಿಯಿತು. ಅಲ್ಲದೆ ಈ ವೇಳೆಯಲ್ಲಿ ಹಝ್ರತ್ ಜಿಬ್ರೀಲರು ಸ್ವರ್ಗದಿಂದ ಪಾನೀಯ ಮತ್ತು ಇತರ ಆಹಾರವನ್ನು ತಂದು ಕೊಡುತ್ತಿದ್ದರು. ನಾಲ್ಕು ವರ್ಷ ಪೂರ್ತಿಯಾದಾಗ ಜಿಬ್ರೀಲರು ಸ್ವರ್ಗದಿಂದ ಉಡುಪು ತಂದು ಈ ಮಗುವಿಗೆ ತೊಡಿಸಿ, ತೌಹೀದ್ನ ಪಾನೀಯವನ್ನು ಕುಡಿಸಿ ಅವರಲ್ಲಿ “ಇನ್ನು ಏಕಾಂಗಿಯಾಗಿ ಧೈರ್ಯದಿಂದ ಹೋಗಿ” ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಿದರು.
ಮನೆ ಹುಡುಕಿ ನಡೆದ ನಾಲ್ಕು ವರ್ಷದ ಬಾಲಕನಿಗೆ ಮನೆ ವಿಳಾಸ ಸಿಗದೆ ತಬ್ಬಿಬ್ಬಾದಾಗ ಹಝ್ರತ್ ಜಿಬ್ರೀಲರು ಬಂದು ಮನೆಯ ಬಾಗಿಲಲ್ಲಿ ನಿಂತು ಹೇಳಿದರು. “ಇದು ನಿಮ್ಮ ತಂದೆ ತಾರಹ್ರವರ ಮನೆ” ಎಂದು. ಬಾಲಕ ಮನೆ ಹೊಸ್ತಿಲಲ್ಲಿ ನಿಂತು ತಂದೆಯಲ್ಲಿ ಮನೆಗೆ ಪ್ರವೇಶಿಸಲು ಅನುಮತಿ ಕೇಳಿದರು. ತಂದೆ ಅನುಮತಿ ಕೊಟ್ಟರು. ಗಮನಾರ್ಹ ಸಂಗತಿಯೆಂದರೆ, ಈ ಪುಟ್ಟ ಬಾಲಕನ ಮುಖದ ಕಾಂತಿ ನೋಡಿ ತಂದೆ ತಾರಹ್ರವರು ಬೆಚ್ಚಿ ಬಿದ್ದರು. ಅಲ್ಲದೆ ಅಲ್ಲೇ ಮನೆ ಕೆಲಸದಲ್ಲಿ ತಲ್ಲೀನಳಾಗಿದ್ದ ತಾಯಿ ಕೂಡ ಹೊರಬಂದು ತನ್ನ ಕರುಳಿನ ಕೂಸಿಗೆ ಮುದ್ದು ಕೊಟ್ಟು ಬರಮಾಡಿಕೊಂಡರು. ಬಳಿಕ ತಾಯಿ ಹೇಳಿದರು. “ನಮ್ಮ ಮುದ್ದಿನ ಕಂದಾ….!! ನಮ್ರೂದನಿಗೆ ಸ್ತುತಿ” ತಾಯಿಯಿಂದ ಈ ಮಾತನ್ನು ಕೇಳಿದಾಗ ಆ ಬಾಲಕ ಹೇಳಿದರು. “ಹಾಗೆ ಹೇಳಬೇಡಿ ತಾಯಿ. ಸ್ತುತಿ ಅಲ್ಲಾಹನಿಗೆ ಮಾತ್ರ. ನನ್ನನ್ನು ನಿಮ್ಮ ಹೊಟ್ಟೆಯಲ್ಲಿ ಹುಟ್ಟಿಸಿ ಈ ತನಕ ಪರಿಪಾಲನೆ ಮಾಡಿದವ ಆತ. ನಮ್ರೂದ್ ಅಲ್ಲ” ಎಂದು.
