ಬಂಟ್ವಾಳ (www.vknews.in) : ಸರಕಾರ ಗ್ಯಾಸ್ ಏಜೆನ್ಸಿಗಳಿಗೆ ಹಲವು ಹಲವು ಗ್ರಾಹಕ ಸ್ನೇಹಿ ನಿಯಮಗಳನ್ನು ವಿಧಿಸುತ್ತಿದ್ದರೂ ಗ್ರಾಹಕರಿಗೆ ಗ್ಯಾಸ್ ಏಜೆನ್ಸಿಗಳಿಂದ ಒಂದಿಲ್ಲೊಂದು ರೀತಿಯ ಸಮಸ್ಯೆಗಳು ಉಂಟಾಗುತ್ತಲೇ ಇದೆ. ಇದೀಗ ಏಜೆನ್ಸಿಗಳ ಹಾಗೂ ಸಿಲಿಂಡರ್ ವಿತರಕರ ವಿರುದ್ದ ಅಡುಗೆ ಅನಿಲ ಗ್ರಾಹಕರಿಂದ ಮತ್ತೊಂದು ಆರೋಪ-ಆಕ್ರೋಶ ವ್ಯಕ್ತವಾಗುತ್ತಿದೆ.
ಗ್ರಾಹಕರು ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಿ ಸಿಲಿಂಡರ್ ವಿತರಕರು ಡೆಲಿವರಿಗಾಗಿ ಮನೆ ಬಾಗಿಲಿಗೆ ಬರುವ ಸಂದರ್ಭ ಕೆಲವೊಂದು ಅನಿವಾರ್ಯ ಕಾರಣಗಳಿಂದ ಮನೆ ಮಂದಿ ಮನೆಗೆ ಬಾಗಿಲು ಹಾಕಿ ತೆರಳಿರುತ್ತಾರೆ. ಇಂತಹ ಸಂದರ್ಭದಲ್ಲಿ ಬುಕ್ ಮಾಡಿದ ಸಿಲಿಂಡರ್ ವಾಪಸ್ ಏಜೆನ್ಸಿಯ ಕಚೇರಿ ಅಥವಾ ಗೋಡೌನ್ ತಲುಪಿ ಗ್ರಾಹಕರಿಗೆ ಬುಕ್ಕಿಂಗ್ ಕ್ಯಾನ್ಸಲ್ ಬರಬೇಕಾಗಿರುವುದು ನಿಯಮ. ಆದರೆ ಹಾಗಾಗುತ್ತಿಲ್ಲ. ಏಜೆನ್ಸಿಗಳ ವೈಫಲ್ಯವೋ ಅಥವಾ ವಿತಕರ ಎಡವಟ್ಟೋ ಯಾವುದೂ ಗೊತ್ತಾಗುತ್ತಿಲ್ಲ. ಮನೆ ಬಾಗಿಲು ಹಾಕಿ ಸಿಲಿಂಡರ್ ಬುಕ್ ಮಾಡಿದ ವ್ಯಕ್ತಿಗೆ ಡೆಲಿವರಿ ಆಗದಿದ್ದರೂ ಗ್ರಾಹಕರಿಗೆ ಮಾತ್ರ ಸಿಲಿಂಡರ್ ಡೆಲಿವರಿ ಆಗಿದೆ ಎಂಬ ಮೊಬೈಲ್ ಸಂದೇಶ ಬರುತ್ತಿದೆ.
ಇದರಿಂದ ಗ್ರಾಹಕರಿಗೆ ವರ್ಷಕ್ಕೆ ನಿಗದಿಪಡಿಸಿದ ಸಿಲಿಂಡರ್ ಗಳ ಸಂಖ್ಯೆಯಲ್ಲಿ ಖೋತಾ ಆಗುತ್ತಿದೆ. ಡೆಲಿವರಿ ಸಂದೇಶ ಬಂದ ಸಿಲಿಂಡರ್ ಮತ್ತೆ ಗ್ರಾಹಕರಿಗೆ ದೊರೆಯದೆ ಅವರ ನಿಗದಿತ ಸಂಖ್ಯೆಯಲ್ಲಿ ಕಳೆಯಲಾಗುತ್ತದೆ. ಇದು ಗ್ರಾಹಕರಿಗೆ ನಷ್ಟವಾಗುತ್ತಿದೆ ಎಂದು ಆರೋಪಿಸುವ ಅಡುಗೆ ಅನಿಲ ಗ್ರಾಹಕರು ಗ್ಯಾಸ್ ಏಜೆನ್ಸಿ ಅಥವಾ ವಿತರಕರ ಇಂತಹ ಎಡವಟ್ಟಿಗೆ ಗ್ರಾಹಕರು ಬೆಲೆ ತೆರಬೇಕಾಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಗ್ಯಾಸ್ ಏಜೆನ್ಸಿಗಳು ಅಥವಾ ಸಂಬಂಧಪಟ್ಟ ಇಲಾಖಾಧಿಕಾರಿಗಳು ಅಡುಗೆ ಅನಿಲ ಗ್ರಾಹಕರಿಗೆ ಸೂಕ್ತ ಉತ್ತರ ನೀಡಿ ಗ್ಯಾಸ್ ಏಜೆನ್ಸಿಗಳಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಹಕರು ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.