ಮಗುವಿನಿಂದ ಈ ಮಾತು ಕೇಳಿದಾಕ್ಷಣ ತಂದೆ ತಾರಹ್ರವರು ಪತ್ನಿಯಲ್ಲಿ ಹೇಳಿದರು. “ನನಗೆ ಭಯವಾಗುತ್ತದೆ. ಈತನಿಂದ ನನ್ನ ಈ ಮಂತ್ರಿ ಸ್ಥಾನ ಹೋಗಬಹುದಾ ಎಂಬ ಸಂದೇಹ ನನಗಿದೆ” ಬಳಿಕ ತನ್ನ ಕಂದನ ಮುಖಕ್ಕೆ ನೋಡಿ “ನಿನ್ನ ಈ ಮುಖದ ಕಾಂತಿ ಮತ್ತು ನಿನ್ನ ಈ ಸೌಂದರ್ಯ ನನ್ನನ್ನು ಮರುಳು ಮಾಡಿ ನಿನ್ನಲ್ಲಿ ಪ್ರೀತಿ ಹುಟ್ಟಿಸಿದೆ. ಅಂತಹಾ ಒಂದು ಪ್ರೀತಿ ಮಮತೆ ಬರುವುದಿಲ್ಲ ಎಂದಾಗಿದ್ದರೆ ನಿನ್ನ ಈ ಆಗಮನದ ವಾರ್ತೆ ನಮ್ರೂದರಿಗೆ ತಲುಪಿಸುತ್ತಿದ್ದೆ” ಎಂದು ಹೇಳಿದರು.
ಬಳಿಕ ತಾರಹ್ ರವರು ಮಗನ ಈ ಅವಸ್ಥೆ ನೋಡಿ ಮುಂದಕ್ಕೆ ಏನಾದರೂ ಅನಾಹುತ ಬರಬಹುದಾ ಎಂದು ಭಾವಿಸಿ ಅಳತೊಡಗಿದರು. ತಂದೆಯ ಅಳು ನೋಡಿ ನಾಲ್ಕು ವರ್ಷದ ಬಾಲಕ ಹೇಳಿದರು. “ನನ್ನ ತಂದೆಯವರೇ.., ಯಾವ ನಮ್ರೂದನಿಂದಲೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ಅದರ ಬಗ್ಗೆ ನೀವು ತಲೆ ಕೆಡಿಸುವುದೇ ಬೇಡ” ಆಗ ತಂದೆ ತಾರಹ್ರವರು “ನಿನಗೆ ನಮ್ರೂದ್ ಅಲ್ಲದ ಬೇರೆ ಇಲಾಹ್ ಉಂಟಾ? ನಮ್ರೂದರಿಗೆ ಸುಮಾರು ಮುನ್ನೂರು ವಿಗ್ರಹಗಳಿವೆ. ನಾನದರ ಪರಿಪಾಲಕ. ಇಡೀ ಪ್ರಪಂಚವನ್ನು ಅವರು ಆಡಳಿತ ಮಾಡುತ್ತಿದ್ದಾರೆ. ಇದಕ್ಕಿಂತ ದೊಡ್ಡ ಇಲಾಹ್ ಯಾರದು?” ಎಂಬ ಪ್ರಶ್ನೆ ಹಾಕಿದರು. ಮಗ ಹೇಳಿದರು. “ಹೌದು ಇದೆ. ಅವನೇ ಈ ಜಗತ್ತಿನ ಚಕ್ರವರ್ತಿ. ಆಕಾಶ ಭೂಮಿಯನ್ನು ಸೃಷ್ಟಿ ಮಾಡಿದವನು. ಅವನೇ ಅಲ್ಲಾಹು” ಎಂದು.
ಈ ಪುಟ್ಟ ಬಾಲಕನೇ ಬಳಿಕ ತನ್ನ ನಲವತ್ತನೆಯ ವಯಸ್ಸಿನಲ್ಲಿ ನುಬುವ್ವತ್ ಲಭಿಸಿದ ಹಝ್ರತ್ ಇಬ್ರಾಹೀಮ್ (ಅ).
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.